Tel: 7676775624 | Mail: info@yellowandred.in

Language: EN KAN

    Follow us :


ಮುಂಗಾರು ಮಳೆಯಲ್ಲಿ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ

Posted date: 25 May, 2023

Powered by:     Yellow and Red

ಮುಂಗಾರು ಮಳೆಯಲ್ಲಿ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ

ರಾಮನಗರ: ಮುಂಗಾರು ಮಳೆ ಆರಂಭವಾಗಿದ್ದು, ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಮುಂಗಾರು ಆರಂಭದ ವೇಳೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸನ್ನದ್ದರಾಗಿರಬೇಕು. ಈ ಕುರಿತು ಯಾರು ನಿರ್ಲಕ್ಷ್ಯ ವಹಿಸಬಾರದು ಎಂದು ಜಿಲ್ಲಾಧಿಕಾರಿಗಳಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.


ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾಗುವ ಭಾರಿ ಮಳೆ/ಪ್ರವಾಹ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


*ಮುನ್ನೆಚ್ಚರಿಕೆ ವಹಿಸದಿದ್ದರೆ ಪರಿಸ್ಥಿತಿ ನಿಯಂತ್ರಣ ಅಸಾಧ್ಯ*

ಯಾವುದೇ ಸಿದ್ದತೆ ಮಾಡಿಕೊಂಡಿಲ್ಲದೆ ನಿರ್ಲಕ್ಷ್ಯ ವಹಿಸುವಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.


ರಾಮನಗರ ಜಿಲ್ಲೆಯಲ್ಲಿ ಈ ಹಿಂದೆ ಭಾರಿ ಮಳೆ/ಪ್ರವಾಹದಿಂದ ತೊಂದರೆಯಾಗಿದ್ದ ಪ್ರದೇಶಗಳನ್ನು ಪರಿಶೀಲಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಮಾಹಿತಿ ನೀಡಿದರು.


*ಕಾಳಜಿ ಕೇಂದ್ರ:*

ಮಳೆ ಹೆಚ್ಚು ಬೀಳುವ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ಅಧಿಕಾರಿಗಳು ಕ್ರಮವಹಿಸಬೇಕು. ಮಂಚನಬೆಲೆ ಡ್ಯಾಂ ಸುತ್ತಮುತ್ತಲು ಹಾಗೂ ಅರ್ಕಾವತಿ ನದಿಯ ಸುತ್ತಮುತ್ತಲೂ ನದಿಯ ಪಾತ್ರಗಳಲ್ಲಿ ತೊಂದರೆಗೀಡಾಗುವ ಸಂದರ್ಭ ಎದುರಾಗಬಹುದು. ಜನರ ಸ್ಥಳಾಂತರಕ್ಕೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.


*ಕಂಟ್ರೋಲ್ ರೂಂ:*

ತಾಲ್ಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಆರಂಭಿಸಬೇಕು. ದಿನದ 24/7 ಅವಧಿ ಕೆಲಸ ನಿರ್ವಹಿಸಬೇಕು. ಜೀವಹಾನಿ, ಬೆಳೆಹಾನಿಯಾದ ಬಗ್ಗೆ ಮಾಹಿತಿ ಬಂದಲ್ಲಿ ಸಂಬಂಧಪಟ್ಟ ತಹಶೀಲ್ದಾರರು ಪರಿಶೀಲಿಸಬೇಕು ನಂತರ ಘಟನೆ ನಡೆದ 24 ಗಂಟೆಯೊಳಗೆ ಪರಿಹಾರ ವಿತರಿಸಲು ಕ್ರಮ ವಹಿಸಬೇಕು ಎಂದರು.


ಜಿಲ್ಲೆಯಲ್ಲಿ 101 ಕೆರೆಗಳಿದ್ದು, ಕೆರೆಗಳ ದಂಡೆಗಳನ್ನು ಪರೀಕ್ಷಿಸಿ ಸೋರಿಕೆ ಇದ್ದರೆ ತಕ್ಷಣ ಸರಿಪಡಿಸಬೇಕು ಎಂದರು. ತಗ್ಗು ಪ್ರದೇಶದ ಮನೆಗಳಿಗೆ ಎಚ್ಚರಿಕೆ ನೀಡಬೇಕು , ಚರಂಡಿ, ಚಾನಲ್‌ಗಳು ಸರಾಗವಾಗಿ ಮಳೆನೀರು ಹರಿದು ಹೋಗುವಂತೆ ಪರಿಶೀಲನೆ ಮಾಡಬೇಕು. ಯಾವುದೇ ದುರಸ್ಥಿಯಿದ್ದಲ್ಲಿ ಪರಿಶೀಲಿಸಿ ದುರಸ್ತಿಗೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.


ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಶಾಲೆಗಳು ಮಳೆಯಿಂದ ಸೋರುವುದನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದರು.


*ಆರೋಗ್ಯ ಇಲಾಖೆ:*

ಜಿಲ್ಲೆಯ ನಗರ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಕ್ರಮ ವಹಿಸಬೇಕು. ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ತೆರೆದು ಆರೋಗ್ಯ ತಪಾಸಣೆ, ಅಗತ್ಯ ಔಷದಿಗಳನ್ನು ಸಂಗ್ರಹ ಮಾಡಲು ಕ್ರಮವಹಿಸುವಂತೆ ತಿಳಿಸಿದರು.


*ಪರಿಹಾರ:*

ಭಾರಿ ಮಳೆ/ಪ್ರವಾಹ ಸಂದರ್ಭದಲ್ಲಿ ಯಾವುದೇ ಜೀವ ಹಾನಿಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಒಂದು ವೇಳೆ ಜೀವಹಾನಿಯಾದಲ್ಲಿ 5 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು 24 ಗಂಟೆಯೊಳಗೆ ವಿತರಿಸುವಂತೆ ಸೂಚಿಸಿದರು.


*ತೋಟಗಾರಿಕೆ ಇಲಾಖೆ:*

ಮಳೆಯಿಂದಾಗಿ ಬೆಳೆ ನಷ್ಟವಾದಲ್ಲಿ ಪ್ರತೀ ಎಕರೆಗೆ 25 ಸಾವಿರ ರೂ.ಗಳಿಂದ 28 ಸಾವಿರ ರೂ.ಗಳ ವರೆಗೆ ಪರಿಹಾರ ಮೊತ್ತವನ್ನು ಗರಿಷ್ಠ 2 ಎಕರೆಗಳಿಗೆ ಹಾಗೂ ಗರಿಷ್ಠ 50 ಸಾವಿರ ರೂ. ವಿತರಿಸಲಾಗುವುದು. ಪ್ರತೀ ತೆಂಗಿನ ಮರಕ್ಕೆ 280 ರೂ. ಪರಿಹಾರ ನೀಡಲಾಗುವುದು ಎಂದರು.


*ಕೃಷಿ ಇಲಾಖೆ:*

ಮಳೆಯಿಂದ ನಷ್ಠವಾದಲ್ಲಿ ಪ್ರತೀ ಎಕರೆಗೆ 6,800 ರೂ.ಗಳಿಂದ 13,000 ರೂ.ಗಳ ವರೆಗೆ ಗರಿಷ್ಠ 2 ಎಕರೆಗೆ ಪರಿಹಾರ ನೀಡಲಾಗುವುದು ಎಂದರು.


*ಪಶುಸಂಗೋಪನೆ:*

ಹಸು, ಎತ್ತು, ಎಮ್ಮೆ ಜೀವಹಾನಿಯಾದಲ್ಲಿ ಗರಿಷ್ಠ 37 ಸಾವಿರ ದಿಂದ ಗರಿಷ್ಠ 3 ದೊಡ್ಡಪ್ರಾಣಿಗಳಿಗೆ ಪರಿಹಾರ ಮೊತ್ತ, ಕುರಿ, ಮೇಕೆ ಸೇರಿದಂತೆ ಪ್ರತೀ ಚಿಕ್ಕ ಪ್ರಾಣಿಗಳಿಗೆ ಗರಿಷ್ಠ 4 ಸಾವಿರ ರೂ.ಗಳ ಪರಿಹಾರ ಮೊತ್ತ ಗರಿಷ್ಠ 30 ಪ್ರಾಣಿಗಳಿಗೆ ನೀಡಲಾಗುವುದು. ಕೋಳಿ, ಪಕ್ಷಿಗಳಿಗೆ ಗರಿಷ್ಠ 100 ರೂ.ಗಳಂತೆ 100 ಸಂಖ್ಯೆಯ ಪಕ್ಷಿಗಳಿಗೆ ನೀಡಲಾಗುವುದು ಎಂದರು.


*ಮನೆ:*

ಭಾರಿ ಮಳೆಯಿಂದಾಗಿ ಮನೆಗಳಿಗೆ ಸಂಪೂರ್ಣ ಹಾನಿಯಾದಲ್ಲಿ ಗರಿಷ್ಠ 1 ಲಕ್ಷದ 20 ಸಾವಿರ ರೂ.ಗಳ ಪರಿಹಾರ ನೀಡಲಾಗುವುದು. ಮನೆಗೆ ಸಣ್ಣ ಪುಟ್ಟ ಹಾನಿಯಾಗಿದಲ್ಲಿ 6 ಸಾವಿರದ 500 ರೂ.ಗಳ ಪರಿಹಾರ ನೀಡಲಾಗುವುದು ಎಂದರು.


*ಮೀನುಗಾರಿಕೆ:*

ಮಳೆಯಿಂದ ಹಾನಿಯಾದಲ್ಲಿ ಮೀನು ಹೊಂಡಗಳಿಗೆ ಪ್ರತೀ ಎಕರೆಗೆ ಗರಿಷ್ಠ 8 ಸಾವಿರದ 200 ರೂ.ಗಳ ಪರಿಹಾರ ನೀಡಲಾಗುವುದು. ಕೆರೆಗಳಲ್ಲಿ ಮೀನು ಹಿಡಿಯಲು ಬಳಸುವ ದೋಣಿ ಹಾಗೂ ಬಲೆಗಳಿಗೆ ಪರಿಹಾರ ನೀಡಲಾಗುವುದು ಎಂದರು.


*ಬೆಸ್ಕಾಂ:*

ಮಳೆಯಿಂದಾಗಿ ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆಗಳಿದ್ದು, ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬಗಳ ಕುರಿತು ತಪಾಸಣೆ ಮಾಡಿ, ವಿದ್ಯುತ್ ಅವಘಡ ಆಗದಂತೆ ಕ್ರಮ ವಹಿಸಬೇಕು. ಅಪಾಯಕಾರಿ ಮರಗಳಿದ್ದಲ್ಲಿ, ವಿದ್ಯುತ್ ಕಂಬಗಳ ಅಕ್ಕಪಕ್ಕದಲ್ಲಿರುವ ಮರಗಳ ಕೊಂಬೆಗಳನ್ನು ಕತ್ತರಿಸಿ ಯಾವುದೇ ವಿದ್ಯುತ್ ಅಡಚಣೆಯಾಗದಂತೆ ಕ್ರಮವಹಿಸಬೇಕು ಎಂದರು. ಯಾವುದೇ ವಿದ್ಯುತ್ ಸಮಸ್ಯೆಯಿದ್ದಲ್ಲಿ ಸಹಾಯವಾಣಿ ಸಂಖ್ಯೆ: 1912ಗೆ 24/7 ಕರೆ ಮಾಡಬಹುದು ಎಂದರು.


ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹಿಂದೆ ಭಾರಿ ಮಳೆಯಿಂದ ನೀರು ಸಂಗ್ರಹವಾಗುತ್ತಿದ್ದ ಸ್ಥಳಗಳನ್ನು ಗುರುತಿಸಿ ಮಳೆ ನೀರು ಸರಾಗವಾಗಿ ಹೋಗುವಂತೆ ದುರಸ್ತಿ ಮಾಡಲಾಗಿದೆ ಎಂದರು.


ಅಗ್ನಿಶಾಮಕ ಅಧಿಕಾರಿಗಳು ಅಗತ್ಯ ದೋಣಿಗಳು, ಮುಳುಗು ತಜ್ಞರು ಹಾಗೂ ಅಗತ್ಯ ಪರಿಕರಗಳೊಂದಿಗೆ ಪರಿಸ್ಥಿತಿ ನಿಭಾಯಿಸಲು ಸಿದ್ದರಿರಬೇಕು ಎಂದು ಸೂಚಿಸಿದರು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಬಿ.ಸಿ., ಡಿವೈಎಸ್.ಪಿ. ದಿನಕರ್ ಶೆಟ್ಟಿ, ಹಾರೋಹಳ್ಳಿ ನಗರಸಭೆ ಆಯುಕ್ತ ಹ್ಯಾರಿಸ್ ಐ.ಎ.ಎಸ್ ಹಾಗೂ ಜಿಲ್ಲಾ/ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑