Tel: 7676775624 | Mail: info@yellowandred.in

Language: EN KAN

    Follow us :


ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

Posted date: 08 Jan, 2022

Powered by:     Yellow and Red

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

'ಸಂಪ್ರೀತಿ ರಾಮಾಯಣ' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಸಾಹಿತಿ ಪ್ರದೀಪ್ ಕುಮಾರ್ ಹೆಬ್ರಿ ಯವರು ಸಂತಸ ವ್ಯಕ್ತಪಡಿಸಿದ್ದಾರೆ. 126 ಪುಟಗಳ ರೂ. 120₹ ಮುಖಬೆಲೆಯ ಈ ಕೃತಿಯನ್ನು ಸಂಪ್ರೀತಿ ಪ್ರಕಾಶನ ಮಾಗಡಿ ಇವರು ಹೊರತಂದಿದ್ದಾರೆ. ಮುನ್ನುಡಿಯಲ್ಲಿ ಶ್ರೀ ಬಿ. ಆರ್. ಲಕ್ಷ್ಮಣ ರಾವ್ ಅವರು," ಭಾರತದ ದೃಷ್ಟಿಯಿಂದ ವಾಲ್ಮೀಕಿ ರಾಮಾಯಣ ಕೇವಲ ಒಂದು ಮಹಾಕಾವ್ಯ ಮಾತ್ರವಲ್ಲ, ವೇದೋಪನಿಷತ್ತುಗಳಂತೆ ಅದೂ ಸಹ ಇಡೀ ಭಾರತವನ್ನು ಒಂದು ಅಖಂಡ ಜನ ಸಮುದಾಯದ ಘಟಕವನ್ನಾಗಿ ಒಗ್ಗೂಡಿಸಿ ಹಿಡಿದಿಟ್ಟಿರುವ ಅಂತಃಸೂತ್ರ ಆಗಿದೆ. ಉದಾತ್ತ ಮತ್ತು ಉತ್ಕೃಷ್ಟ ಜೀವನ ಮೌಲ್ಯಗಳನ್ನು ವ್ಯಷ್ಟಿ ಮತ್ತು ಸಮಷ್ಟಿಯ ಚಿತ್ತದಲ್ಲಿ ನಿರಂತರವಾಗಿ ಬಿತ್ತಿ ಬೆಳೆಯುತ್ತಿರುವ ನಮ್ಮದೇ ಅಘೋಷಿತ ಸಂವಿಧಾನ ಆಗಿದೆ" ಎಂದಿದ್ದಾರೆ.


ಶ್ರೀ ರಾಮ ಕಷ್ಟಗಳು ಬದುಕನ್ನು ಹಿಂಡಿದಾಗ ನೆನಪಾಗಿ ಸಾಂತ್ವನ ಹೇಳುವ ಅಂತರಂಗದ ಬೆಳಕು, ಒಳಿತಿನ ದಾರಿಯ ಹುಡುಕಾಟದಲ್ಲಿ ಅವನೊಂದು ಕೋಲ್ಮಿಂಚು" ಎಂದ ಲೇಖಕರ ಮಾತು ಮನನೀಯ. ಇಂತಹ ಬರಹಗಳಿಂದಲೇ ಪುಸ್ತಕ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.


ರಾಮಾಯಣದ ಕಥೆಯನ್ನು ತಿಳಿಯದಿರುವ ಭಾರತೀಯರು ಯಾರೂ ಇರಲಿಕ್ಕಿಲ್ಲ. ಹಾಗಾಗಿ ಈ ಕೃತಿಯ 'ಪುತ್ರಕಾಮೇಷ್ಠಿ ಯಾಗದಿಂದ ಬಂದ ಪುತ್ರ',' ಭೂಮಿ ಪುತ್ರಿಯೊಡನೆ ವಿವಾಹ',' ಅಹಲ್ಯಾ ಶಾಪ ವಿಮೋಚಕ',' ಕಿರೀಟದ ಬದಲು ನಾರುಮಡಿಯುಟ್ಟ ರಾಮ',' ಶೂರ್ಪನಖಿಗೆ ಪಾಠ ಕಲಿಸಿದ ಪ್ರಸಂಗ',' ಸೀತಾಪಹರಣ',' ಸೀತಾನ್ವೇಷಣೆ',' ಶ್ರೀರಾಮಗೆ ಸಿಹಿ ಹಣ್ಣು ತಿನಿಸಿದ ಶಬರಿ',' ರಾಮ ಸುಗ್ರೀವರ ಭೇಟಿ',' ಸೀತೆಯ ಭೇಟಿಯಾದ ಹನುಮ',' ರಾಮ ರಾವಣರ ಯುದ್ಧ',' ಅಳಿಲಿನ ಸೇವೆ',' ಶ್ರೀರಾಮ ಪಟ್ಟಾಭಿಷೇಕ' ಎಂಬ ಅಧ್ಯಾಯಗಳೇ ನಮಗೆ ಮತ್ತೆ ಶ್ರೀರಾಮ ಕಥೆಯನ್ನು ಗುನುಗುವಂತೆ ಮಾಡುತ್ತವೆ. ಆದರೂ ಈ ಕೃತಿಯಲ್ಲಿ ಲೇಖಕರು ಏನು ಹೇಳಿರಬಹುದೆಂಬುದನ್ನು ಅರಿಯುವ ಆಸಕ್ತಿ ಸಹಜ.


"ಪೂರ್ಣಪ್ರಭೆಯಿಂದ ಜಗಮಗಿಸುತ್ತಿದ್ದ ಚಂದ್ರನನ್ನು ನೋಡಿ ಬಾಲ ರಾಮ ತನಗವನು ಬೇಕೆಂದು ಹಠ ಹಿಡಿದಾಗ ದಾಸಿ ಮಂಥರೆ ಒಂದು ಕನ್ನಡಿ ತರಿಸಿ ರಾಮನ ಮುಖಕ್ಕೆ ಹಿಡಿದಳು. ಅಲ್ಲಿ ಹೊಳೆಯುತ್ತಿದ್ದ ತನ್ನದೇ ಮುಖವನ್ನು ನೋಡಿದ ರಾಮ ಚಂದ್ರನನ್ನೇ ಪಡೆದೆ ಎಂಬ ಖುಷಿಯಲ್ಲಿ ಸುಮ್ಮನೆ ಆಟವಾಡತೊಡಗಿದ.‌ ಶ್ರೀರಾಮ ಹೀಗೆ ತನ್ನ ಬಾಲಲೀಲೆಗೆ ಆರಿಸಿಕೊಂಡದ್ದು ಮಂಥರೆಯನ್ನು. ರಾಮ ಮತ್ತು ಲಕ್ಷ್ಮಣರು ವಿಶ್ವಾಮಿತ್ರ ಮುನಿಗಳೊಡನೆ ಬರಿಗಾಲ ಪ್ರಯಾಣದ ಅನೇಕ ಕಷ್ಟಗಳನ್ನು ಪ್ರೀತಿಯಿಂದ ಸ್ವಾಗತಿಸಿದರು. ಏಕೆಂದರೆ ವಿಶ್ವಾಮಿತ್ರರಿಂದ ಅನೇಕ ವಿಷಯಗಳ ಬಗ್ಗೆ ಕಲಿಯುವ ಅವಕಾಶ ಸಿಕ್ಕಿತ್ತು, ಶಸ್ತ್ರಾಸ್ತ್ರಗಳ ಮೇಲೆ ರಾಮನ ಪಾಂಡಿತ್ಯದಿಂದ ಪರಶುರಾಮರು ಬೆರಗಾದರು. ರಾಮ ಸಾಮಾನ್ಯ ವ್ಯಕ್ತಿಯಲ್ಲ ಎಂದರಿತರು, ದಶರಥನು ತನ್ನ ಮಗನಲ್ಲಿ, ಒಬ್ಬ ರಾಜನು ಎಂದಿಗೂ ದುರ್ಗುಣಗಳಿಗೆ ಬಲಿಯಾಗಬಾರದು, ಅವನು ಪ್ರತಿಯೊಬ್ಬರನ್ನೂ ಗೌರವದಿಂದ ನೋಡಿಕೊಳ್ಳಬೇಕು ಮತ್ತು ರಾಜ್ಯವನ್ನು ಚೆನ್ನಾಗಿ ಆಳಬೇಕು ಎಂದಿದ್ದನು.


ರಾಮನನ್ನು ರಾಜನನ್ನಾಗಿ ಮಾಡುವ ಮೂಲಕ ಮತ್ತು ಭರತನನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ದಶರಥ ಮಹಾರಾಜ ನ್ಯಾಯೋಚಿತವಾಗಿ ನಡೆದು ಕೊಂಡಿಲ್ಲ" ಎಂಬುದು ಮಂಥರೆಯ ಅಭಿಪ್ರಾಯವಾಗಿತ್ತು"," ಮಂಥರೆಯಿಂದ ಮನ ಪರಿವರ್ತನೆಗೊಂಡ ಕೈಕೇಯಿ ರಾಮ ಅಯೋಧ್ಯೆಯಲ್ಲಿ ಇಲ್ಲದಿದ್ದರೆ ಮಾತ್ರ ಭರತನು ಅಯೋಧ್ಯೆಯ ಜನರ ಪ್ರೀತಿ ಮತ್ತು ಗೌರವಗಳನ್ನು ಗಳಿಸ ಬಹುದೆಂದು ಭಾವಿಸಿದಳು. ಪಿತನ ಮಾತಿನನುಸಾರ ರಾಮನು ಅಯೋಧ್ಯೆಯಿಂದ ಹೊರಡುತ್ತಿದ್ದಂತೆಯೇ ರಾಜನು ತನ್ನ ಪ್ರೀತಿಯ ಮಗನ ಬೇರ್ಪಡುವಿಕೆಯನ್ನು ಸಹಿಸಿಕೊಳ್ಳುತ್ತಾರೆಯೇ ಎಂಬುದೆಲ್ಲರ ಆತಂಕಕ್ಕೆ ಕಾರಣವಾಗಿತ್ತು, ಕೈಕೇಯಿ ಮಗನಲ್ಲಿ," ಮಗೂ, ಸಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ತಂದೆ ತೀರಿಕೊಂಡರು" ಎಂದಾಗ ಭರತನು ಆಘಾತದಿಂದ ಕುಸಿದು ಬಿದ್ದನು. ರಾಮ ತನ್ನ ಮನಸ್ಸು ಬದಲಿಸುವಂತೆ ಭರತ ತನ್ನ ಮಿತಿಯಲ್ಲಿ ಅತ್ಯುತ್ತಮವಾಗಿ ಪ್ರಯತ್ನಿಸಿದ. ಋಷಿಮುನಿಗಳು ರಾಮನ ಮೇಲೆ ಪ್ರಭಾವ ಬೀರಿದರು.‌ ಆದರೆ ಅದೆಲ್ಲವೂ ವ್ಯರ್ಥವಾಯಿತು, ಶೂರ್ಪನಖಿಯು ತನ್ನಣ್ಣ ರಾವಣನಲ್ಲಿ,"ಇಲ್ಲಿ ನೀವು ಐಷಾರಾಮಿ ಜೀವನವನ್ನು ನಡೆಸುತ್ತಿದ್ದೀರಿ. ಆದರೆ ನಿಮ್ಮ ಸಹೋದರರ ಬಗ್ಗೆ ಕಾಳಜಿಯಿಲ್ಲ"ವೆಂದು ಬೊಬ್ಬಿಟ್ಟಳು"," ರಾಮನ ಸುರಕ್ಷತೆಯ ಬಗ್ಗೆ ಆತಂಕದಲ್ಲಿ ಸೀತಾ ಲಕ್ಷ್ಮಣನನ್ನು ಕೆಟ್ಟ ಉದ್ದೇಶಿ ಎಂದು ಆರೋಪಿಸಿದಳು. ರಾವಣನು ಪ್ರತೀದಿನ ದುಬಾರಿ ಉಡುಗೊರೆಗಳ ಆಸೆ ತೋರುತ್ತ ಸೀತೆಯನ್ನು ಪೀಡಿಸುತ್ತಿದ್ದನು"," ರಾಮನು ಲಕ್ಷ್ಮಣನಲ್ಲಿ ಶಬರಿಯ ಕುರಿತು," ಜಗತ್ತಿಗೆ ಬೆಳಕನ್ನು ನೀಡುವವರು, ಪರೋಪಕಾರ ಮಾಡುವವರು ತಮ್ಮ ನೋವನ್ನು ಮರೆಯುತ್ತಾರೆ, ತಮ್ಮ ಸಂಕಟವನ್ನು ಮತ್ತೊಬ್ಬರಿಗೆ ಹೇಳುವುದಿಲ್ಲ.‌ ಹೇಗೆ ದೀಪದ ಬತ್ತಿಯ ಉರಿದ ಕಪ್ಪುಭಾಗ ಬೇರೆಯವರಿಗೆ ಕಾಣಿಸದೋ ಶಬರಿಯೂ ಹಾಗೆ. ನೋಡುಗರಿಗೆ ಕೇವಲ ಬೆಳಕು ಮಾತ್ರ ಕಾಣಿಸುತ್ತದೆ"," ಸುಖ ಲೋಲುಪಿ ಸುಗ್ರೀವನಲ್ಲಿ ಧಾವಿಸಿದ ಹನುಮನು," ರಾಮ ತನ್ನ ಸ್ನೇಹವನ್ನು ನಿಮಗೆ ಸಾಬೀತು ಪಡಿಸಲಿಲ್ಲವೇ? ನೀವು ಅವನ ಕೃತಜ್ಞತೆಯನ್ನು ಮರುಪಾವತಿಸಬಾರದೇ?" ಎಂದು ಆಗ್ರಹಿಸಿದನು.


ಹನುಮನು ಆಗಸದಲ್ಲಿ ಹಾರುತ್ತಿದ್ದಾಗ ವಾನರರಿಗೆ ಆಕಾಶದಾದ್ಯಂತ ಸಂಚರಿಸುವ ಚಂದ್ರನಂತೆ ಕಾಣುತ್ತಿದ್ದನು. ರಾವಣನ ಸೀತಾಪಹರಣದ ಕಥೆಯನ್ನು ಕುಂಭಕರ್ಣ ಇಷ್ಟಪಡದಿದ್ದರೂ, ಸಹೋದರ ಪ್ರೀತಿ ಮತ್ತು ನಿಷ್ಠೆಯಿಂದ ಅವನನ್ನು ಬೆಂಬಲಿಸಲು ನಿರ್ಧರಿಸಿದನು. ಅಳಿಲುಗಳ ಕೆಲಸವನ್ನು ಹೀಗಳೆಯುತ್ತಿದ್ದ ಕಪಿಗಳು ಸಣ್ಣಸಣ್ಣ ಕಲ್ಲುಗಳು ದೊಡ್ಡ ಕಲ್ಲುಗಳ ಜೋಡಣೆಯಲ್ಲಿ ಹೇಗೆ ನೆರವಾಗಿದೆ ಎಂಬುದನ್ನರಿತು ಯಾವುದೇ ಕಾರ್ಯವು ಸಣ್ಣದು ಅಥವಾ ದೊಡ್ಡದು ಎಂದಿರುವುದಿಲ್ಲವೆಂದು ಮನವರಿಕೆ ಮಾಡಿಕೊಂಡವು.  ಶ್ರೀರಾಮನ ಪಿತೃಭಕ್ತಿ, ಮೌಲ್ಯಗಳು, ಸತ್ಯತೆ, ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಮಾನವರಾಗಲು ಪ್ರಯತ್ನಿಸೋಣ ಎಂಬ ನುಡಿಗಳು ಓದುಗರನ್ನು ಹಿಡಿದಿಡುತ್ತವೆ. ಹೀಗೆ ' ಸಂಪ್ರೀತಿ ರಾಮಾಯಣ' ಪುಸ್ತಕವು ನಮಗೆ ಶ್ರೀರಾಮನನ್ನು ನೆನೆಯುವಲ್ಲಿ ನೆರವಾಗಿದೆ ಎಂದ ಹೆಬ್ರಿ ಯವರು ಲೇಖಕ ಡಾ. ಡಿ.ಸಿ.ರಾಮಚಂದ್ರ (98455565696) ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑