Tel: 7676775624 | Mail: info@yellowandred.in

Language: EN KAN

    Follow us :


ನಗರದಲ್ಲಿ ತುಂಬಿತುಳುಕುತ್ತಿದೆ ಕಸದ ರಾಶಿ. ಇಚ್ಚಾಶಕ್ತಿ ಕಳೆದುಕೊಂಡ ಜನಪ್ರತಿನಿಧಿಗಳು, ಜಾಗವಿಲ್ಲದೆ ಕೈಚೆಲ್ಲಿದ ಅಧಿಕಾರಿಗಳು

Posted date: 26 Oct, 2021

Powered by:     Yellow and Red

ನಗರದಲ್ಲಿ ತುಂಬಿತುಳುಕುತ್ತಿದೆ ಕಸದ ರಾಶಿ. ಇಚ್ಚಾಶಕ್ತಿ ಕಳೆದುಕೊಂಡ ಜನಪ್ರತಿನಿಧಿಗಳು, ಜಾಗವಿಲ್ಲದೆ ಕೈಚೆಲ್ಲಿದ ಅಧಿಕಾರಿಗಳು

ಚನ್ನಪಟ್ಟಣ:ಅ:25/21. ಚನ್ನಪಟ್ಟಣ ಎಂದಾಕ್ಷಣ ಜಪ್ತಿಗೆ ಬರುವುದು ಸಾಂಪ್ರದಾಯಿಕ ಗೊಂಬೆಗಳ ತವರು ಎಂದು, ಜೊತೆಗೆ ಪುರಾಣೇತಿಹಾಸಗಳ ಹಾಗೂ ಹೋರಾಟಗಳ ತವರು ಹೌದು. ರಾಜಕೀಯವಾಗಿಯೂ ಇತಿಹಾಸ ನಿರ್ಮಿಸಿರುವ ಈ ನಗರವೂ ಇಂದು ಗಬ್ಬು ನಾರುತ್ತಿದೆ. ಇದಕ್ಕೆ ಕೇವಲ ಅಧಿಕಾರಿಗಳನ್ನಷ್ಟೇ ದೂರುತ್ತಿರುವುದು ಮಾತ್ರ ಅಪಹಾಸ್ಯ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಗೆಹರಿಸಬೇಕಾದ ರಾಜಕಾರಣಿಗಳು ರಗ್ಗೊದ್ದು ಮಲಗಿರುವುದು ಸಾರ್ವಜನಿಕರಿಗೆ ಮಗ್ಗುಲಮುಳ್ಳಾಗಿ ಪರಿಣಮಿಸುತ್ತಿದೆ.


ನಗರದಲ್ಲಿ ಒಂದು ದಿನಕ್ಕೆ ಸಂಗ್ರಹವಾಗುವ ಒಟ್ಟು ಕಸ 36 ರಿಂದ 38 ಸಾವಿರ (ಟನ್) ಕಿಲೋ ಇಷ್ಟೂ ಕಸವನ್ನು ವಿಲೇವಾರಿ ಮಾಡಲು ಸೂಕ್ತ ಜಾಗವಿಲ್ಲದೆ ಅಧಿಕಾರಿಗಳು ಹೈರಾಣಾಗಿದ್ದಾರೆ. ಎಲ್ಲಿಯೂ ಕಸ ಹಾಕಲು ಜಾಗವಿಲ್ಲಾ, ಇರುವ ಸಣ್ಣಪುಟ್ಟ ಜಾಗಗಳು ಈಗಾಗಲೇ ಭರ್ತಿಯಾಗಿವೆ. ಗ್ರಾಮಾಂತರ ಪ್ರದೇಶದಲ್ಲಿ ಒಂದು ಜಾಗವಿದ್ದು ಅದೂ ಸಹ ಶೇಕಡಾ ಭಾಗ ತುಂಬಿದೆ. ಮಳೆಗಾಲವಾದ್ದರಿಂದ ಅಲ್ಲಿಗೆ ಕಸ ತುಂಬಿದ ವಾಹನಗಳು ಚಲಿಸಲಾಗದೆ ನಿಂತಲ್ಲೇ ನಿಲ್ಲುವಂತಾಗಿವೆ. ಸ್ಥಳೀಯವಾಗಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿರುವ ಸರ್ಕಾರಿ ಜಾಗಗಳಲ್ಲಿ ಕಸ ಹಾಕಲು ಪ್ರಯತ್ನಪಟ್ಟರೂ ಸಹ ಸ್ಥಳೀಯರು ಅವಕಾಶ ನೀಡುತ್ತಿಲ್ಲ ಎಂಬುದು ಅಧಿಕಾರಿಗಳ ತಲೆನೋವಾಗಿದೆ.


ರಾಮನಗರ-ಚನ್ನಪಟ್ಟಣ ಪ್ರಾಧಿಕಾರ ಇದ್ದಾಗಲೇ ಕಣ್ವ ಡ್ಯಾಂ ಬಳಿ ಜಮೀನನ್ನು ಗುರುತಿಸಿ ಎರಡೂ ನಗರಗಳ ಕಸವನ್ನು ವಿಲೇವಾರಿ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿತ್ತು. ಅತ್ಯಾಧುನಿಕ ತಂತ್ರಜ್ಞಾನ ದ ಮೂಲಕ ಕಸವನ್ನು ವಿಂಗಡಿಸಿ, ಗೊಬ್ಬರ ತಯಾರಿಕೆ. ಪ್ಲಾಸ್ಟಿಕ್ ಮರುಬಳಕೆ ಮತ್ತು ವಿದ್ಯುತ್ ಕಾರ್ಯಾಗಾರವನ್ನು ಮಾಡಲು ಅಂದು ನೀಲಿನಕ್ಷೆಯನ್ನು ತಯಾರಿಸಲಾಗಿತ್ತು. ಆದರೆ ಕಣ್ವ ಡ್ಯಾಂ ಬಳಿಯ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ಮಾಡುವ ಮೂಲಕ ಕಸ ಹಾಕಲು ವಿರೋಧಿಸಿದ ಹಿನ್ನೆಲೆಯಲ್ಲಿ ಆ ಯೋಜನೆ ನೆನೆಗುದಿಗೆ ಬಿತ್ತು.


ಶಾಸಕರು, ಜಿಲ್ಲಾಡಳಿತ, ತಹಶಿಲ್ದಾರ್ ಮತ್ತು ನಗರಸಭೆಯ ಅಧಿಕಾರಿಗಳು ಒಗ್ಗೂಡಿ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕೆಲಸವನ್ನು ಇದುವರೆಗೂ ಮಾಡಲೇ ಇಲ್ಲಾ. ಮುಂದುವರೆದು ಬೇರೆ ಜಾಗವನ್ನು ಸಹ ಹುಡುಕದೆ ತಟಸ್ಥರಾದ್ದರಿಂದ ನಗರದಲ್ಲಿನ ಕಸದ ಸಮಸ್ಯೆ ಗುಡ್ಡೆಯಾಚೆಯ ಬೆಟ್ಟದಂತಾಗಿದೆ. ನಗರದಿಂದ ಕಸ ಹೊರಹೋದರೆ ಸಾಕು ಎಂಬಂತೆ ಕೆಲ ಸಿಬ್ಬಂದಿಗಳು ಅಲ್ಲಿಂದಿಲ್ಲೀಗೆ ಇಲ್ಲಿಂದಲ್ಲೀಗೆ, ಜನವಸತಿ ಇಲ್ಲದಕಡೆ ಕಸ ಸುರಿದು ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂದು ಇಲ್ಲಿ ವಿರೋಧಿಸಿದರೆ ನಾಳೆ ಮತ್ತೊಂದು ಕಡೆ ಸುರಿಯಲಾಗುತ್ತಿದೆ. ಜೊತೆಗೆ ನಗರದ ಸುತ್ತಮುತ್ತಲಿನ ಕೆರೆಗಳು ಸೇರಿದಂತೆ ಗ್ರಾಮೀಣ ಭಾಗದ ಕೆರೆಕಟ್ಟೆಗಳು ಮತ್ತು ರಸ್ತೆ ಬದಿಗಳು ಕೋಳಿ ತ್ಯಾಜ್ಯದಿಂದ ಗಬ್ಬು ವಾಸನೆ ಅಡರಿದೆ. ಇದರಿಂದ ನಾಯಿಗಳ ಜೊತೆಗೆ ಚಿರತೆಗಳ ಹಾವಳಿಯೂ ಹೆಚ್ಚಾಗಿದೆ.


ಎಂದೋ ಒಂದು ದಿನ ಯಾವುದೋ ಕಾರ್ಯಕ್ರಮಗಳಿಗೆ ಬಂದು ಹೋಗುವ ಶಾಸಕರು ಇಂತಹ ಸ್ಥಳೀಯ ಸಮಸ್ಯೆಗಳಿಗೆ ಕಿವಿ ಕೊಡುವುದಿಲ್ಲ. ಕೊಟ್ಟರೂ ಸಹ  ಆ ಹೇಳಿಕೆ ಅಂದಿಗೆ ಮುಕ್ತಾಯವಾಗುತ್ತಿದೆ. ಶಾಶ್ವತವಾಗಿ ಮುಕ್ತಿ ನೀಡುವ ಯೋಜನೆಗೆ ಒಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಇಚ್ಚಾಶಕ್ತಿಯನ್ನು ಇಂದಿನ ಶಾಸಕರಾದ ಕುಮಾರಸ್ವಾಮಿ, ಹಿಂದಿನ ಶಾಸಕರಾದ ಸಿ ಪಿ ಯೋಗೇಶ್ವರ್, ಸಂಸದ ಡಿ ಕೆ ಸುರೇಶ್ ಸೇರಿದಂತೆ ಹಿಂದಿನ ಮತ್ತು ಇಂದಿನ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಡಲೇ ಇಲ್ಲಾ. ಇದಕ್ಕೆ ಇವರೆಲ್ಲರೂ ನೇರ ಹೊಣೆ ಹೊರಬೇಕಾಗಿದೆ. ಚುನಾವಣಾ ವೇಳೆ ಉದ್ದುದ್ದ ಪ್ರಣಾಳಿಕೆಯ ಜೊತೆಗೆ ಭಾಷಣ ಬಿಗಿದು ಹೋಗುವ ಜನನಾಯಕರು ನಂತರ ಭರವಸೆಗಳನ್ನು ಮರೆತೇ ಬಿಟ್ಟಿದ್ದರಿಂದ ಇಂದು ಕಸದ ಸಮಸ್ಯೆ ಬೃಹದಾಕಾರವಾಗಿ ಬೆಳೆದು ನಿಂತಿದೆ.


ನಗರಸಭೆಗೆ ನೂತನವಾಗಿ ಚುನಾಯಿತವಾಗಿರುವ ಸದಸ್ಯರುಗಳು ಆಟಕ್ಕುಂಟು ಲೆಕ್ಕಕ್ಕಿಲ್ಲಾ ಎಂಬಂತೆ ಇದ್ದು, ಮುಂದಿನ ತಿಂಗಳು 8 ನೇ ತಾರೀಖಿನಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ನಂತರ ಎಲ್ಲಾ ಸದಸ್ಯರು ಒಗ್ಗೂಡಿ ಶಾಸಕರೊಡಗೂಡಿ ಸಂಬಂಧಿಸಿದ ಇಲಾಖೆಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಜಿಲ್ಲಾಡಳಿತದೊಂದಿಗೆ ಬಿಗಿ ಪಟ್ಟು ಹಿಡಿದು ಸೂಕ್ತ ಜಾಗ ಮತ್ತು ತಂತ್ರಜ್ಞಾನವನ್ನು ಮಂಜೂರು ಮಾಡಿಸಿಕೊಂಡು ಬಂದರೆ ಗೊಂಬೆಗಳ ನಗರ ಸ್ವಚ್ಚ ಸುಂದರ ನಗರವಾಗುವುದರಲ್ಲಿ ಅನುಮಾನವಿಲ್ಲಾ. ನಗರಸಭೆಯ ಎಲ್ಲಾ ಸದಸ್ಯರು ಒಗ್ಗೂಡಿದಾಗ, ಅಧಿಕಾರಿಗಳು ಕೈಜೋಡಿಸಿದಾಗ ಮಾತ್ರ ಈ ಸಮಸ್ಯೆ ಬಗೆಹರಿಯಲು ಮುಂದಿನ ತಿಂಗಳೇ ಸೂಕ್ತವಾಗಿದೆ. ಇಲ್ಲವಾದರೆ ಗಬ್ಬುನಗರವಾಗಿ ಗುರುತಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಿಲ್ಲ.


ಸದ್ಯ ನಮಗೆ ಕಸ ಹಾಕಲು ಯಾವುದೇ ಸೂಕ್ತವಾದ ಸ್ಥಳವಿಲ್ಲಾ, ಎಲೆಕೇರಿ, ಚಿಕ್ಕಮಳೂರು ಮತ್ತು ಕರಬಲ ಮೈದಾನದಲ್ಲಿರುವ ಚಿಕ್ಕ ವಿಕೇಂದ್ರೀಕೃತ ಘಟಕಗಳಲ್ಲಿ ಎರಡು ಟನ್ ಗಳಷ್ಟು ಕಸ ವಿಂಗಡಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಮೂಲದಲ್ಲೇ ಕಸ ವಿಂಗಡಣೆ ಮಾಡಿಕೊಟ್ಟರೆ ಶೇಕಡಾ 50 ರಷ್ಟು ಸಮಸ್ಯೆ ಬಗೆಹರಿಯುತ್ತದೆ. ನಿವಾಸಿಗಳು ಎಲ್ಲೂ ಕಸ ಹಾಕದೆ ತಮ್ಮ ಮನೆಯ ಮುಂದೆ ವಾಹನಗಳು ಬಂದಾಗಷ್ಟೇ ವಿಂಗಡಿಸಿ ನೀಡಿದರೆ, ಮತ್ತೊಂದು ಜಾಗ ಮಂಜೂರಾಗುವವರೆಗೂ ನಿರ್ವಹಣೆ ಮಾಡಬಹುದು. ಕಸವಿಂಗಡಣೆಯಲ್ಲಿ ಸಾರ್ವಜನಿಕರ ಪಾತ್ರವೇ ಮಹತ್ವದ್ದಾಗಿದೆ.

*ಶಿವನಂಕಾರಿಗೌಡ ಪೌರಾಯುಕ್ತರು ಚನ್ನಪಟ್ಟಣ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑