ಯುಪಿಎಸ್ಸಿ ಪರೀಕ್ಷೆಯಲ್ಲಿ 345ನೇ ರ್ಯಾಂಕ್ ಪಡೆದ ಮಳೂರುಪಟ್ಟಣ ಗ್ರಾಮದ ದಾಮಿನಿ ಎಂ ದಾಸ್

ಚನ್ನಪಟ್ಟಣ: ಕೇಂದ್ರ ಲೋಕಸೇವಾ ಆಯೋಗದ 2022ರ ಫಲಿತಾಂಶ ಪ್ರಕಟವಾಗಿದ್ದು ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲೂಕಿನ ಮಳೂರುಪಟ್ಟಣ ಗ್ರಾಮದ ಯುವತಿ ದಾಮಿನಿ ಎಂ ದಾಸ್ ರವರು 345ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ತಾಲೂಕಿಗೆ ಕೀರ್ತಿಯನ್ನ ತಂದಿದ್ದಾರೆ. ಮೂಲತಃ ಕೃಷಿ ಕುಟುಂಬದ ಹೆಣ್ಣು ಮಗಳಾದ ದಾಮಿನಿ ಎಂ ದಾಸ್ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ.
*ದಾಮಿನಿ ಎಂ ದಾಸ್ ಹಿನ್ನೆಲೆ:*
ದಾಮಿನಿ ಎಂ ದಾಸ್ರವರು ಕೃಷಿಕರ ಕುಟುಂಬದಲ್ಲಿ ಬೆಳೆದು ಬಂದಿದ್ದಾರೆ. ಇವರು ತಮ್ಮ ಪ್ರಾಥಮಿಕ ಹಂತ ಹಾಗೂ ಪ್ರೌಢ ಶಾಲೆಯ ವಿಧ್ಯಾಭ್ಯಾಸವನ್ನು ಬೆಂಗಳೂರಿನ ಪ್ರೆಸಿಡೆನ್ಸಿ ಸ್ಕೂಲ್ನಲ್ಲಿ ಮುಗಿಸಿದರು. ನಂತರ ಪಿಯುಸಿಯನ್ನು ವಿಧ್ಯಾವರ್ಧಕ ಪಿಯು ಕಾಲೇಜಿನಲ್ಲಿ ಮುಗಿಸಿ ಉನ್ನತ ಶಿಕ್ಷಣವನ್ನು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ನಲ್ಲಿ ತೇರ್ಗಡೆಯಾಗಿದ್ದಾರೆ.
*ಯುಪಿಎಸ್ಸಿ ಪರೀಕ್ಷೆಯಲ್ಲಿ 345ನೇ ರ್ಯಾಂಕ್:* ಯುಪಿಎಸ್ಸಿ ಪರೀಕ್ಷೆಯಲ್ಲಿ ದಾಮಿನಿ ಎಂ ದಾಸ್ ಅವರು 345ನೇ ರ್ಯಾಂಕ್ ಪಡೆಯುವ ಮೂಲಕ ರಾಮನಗರ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕಂಪ್ಯೂಟರ್ ಸೈನ್ಸ್ನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ಇವರು ಎರಡನೇ ಬಾರಿಗೆ ಪರೀಕ್ಷೆಯನ್ನು ಬರೆದು ತೇರ್ಗಡೆಯಾಗಿದ್ದಾರೆ.
*ದಿನಕ್ಕೆ ಹತ್ತು ಗಂಟೆ ಓದು:* ಇಂತಹದೊಂದು ಸಾಧನೆ ಮಾಡಲು ಕಠಿಣ ಪರಿಶ್ರಮದ ಅಗತ್ಯ ಖಂಡಿತವಾಗಿಗೂ ಇದ್ದೇ ಇದೆ. ಇದಕ್ಕಾಗಿ ದಾಮಿನಿ ದಾಸ್ ಅವರು ದಿನಕ್ಕೆ ಹತ್ತು ಗಂಟೆ ಓದಿಗಾಗಿಯೇ ಮೀಸಲಿಟ್ಟಿದ್ದರು. ನಾನು ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎಂದು ಪಣವನ್ನು ತೊಟ್ಟು ಪರಿಶ್ರಮವನ್ನು ಹಾಕಿ ಈಗ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.
*ಓದಿನ ಜೊತೆಗೆ ಇನ್ಸೈಟ್ಸ್ ಕೋಚಿಂಗ್ ಸೆಂಟರ್:* ಅವರಿಂದ ಆನ್ಲೈನ್ ಮೂಲಕ ಮನೆಯಲ್ಲೇ ಕೋಚಿಂಗ್ ತೆಗೆದುಕೊಂಡಿದ್ದರು. ಕನ್ನಡ ಸಾಹಿತ್ಯವನ್ನು ಟೆಸ್ಟ್ ಸಿರೀಸ್ ಮತ್ತು ಜೆಐಸಿಇ ಕೋಚಿಂಗ್ ಸೆಂಟರ್ನ ವೆಂಕಟೇಶಪ್ಪ ಅವರ ಬಳಿ ಕೋಚಿಂಗ್ ತಗೆದುಕೊಂಡು ಸತತ ಪ್ರಯತ್ನವೇ ಸಾಧನೆಯ ರಹಸ್ಯವೆಂದು ತೋರಿಸಿಕೊಟ್ಟಿದ್ದಾರೆ.
*ಎಜುಕೇಷನ್ ಅಥವಾ ಹೆಲ್ತ್ ಸೆಕ್ಟರ್ ನಲ್ಲಿ ಕೆಲಸ ಮಾಡುವ ಆಸೆ:*.
ದಾಮಿನಿ ಅವರಿಗೆ ಆರೋಗ್ಯ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಸೆಕ್ಟರ್ನಲ್ಲಿ ಕೆಲಸ ಮಾಡುವ ಆಸೆಯನ್ನು ಹೊಂದಿದ್ದಾರೆ. ನನಗೆ ಯಾವ ಕ್ಷೇತ್ರ ಸಿಗುತ್ತದೆ ಎಂಬದು ಗೊತ್ತಿಲ್ಲ ನನಗೆ ಎಜುಕೇಶನ್ ಮತ್ತು ಹೆಲ್ತ್ ಸೆಕ್ಟರ್ನಲ್ಲಿ ಕೆಲಸ ಮಾಡುವ ಆಸೆಯಿದೆ ಎಂದು ದಾಮಿನಿ ತಿಳಿಸಿದ್ದಾರೆ.
*ಮಗಳ ಸಾಧನೆಯ ಬಗ್ಗೆ ತಂದೆ ಹರ್ಷ:*.
ಇಡೀ ರಾಜ್ಯವೇ ಖುಷಿಪಡುವ ಸಾಧನೆಯನ್ನು ನನ್ನ ಮಗಳು ಮಾಡಿದ್ದಾಳೆ ಕೃಷಿಕ ತಂದೆಯಾಗಿರುವ ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ದಾಮಿನಿ ಅವರ ತಂದೆ ಮೋಹನ್ ದಾಸ್ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನನ್ನ ಮಗಳ ಪ್ರಯತ್ನಕ್ಕೆ ಭಗವಂತ ನಿಜವಾಗಿಯೂ ಪ್ರತಿಫಲವನ್ನು ನೀಡಿದ್ದಾನೆ. ಚನ್ನಪಟ್ಟಣ ತಾಲೂಕು ಪ್ರತಿನಿಧಿಸಿ ಈ ಸಾಧನೆಯನ್ನು ಮಗಳು ಮಾಡಿರುವು ತುಂಬಾ ಖುಷಿಯಾಗಿದೆ ಎಂದು ತಿಳಿಸಿದರು.
*ತಮ್ಮ ಸಾಧನೆಯ ಬಗ್ಗೆ ದಾಮಿನಿ ಹೇಳಿದ್ದೇನು?:* ಸತತವಾಗಿ ಎಲ್ಲರೂ ಸಹ ಓದಬೇಕು ಇದರಿಂದ ತಂದೆ ತಾಯಿ ಕನಸು ಈಡೇರಿಸಿದಂತೆ ಆಗುತ್ತದೆ. ನಾನು ದೊಡ್ಡಮ್ಮ ಹಾಗೂ ದೊಡ್ಡಮ್ಮನ ಬಳಿ ಬೆಳೆದೆ ಅವರು ಸಹ ನನ್ನ ತಂದೆ ತಾಯಿಯಷ್ಟೇ ನನಗೆ ಸಪೋರ್ಟ್ ಮಾಡಿದ್ದಾರೆ.
ಸಾವಿರಾರೂ ಜನರು ಎಕ್ಸಾಮ್ ಬರೆಯುತ್ತಾರೆ ಎಲ್ಲರೂ ಸಹ ಪಾಸ್ ಆಗಲು ಸಾಧ್ಯವಿಲ್ಲ ಎರಡನೇ ಬಾರಿಗೆ ನಾನು ಉತ್ತೀರ್ಣಳಾಗಿದ್ದೇನೆ. ಫೇಲ್ ಆಗಿರುವವರು ಯಾರು ಸಹ ಬೇಸರ ಮಾಡಿಕೊಳ್ಳದೆ ಮುಂದಿನ ಬಾರಿ ಎಕ್ಸಾಂ ಬರೆದು ಉತ್ತಮ ರೀತಿಯ ರ್ಯಾಂಕ್ ಪಡೆಯಲಿ ಎಂದು ತಿಳಿಸಿದರು.
*ಗ್ರಾಮದ ಜನರ ಸಂಭ್ರಮ:*
ರೈತನ ಮಗಳೊಬ್ಬಳು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿರುವುದಕ್ಕೆ ಇಡೀ ಗ್ರಾಮವೇ ಸಂಭ್ರಮವನ್ನು ಪಟ್ಟಿದೆ. ಗ್ರಾಮದ ಶಿವಕುಮಾರ್ ರವರು ಈ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕೃಷಿ ಕುಟುಂಬದಲ್ಲಿ ಬೆಳೆದ ನಮ್ಮೂರಿನ ಹೆಣ್ಣು ಮಗಳಾದ ದಾಮಿನಿ ಅವರು ಈ ರೀತಿ ಸಾಧನೆ ಮಾಡಿರುವುದು ನಮಗೆಲ್ಲರಿಗೂ ಸಹ ಸಂತಸ ತಂದಿದೆ. ರೈತನ ಮಗಳಾಗಿ ಹುಟ್ಟಿ ನಮ್ಮ ಗ್ರಾಮದ ಹೆಸರನ್ನು ದುಪ್ಪಟ್ಟು ಮಾಡುವುದರ ಜೊತೆಗೆ ಚನ್ನಪಟ್ಟಣ ತಾಲೂಕಿನ ಕೀರ್ತಿಯನ್ನ ಅರ್ಪಿಸಿರುವುದು ಸಹ ಸಂತಸದ ಸಂಗತಿ ಎಂದು ತಿಳಿಸಿದ್ದಾರೆ.
ಗ್ರಾಮದ ಮಳೂರುಪಟ್ಟಣ ರವಿಯವರು ಮಾತನಾಡಿ ನಮ್ಮೂರ ರೈತನ ಮಗಳು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸವನ್ನು ಮಾಡಲಿ ಎಂದು ರವಿ ಶುಭ ಹಾರೈಸಿದರು.
*ಎಲ್ಲರಿಗೂ ಧನ್ಯವಾದ ತಿಳಿಸಿದ ದಾಮಿನಿ:*
ನಾನು ಈ ರೀತಿಯಾಗಿ ಸಾಧನೆ ಮಾಡುವುದಕ್ಕೆ ನನ್ನ ಕುಟುಂಬ ಸೇರಿದಂತೆ ನನ್ನ ಫ್ರೆಂಡ್ ಸಹ ಸಹಾಯವನ್ನು ಮಾಡಿದ್ದಾರೆ. ನನ್ನ ಗುರುಗಳು ಸಹ ಸಹಾಯ ಮಾಡಿದ್ದು ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಸಾಧನೆ ಮಾಡಿರುವ ದಾಮಿನಿ ಅವರು ಎಲ್ಲರಿಗೂ ಧನ್ಯವಾದವನ್ನು ತಿಳಿಸಿದರು. ಕರ್ನಾಟಕದಲ್ಲಿ ಪೋಸ್ಟಿಂಗ್ ಆದರೆ ನಾನು ನನ್ನ ತಾಲೂಕಿಗೆ ನನ್ನದೇ ಆದ ಸೇವೆಯನ್ನ ಮಾಡುತ್ತೇನೆ ಎಂದು ಹೇಳಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು