ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣ

ಬೆಂಗಳೂರು.ಅ.29/21: ದೊಡ್ಮನೆ ಹುಡುಗ ಎಂದೇ ಖ್ಯಾತರಾದ, ಮೇರುನಟ ಡಾ ರಾಜಕುಮಾರ್ ರವರ ಕೊನೆಯ ಪುತ್ರ ಕನ್ನಡದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ರವರು ಇಂದು ಬೆಳಿಗ್ಗೆ ಅಸುನೀಗಿದ್ದಾರೆ. ಅವರು ಮುಂಜಾನೆ ಜಿಮ್ ನಲ್ಲಿ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ, ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು.
ಪುನಿತ್ ರವರನ್ನು ಮೊದಲು ರಮಣ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನುರಿತ ವೈದ್ಯರ ಚಿಕಿತ್ಸೆ ಫಲಕಾರಿಯಾಗದೇ ಇನ್ನಿಲ್ಲವಾಗಿದ್ದಾರೆ.
ಇವರಿಗೆ ಸುಮಾರು ಬೆಳಿಗ್ಗೆ 11.30 ರಲ್ಲಿ ಹೃದಯಾಘಾತವಾಗಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಮೊದಲಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿದ ಮುಖ್ಯಮಂತ್ರಿ ಬೊಮ್ಮಾಯಿಯ ವರು , ಮತ್ತೊಂದೆಡೆ ನಟ ರವಿಚಂದ್ರನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ವಿಕ್ರಂ ಆಸ್ಪತ್ರೆಗೆ ದೌಡಾಯಿಸಿದ್ದರು. ಇದೇ ವೇಳೆ
ಪುನೀತ್ ರಾಜ್ ಕುಮಾರ್ ಅವರ ಮನೆ ಹಾಗೂ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿ ಸಲಾಗಿದ್ದು, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಥಳಕ್ಕಾಗಮಿಸಿದ್ದು, ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ವರನಟ ಡಾ| ರಾಜ್ ಕುಮಾರ್ ಅವರ ಐದನೇ ಪುತ್ರನಾದ ಪುನೀತ್ ಅವರು 1975 ರ ಮಾರ್ಚ್ 17 ರಂದು ಜನಿಸಿದರು.
ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು ಅಪ್ಪು ಚಿತ್ರದ ಮೂಲಕ ನಾಯಕನಟ ನಾಗಿದ್ದರು. ನಂತರ ಅಭಿ, ಆಕಾಶ್, ನಮ್ಮ ಬಸವ, ಜಾಕಿ, ಹುಡುಗರು, ರಾಜಕುಮಾರ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾದ ಯುವರತ್ನ ಚಿತ್ರಗಳಲ್ಲಿ ನಟಿಸಿದ್ದರು.
ಇವರ ಅಂತ್ಯಕ್ರಿಯೆಯನ್ನು ಕಂಠೀರವ ಕ್ರೀಡಾಂಗಣದಲ್ಲಿ ನೆರವೇರಿಸಲು ತೀರ್ಮಾನಿಸಲಾಗಿದ್ದು, ತಯಾರಿ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಪೋಲೀಸ್ ಠಾಣೆಯ ಮುಖ್ಯಸ್ಥರಿಗೂ ಐಜಿಪಿ ರವರು ಆದೇಶ ಹೊರಡಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು