Tel: 7676775624 | Mail: info@yellowandred.in

Language: EN KAN

    Follow us :


ರೈತೋತ್ಪನ್ನ ಹೆಚ್ಚಾದಂತೆಲ್ಲಾ ರೈತ ಬಡವನಾಗುತ್ತಿದ್ದಾನೆ. ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ವೀರಭದ್ರಪ್ಪ ಬಿಸ್ಲಳ್ಳಿ

Posted date: 12 Feb, 2022

Powered by:     Yellow and Red

ರೈತೋತ್ಪನ್ನ ಹೆಚ್ಚಾದಂತೆಲ್ಲಾ ರೈತ ಬಡವನಾಗುತ್ತಿದ್ದಾನೆ. ಕೆಲವರು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ವೀರಭದ್ರಪ್ಪ ಬಿಸ್ಲಳ್ಳಿ

ರೈತರ ಯೋಗ ಮತ್ತು ಯೋಗ್ಯತೆ ತಿಳಿದುಕೊಂಡಿದ್ದ ಏಕೈಕ ಹೋರಾಟಗಾರ ಪ್ರೊ ನಂಜುಂಡಸ್ವಾಮಿ ಯವರು. ಅವರ ಒಂದು ಮಾತಿಗೆ ಇಡೀ ಸರ್ಕಾರ ನಡುಗುವಂತೆ ಮಾಡುವ ತಾಕತ್ತು ಅವರ ಮಾತಿನಲ್ಲಿತ್ತು. ಸಂಘಟನೆಯ ಮೂಲಕ ರೈತರು ಒಗ್ಗಟ್ಟಾಗಲಿಲ್ಲ ಎಂದರೆ ಒಕ್ಕಲುತನವನ್ನೇ ನಂಬಿರುವ ರೈತರು ಮುಂದೊಂದು ದಿನ ಆಳುವವರ ಗುಲಾಮರಾಗಬೇಕಾಗುತ್ತದೆ. ಈಗಾಗಲೇ ರೈತ ಬೆಳೆಯುತ್ತಾ, ಬೆಳೆಯುತ್ತಾ ಬಡವನಾಗುತ್ತಿದ್ದಾನೆ. ಕಾರ್ಪೋರೆಟ್ ಸಂಸ್ಥೆಯ ಕೆಲವೇ ಮಂದಿಗಳು ದಿನೆದಿನೇ ಶ್ರೀಮಂತರಾಗುತ್ತಿದ್ದಾರೆ ಎಂದು ಲೇಖಕ ಹಾಗೂ ಪತ್ರಕರ್ತ ವೀರಭದ್ರಪ್ಪ ಬಿಸ್ಲಳ್ಳಿ ರೈತರಿಗೆ ತಿಳಿಸಿಕೊಟ್ಟರು.

ಅವರು ಇಂದು ಅರ್ಚಕರಹಳ್ಳಿ ಬಳಿಯ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಅಂಧರ ಶಾಲೆಯಲ್ಲಿ ಸಮಾನ ಮನಸ್ಕರ ಸಹಭಾಗಿತ್ವ ದ ರೈತ ಸಂಘಟನೆ ಹಮ್ಮಿಕೊಂಡಿದ್ದ ಪ್ರೊ ನಂಜುಂಡಸ್ವಾಮಿ ನೆನಪು ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ನಂಜುಂಡಸ್ವಾಮಿ ಮತ್ತು ಹೋರಾಟ ಕುರಿತು ಮಾತನಾಡಿದರು.


ದೇಶದ ಬೆನ್ನೆಲುಬು, ಅನ್ನದಾತ ಎಂಬ ಘೋಷಣೆಯಲ್ಲೇ ಸರ್ಕಾರಗಳು ರೈತರ ಹೊಟ್ಟೆ ತುಂಬಿಸುವ ಪ್ರಯತ್ನ ಮಾಡುತ್ತಿವೆ. ರೈತ ಬೆಳೆದ ಬೆಳೆಗೆ ಮೊದಲು ಮಾರುಕಟ್ಟೆ ಸೃಷ್ಟಿಸಬೇಕು. ನಂಜುಂಡಸ್ವಾಮಿ, ರಾಮಮನೋಹರಲೋಹಿಯಾ, ಅಂತಹವರ ಚಳವಳಿಗಳನ್ನು ಗಮನದಲ್ಲಿಟ್ಟುಕೊಂಡು ಇಂದು ಚಳವಳಿಯನ್ನು ಕಟ್ಟಬೇಕು. ದೇಶದಲ್ಲಿ ಜಾತಿ-ಮತಗಳು ಸೇರಿದಂತೆ ನಾಡು-ನುಡಿಯ ವಿಷಯದಲ್ಲಿ ಚಳವಳಿಗಳಿವೆ. ಅವು ಸ್ವಾರ್ಥದ ಚಳವಳಿಗಳಾಗದೆ, ಸಮಾಜದ ಚಳವಳಿಗಳಾಗಬೇಕು. ರೈತರು ಕಾನೂನುಗಳನ್ನು ತಿಳಿದುಕೊಳ್ಳಬೆಕು. ನೈತಿಕ ಹೋರಾಟ ಮಾಡಬೇಕು ಆಗಲೇ ರೈತ ಉದ್ದಾರವಾಗಲು ಸಾಧ್ಯ ಎಂದು ತಿಳಿಸಿಕೊಟ್ಟರು.


ಹಿರಿಯ ರೈತ ಮುಖಂಡ ತುಮಕೂರಿನ ಎನ್ ಜಿ ರಾಮಚಂದ್ರ ಗಾಂಧಿ ಮತ್ತು ಸತ್ಯಾಗ್ರಹ ದ ಬಗ್ಗೆ ಮಾತನಾಡಿ, ಬುದ್ದ, ಬಸವಣ್ಣನ ನಂತರ ಅತಿ ಹೆಚ್ಚು ಆವರಿಸಿಕೊಂಡಂತಹ ಏಕೈಕ ವ್ಯಕ್ತಿ ಮಹಾತ್ಮ ಗಾಂಧಿ. ಅವರು ಅಹಿಂಸೆಯನ್ನು ಅಪ್ಪಿಕೊಂಡು, ಸತ್ಯಾಗ್ರಹದ ಮೂಲಕ ಹೋರಾಟ ಮಾಡಿದಂತಹ ಶ್ರೀಮಂತ ವ್ಯಕ್ತಿ. ಸತ್ಯಾಗ್ರಹ ಎಂದರೇನೆಂದೆ ಗೊತ್ತಿಲ್ಲದ ಸಂದರ್ಭದಲ್ಲಿ ಇಡೀ ವಿಶ್ವಕ್ಕೆ ತೋರಿಸಿಕೊಟ್ಟಂತ ಮಹಾನ್ ವ್ಯಕ್ತಿ ಗಾಂಧೀಜಿ. ಹಿಂಸೆ, ಅಹಿಂಸೆ ಮತ್ತು ಸತ್ಯಾಗ್ರಹವನ್ನು ನಾವು ಭಿನ್ನವಾಗಿ ನೋಡಬೇಕು. ನಮ್ಮ ರೈತರು ಸಹ ಸತ್ಯಾಗ್ರಹ ಮಾದರಿಯಲ್ಲೇ ಪ್ರತಿಭಟನೆ ಹಮ್ಮಿಕೊಂಡು ನಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಡಿಯಿಡಬೇಕು. ಹರಪ್ಪ ನಾಗರೀಕತೆಯ ನಂತರ ಮುಂದುವರಿದ ಭಾಗ ನಾವು ಎಂಬುದನ್ನೇ ಮರೆತಿದ್ದೇವೆ. ಪುಲಿಕೇಶಿ, ನೃಪತುಂಗ, ಗಂಗರು ಮತ್ತು ಕೃಷ್ಣದೇವರಾಯ ರನ್ನು ಓದಿಕೊಂಡು ನಮ್ಮ ಮೂಲವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಎಂಭತ್ತರ ದಶಕದಿಂದಲೂ ಹೋರಾಟ ಇದ್ದರೂ ಸಹ ನಾವು ಇನ್ನೂ ಹೋರಾಟ ಮಾಡುತ್ತಲೇ ಇದ್ದೇವೆ ಎಂದರೆ ನಮಗೆ ಇನ್ನೂ ನ್ಯಾಯ ದೊರಕಿಲ್ಲ. ಹಾಗಾಗಿ ನಾವು ಗಾಂಧೀಜಿಯವರ ಸತ್ಯಾಗ್ರಹ ಮಾರ್ಗದಲ್ಲಿ ಚಳವಳಿಯನ್ನು ಆರಂಭಿಸೋಣಾ ಎಂದು ಕರೆ ನೀಡಿದರು.


ರೈತ ಮತ್ತು ಮತದಾನ ಕುರಿತು ಪ್ರೊ ಜಯರಾಮಯ್ಯ ನವರು ಮಾತನಾಡಿ, ಭ್ರಷ್ಟರ ಕಪಿಮುಷ್ಠಿಯಿಂದ ನಾವು ತಪ್ಪಿಸಿಕೊಳ್ಳಬೇಕೆಂದರೆ ಮತದಾನದಿಂದ ಮಾತ್ರ ಸಾಧ್ಯ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗಲೇ ನಾವು ಎಡವುತ್ತಿದ್ದೇವೆ. ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ತಿಣುಕಾಡುತ್ತಿದ್ದೇವೆ. ನಾವು ಪ್ರಶ್ನೆ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಚಿಲ್ಲರೆ ದುಡ್ಡುಕೊಟ್ಟು ನಮ್ಮ ಮತವನ್ನು ಖರೀದಿಸಿ, ಕೋಟಿ ಲೆಕ್ಕದಲ್ಲಿ, ಪರಿಸರದ ಸಮೇತ ದೋಚುತ್ತಾನೆ. ನಾವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗಲೇ ನಾವು ಬುದ್ದಿವಂತರಾಗಬೇಕು ಎಂದು ರೈತರಿಗೆ ಕರೆ ನೀಡಿದರು.


ಅಧ್ಯಕ್ಷತೆ ವಹಿಸಿಕೊಂಡಿದ್ದ ಸಿ ಪುಟ್ಟಸ್ವಾಮಿಯವರು ಅಂಬೇಡ್ಕರ್ ಮತ್ತು ಸಂವಿಧಾನ ಕುರಿತು ಮಾತನಾಡುತ್ತಾ, ಅಂಬೇಡ್ಕರ್ ರವರನ್ನು ತಿಳಿದುಕೊಂಡರೆ ಸಂವಿಧಾನ ತಿಳಿದುಕೊಳ್ಳಲು ಸಾಧ್ಯ. ಆಗಲೇ ಸಂವಿಧಾನವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಬುದ್ದ, ಬಸವ, ಗಾಂಧಿ, ಅಂಬೇಡ್ಕರ್, ಲೋಹಿಯಾ ರವರನ್ನು ನೆನಪಿಸಿಕೊಳ್ಳದಿದ್ದರೆ ನಾವು ಬದುಕಿದ್ದು ಪ್ರಯೋಜನವಿಲ್ಲ. ಅಂಬೇಡ್ಕರ್ ರವರು ಇನ್ನಷ್ಟು ಕಾಲ ಬದುಕಿದ್ದರೆ ರೈತ ಮತ್ತು ಆತನ ಬೆಳೆಗೂ ಸಹ ಕಾನೂನು ಬದ್ಧ ಬೆಲೆ ಸಿಗುವುದರಲ್ಲಿ ಅನುಮಾನವೇ ಇರಲಿಲ್ಲ. ಅವರು ಮಂತ್ರಿಯಾಗಿದ್ದ ಸಂದರ್ಭದಲ್ಲೇ ಜಿವಂತ ಜಲಮೂಲಗಳಿಂದ, ರೈಲ್ವೆ ಹಳಿ ಮಾರ್ಗದಂತೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಂತಹ ಅಂಬೇಡ್ಕರ್ ರವರು ಒಂದೇ ಸಮುದಾಯಕ್ಕೆ ಸೀಮಿತವಲ್ಲಾ. ಅವರು ವಿಶ್ವ ಶ್ರೇಷ್ಠರು ಎಂದರು.


ಚಳವಳಿಯನ್ನು ದಿಕ್ಕು ತಪ್ಪಿಸಲು ಪಕ್ಷ ರಾಜಕಾರಣಿಗಳೇ ಕಾರಣ. ಬಂಡವಾಳ ಸಂಸ್ಕೃತಿಗಳ ದಬ್ಬಾಳಿಕೆಯ ವಿರುದ್ಧ ಹೋರಾಡಿದರು. 375 ಕ್ಕೂ ಹೆಚ್ಚು ವಿಧಿಗಳನ್ನು ಬರೆದುಕೊಟ್ಟ ಅಂಬೇಡ್ಕರ್ ಸಾರ್ವಕಾಲಿಕ ಸತ್ಯ ವ್ಯಕ್ತಿ. ಇಂತಹ ಸಂವಿಧಾನವನ್ನು ಉಳಿಸಿಕೊಳ್ಳಲು ನಾವು ಇಂದು ಹೆಣಗಾಡಬೇಕಾಗಿದೆ. ಗ್ರಾಮೀಣ ಭಾಗ ಉದ್ದರಿಸಲು ಪಂಚವಾರ್ಷಿಕ ಯೋಜನೆಯಂತ ಮಹಾನ್ ಯೋಜನೆ ನೀಡಿದ ಅಂಬೇಡ್ಕರ್ ಕೆಲ ವರ್ಷಗಳ ಕಾಲ ಬದುಕಿದ್ದರೆ ಭಾರತೀಯರ ಗ್ರಾಮೀಣ ಭಾಗದ ಬದುಕು ಹಸನಾಗುತ್ತಿತ್ತು. ಈ ನಿಟ್ಟಿನಲ್ಲಿ ನಾವು ಚಳವಳಿಯನ್ನು ಕಟ್ಟಿ ಹಕ್ಕುಗಳನ್ನು ಪಡೆದುಕೊಳ್ಳಲು ಸಮಾನವಾಗಿ ಹೊರಾಡೋಣಾ ಎಂದು ನೆರೆದ ರೈತರಿಗೆ ಕರೆ ನೀಡಿದರು.


ಎರಡನೇ ಹಂತದ ಕಾರ್ಯಕ್ರಮವಾಗಿ ಸಂವಾದವನ್ನು ಹಮ್ಮಿಕೊಳ್ಳಲಾಗಿದ್ದು, ಬಹುತೇಕ ಐವತ್ತು ಮಂದಿ ರೈತರು ಭಾಗಿಯಾಗಿ ಚರ್ಚೆ ನಡೆಸಿದರು. ಸಂವಾದ ಕಾರ್ಯಕ್ರಮದಲ್ಲಿ ರೈತರ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಯಲಿಯೂರು ಧನಂಜಯ ನೀಡಿದರು.


ಕೃಪಾನಂದನಾಥ ಸ್ವಾಮೀಜಿಗಳು ಉದ್ಘಾಟನಾ ನುಡಿಗಳನ್ನಾಡಿದರು. ಪತ್ರಕರ್ತ ಗೋ ರಾ ಶ್ರೀನಿವಾಸ ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಂಧರ ಶಾಲೆಯ ಮಕ್ಕಳು ಪ್ರಾರ್ಥನೆ ಮತ್ತು ರೈತಗೀತೆಯನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ರಾಮನಗರ ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ರೈತ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑