Tel: 7676775624 | Mail: info@yellowandred.in

Language: EN KAN

    Follow us :


ಮಹಾಮಸ್ತಕಾಭಿಷೇಕಕ್ಕೆ ಮೈ ಒಡ್ಡಿ ಇತಿಹಾಸದ ಪುಟ ಸೇರಿದ ಚಾಮುಂಡೇಶ್ವರಿ

Posted date: 01 Aug, 2022

Powered by:     Yellow and Red

ಮಹಾಮಸ್ತಕಾಭಿಷೇಕಕ್ಕೆ ಮೈ ಒಡ್ಡಿ ಇತಿಹಾಸದ ಪುಟ ಸೇರಿದ ಚಾಮುಂಡೇಶ್ವರಿ

 ಚನ್ನಪಟ್ಟಣ; ಪ್ರಪಂಚದಲ್ಲಿ ಮಹಾಮಸ್ತಾಭಿಷೇಕ ನಡೆದಿದ್ದು ಇಬ್ಬರು ದೇವತೆಗಳಿಗೆ ಮಾತ್ರ. ಅದರಲ್ಲಿ ನಮ್ಮ ದೇಶದ ಕರ್ನಾಟಕದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಪ್ರತಿಮೆಗೆ, ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಸ್ತಾಭಿಷೇಕ ನಡೆದು ಇತಿಹಾಸ ನಿರ್ಮಾಣವಾಗಿತ್ತು. ಅದೇ ರೀತಿ ಗೊಂಬೆ ಮತ್ತು ಹಾಲಿಗೆ ಹೆಸರುವಾಸಿಯಾದ ಚನ್ನಪಟ್ಟಣದಲ್ಲಿ ಅರವತ್ತೆಂಟು ಅಡಿ ಎತ್ತರದ ಪಂಚಲೋಹದಿಂದ ನಿರ್ಮಾಣವಾಗಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಇದೇ ಪ್ರಥಮ ಬಾರಿಗೆ ವಿವಿಧ ರೀತಿಯ ಘನ ಮತ್ತು ದ್ರವ ಪದಾರ್ಥಗಳಿಂದ ಸತತ ಹನ್ನೆರಡು ಗಂಟೆಗಳ ಕಾಲ ಅಭಿಷೇಕ ಮಾಡುವ ಮೂಲಕ ಗೌಡಗೆರೆ ಎಂಬ ಪುಟ್ಟ ಗ್ರಾಮ ಇತಿಹಾಸದ ಪುಟ ಸೇರಿತು.


ತಾಲೂಕಿನ ಗೌಡಗೆರೆಯಲ್ಲಿರುವ ಶಕ್ತಿದೇವತೆ ಚಾಮುಂಡೇಶ್ವರಿ ದೇವಿಯ 68 ಅಡಿ ಎತ್ತರದ ಬೃಹತ್ ಪಂಚಲೋಹದ ವಿಗ್ರಹದ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಕ್ಷೇತ್ರದ ಧರ್ಮಾಧಿಕಾರಿ ಡಾ.ಮಲ್ಲೇಶ್‍ಗುರೂಜಿ ನೇತೃತ್ವದಲ್ಲಿ ನಡೆದ ಚಾಮುಂಡೇಶ್ವರಿಯ ಪಂಚಲೋಹದ ವಿಗ್ರಹದ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಏಳು ಪವಿತ್ರ ನದಿಗಳ ಜಲದಿಂದ ಅಭಿಷೇಕ ಮಾಡುವ ಮೂಲಕ ಚಾಲನೆ ನೀಡಿದರು.


ಮುಂಜಾನೆ 10 ಗಂಟೆಗೆ ಶ್ರೀಕ್ಷೇತ್ರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಶಾಸಕ ಹೆಚ್.ಡಿ.ಕುಮಾರಸ್ವಾಮಿ ಭಕ್ತರು ನೀಡಿದ ಚಿನ್ನದ ಚಾಮುಂಡೇಶ್ವರಿ ವಿಗ್ರಹವನ್ನು ಅನಾವರಣ ಗೊಳಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಮೊದಲಿಗೆ ಮೂಲ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ನಂತರ ಭಕ್ತರೊಬ್ಬರು ನೀಡಿದ ಚಿನ್ನದ ಚಾಮುಂಡೇಶ್ವರಿ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದರು.


ಮಧ್ಯಾಹ್ನದ ನಂತರ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಐಟಿ ಬಿಟಿ, ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ್ ಕಾಶ್ಮೀರಿ ಕೇಸರಿ, ದೇವಿಗೆ ಶುದ್ಧ ಶ್ರೀಗಂಧ, ಕಾಶ್ಮೀರ ಕೇಸರಿಯಿಂದ ಅಭ್ಯಂಜನ ನೆರವೇರಿಸಿದರು. ಚಾಮುಂಡೇಶ್ವರಿ ದೇವಿಯ ಬೃಹತ್ ವಿಗ್ರಹಕ್ಕೆ ಕಾಶ್ಮೀರದಿಂದ ತರಿಸಿದ ಕೇಸರಿ, ಶುದ್ಧ ಶ್ರೀಗಂಧದ ಸೇರಿದಂತೆ ಹಾಲು, ಮೊಸರು, ಸಪ್ತನದಿಗಳ ಪವಿತ್ರ ಜಲ, ಎಳನೀರು, ಜೇನುತುಪ್ಪ, ಒಣ ಹಣ್ಣುಗಳು, ಐದು ಬಗೆಯ ಹಣ್ಣುಗಳು, ವಿಭೂತಿ, ಹರಿಶಿನ, ಕುಂಕುಮ, ಸೇರಿದಂತೆ 45 ಬಗೆಯ ವಸ್ತುಗಳನ್ನು 1008 ಲೀಟರ್ ಅಥವಾ 1008 ಕೆಜಿ ಅಳತೆಯಲ್ಲಿ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಆರಂಭಗೊಂಡ ಮಹಾಮಸ್ತಕಾಭಿಷೇಕ ತಡರಾತ್ರಿಯವರೆಗೂ ಮುಂದುವರೆದಿತ್ತು. ಅಭಿಷೇಕಕ್ಕೆ ಬಳಕೆ ಮಾಡಲಾದ ವಸ್ತುಗಳನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಯಿತು.


*ವಿವಿಧ ಮಠಾಧೀಶರು ಭಾಗಿ:* 

ಚಾಮುಂಡೇಶ್ವರಿ ದೇವಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿದರು. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮೀಜಿ, ಆದಿಚುಂಚನಗಿರಿ ಅರ್ಚಕರಹಳ್ಳಿ ಶಾಖಾಮಠಾಧೀಶ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಕುಡಿನೀರು ಕಟ್ಟೆ ಮಠದ ಶ್ರೀ ಮುಮ್ಮಡಿ ಶಿವರುದ್ರಮಹಾಸ್ವಾಮೀಜಿ ಸೇರಿದಂತೆ ಧಾರ್ಮಿಕ ಕ್ಷೇತ್ರದ ವಿವಿಧ ಮುಖಂಡರು ಪಾಲ್ಗೊಂಡು ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸಾಕ್ಷಿಯಾದರು.


*ಹರಿದು ಬಂದ ಭಕ್ತಸಾಗರ:*

ಇದೇ ಮೊದಲ ಬಾರಿ ಹಿಂದೂ ದೇವತೆಗೆ ನಡೆದ  ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬೆಳಗ್ಗೆಯೇ ಶ್ರೀಕ್ಷೇತ್ರಕ್ಕೆ ಆಗಮಿಸಿದ ಭಕ್ತರು ವೈಭವದಿಂದ ಐತಿಹಾಸಿಕ ಮಹಾಮಸ್ತಕಾಭಿಷೇಕ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. 

ಭಕ್ತರಿಗೂ ದೇವಿಗೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಸರತಿ ಸಾಲಿನಲ್ಲಿ ಆಗಮಿಸಿದ ಭಕ್ತರು ತಾತ್ಕಾಲಿಕ ಮೆಟ್ಟಿಲುಗಳ ಮೂಲಕ ಬೃಹತ್ ಚಾಮುಂಡೇಶ್ವರಿ ವಿಗ್ರಹದ ತುತ್ತತುದಿಯನ್ನು ತಲುಪಿ ದೇವಿಗೆ ಅಭ್ಯಂಜನ ನಡೆಸಿದರು.


*ಪೊಲೀಸ್ ಬಿಗಿ ಭದ್ರತೆ:*

ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.  ಡಿವೈಎಸ್ಪಿ ಓಂಪ್ರಕಾಶ್ ನೇತೃತ್ವದಲ್ಲಿ 5ಮಂದಿ ಸರ್ಕಲ್ ಇನ್ಸ್‍ಪೆಕ್ಟರ್‍ ಗಳು, ಸುಮಾರು 10 ಮಂದಿ ಸಬ್ ಇನ್ಸ್‍ಪೆಕ್ಟರ್‍ ಗಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಇದರೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂ ಸೇವಕರು ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯನಿರ್ವಹಿಸಿದರು.


*ಗಣ್ಯರ ಹೇಳಿಕೆಗಳು:*

ತಾಲೂಕಿನಲ್ಲಿ ಇಂತಹ ಐತಿಹಾಸಿಕ ಕಾರ್ಯಕ್ರಮ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ಎಲ್ಲ ರೀತಿಯಲ್ಲಿ ಸಹಕರಿಸಲು ಸಿದ್ಧನಿದ್ದೇನೆ. ಕ್ಷೇತ್ರದಲ್ಲಿ ಇಂಥ ವೈಭವದ ಕಾರ್ಯಕ್ರಮವ ನಡೆಸಿದ ಡಾ.ಮಲ್ಲೇಶ್‍ಗುರೂಜಿ ಅವರ ಕಾರ್ಯ ನಿಜಕ್ಕೂ ಪ್ರಶಂಸನಾರ್ಹ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. 

-    ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.


ಚನ್ನಪಟ್ಟಣದಲ್ಲಿ ಇಷ್ಟು ಬೃಹತ್ ವಿಗ್ರಹ ಪ್ರತಿಷ್ಠಾಪನೆ ಮಾಡಿರುವುದು ನಿಜಕ್ಕೂ ದೊಡ್ಡ ಸಾಧನೆ. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ಕೊಡಿಸುವ ಜತೆಗೆ ನಾನು ವೈಯಕ್ತಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತೇನೆ.

-    ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ್, ಜಿಲ್ಲಾ ಉಸ್ತುವಾರಿ ಸಚಿವ.ವಿಶ್ವದಲ್ಲೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದ ಡಾ.ಮಲ್ಲೇಶ್‍ಗುರೂಜಿ ಅವರು ಇದೀಗ ಮಹಾಮಸ್ತಕಾಭಿಷೇಕ ಮಾಡುವ ಮೂಲಕ ತಾಲೂಕಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಮಹಾಮಸ್ತಕಾಭಿಷೇಕಕ್ಕೆ ಮುಖ್ಯಮಂತ್ರಿಗಳು ಆಗಮಿಸಬೇಕಾಗಿತ್ತಾದರೂ ಕಾರಣಾತರಗಳಿಂದ ಬರಲಾಗಿಲ್ಲ. ಮುಂದಿನ ದಿನಗಳಲ್ಲಿ ಸಿಎಂ ಕ್ಷೇತ್ರಕ್ಕೆ ಬಂದು ಚಾಮುಂಡೇಶ್ವರಿಯ ಆಶಿರ್ವಾದ ಪಡೆಯಲಿದ್ದಾರೆ.

-    ಸಿ.ಪಿ.ಯೋಗೇಶ್ವರ್,. ವಿಧಾನಪರಿಷತ್ ಸದಸ್ಯ.

 

ತಾಯಿ ಚಾಮುಂಡೇಶ್ವರಿಯ ಕೃಪೆ ಎಲ್ಲ ಭಕ್ತರ ಸಹಕಾರದಿಂದ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಪ್ರತಿ 3 ವರ್ಷ ಅಥವಾ 5 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಕ್ಷೇತ್ರಕ್ಕೆ ನಿರಂತರವಾಗಿ ಸಹಕಾರ ನೀಡುತ್ತಾ ಬರುತ್ತಿರುವ ಎಲ್ಲಾ ಗಣ್ಯರು ಮತ್ತು ಭಕ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

-    ಡಾ.ಮಲ್ಲೇಶ್‍ಗುರೂಜಿ, ಧರ್ಮಾಧಿಕಾರಿ ಗೌಡಗೆರೆ ಕ್ಷೇತ್ರ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑