Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ

Posted date: 08 Aug, 2022

Powered by:     Yellow and Red

ಜಿಲ್ಲೆಯಲ್ಲಿ ಅಬ್ಬರಿಸಿದ ವರುಣ. 447 ಹೆಕ್ಟೇರ್ ಬೆಳೆ ಹಾನಿ190 ಮನೆಗಳು ಜಖಂ

ಆರಿದ್ರಾ ಮತ್ತು ಆಶ್ಲೇಷ ಮಳೆಯು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಪರಿಣಾಮ ರೇಷ್ಮೆನಾಡು ರಾಮನಗರ ಜಿಲ್ಲೆ ತಲ್ಲಣಗೊಂಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಕಳಲ್ಲಿ ಬೆಳೆದ ಬೆಳೆ ಮತ್ತು ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಕಳೆದ 20 ವರ್ಷಗಳಲ್ಲಿ ಕಂಡರಿಯದ ಹಾನಿ ಈಬಾರಿ ಜಿಲ್ಲೆಯಲ್ಲಿ ಸಂಭವಿಸಿದ್ದು, ಯಾವುದೇ ಮಲೆನಾಡು ಪ್ರದೇಶಗಳಿಗೆ ಕಡಿಮೆ ಇಲ್ಲದಂತೆ ಸುರಿದ ಮಳೆ ಬಯಲು ಸೀಮೆ ಜಿಲ್ಲೆಯಲ್ಲೂ ಸಂಭವಿಸಿದೆ. ಜಿಲ್ಲೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ, ಬೆಳೆ ಹಾನಿಯಾಗಿರುವುದು ಹಾನಿ ಅಂದಾಜು ಕಾರ್ಯ ಆರಂಭಿಸಿರುವ ಜಿಲ್ಲಾಡಳಿತಕ್ಕೆ ಇದೀಗ ಲಭ್ಯವಾಗಿದೆ.


ಮಳೆ ಹಾನಿಯ ಬೆನ್ನಲ್ಲೇ ಜಿಲ್ಲೆಯಾದ್ಯಂತ ಹಾನಿಯ ಅಂದಾಜು ಆರಂಭಿಸಿರುವ ಜಿಲ್ಲಾ ಮತ್ತು ತಾಲ್ಲೂಕು ಅಧಿಕಾರಿಗಳು ಇದೀಗ ಹಾನಿಯ ಪ್ರಾಥಮಿಕ ಅಂದಾಜು ಪಟ್ಟಿಯನ್ನು ಸಿದ್ದಪಡಿಸಿದ್ದು, ಮಳೆಯಿಂದಾಗಿರುವ ಜೀವಹಾನಿ, ರಾಸುಗಳು, ಬೆಳೆ, ಜಮೀನು, ಮನೆ, ವಿದ್ಯುತ್ ಕಂಬಗಳು, ಮಾರ್ಗಗಳು ಹೀಗೆ ವಿವಿಧ ಹಾನಿಯ ಪ್ರಮಾಣವನ್ನು ಅಂದಾಜುಮಾಡಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.


*447 ಹೆಕ್ಟೇರ್ ಬೆಳೆ ನಾಶ:*

ಜಿಲ್ಲೆಯಲ್ಲಿ ಆ.1 ರಿಂದ ಸುರಿದಿರುವ ಬಿರುಮಳೆಯಿಂದಾಗಿ 447 ಹೆಕ್ಟೇರ್ ಎಂದರೆ 1117.5 ಎಕರೆ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, 158 ಹೆಕ್ಟೇರ್ ನಲ್ಲಿ ಬೆಳೆದಿದ್ದ ಕೃಷಿ ಬೆಳಗಳು ಹಾಗೂ 289 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೋಟಗಾರಿಕಾ ಬೆಳೆಗಳು ಮಳೆಯಿಂದ ಹಾನಿಯಾಗಿವೆ. ಇನ್ನು ಜಿಲ್ಲೆಯಲ್ಲಿ ಕನಕಪುರ ತಾಲೂಕಿನಲ್ಲಿ ಹೆಚ್ಚಿನ ಬೆಳೆ ಹಾನಿಯಾಗಿದೆ. ಕನಕಪುರ ತಾಲೂಕಿನಲ್ಲಿ 51 ಹೆಕ್ಟೇರ್ ಕೃಷಿ, 129 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಯಾಗಿವೆ.


*ಎರಡು ಮಕ್ಕಳು, 8 ರಾಸುಗಳು ಸಾವು:*

ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಮಾಗಡಿ ತಾಲೂಕಿನಲ್ಲಿ ಇಬ್ಬರು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಒಂದು ಹಸು ಸೇರಿದಂತೆ ಜಿಲ್ಲೆಯಲ್ಲಿ 7 ಕುರಿಮೇಕೆಗಳು, 3,600 ಕೋಳಿಗಳು ಮಳೆಯಿಂದ ಸಾವಿಗೀಡಾಗಿದ್ದಾವೆ. ಜಿಲ್ಲೆಯಾದ್ಯಂತೆ 9 ಮನೆಗಳು ಸಂಪೂರ್ಣ ಹಾನಿಗೊಂಡಿದ್ದರೆ, 33 ಮನೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಉಳಿದಂತೆ 148 ಮನೆಗಳು ಜಖಂ ಗೊಂಡಿದ್ದು ಒಟ್ಟಾರೆ 190 ಮನೆಗಳಿಗೆ ಹಾನಿಯಾಗಿವೆ.


*5 ಸೇತುವೆ, 430 ಕಿಮೀ ರಸ್ತೆ ಹಾನಿ:*

ಮಳೆಯ ಅಬ್ಬರಕ್ಕೆ ಜಿಲ್ಲೆಯಾದ್ಯಂತ ಸಾಕಷ್ಟು ರಸ್ತೆಗಳು ಹಾನಿಯಾಗಿವೆ. 5 ಸೇತುವೆಗಳು, 45.1 ಕಿಮೀ.ರಾಜ್ಯ ಹೆದ್ದಾರಿ, 67.58 ಕಿಮೀ ಜಿಲ್ಲಾ ಮುಖ್ಯರಸ್ತೆ, 316.45 ಗ್ರಾಮೀಣ ಸಂಪರ್ಕ ರಸ್ತೆಗಳು ಹಾನಿಯಾಗಿವೆ. ಇನ್ನು 668 ವಿದ್ಯುತ್ ಕಂಬಗಳು, 315 ಟ್ರಾನ್ಸ್ ಫಾರ್ಮರ್ ಗಳು, 4.39 ಕಿಮೀ ದೂರ ವಿದ್ಯುತ್ ತಂತಿ ಹಾನಿಯಾಗಿದ್ದು, ಕಳೆದ ಎರಡು ದಿನಗಳಿಂದ ಸುರಿ ಮಳೆಯಿಂದಾಗಿ ಜಿಲ್ಲೆಯ ಜನತೆಗೆ ಸಾಕಷ್ಟು ನಷ್ಟವಾಗಿದೆ.


*ಜಿಲ್ಲೆಯಲ್ಲಿ 623 ಪಟ್ಟು ಹೆಚ್ಚು ಮಳೆ* ಜುಲೈ 31 ಮತ್ತು ಆಗಸ್ಟ್ ಒಂದರಿಂದ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ವಾಡಿಕೆಗಿಂತ ಶೇ.623 ರಷ್ಟು ಹೆಚ್ಚು ಮಳೆ ಸುರಿದಿದ್ದು, ಜಿಲ್ಲೆಯಲ್ಲಿ ಇಷ್ಟೊಂದು ಅವಾಂತರ ಸೃಷ್ಟಿಯಾಗಲು ಈ ಪರಿಯ ಮಳೆ ಸುರಿದಿದ್ದೇ ಕಾರಣವಾಗಿದೆ. ಆಗಸ್ಟ್ ಮೊದಲ  ವಾರದಲ್ಲಿ ವಾಡಿಕೆ ಮಳೆಯ ಪ್ರಮಾಣ 23 ಎಂಎಂ ಇತ್ತು. ಆದರೆ, ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ163 ಮಿಮೀ ಮಳೆ ಸುರಿದಿದ್ದು, ಸರಾಸರಿಗಿಂತ 623 ಮಿಮೀ ಮಳೆ ಜಿಲ್ಲೆಯಲ್ಲಿ ಸುರಿದಿದೆ.


*ತಾಲ್ಲೂಕುವಾರು ಹೆಚ್ಚಿನ ಮಳೆ:*

 ಚನ್ನಪಟ್ಟಣದಲ್ಲಿ ವಾಡಿಕೆ 20.4ರಷ್ಟು ಮಳೆ ಇದ್ದು, 161.8 ಮಿಮೀ ಮಳೆ ಸುರಿದಿದೆ. ಇದು ವಾಡಿಕೆ ಮಳೆಗಿಂತ ಶೇ.693 ಪಟ್ಟು ಹೆಚ್ಚು. ಮಾಗಡಿಯಲ್ಲಿ 29.5 ವಾಡಿಕೆ ಮಳೆಯಿದ್ದು215 ಮಿಮೀ ಮಳೆಯಾಗಿದೆ. ಇದು ವಾಡಿಕೆಗಿಂತ 630 ಹೆಚ್ಚು. ಕನಕಪುರದಲ್ಲಿ 17.3 ಎಂಎಂ ವಾಡಿಕೆ ಮಳೆಯಿದ್ದು 132 ಎಂಎಂ ಮಳೆ ಸುರಿದಿದೆ. ವಾಸ್ತವಕ್ಕಿಂತ 664 ಮಿಮೀ ಮಳೆ ಸುರಿದಿದೆ. ರಾಮನಗರದಲ್ಲಿ 24.5 ಮಿಮಿ ವಾಡಿಕೆ ಮಳೆಯಿದ್ದು 172 ಮಿಮೀ ಮಳೆ ಸುರಿದಿದೆ. ಇದು ವಾಸ್ತವಕ್ಕಿಂತ 664 ಹೆಚ್ಚುಮಳೆ ಸುರಿದಿದೆ.


*ಜೂನ್ ನಿಂದ ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ( ಮಿಮೀ ಗಳಲ್ಲಿ):*

ತಿಂಗಳು ವಾಡಿಕೆ ಮಳೆ ವಾಸ್ತವ ಮಳೆ ಹೆಚ್ಚಳ

ಎಪ್ರಿಲ್ 47 71 ಶೇ.50

ಮೇ 109 224 ಶೇ.105

ಜೂನ್ 69 142 ಶೇ.105

ಜುಲೈ 83 149 ಶೇ. 80

ಆಗಸ್ಟ್ 23 163 ಶೇ.623

ಆಗಸ್ಟ್ 7ರ ವರೆಗೆ ಮಾತ್ರ


ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಹಾನಿ ಅಂದಾಜು ಮಾಡಬೇಕು. ಅಧಿಕಾರಿಗಳು ಎಲ್ಲೋ ಕುಳಿತು ಅಂದಾಜು ಮಾಡುವುದಲ್ಲಾ. ಗ್ರಾಮ ಮತ್ತು ಜಮೀನುಗಳಿಗೆ ಸಂಬಂಧಿಸಿದ ಅಧಿಕಾರಿಗಳ ಸಮೇತ ಬಂದು ಅಂದಾಜು ಕಾರ್ಯವನ್ನು ಸಮರ್ಪಕವಾಗಿ ಮಾಡಬೇಕು. ಜಿಲ್ಲೆಯಲ್ಲಿ ಸಂಭವಿಸಿರುವ ಅರ್ಧದಷ್ಟು ಹಾನಿಯನ್ನು ಅಂದಾಜು ಮಾಡಿಲ್ಲ. ಜಿಲ್ಲೆಯಲ್ಲಿ ಸಾವಿರ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು, ಇದನ್ನು ಸರಿಯಾಗಿ ಅಂದಾಜು ಮಾಡಬೇಕು. ಸಮಗ್ರ ಹಾನಿ ಅಂದಾಜು ನಡೆಸಿ ಜಿಲ್ಲಾಡಳಿತ ಒಂದೂವರೆ ಪಟ್ಟು ಪರಿಹಾರವನ್ನು ಶೀಘ್ರವಾಗಿ ನೀಡಬೇಕು.

- ಸಿ ಪುಟ್ಟಸ್ವಾಮಿ ಮತ್ತು ಹೊಂಬಾಳೇಗೌಡ, ಹಿರಿಯ ರೈತಮುಖಂಡರು.


ಸಮಗ್ರವಾಗಿ ಅಂದಾಜು ಕಾರ್ಯವನ್ನು ಕೈಗೊಳ್ಳಲಾಗಿದೆ. ಬೆಳೆ ಹಾಗೂ ವಸತಿ ಹಾನಿಯನ್ನು ಪಟ್ಟಿಮಾಡಲಾಗಿದೆ. ಸರಕಾರಕ್ಕೆ ವರದಿ ನೀಡಲಾಗಿದ್ದು, ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು.

- ಬಿ.ಕೆ.ಸುದರ್ಶನ್ ತಹಸೀಲ್ದಾರ್


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑