Tel: 7676775624 | Mail: info@yellowandred.in

Language: EN KAN

    Follow us :


ಮಳೂರುಪಟ್ಟಣ ವಿಎಸ್ಎಸ್ಎನ್ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ

Posted date: 30 May, 2022

Powered by:     Yellow and Red

ಮಳೂರುಪಟ್ಟಣ ವಿಎಸ್ಎಸ್ಎನ್ ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ

ಮುಂದಿನ ಐದು ವರ್ಷಗಳ ಅವಧಿಗೆ ಹಾಗೂ ಮುಂದಿನ ಚುನಾವಣೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಪಡೆಯಲು ಬೇಕಾಗಿದ್ದ ಮಳೂರುಪಟ್ಟಣ ಟಿಎಪಿಸಿಎಂಎಸ್ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದಾಗಿ ಕೂತೂಹಲ ಕೆರಳಿಸಿದ್ದು, ತಾಲೂಕಿನ ಮಳೂರುಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು ನೇತೃತ್ವದ ತಂಡ ಭರ್ಜರಿ ಜಯ ಸಾಧಿಸಿದೆ.


ಹನ್ನೆರಡು ಮಂದಿ ಸದಸ್ಯರ ಆಯ್ಕೆಗಾಗಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಭಾನುವಾರ ಚುನಾವಣೆ ನಿಗಧಿಯಾಗಿತ್ತು. ಒಟ್ಟಾರೆ ಹನ್ನೆರಡು ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಚುನಾವಣಾ ಪೂರ್ವದಲ್ಲಿ ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ಯಾರು ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನ ಖಾಲಿ ಉಳಿದಿತ್ತು. ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ತೀವ್ರ ಜಿದ್ದಿಜಿದ್ದಿನಿಂದಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರಿಗೆ ಸವಾಲಾಗಿ ಪರಿಣಮಿಸಿತ್ತು.


ಈ ಚುನಾವಣೆ ಯಲ್ಲಿ ತಾಲ್ಲೂಕು ಮಟ್ಟದ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿಗರು ತೀವ್ರ ಕಾದಾಟ ನಡೆಸಿದ್ದರು. ಅಂತಿಮವಾಗಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಸಂಘದ ಮಾಜಿ ಅಧ್ಯಕ್ಷ ಕುಕ್ಕೂರುದೊಡ್ಡಿ ಜಯರಾಮು ನೇತೃತ್ವದ ಎಲ್ಲಾ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ವಿರೋಧಿ ಬಣದ ಅಭ್ಯರ್ಥಿಗಳನ್ನು ಪರಾಭವಗೊಳಿಸಿದರು.

ವಿಜೇತ ಅಭ್ಯರ್ಥಿಗಳು::

ಸಾಲಗಾರರ ಸಾಮಾನ್ಯ ಮೀಸಲು ಕ್ಷೇತ್ರದಿಂದ ಎಂ.ಎಸ್ ರವಿ, ಕುಕ್ಕೂರುದೊಡ್ಡಿ ಜಯರಾಮು, ಪುಟ್ಟಸ್ವಾಮಿ(ಟೆಂಪೋ), ಎಂ.ಸಿ.ರವಿ, ರಾಜೇಶ್ ಗೆಲುವು ಸಾಧಿಸಿದರೆ, ಮಹಿಳಾ ಮೀಸಲು ಸ್ಥಾನದಿಂದ ಜಯಮ್ಮ, ನಾಗವೇಣಿ, ಹಿಂದುಳಿದ ಬಿ ಮೀಸಲು ಕ್ಷೇತ್ರದಿಂದ ಎಂ.ಎನ್.ರಾಮಲಿಂಗು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ  ಪುಟ್ಟಸ್ವಾಮಿ ವಿಜೇತರಾದರು. ಮಾಯಿಗಯ್ಯ ಹಾಗೂ ದಾಸಯ್ಯ ಎಂಬುವವರು ಅವಿರೋಧವಾಗಿ ಆಯ್ಕೆಗೊಂಡವರು.


*ಜಿದ್ದಾಜಿದ್ದಿನ ಪೈಪೋಟಿ:*

ಜೆಡಿಎಸ್ ಪಕ್ಷದ ಮುಖಂಡ ಕುಕ್ಕುರುದೊಡ್ಡಿ ಜಯರಾಮು ರವರು ಹಾಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕಾರಣ¸ ಮುಂದಿನ ಅವಧಿಗೆ ಬ್ಯಾಂಕ್ ನಿರ್ದೇಶಕ ಸ್ಥಾನ ಆಲಂಕರಿಸಲು ಈ ಸಂಘದ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿತ್ತು. ಇನ್ನೊಂದೆಡೆ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಲಿಂಗೇಶ್‍ಕುಮಾರ್ ಶತಾಯಗತಾಯ ತಮ್ಮ ಪಕ್ಷದ ಬೆಂಬಲಿತರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳಲು ಹರಸಾಹಸ ನಡೆಸಿದ್ದರು. ಈ ಕಾರಣದಿಂದ ಈ ಚುನಾವಣೆ ಸಾಕಷ್ಟು ಕೂತೂಹಲಕ್ಕೆ ಕಾರಣವಾಗಿತ್ತು. ಸಂಘದ ಚುನಾವಣೆ ನಡೆದ ಮಳೂರುಪಟ್ಟಣ ಶಾಲೆಯ ಆವರಣದಲ್ಲಿ ತಾಲೂಕಿನ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಭಾಗವಹಿಸಿದ್ದು ಚುನಾವಣೆ ಕಾವಿಗೆ ಸಾಕ್ಷಿಯಾಗಿತ್ತು. ಅಂತಿಮವಾಗಿ ಕುಕ್ಕುರುದೊಡ್ಡಿ ಜಯರಾಮು ತಂಡ ವಿಜಯದ ನಗೆ ಬೀರಿದರೆ, ಲಿಂಗೇಶ್‍ಕುಮಾರ್ ಮುಖಭಂಗ ಅನುಭವಿಸುವಂತಾಯಿತು. ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವ ಮಾಹಿತಿ ಚುನಾವಣಾ ಕಣದಲ್ಲಿ ಕೇಳಿಬಂತು.


ಸಂಭ್ರಮದ ವಿಜಯೋತ್ಸವ:*

ಚುನಾವಣೆಯಲ್ಲಿ ಕುಕ್ಕುರುದೊಡ್ಡಿ ಜಯರಾಮು ನೇತೃತ್ವದ ಹನ್ನೆರಡು ಅಭ್ಯರ್ಥಿಗಳು ಜಯಭೇರಿ ಸಾಧಿಸುತ್ತಲೇ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮದಲ್ಲಿ ವಿಜಯೋತ್ಸವ ಆಚರಿಸಿದರು. ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಹಾಪ್‍ಕಾಮ್ಸ್ ದೇವರಾಜು, ಸಿಂ.ಲಿಂ. ನಾಗರಾಜು, ನರ್ಸರಿ ಲೋಕೇಶ್, ಭಾನುಪ್ರಸಾದ್, ಎಂಸಿಎಸ್ ಮೆಹರೀಶ್, ಗ್ರಾಮದ ಮುಖಂಡರಾದ ಜಟ್ಟಿರೇಗೌಡ, ಎಂ.ಜೆ ಶಿವರಾಮಯ್ಯ, ಬೋಳಮರಿಗೌಡ, ಬೈರನರಸಿಂಹಯ್ಯ, ದಾಸಪ್ಪ, ಗವಿಯ ಸೇರಿದಂತೆ ಹಲವು  ಮುಖಂಡರು ಸಂಭ್ರಮಚಾರಣೆಯಲ್ಲಿ ಭಾಗವಹಿಸಿದ್ದರು.

ಗ್ರಾಮಾಂತರ ಸಿಪಿಐ ಬಿ.ಶಿವಕುಮಾರ್ ನೇತೃತ್ವದಲ್ಲಿ ನಾಲ್ವರು ಪಿಎಸ್‍ಐ ಸೇರಿದಂತೆ 40 ಹೆಚ್ಚಿನ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದು, ಚುನಾವಣೆ ಕಾವಿಗೆ ಸಾಕ್ಷಿಯಾಗಿತ್ತು.


ಪತ್ರಿಕೆಯೊಂದಿಗೆ ಮಾತನಾಡಿದ ಕುಕ್ಕೂರುದೊಡ್ಡಿ ಜಯರಾಮು ರವರು ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಈ ಹಿಂದೆ ನಮ್ಮ ಜೆಡಿಎಸ್ ಪಕ್ಷದಲ್ಲಿಯೇ ಇದ್ದ ಲಿಂಗೇಶ್‍ಕುಮಾರ್ ಸಾಕಷ್ಟು ಹರಸಾಹಸಪಟ್ಟರು. ಆದರೆ ಅವರ ಯಾವ ತಂತ್ರಗಳೂ ಫಲ ನೀಡಿರಲಿಲ್ಲ. ಚುನಾವಣೆ ಅಂತಿಮ ಘಟ್ಟ ತಲುಪಿದಾಗ ಜಯರಾಮು ಬಿಟ್ಟು ಎಲ್ಲಾ ಜೆಡಿಎಸ್ ಬೆಂಬಲಿತರಿಗೆ ಮತಹಾಕಿ ಎನ್ನುವ ಮೂಲಕ ಅವರನ್ನು ನಂಬಿ ಹೋದ ಅವರ ಪಕ್ಷದ ಬೆಂಬಲಿತರಿಗೆ ಮೋಸ ಮಾಡಿದ್ದರು. ನನ್ನ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ನಡೆದಿರುವ ಸಂಘದ ಅಬಿವೃದ್ಧಿ ಕಾರ್ಯಕ್ರಮಗಳು ನನ್ನ ಕೈ ಹಿಡಿದಿವೆ. ಸಂಘ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ಅವಧಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಶ್ರಮಿಸುತ್ತೇನೆ ಎಂದರು.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑