Tel: 7676775624 | Mail: info@yellowandred.in

Language: EN KAN

    Follow us :


ನಾನು ಈ ಮಣ್ಣಲ್ಲೇ ಮಣ್ಣಾಗುತ್ತೇನೆ, ನಿಮ್ಮೆಲ್ಲರ ಜೊತೆಗೆ ನಾನಿರುತ್ತೇನೆ. ಹೆಚ್ ಡಿ ಕುಮಾರಸ್ವಾಮಿ

Posted date: 18 May, 2023

Powered by:     Yellow and Red

ನಾನು ಈ ಮಣ್ಣಲ್ಲೇ ಮಣ್ಣಾಗುತ್ತೇನೆ, ನಿಮ್ಮೆಲ್ಲರ ಜೊತೆಗೆ ನಾನಿರುತ್ತೇನೆ. ಹೆಚ್ ಡಿ ಕುಮಾರಸ್ವಾಮಿ

ಚನ್ನಪಟ್ಟಣ: ನಿಮ್ಮ ಋಣ ನನ್ನ ಮೇಲಿದೆ, ನಿಮ್ಮನ್ನು ನಂಬಿಯೇ ನಾನು ರಾಜ್ಯ ಪ್ರವಾಸ ಮಾಡಿದೆ. ನೀವು ಕೊನೆಗೂ ನನ್ನ ಕೈಬಿಡಲಿಲ್ಲ.‌ ರಾಮನಗರ ಸೇರಿದಂತೆ ರಾಜ್ಯದ ಬಹುತೇಕ ಕಡೆ ಆಗಿರುವ ಜೆಡಿಎಸ್ ಸೋಲಿನಿಂದ ನೀವು ಯಾರೂ ಕಂಗೆಡುವುದು ಬೇಡ. ನಿಮ್ಮ ಜೊತೆ ನಾನಿರುತ್ತೇನೆ. ಈ ಮಣ್ಣಲ್ಲೇ ಮಣ್ಣಾಗುತ್ತೇನೆ. ರಾಜ್ಯದ ಎಲ್ಲಾ ಕಾರ್ಯಕರ್ತರಿಗಿಂತ ಒಂದು ಮುಷ್ಟಿ ಹೆಚ್ಚಾಗಿ ನೀವು ಪ್ರೀತಿ ಜೊತೆಗೆ ನಿಷ್ಠೆ ತೋರಿದ್ದೀರಿ ಎಂದು ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಅವರು ಗುರುವಾರ ನಗರದ ಹೊರವಲಯದಲ್ಲಿರುವ ಶಿಶಿರ ಹೋಂಸ್ಟೇ ಯಲ್ಲಿ ಜೆಡಿಎಸ್ ಮುಖಂಡರು, ನಿಷ್ಠಾವಂತ ಕಾರ್ಯಕರ್ತರು, ಪ್ರಾಮಾಣಿಕ ಮತದಾರರು, ಮತ್ತು ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.


ಕ್ಷೇತ್ರ ಸೇರಿದಂತೆ ರಾಜ್ಯದಾದ್ಯಂತ ಪ್ರತಿದಿನ ಒಂದಿಲ್ಲೊಂದು ಚರ್ಚೆ ನಡಿತಾ ಇದೆ. ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಇಲ್ಲಿ ನಾನು ಬಾರದಿದ್ದರೂ ನೀವು ನನಗೆ ವಿಜಯಮಾಲೆ ಹಾಕಿದ್ದೀರಿ. ಆ ವಿಶ್ವಾಸವನ್ನು ನೀವು ಉಳಿಸಿದ್ದೀರಿ. ನಾನು ಸಹ ನಿಮ್ಮ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಈ ಫಲಿತಾಂಶ ಎಲ್ಲರೂ ಅಚ್ಚರಿ ಪಡುವಂತಹದ್ದು. ಕನಿಷ್ಠ ೬೦/೭೦ ಸೀಟು ಗೆಲ್ಲುವ ವಿಶ್ವಾಸ ಇತ್ತು. ಆದರೆ ಹಲವಾರು ಮುಖಂಡರು ಜೆಡಿಎಸ್ ಗೆ ಮತ ನೀಡಿದರೆ ಬಿಜೆಪಿ ಪಕ್ಷಕ್ಕೆ ಮತ ನೀಡಿದಂತೆ ಎಂದು ದಿಕ್ಕು ತಪ್ಪಿಸಿದ್ದರಿಂದ ಕಾಂಗ್ರೆಸ್ ಗೆ ಬಹುಮತ ಬರಲು ಕಾರಣವಾಯಿತು.


೧೯೮೯ರಲ್ಲಿ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿ ಮಾಡಿ ದೇವೇಗೌಡರ ರಾಜಕೀಯ ಜೀವನ ಮುಗಿಸುತ್ತೇನೆ ಎಂದು ಪಣ ತೊಟ್ಟಾಗ ಕೇವಲ ಎರಡು ಸ್ಥಾನ ಮಾತ್ರ ಬಂದಿದ್ದವು. ಮುಂದಿನ ಚುನಾವಣೆಗಳಲ್ಲಿ ಹೆಚ್ಚೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಮಂತ್ರಿಯಾದರು. ಮುಂದೆಯೂ ನಾವು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನಿಮ್ಮೆಲ್ಲರ ಸಹಕಾರ ನಮಗೆ ಬೇಕು. ನಾನು ಯಾರ ಬಗ್ಗೆಯೂ ಚರ್ಚೆ ಮಾಡಲ್ಲಾ, ನೀವು ಆತಂಕ ಪಡಬೇಕಾಗಿಲ್ಲಾ, ನಾನು ಈ ಕ್ಷೇತ್ರದಲ್ಲಿ ನೆಪಮಾತ್ರ. ನೀವೇ ಎಲ್ಲವನ್ನೂ ನಿಭಾಯಿಸಿದ್ದು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಿಗೂ ಭೇಟಿ ನೀಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇನೆ.


ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ನೀಡಲು ಆಗಲ್ಲಾ, ಅದಕ್ಕೆ ೬೨ ರಿಂದ ೭೦ ಸಾವಿರ ಕೋಟಿ ಹಣ ಬೇಕಾಗುತ್ತದೆ. ನನ್ನ ರಾಜಕೀಯ ಅನುಭವದಲ್ಲಿ ಹೇಳಬೇಕೆಂದರೆ ಆ ಭರವಸೆಗಳನ್ನು ಅವರು ಈಡೇರಿಸಲು ಆಗುವುದಿಲ್ಲ. ಬಿಜೆಪಿ ಸರ್ಕಾರದಲ್ಲಿ ಏನೇನು ಆಗಿತ್ತೋ ಅದೇ ಈ ಕಾಂಗ್ರೆಸ್ ಸರ್ಕಾರದಲ್ಲೂ ಆಗುತ್ತದೆ. ಚನ್ನಪಟ್ಟಣ ಕ್ಷೇತ್ರದ ಜವಾಬ್ದಾರಿ ನಾನು ಹೊರುತ್ತೇನೆ. ಪ್ರತಿ ಹಳ್ಳಿಯ ಸಮಸ್ಯೆಗಳನ್ನು ಖುದ್ದು ಭೇಟಿ ನೀಡಿ ಅಭಿವೃದ್ಧಿ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಬಹುದೊಡ್ಡ ಆತ್ಮಾವಲೋಕನ ಸಭೆ ಮಾಡುತ್ತೇನೆ. ನೀವು ನನ್ನನ್ನು ಹೇಗೆ ಉಳಿಸಿಕೊಂಡಿದ್ದೀರೋ ಅದೇ ರೀತಿ ನಾನು ಉಳಿಸಿಕೊಳ್ಳುತ್ತೇನೆ. ಈ ಕ್ಷೇತ್ರದ ಯಾವುದೇ ಕುಟುಂಬಕ್ಕೆ ತೊಂದರೆಯಾದರೂ ನಾನು ಸ್ಪಂದಿಸುತ್ತೇನೆ ಎಂದರು.


ಹಲವಾರು ನಾಯಕರಿಗೆ ಇನ್ನೂ ಮುಂದೆ, ತಾಲ್ಲೂಕು ಮತ್ತು ಜಿಲ್ಲೆಯ ಜವಾಬ್ದಾರಿ ನೀಡಲು ಚಿಂತಿಸಿದ್ದೇನೆ. ಎಲ್ಲಾ ಹೊರೆಯನ್ನು ನಾನು ಹೊರಲಾಗುವುದಿಲ್ಲಾ ಎಂದು ಮನವರಿಕೆಯಾಗಿದೆ. ನಮ್ಮ ಮಾತನ್ನು ಯಾರು ಕೇಳುತ್ತಾರೆಂದು ಸ್ಥಳೀಯ ನಾಯಕರು ಹೇಳುವುದು ಬೇಡ. ನಾನು ನಿಮಗೆ ಜವಾಬ್ದಾರಿ ನೀಡುತ್ತೇನೆ. ರಾಮನಗರ ಜಿಲ್ಲೆಯ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡು ಹೆಚ್ಚಿನ ರೀತಿಯಲ್ಲಿ ನಿಭಾಯಿಸಲು ಪ್ರಯತ್ನ ಮಾಡುತ್ತೇನೆ.


ಈ ಸರ್ಕಾರದಿಂದ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲಾಗುವುದಿಲ್ಲ. ಸ್ವಾಭಿಮಾನ ಕಳಕೊಂಡು, ವೈಯುಕ್ತಿಕವಾಗಿ ನಾನು ಅವರ ಮುಂದೆ ಹೋಗಿ ಕೈಕಟ್ಟಿ ನಿಲ್ಲುವುದಿಲ್ಲ. ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವುದಿಲ್ಲಾ. ಅಭಿವೃದ್ಧಿಗೆ ವಿಶೇಷವಾಗಿ ಗ್ರ್ಯಾಂಟ್ ಗಳನ್ನು ಹಿಂದಿನ ಸರ್ಕಾರದಲ್ಲಿ ತಂದಿದ್ದೆ. ಈ ಸರ್ಕಾರದಿಂದ ನಾನು ಹಣ ತರುತ್ತೇನೆ ಎಂದು ಹೇಳಲಾಗುವುದಿಲ್ಲ. ಆದರೆ ಇನ್ನೂ ಮೂರು ತಿಂಗಳಲ್ಲಿ ಈ ಸರ್ಕಾರ ಏನು ಬೇಕಾದರೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದರು. ನಾನು ರಾಮನಗರ ಜಿಲ್ಲೆಯಲ್ಲೇ ನಾನು ಮಣ್ಣಾಗುತ್ತೇನೆ ಎಂದು ಸಿ ಪಿ ಯೋಗೇಶ್ವರ್ ಹೆಸರೇಳದೆ ಪರೋಕ್ಷವಾಗಿ ಟಾಂಗ್ ನೀಡಿದರು.


ಮುಂದಿನ ದಿನಗಳಲ್ಲಿ ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆ ಹತ್ತಿರದಲ್ಲೇ ಇವೆ. ಇಷ್ಟರಲ್ಲಿ ಏನು ಬೆಳವಣಿಗೆ ಬೇಕಾದರೂ ಆಗಬಹುದು. ಆದರೆ ಮತದಾರರು ಹಾಗೂ ನಿಷ್ಠಾವಂತ ಕಾರ್ಯಕರ್ತರು ಧೃತಿಗೆಡದೆ ಎಲ್ಲಾ ಚುನಾವಣೆಯಲ್ಲಿ ದುಡಿಯುವ ಮೂಲಕ ನನಗೆ ನೀಡಿರುವಷ್ಟೇ ಅಂತರದಲ್ಲಿ ಮತಗಳನ್ನು ನೀಡುವ ಮೂಲಕ ಎಲ್ಲಾ ಸ್ಥಾನಗಳನ್ನು ಗೆಲ್ಲಿಸಿಕೊಳ್ಳಿ ಎಂದು ಕರೆ ನೀಡಿದರು.


ನಗರ ಗಬ್ಬು ನಾರುತ್ತಿದೆ ಎಂದು ಹೇಳುವ ಆ ಮಹಾನುಭಾವನಿಗೆ ಕಳೆದ ಇಪ್ಪತ್ತು ವರ್ಷಗಳ ಕಾಲ ಗಬ್ಬು ನಾರುತ್ತಿರುವುದು ಗೊತ್ತೇ ಆಗಿರಲಿಲ್ಲವೇ. ನನ್ನನ್ನು ಸೋಲಿಸಲು ರಾಷ್ಟ್ರ ಮಟ್ಟದ ನಾಯಕರನ್ನು ಕರೆಸಿದರೂ, ಆದರೂ ಸಹ ಅವರು ಗೆಲ್ಲಲಾಗಲಿಲ್ಲ ನನ್ನ ಕಾರ್ಯಕರ್ತರನ್ನು ಏನೂ ಮಾಡಲಾಗಲಿಲ್ಲ. ನಿಮ್ಮ ಮೇಲೆ ವಿಶ್ವಾಸವಿದೆ. ನನ್ನ ಮೇಲೆ ವಿಶ್ವಾಸ ಇಟ್ಟಿದ್ದೀರಿ. ಅದನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದು ಪರೋಕ್ಷವಾಗಿ ಸಿ ಪಿ ಯೋಗೇಶ್ವರ್ ತಿರುಗೇಟು ನೀಡಿದರು.


ಯಾವುದೇ ಅಪಪ್ರಚಾರಕ್ಕೂ ಕಿವಿಗೊಡದೆ ನಿಮ್ಮ ಶ್ರಮದ ಮೇಲೆ ವಿಶ್ವಾಸ ಇಡಿ. ಮುಸಲ್ಮಾನರು ಸಹ ನನಗೆ ಹೆಚ್ಚು ಬೆಂಬಲ ನೀಡಿದ್ದಾರೆ. ರಾಜ್ಯದಲ್ಲಿ ಹಲವಾರು ನಾಯಕರು ಕೇವಲ ಎರಡು ಸಾವಿರದ ಮತಗಳ ಅಂತರದಿಂದ ಸೋತಿದ್ದೇವೆ. ಅದು ಸೋಲಲ್ಲಾ. ರಾಜ್ಯದಲ್ಲಿ ನಮಗೆ ಆದಂತಹ ಶಕ್ತಿಯಿದೆ. ನಾನು ಮುಖ್ಯಮಂತ್ರಿ ಆಗದಿದ್ದರೂ ಪರವಾಗಿಲ್ಲಾ. ತಾಯಂದಿರಿಗೆ ಮಾತು ಕೊಡುತ್ತೇನೆ. ನಾನು ನಿಮ್ಮ ಜೊತೆಗಿರುತ್ತೇನೆ ಎಂದರು.. ಪಂಚರತ್ನ ಯೋಜನೆ ರಾಜ್ಯಕ್ಕೆ ನೀಡಬೆಕು ಎಂದು ಹಗಲಿರುಳು ಶ್ರಮಿಸಿದ್ದೇವೆ. ಆದರೆ ಮತದಾರರು ಬೇರೆಯವರಿಗೆ ಮಣೆ ಹಾಕಿದ್ದಾರೆ. ನಾವು ಸೋಲಿಗೆ ಅಂಜುವುದಿಲ್ಲಾ. ನಾವು ಮುಂದಿನ ದಿನಗಳಲ್ಲಿ ಗದ್ದುಗೆ ಏರುತ್ತೇನೆ. ರಾಜ್ಯದ ಅತ್ಯುತ್ತಮ ಜಿಲ್ಲೆಗಳಲ್ಲಿ ರಾಮನಗರ ಜಿಲ್ಲೆ ಒಂದಾದರೆ ಚನ್ನಪಟ್ಟಣ ತಾಲ್ಲೂಕು ಸಹ ನಮಗೆ ಶ್ರೇಷ್ಠ ತಾಲ್ಲೂಕು ಆಗಿದೆ. ಮುಂದಿನ ದಿನಗಳಲ್ಲಿ ಕೆಡಿಪಿ ಸಭೆ, ನಾಡ ಮತ್ತು ರಾಷ್ಟ್ರೀಯ ಹಬ್ಬಗಳಿಗೆ ಬರುತ್ತೇನೆ. ಅಭಿವೃದ್ಧಿ ಮಾಡುತ್ತೇನೆ ಎಂದರು.


ನಿಖಿಲ್ ಕುಮಾರಸ್ವಾಮಿ ಮಾತನಾಡಿ

ನೀವ್ಯಾರು ಧೃತಿಗೆಡುವುದು ಬೇಡ. ನಾವು ಸೋತರೂ, ಗೆದ್ದರೂ ನಿಮ್ಮ ಜೊತೆಗೆ ಇರುತ್ತೇವೆ.

ನನಗೆ ಇನ್ನೂ ವಯಸ್ಸಿದೆ. ಭವಿಷ್ಯವಿದೆ. ನಾಡಿನ ಜನರ ಮೇಲೆ ವಿಶ್ವಾಸ ಇದೆ. ಮುಂದಿನ ದಿನಗಳಲ್ಲಿ ಅಧಿಕಾರ ಹಿಡಿಯೋಣಾ, ನಿಮ್ಮ ಕಷ್ಟದಲ್ಲಿ ಭಾಗಿಯಾಗುತ್ತೇವೆ. ದೇವೇಗೌಡರು, ಕುಮಾರಣ್ಣ ಜೊತೆಗೆ ನಾನು ಸದಾ ಜೊತೆಯಲ್ಲಿರುತ್ತೇವೆ ಎಂದರು.


ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹೆಚ್ ಸಿ ಜಯಮುತ್ತು, ನಗರ ಘಟಕದ ಅಧ್ಯಕ್ಷ ಅಜಯ್ ಕುಮಾರ್, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್ ಕಾಮ್ಸ್ ದೇವರಾಜು, ಮುಖಂಡರಾದ ಪ್ರಸನ್ನ ಪಿ ಗೌಡ, ಗೋವಿಂದಹಳ್ಳಿ ನಾಗರಾಜು ಸೇರಿದಂತೆ ಹಲವಾರು ಮುಖಂಡರು ಹಾಗೂ ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑