Tel: 7676775624 | Mail: info@yellowandred.in

Language: EN KAN

    Follow us :


ಮುಚ್ಚಿದ ಚರಂಡಿ. ಮಳೆ ಮತ್ತು ಚರಂಡಿ ನೀರು ಮನೆಗೆ. ಗ್ರಾಮಸ್ಥರ ಪ್ರತಿಭಟನೆ

Posted date: 05 Dec, 2021

Powered by:     Yellow and Red

ಮುಚ್ಚಿದ ಚರಂಡಿ. ಮಳೆ ಮತ್ತು ಚರಂಡಿ ನೀರು ಮನೆಗೆ. ಗ್ರಾಮಸ್ಥರ ಪ್ರತಿಭಟನೆ

ಚನ್ನಪಟ್ಟಣ: ಚರಂಡಿ ಹಾಗೂ ಮಳೆಯ ನೀರು ಮನೆಗಳಿಗೆ ನುಗ್ಗುತ್ತಿರುವುದನ್ನು ವಿರೋಧಿಸಿ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮಸ್ಥರು ಶನಿವಾರ ರಾತ್ರಿ ಚನ್ನಪಟ್ಟಣ ಕುಣಿಗಲ್ ಮುಖ್ಯರಸ್ತೆಯನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.


ಗ್ರಾಮದ ಮುಕ್ಕಾಲು ಭಾಗದ ಚರಂಡಿ ಹಾಗೂ ಮಳೆ ನೀರು ಹರಿದುಬಂದು ಗ್ರಾಮದ ಮುಂಭಾಗವಿರುವ ಕೋಡಿಹಳ್ಳವನ್ನು ಸೇರುತಿತ್ತು. ಆದರೆ, ಕೆಲದಿನಗಳ ಹಿಂದೆ ಚರಂಡಿ ಪಕ್ಕದ ನಿವೇಶನದಾರ ಗ್ರಾಪಂ ಮಾಜಿ ಸದಸ್ಯ ಮೂರ್ತಿ ಎಂಬುವವರು ತಮ್ಮ ನಿವೇಶನದ ಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಚರಂಡಿ ನಿರ್ಮಿಸಿಲ್ಲ, ಹೀಗಾಗಿ ನನ್ನ ನಿವೇಶನ ಕೊರೆಯುತ್ತಿದೆ ಎಂಬ ಕಾರಣಕ್ಕೆ ಸರ್ಕಾರಿ ಚರಂಡಿಯನ್ನು ಮಣ್ಣು ಹಾಕಿ ಮುಚ್ಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಂದಿನಿಂದ ಗ್ರಾಮದ ಚರಂಡಿ ಹಾಗೂ ಮಳೆಯ ನೀರು ಹರಿದು ಹೋಗಲು ಸಾಧ್ಯವಾಗದೆ,ರಸ್ತೆಯಲ್ಲಿ ಹರಿಯುತ್ತಿತು. ಇದರಿಂದಾಗಿ ಇದೇ ಜಾಗದಲ್ಲಿರುವ ಶತಮಾನಕ್ಕೂ ಹೆಚ್ಚಿನ ಸೇತುವೆಗೂ ಹಾನಿ ಉಂಟಾಗಿತ್ತು. ಚರಂಡಿ ಮುಚ್ಚಿದ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ಸುರಿದ ಬಾರಿ ಮಳೆಯಿಂದಾಗಿ ನೀರು ರಸ್ತೆ ಪಕ್ಕದಲ್ಲಿನ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಸಿತ್ತು.


ಈ ಬಗ್ಗೆ ಇಲ್ಲಿನ ನಿವಾಸಿಗಳು ಚರಂಡಿ ಮುಚ್ಚಿರುವುದರಿಂದ ಉಂಟಾಗುತ್ತಿರುವ ಸಮಸ್ಯೆ ಹಾಗೂ ಶತಮಾನದ ಸೇತುವೆಗೆ ಎದುರಾಗಿರುವ ಕಂಟಕದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮನವರಿಕೆ ಮಾಡಿಕೊಟ್ಟಿದ್ದರು. ಇದಲ್ಲದೇ ಮಾಧ್ಯಮಗಳ ಮೂಲಕ ಗಮನ ಸೆಳೆದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ.


*ರಸ್ತೆ ಬಂದ್..,ವಾಹನ ಸವಾರರ ಪರದಾಟ.*

ಶನಿವಾರ ರಾತ್ರಿ ಜೋರು ಮಳೆಯಾದ ಕಾರಣ ಮತ್ತೆ ಚರಂಡಿ ಹಾಗೂ ಮಳೆಯ ನೀರು ಗ್ರಾಮದ ಮುಂಭಾಗವಿರುವ ಹಲವು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಸುರಿವ ಮಳೆಯಲ್ಲೇ ಚನ್ನಪಟ್ಟಣ ಕುಣಿಗಲ್ ಮುಖ್ಯರಸ್ತೆಗೆ ಕಲ್ಲುಗಳನ್ನಿಟ್ಟು ಪ್ರತಿಭಟನೆ ನಡೆಸಿದರು. ಚರಂಡಿ ಮುಚ್ಚಿ ಹಲವು ದಿನಗಳಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸುತ್ತಿಲ್ಲ. ಮುಚ್ಚಿರುವ ಚರಂಡಿ ತೆರವುಗೊಳಿಸದೆ ಜಾಣ ಕುರುಡುತನ ಪ್ರದರ್ಶಿಸುತಿದ್ದಾರೆ. ಇದರಿಂದ ಕಲುಷಿತ ನೀರು ನಮ್ಮ ಮನೆಗಳಿಗೆ ನುಗ್ಗುತ್ತಿದೆ. ಸ್ಥಳಕ್ಕೆ ಅಧಿಕಾರಿಗಳು ಬಂದು ಮುಚ್ಚಿರುವ ಚರಂಡಿ ತೆರವುಗೊಳಿಸುವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ರಾತ್ರಿ 10 ಗಂಟೆಗೆ ಆರಂಭವಾದ ಈ ರಸ್ತೆ ತಡೆಯಿಂದಾಗಿ ಈ ಭಾಗದ ವಾಹನ ಸಂಚಾರ ತೀವ್ರ ಅಸ್ತವ್ಯಸ್ತ ಉಂಟಾಯಿತು. ಸ್ಥಳಕ್ಕೆ ಪೊಲೀಸರು, ಗ್ರಾಪಂ ಹಾಗೂ ಕಂದಾಯ ಅಧಿಕಾರಿಗಳು ಆಗಮಿಸಿ, ಬೆಳಿಗ್ಗೆ ತೆರವುಗೊಳಿಸುತ್ತೇವೆ ಎಂದು ಮನವೊಲಿಸಿದರೂ ಯಾವುದೇ ಪ್ರಯೋಜನ ವಾಗಿಲ್ಲ.


*ಜನರ ಹೃದಯಗೆದ್ದ ತಹಸೀಲ್ದಾರ್:*

ಗ್ರಾಮಸ್ಥರ ಪ್ರತಿಭಟನೆಯ ವಿಚಾರ ತಿಳಿದ ತಹಸೀಲ್ದಾರ್ ಎಲ್.ನಾಗೇಶ್ ರಾತ್ರಿ 11 ಗಂಟೆಗೆ ಗ್ರಾಮಕ್ಕೆ ಭೇಟಿಕೊಟ್ಟು, ಮುಚ್ಚಿರುವ ಚರಂಡಿ ಹಾಗೂ ನೀರು ನುಗ್ಗಿರುವ ಮನೆಗಳನ್ನು ಪರಿಶೀಲಿಸಿದರು. ಸಮಸ್ಯೆಯನ್ನು ಕಣ್ಣಾರೆ ಕಂಡು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡರು. ಸಮಸ್ಯೆಯ ಬಗ್ಗೆ ಮಾಹಿತಿ ಇದ್ದರೂ, ನಿಮ್ಮ ಇಲಾಖೆಗೆ ಸೇರುವ ಈ ಚರಂಡಿಯನ್ನು ಏಕೆ ತೆರವುಗೊಳಿಸಿಲ್ಲ? ನಿಮ್ಮ ನಿರ್ಲಕ್ಷ್ಯದಿಂದ ಇಲ್ಲಿನ ಜನತೆ ಸಮಸ್ಯೆ ಅನುಭವಿಸುವಂತಾಗಿದೆ. ಕೂಡಲೇ ಸ್ಥಳಕ್ಕೆ ಬಂದು ಸಮಸ್ಯೆ ಸರಿಪಡಿಸಿ, ಅಲ್ಲಿವರೆಗೂ ನಾನು ಇಲ್ಲೇ ಇರುತ್ತೇನೆ ಎಂದು ತಾಕೀತು ಮಾಡಿದರು. ಸ್ಥಳದಲ್ಲಿದ್ದ ಗ್ರಾಪಂ ಪಿಡಿಓಗೆ ಜೆಸಿಬಿ ಯಂತ್ರದ ವ್ಯವಸ್ಥೆ ಮಾಡುವಂತೆ  ತಿಳಿಸಿದರು. ಮತ್ತೆ ಮಳೆ ಬಂದರೆ ಆಗುವ ಅನಾಹುತದ ಬಗ್ಗೆ ಗ್ರಹಿಸಿದ ತಹಸೀಲ್ದಾರ್, ಸುರಿವ ಮಳೆಯನ್ನು ಲೆಕ್ಕಿಸದೇ ಸುಮಾರು ಎರಡೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿ ನಿಂತು ಮುಚ್ಚಿರುವ ಚರಂಡಿಯನ್ನು ತೆರವುಗೊಳಿಸಿದರು.

ಸ್ಥಳದಲ್ಲಿದ್ದ ಲೋಕೋಪಯೋಗಿ ಎಇ ನಂಜುಡಸ್ವಾಮಿಗೆ ಕೂಡಲೇ ನಿಮ್ಮ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಈ ಜಾಗದಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಸೂಚಿಸಿದರು.


*ಗ್ರಾಮಸ್ಥರ ಕೃತಜ್ಞತೆ;*

ಜನರ ಸಮಸ್ಯೆಗಳು ಎಂದರೆ ಜಾಣಕುರುಡು ಪ್ರದರ್ಶಿಸುವ ಅಧಿಕಾರಿಗಳೇ ಹೆಚ್ಚು. ಆದರೆ, ಸಮಸ್ಯೆ ಎಂದ ಕೂಡಲೇ ಸುರಿವ ಮಳೆ ಹಾಗೂ ರಾತ್ರಿ ಎನ್ನುವುದನ್ನು ಲೆಕ್ಕಿಸದೇ ಸ್ಥಳಕ್ಕೆ ಧಾವಿಸಿ ಸಮಸ್ಯೆ ಪರಿಹರಿಸಿಕೊಟ್ಟ ತಹಸೀಲ್ದಾರ್ ನಾಗೇಶ್ ರವರ ದಕ್ಷತೆ ಹಾಗೂ ಕರ್ತವ್ಯ ನಿಷ್ಠೆ ಗೆ ತಿಟ್ಟಮಾರನಹಳ್ಳಿ ಗ್ರಾಮಸ್ಥರು ಮನಸೋತರು. ಜೆಸಿಬಿ ಯಂತ್ರ ಕೆಲಸ ಆರಂಭಿಸಿದ ತಕ್ಷಣವೇ ಗ್ರಾಮಸ್ಥರು ಹಾಗೂ ಗ್ರಾಪಂ ಪಿಡಿಓ ಕಾವ್ಯಾ, ವಿಎ ಮಂಜು ತಾವಿನ್ನು ಹೊರಡಿ ಸರ್ ನಾವು ಕೆಲಸ ಪೂರ್ಣಗೊಳಿಸುತ್ತೇವೆ ಎಂದು ಕೇಳಿಕೊಂಡರೂ, ಕೆಲಸ ಮುಗಿಯುವವರೆಗೂ ಸ್ಥಳದಲ್ಲಿದ್ದ ತಹಸೀಲ್ದಾರ್ ಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑