ತೀರ್ಥ ಕ್ಷೇತ್ರಗಳಲ್ಲಿ ಭಕ್ತಿ ಹೆಸರಿನಲ್ಲಿ ಗಲೀಜು ಮಾಡಬೇಡಿ, ಕಿತ್ತೂರು ರಾಣಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆ ಮನವಿ

ಮಂಡ್ಯ: ಮದ್ದೂರು; ತಮ್ಮ ಕಷ್ಟಗಳನ್ನು ಪರಿಹರಿಸು ದೇವರೇ ಎಂದು ಭಕ್ತರು ಹಲವಾರು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ವಿಶೇಷವಾಗಿ ನದಿಗಳು, ಕಲ್ಯಾಣಿಗಳು ಇರುವೆಡೆ ತಮ್ಮ ಪಾಪಗಳನ್ನು ತೊಳೆದುಕೊಳ್ಳಲೆಂದೇ, ಸಾಮೂಹಿಕ ಸ್ನಾನ ಮಾಡಿ ದೇವಾಲಯಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದು ಪುನೀತರಾದೆವು ಎಂದು ಭಾವುಕರಾಗುತ್ತಾರೆ. ಆದರೆ ಕ್ಷೇತ್ರದಲ್ಲಿ ತೀರ್ಥ ಸ್ನಾನ ಮಾಡಿದಾಗ ನಾನೆಷ್ಟು ಕೊಳಕನ್ನು ಬಿಟ್ಟೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಕಿತ್ತೂರು ರಾಣಿ ಚನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತರಾದ ಮಹಿಳಾ ಅಧ್ಯಕ್ಷರಾದ ರಜನಿರಾಜ್ ಭಕ್ತಾದಿಗಳಲ್ಲಿ ಮಾನವಿ ಮಾಡಿದ್ದಾರೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಭಾಗಮಂಡಲ, ನಂಜನಗೂಡು, ಶ್ರೀರಂಗಪಟ್ಟಣ ಸೇರಿದಂತೆ ಹಲವಾರು ಪುಣ್ಯಕ್ಷೇತ್ರ ಗಳಲ್ಲಿ ನದಿಗಳಿದ್ದು, ಇಂತಹ ಕ್ಷೇತ್ರಗಳಲ್ಲಿ ಬಹುತೇಕ ಭಕ್ತಾದಿಗಳು ಸ್ನಾನ ಮಾಡಿದ ನಂತರ ಅವರ ಹಳೆಯ ಬಟ್ಟೆಗಳು, ಸ್ನಾನಕ್ಕೆ ಬಳಸಿದ ವಿವಿಧ ಕಂಪನಿಯ ಶಾಂಪೂ ಮತ್ತು ಸೋಪುಗಳನ್ನು ಪ್ಲಾಸ್ಟಿಕ್ ನಿಂದ ನಿರ್ಮಿತವಾದ ಮೇಲೋದಿಕೆಯ ಸಮೇತ ಬಿಡುತ್ತಾರೆ. ಇನ್ನೂ ದುರದೃಷ್ಟಕರ ಎಂದರೆ ಒಂದು ಬಾರಿಯ ಸ್ಥಾನಕ್ಕೆ ಪ್ರತಿಯೊಬ್ಬರು ಒಂದು ಶಾಂಪು, ಸೋಪು, ಪೇಸ್ಟ್ ಮತ್ತು ಬ್ರಶ್ ಗಳನ್ನು ಸ್ವಲ್ಪವೇ ಬಳಸಿ ಬಿಸಾಕುವುದಾಗಿದೆ.
ತೀರ್ಥ ಕ್ಷೇತ್ರಗಳಿಗೆ ಹೋದವರು ಏನಾದರೂ ಬಿಟ್ಟು ಬರಬೇಕು ಎಂಬುದು ವಾಡಿಕೆ. ಅಂದರೆ ಆಸೆ, ದ್ವೇಷ, ಮತ್ಸರ ಎಂಬಂತಹ ಅಪಾಯಕಾರಿ ಗುಣಗಳನ್ನು ಬಿಡಬೇಕೆಂದು ಹೇಳಿರುವುದನ್ನೆ ಅರ್ಥೈಸಿಕೊಳ್ಳದೆ, ಇವರು ತಮ್ಮ ಹಳೆಯ ಬಟ್ಟೆಗಳ ಜೊತೆಗೆ ಕೆಮಿಕಲ್ ಯುಕ್ತ ಪದಾರ್ಥಗಳು ಹಾಗೂ ಪ್ಲಾಸ್ಟಿಕ್ ಬಿಟ್ಟು ಬರುತ್ತಿದ್ದು, ಶ್ರೀ ಕ್ಷೇತ್ರಗಳ ಪಾವಿತ್ರ್ಯತೆಯ ಜೊತೆಗೆ ಸ್ಥಳೀಯವಾಗಿ ವಾಸಿಸುವ ಪ್ರಾಣಿಗಳು, ಜಲಚರಗಳಿಗೆ ಕಂಟಕಪ್ರಾಯವಾಗುತ್ತಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಭಕ್ತಾದಿಗಳಿಗೆ ಸರ್ಕಾರ ಮತ್ತು ಧರ್ಮ ಕ್ಷೇತ್ರಗಳು ಕಟ್ಟು ನಿಟ್ಟಿನ ಕಾನೂನು ರೂಪಿಸಿ ಹೇರುವ ಮೂಲಕ ಅವರಲ್ಲಿ ಜಾಗೃತಿ ಮೂಡಿಸಬೇಕು. ಪುಣ್ಯ ಕ್ಷೇತ್ರಗಳನ್ನು ಕೆಮಿಕಲ್ ಯುಕ್ತ ಪ್ಲಾಸ್ಟಿಕ್ ಕ್ಷೇತ್ರಗಳನ್ನಾಗಿ ಮಾಡಬಾರದಾಗಿ, ಪ್ರಕೃತಿ ಉಳಿಸುವ ಹಾಗೂ ಸಾಮಾಜಿಕ ಕಳಕಳಿಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು ಎಂದು ರಜನಿರಾಜ್ ರವರು ಭಕ್ತಾದಿಗಳಲ್ಲಿ ಮನವಿ ಮಾಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು