Tel: 7676775624 | Mail: info@yellowandred.in

Language: EN KAN

    Follow us :


ಪೋಲೀಸ್ ಇಲಾಖೆಯ ಜೊತೆಗೆ ಕಂದಾಯ ಇಲಾಖೆಯಿಂದಲೂ ಆಂತರೀಕ ತನಿಖೆ ನಡೆಸುತ್ತೇವೆ ಜಿಲ್ಲಾಧಿಕಾರಿ

Posted date: 09 Jun, 2022

Powered by:     Yellow and Red

ಪೋಲೀಸ್ ಇಲಾಖೆಯ ಜೊತೆಗೆ ಕಂದಾಯ ಇಲಾಖೆಯಿಂದಲೂ ಆಂತರೀಕ ತನಿಖೆ ನಡೆಸುತ್ತೇವೆ ಜಿಲ್ಲಾಧಿಕಾರಿ

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಕಬಳಿಕೆ ಮಾಡಿರುವವರ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದು, ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ನಮ್ಮ ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಆಂತರಿಕ ತನಿಖೆ ನಡೆಸುತ್ತಾರೆ. ತಪ್ಪಿತಸ್ಥರೆಂದು ಕಂಡು ಬಂದ ಯಾರನ್ನೇ ಆಗಲಿ ಕ್ಷಮಿಸದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ರೀತಿಯ ಕ್ಷಮೆ ಅವರಿಗೆ ಇಲ್ಲ. ಕೋಲೂರು ಸೇರಿದಂತೆ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂಕಬಳಿಕೆ ಪ್ರಕರಣವನ್ನು ಈಗಾಗಲೇ ಪೊಲೀಸ್ ತನಿಖೆಗೆ ವಹಿಸಲಾಗಿದ್ದು, ಅಕ್ರಮದ ಬಗ್ಗೆ ತನಿಖೆ ಪೂರ್ಣಗೊಂಡ ಬಳಿಕ ವಾಸ್ತವಾಂಶ ಹೊರಬೀಳಲಿದೆ. ತನಿಖೆಗೆ ನಮ್ಮ ಇಲಾಖೆಯು ಪೋಲಿಸರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತದೆ, ಸದ್ಯದಲ್ಲೇ ಇಲಾಖೆಯ ಮಟ್ಟದಲ್ಲೂ ಆಂತರೀಕ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್‌ಮೆನನ್ ರಾಜೇಂದ್ರನ್ ತಿಳಿಸಿದರು.

ತಾಲೂಕು ಕಚೇರಿಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪ್ರಕರಣ ನಡೆದಿರುವ ಕೆಲವೇ ದಿನಗಳಲ್ಲಿ ನೌಕರನನ್ನು ಅಮಾನತ್ತು ಮಾಡುವ ಜೊತೆಗೆ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ದಾಖಲೆಗಳನ್ನು ತಿದ್ದುಪಡಿ ಮಾಡಿರುವ ಯಾರೇ ಆದರೂ ಶಿಕ್ಷೆ ಕೊಡಿಸಲಾಗುತ್ತದೆ. ಅಕ್ರಮ ನಡೆಸಿದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಇಲಾಖೆ ತನಿಖೆಯನ್ನು ನಡೆಸಲಾಗುವುದು ಎಂದರು.


ಕೇವಲ ಕೋಲೂರು ಗ್ರಾಮದ ಜಮೀನಷ್ಟೇ ಅಲ್ಲದೆ ಹಿಂದೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಅಕ್ರಮಗಳನ್ನು ತನಿಖಾ ಸಂಸ್ಥೆ ಪತ್ತೆ ಹಚ್ಚುತ್ತದೆ. ಮುಂದೆ ಈ ರೀತಿಯ ಲೋಪಗಳಾಗದಂತೆ ಕ್ರಮ ವಹಿಸಲಾಗುವುದು. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸುವ ಜೊತೆಗೆ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ತಪ್ಪು ಮಾಡಿರುವ ಯಾವುದೇ ಅಧಿಕಾರಿಗಳಾಗಿರಲಿ, ಸಿಬ್ಬಂದಿಗಳಾಗಿರಲಿ, ಮುಖಂಡರಾಗಿರಲಿ ಅವರಿಗೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.


ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ ಮತ್ತು ಅನೇಕ ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ಹಲವಾರು ವಿಷಯಗಳ ಬಗ್ಗೆ ಗಮನ ಸೆಳೆದರು. ಸಾಗುವಳಿದಾರರಿಗೆ ಖಾತೆ ಮಾಡಿಕೊಡದಿರುವುದು, ಹಣ ಮತ್ತು ತೋಳ್ಬಲ ಇರುವವರಿಗೆ ಖಾತೆ ಮಾಡಿಕೊಟ್ಟಿರುವುದು. ಭೂಮಿ ಉಳ್ಳವರಿಗೆ ಭೂಮಂಜೂರು ಮಾಡಿರುವುದು. ತಿದ್ದುಪಡಿಗಾಗಿ ರೈತರನ್ನು ಅಲೆದಾಡಿಸುವುದು. ಈಗಲ್ ಟನ್ ರೆಸಾರ್ಟ್ ನ ಒತ್ತುವರಿ ಜಮೀನನ್ನು ವಶಪಡಿಸಿಕೊಳ್ಳದಿರುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ದಾಖಲೆ ಮತ್ತು ಅಂಕಿಅಂಶಗಳ ಸಮೇತ ಮಾಹಿತಿ ನೀಡಿದರು. ಈ ಭೂಹಗರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರು ಯಾರೇ ಆಗಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಶಿಕ್ಷೆ ವಿಧಿಸಬೇಕು. ಉತ್ತಮ ರೀತಿಯಲ್ಲಿ ತನಿಖೆ ನಡೆದರೆ ಬಲಾಢ್ಯರು ಹೊರಬರುತ್ತಾರೆ. ಈ ಹಿನ್ನೆಲೆಯಲ್ಲಿ ತಾವು ಆಸ್ಥೆ ವಹಿಸಬೇಕು ಎಂದು ಮನವಿ ಮಾಡಿದರು.


ಸಾಮಾಜಿಕ ಹೋರಾಟಗಾರ ಗೋ ರಾ ಶ್ರೀನಿವಾಸ ರವರು ಗಾಂಧಿಭವನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದರು. ೧೯೩೪ ರಿಂದ ಇರುವ ಪೋಟೋಗಳು, ಗಾಂಧಿಭವನಕ್ಕೆ ಸಂಬಂಧಿಸಿದ ದಾಖಲೆಗಳು, ಗಾಂಧಿಸ್ಮಾರಕಕ್ಕೆ ಎಂದು ರಿಜಿಸ್ಟರ್ ಮಾಡಿಸಿರುವ ಪತ್ರಗಳ ನಕಲನ್ನು ನೀಡಿ, ಗಾಂಧಿಭವನ ನಿರ್ಮಾಣ ಮಾಡಲು ಈಗಾಗಲೇ ತಮ್ಮ ಖಾತೆಗೆ ಮೂರು ಕೋಟಿ ರೂಪಾಯಿ ಬಂದು ನಾಲ್ಕು ವರ್ಷಗಳಾಗಿವೆ. ನಿಮ್ಮನ್ನು ಸೇರಿ ಒಟ್ಟು ಐದು ಮಂದಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ವಾರ್ತಾ ಇಲಾಖೆ ಸೇರಿದಂತೆ ಯಾರೂ ಸಹ ಗಣನೆಗೆ ತೆಗೆದುಕೊಳ್ಳುತ್ತಿಲ್ಲಾ. ತಾವು ಈ ಕಡತ ಮತ್ತು ಶಿಥಿಲವಾದ ಕಟ್ಟಡವನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.


ಹಲವಾರು ರೈತರು, ಸಾರ್ವಜನಿಕರು ತಮ್ಮ ಅಹವಾಲನ್ನು ಸಲ್ಲಿಸಿದರು. ಸುಜೀವನ್ ಕುಮಾರ್ ನೇತೃತ್ವದಲ್ಲಿ ನಿರಂತರ ಧರಣಿ ನಿರತರ ಮನವಿಯನ್ನು ಸ್ವೀಕರಿಸಿದ ಅವರು ಬಂದ ತಕ್ಷಣವೇ ತಾಲ್ಲೂಕು ಕಛೇರಿ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರೆರೆದರು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವ ಸಮಯದಲ್ಲಿ ತಹಶಿಲ್ದಾರ್ ಹರ್ಷವರ್ಧನ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರು, ನಗರಸಭೆ ಪೌರಾಯುಕ್ತ ಶಿವನಂಕಾರಿಗೌಡ, ಗ್ರೇಡ್ ೨ ತಹಶಿಲ್ದಾರ್ ಲಕ್ಷ್ಮಿದೇವಮ್ಮ ಹಾಗೂ ಇನ್ನಿತರ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑