Tel: 7676775624 | Mail: info@yellowandred.in

Language: EN KAN

    Follow us :


ನಾನು ನ್ಯಾಯದ ರಾಜಕಾರಣ ಮಾಡುತ್ತೇನೆ ನಕಲಿ ಸರ್ಟಿಫಿಕೇಟ್ ರಾಜಕಾರಣಿ ಅಲ್ಲಾ ಕುಮಾರಸ್ವಾಮಿ

Posted date: 12 Aug, 2022

Powered by:     Yellow and Red

ನಾನು ನ್ಯಾಯದ ರಾಜಕಾರಣ ಮಾಡುತ್ತೇನೆ ನಕಲಿ ಸರ್ಟಿಫಿಕೇಟ್ ರಾಜಕಾರಣಿ ಅಲ್ಲಾ ಕುಮಾರಸ್ವಾಮಿ

ಚನ್ನಪಟ್ಟಣ: ಕುಮಾರಸ್ವಾಮಿ ಯಾವತ್ತೂ ಹಿಟ್ ಅಂಡ್ ರನ್ ಕೇಸ್ ಮಾಡಲ್ಲ.., ಯಡಿಯೂರಪ್ಪ ಕಾಲದಲ್ಲಿ

ಸಾವಿರಾರು ಪ್ರಕರಣ ದಾಖಲೆ ಸಮೇತ ಜನತೆ ಮುಂದೆ ಇಟ್ಟಿದ್ದು ಇದೇ ಕುಮಾರಸ್ವಾಮಿ ಎಂಬುದು ನೆನಪಿರಲಿ. ನಾನು ಗಾಳಿಯಲ್ಲಿ ಗುಂಡು ಹಾರಿಸುವವನಲ್ಲ, ನನ್ನ ಸುದ್ದಿಗೆ ಯಡಿಯೂರಪ್ಪ ಕೂಡ ಬಂದರು, ಅಪ್ಪಮಕ್ಕಳನ್ನ ಮುಗಿಸೋದೆ ನನ್ನ ಕೆಲಸ ಅಂದ್ರು ಕೊನೆಗೆ ಅವರ ಪರಿಸ್ಥಿತಿ ಎಲ್ಲಿಗೆ ಬಂತು ಎಂಬುದನ್ನು ನೆಪಿಸಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್‍ನಾರಾಯಣಗೆ ಬಹಿರಂಗ ಎಚ್ಚರಿಕೆ ನೀಡಿದರು.

ನಗರದ ನೀಲಕಂಠನಹಳ್ಳಿ ಅಡ್ಡ ರಸ್ತೆಯಲ್ಲಿರುವ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.


 ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ ಎಂಬ ಅಶ್ವಥ್‍ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. ಕಲ್ಲಪ್ಪ ಹಂಡಿಬಾಗ್ ಎಂಬ ಅಧಿಕಾರಿ ಸಿದ್ದರಾಮಯ್ಯ ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆತ ಕುರುಬ ಸಮಾಜದ ನಿಷ್ಠಾವಂತ ಅಧಿಕಾರಿ, ಅವರ ಕುಟುಂಬಕ್ಕೆ ರಕ್ಷಣೆ ಕೊಟ್ಟಿದ್ದು ಕುಮಾರಸ್ವಾಮಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಅವರಿಗೆ ರಕ್ಷಣೆ ಇರಲಿಲ್ಲ. ನಾನು ಎಂದಿಗೂ ಹಿಟ್ ಅಂಡ್ ರನ್ ಮಾಡುವವನಲ್ಲ ಎಂದರು.

ನಾನು ಅಶ್ವತ್ಥ್ ನಾರಾಯಣ್‍ಗೂ ಹೇಳುತ್ತೇನೆ. ನಿಮ್ಮನ್ನು ದುಡ್ಡಿನ ಮದ ರಕ್ಷಣೆ ಮಾಡಲ್ಲ, ರಕ್ಷಣೆ ಮಾಡುವವರು ಈ ನಾಡಿನ ಜನತೆ. ಅವರ ಮದ ಇಳಿಸೋದು ಹೇಗೆ ಅಂತ ಕುಮಾರಸ್ವಾಮಿ ಗೆ ಗೊತ್ತಿದೆ. ನನ್ನ ಆರೋಗ್ಯಕ್ಕೆ ಏನು ಆಗಲ್ಲ ಗಟ್ಟಿಯಾಗಿ ಇರುತ್ತೇನೆ, ಲಕ್ಷಾಂತರ ಕಾರ್ಯಕರ್ತರು ಆಶೀರ್ವಾದದಿಂದ ಗಟ್ಟಿಯಾಗಿರುವೆ. ನಾನು ಏನು ಎಂಬುದನ್ನ ಮುಂದೆ ಅವರಿಗೆ ತೋರಿಸುತ್ತೇನೆ. ಅದಕ್ಕೆ ಟೈಂ ಬರುತ್ತದೆ ಎಂದು ಅಶ್ವಥ್ ನಾರಾಯಣಗೆ ಎಚ್ಚರಿಕೆ ನೀಡಿದರು.


ಕುಮಾರಸ್ವಾಮಿ ಬಗ್ಗೆ ವಿಷಯ ಬಿಚ್ಚಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಾನು ಹೇಳಿದ ನಕಲಿ ಸರ್ಟಿಫಿಕೇಟ್ ವಿಚಾರದ ಬಗ್ಗೆ ಅಶ್ವಥ್ ನಾರಾಯಣ್ ಉತ್ತರ ಕೊಟ್ಟರಾ?

ಅವರು ಬಂದಿರುವ ಹಿನ್ನೆಲೆ ನಕಲಿ ಸರ್ಟಿಫಿಕೇಟ್ ಮಾರಾಟದ ಮೂಲಕ. 2010 ರಲ್ಲಿ ಯಡಿಯೂರಪ್ಪ ಸಿಎಂ ಇದ್ದಾಗ, ಕಾರ್ಪೋರೇಷನ್‍ನ 15 ಸಾವಿರ ಕೋಟಿ ರೂ ಕಾಮಗಾರಿಯ ದಾಖಲೆ ಕೊಠಡಿಗೆ ಬೆಂಕಿ ಇಟ್ಟು ಹಗಲು ದರೋಡೆ ಮಾಡಲು ಹೊರಟಿದ್ದರು. ಆ ಹಗಲು ದರೋಡೆ ವಿಷಯ ಕೆದಕ್ಕಿದ್ದು ಜೆಡಿಎಸ್ ಪಕ್ಷ. ಆದರೆ ಈವರೆಗೂ ಕೂಡ ಅದರ ಬಗ್ಗೆ ತನಿಖೆ ನಡೆದಿಲ್ಲ. ಮೊದಲು ಅದರ ಬಗ್ಗೆ ಚರ್ಚೆ ಮಾಡಿ, ಅದಕ್ಕೆ ಕಲಾಪ ಕರೆಯಿರಿ ಚರ್ಚೆ ಮಾಡೋಣ ಎಂದು ಸವಾಲು ಎಸೆದರು.


ಕುಮಾರಸ್ವಾಮಿ ಪಂಚತಾರ ಹೋಟೆಲ್‍ನಲ್ಲಿ ಉಳಿದುಕೊಳ್ಳುತ್ತಾರೆ ಅಂತಾರೇ. ಅವರ ಪಕ್ಷದ ವರಿಷ್ಠರಾದ ಅಮಿತ್ ಶಾ, ನಡ್ಡಾ, ಅರುಣ್ ಸಿಂಗ್ ಎಲ್ಲಿ ಉಳಿದುಕೊಳ್ಳುತ್ತಾರೆ. ಹಾಗಾದರೆ, ಅವರು ಆ ಹೋಟೆಲ್‍ಗೆ ಹೋಗಬಹುದಾ..? ಕುಮಾರಸ್ವಾಮಿ ಹೋದರೆ ತಪ್ಪಾ.? ನಾನು ಗುಡಿಸಲಿನಲ್ಲೂ ಮಲಗಿದ್ದೇನೆ, ಪಂಚತಾರ ಹೋಟೆಲ್ ನಲ್ಲೂ ಮಲಗಿದ್ದೇನೆ. ನಾನು ಇವರಿಂದ ಕಲಿಯಬೇಕಾಗಿಲ್ಲ. ನನ್ನ ಬಗ್ಗೆ ಚರ್ಚೆ ಮಾಡಲು ಅವರಿಗೆ ಇರುವುದು ಅದೊಂದೆ ವಿಷಯ. ಸಿದ್ದರಾಮಯ್ಯ ಅವರು ಸರ್ಕಾರಿ ಬಂಗಲೆ ಬಿಟ್ಟುಕೊಡಲಿಲ್ಲ, ನಾನು ಬೆಂಗಳೂರಿನಲ್ಲಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲು ಜಾಗ ಇರಲಿಲ್ಲ ಅದಕ್ಕಾಗಿ ಅಲ್ಲಿದ್ದೆ. ನಾನು 2ನೇ ಬಾರಿ ಸಿಎಂ ಆದಾಗ ಸರ್ಕಾರಿ ಬಂಗಲೆ, ವಾಹನ, ಪೆಟ್ರೋಲ್ ಹಣ, ಮನೆ ಬಾಡಿಗೆ ತೆಗೆದುಕೊಂಡಿಲ್ಲ. ನಾನು ಸ್ವಾಭಿಮಾನದಿಂದ ಬದುಕಿದ್ದೇನೆ. ಬಿಜೆಪಿಯವರು ಸಹ ಅದೇ ಹೋಟೆಲ್‍ನಲ್ಲೇ ಸಭೆ ನಡೆಸುತ್ತಿದ್ದಾರೆ. ಇವರು ಯಾಕೆ ಅಲ್ಲಿ ಸೇರುತ್ತಾರೆ ಎಂದು ಬಿಜೆಪಿ ನಾಯಕರನ್ನು ಮಾಜಿ ಸಿಎಂ ಎಚ್‍ಡಿಕೆ ಪ್ರಶ್ನಿಸಿದರು.


ಕಲಾಪಗಳಿಗೆ ಗೈರು ಆಗುವ ವಿಚಾರಕ್ಕೆ ಕಿಡಿಕಾರಿದ ಕುಮಾರಸ್ವಾಮಿ, ನಾನು ಕಲಾಪಕ್ಕೆ ಒಳಗೆ ಹೋಗುವುದಕ್ಕಿಂತ ಹೆಚ್ಚಾಗಿ ಚೇಂಬರ್ ನಲ್ಲಿ ಕುಳಿತು ವೀಕ್ಷಣೆ ಮಾಡುತ್ತಿರುತ್ತೇನೆ. ಅವಶ್ಯಕ ಸಂದರ್ಭದಲ್ಲಿ ನಾನು ಸದನದಲ್ಲಿ ಭಾಗವಹಿಸುತ್ತೇನೆ. ವಿಚಾರಗಳು ಇದ್ದಾಗ ನಾನು ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ. ಹೇಗೆ ಮಾತನಾಡಿದ್ದೇನೆ ಎಂಬುದಕ್ಕೆ ಕಲಾಪದ ಅಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸಿರುವುದು ದಾಖಲೆಯಲ್ಲಿ ಇದೆ. 24 ಗಂಟೆ ಟಿಎ, ಡಿಎ ತೆಗೆದುಕೊಳ್ಳಲು, ಸಾವಿರಾರು ರೂ ಕ್ಲೈಂ ಮಾಡಲು ನಾನು ಸದನಕ್ಕೆ ಹೋಗುವುದಿಲ್ಲ. ಸದನದ ಕಲಾಪ ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸದನದಲ್ಲಿ ರಾಜ್ಯದ ಜನತೆಯ ಕಷ್ಟ ವಿಚಾರ ಏನಾದರೂ ಚರ್ಚೆ ನಡೆಯುತ್ತಿದೆಯಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಸದನ ಕಲಾಪ ಸರಿಯಾಗಿ ನಡೆಸುವ ಯೋಗ್ಯತೆ ಅವರಿಗೆ ಇಲ್ಲ ಎಂದು ಕಿಡಿಕಾರಿದರು.


ಕಾಡಾನೆ ದಾಳಿಯಿಂದ ಮಹಿಳೆಯ ಸಾವು ನೋವುಂಟು ಮಾಡಿದೆ. ಮಹಿಳೆಯ ಸಾವಿಗೆ ಸಂತಾಪ ಸೂಚಿಸುತ್ತೇನೆ. ಆ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು, ಕಾಡಾನೆ ದಾಳಿ ತಡೆಗೆ ಈಗಾಗಲೇ ಹಲವಾರು ಸಭೆ ನಡೆಸಿದ್ದೇನೆ. ಡಿಸಿ ಕಚೇರಿಯಲ್ಲಿ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದ್ದೇನೆ. ನನ್ನ ಮನವಿ ಮೇರೆಗೆ ಕಾಡಾನೆಗಳನ್ನು ಸಾಗಹಾಕುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದಾರೆ. ಬಂಡಿಪುರದಿಂದ ಸಾಕಾನೆಗಳನ್ನ ತಂದು ಓಡಿಸಲು ಕ್ರಮವಹಿಸಲಾಗಿದೆ. ಮಾವುತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತಡವಾಗಿದೆ. ಈಗ ಸಮಸ್ಯೆ ಬಗೆಹರಿದು

ಮಾವುತರು ಸಹ ಕಾರ್ಯಚರಣೆಗೆ ಎಂದು ಮಾಹಿತಿ ನೀಡಿದರು.


ಕಾಡಾನೆ ತಡೆಗಟ್ಟಲು ನಡೆಯುತ್ತಿರುವ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪರಿಶೀಲನೆ ನಡೆಸಿದ್ದೇನೆ. ದುಂತೂರು ಬಳಿ ಆನೆ ಕಾರಿಡಾರ್ ಗೆ ತಕರಾರು ಇದೆ, ರಾತ್ರಿಯಿಡೀ ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದೇನೆ. ಈಗಾಗಲೇ 90% ತಡೆಗೋಡೆಯ ಕೆಲಸವಾಗಿದೆ. ಇನ್ನೂ ಮೂರು ಭಾಗದಲ್ಲಿ ಕೆಲಸ ಆಗಬೇಕಿದೆ. ತಕರಾರು ಸರಿಪಡಿಸುವ ನಿಟ್ಟಿನಲ್ಲಿ ತೀರ್ಮಾನ ಮಾಡಲಾಗಿದೆ. ರೈತರ ಬದುಕು ಹಾಳಾಗಬಾರದು ಎಂದು ತಡೆಗೋಡೆ ನಿರ್ಮಾಣವಾಗುತ್ತಿದೆ. ಈ ಕಾಮಗಾರಿ ನಡೆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬೇರೆಯವರಿಂದ ಸರ್ಟಿಫಿಕೇಟ್ ಪಡೆಯಲು ಈ ಕೆಲಸ ಮಾಡಿಲ್ಲ, ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂದರು.

ಇನ್ನು ಬೆಂಗಳೂರು ಮೈಸೂರು ಬೈಪಾಸ್ ಹೆದ್ದಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ಅವೈಜ್ಞಾನಿಕ ರೀತಿಯಲ್ಲಿ ಡಿಬಿಎಲ್ ಕಂಪನಿ ಕೆಲಸ ಮಾಡುತ್ತಿದ್ದಾರೆ. ಅಂಡರ್ ಪಾಸ್‍ಗಳು ಸರಿಯಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡಿದ್ದೇನೆ.

ಸಮಸ್ಯೆಗಳನ್ನು ಕೂಡಲೇ ಸರಿಪಡಿಸಬೇಕು. ಇದನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಸಬೂಬು ನೀಡದೆ ಕೆಲಸ ಮಾಡಿ ಎಂದು ತಿಳಿಸಿದ್ದೇನೆ ಎಂದರು.


ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿಯ ಸಿಎಂ ಬದಲಾವಣೆ ವಿಚಾರ ಕಟ್ಟಿಕೊಂಡು ನನಗೆ ಏನಾಗಬೇಕಿದೆ? ನನ್ನ ಗಮನ ಇರೋದು 2023ರ ಸಾರ್ವತ್ರಿಕ ಚುನಾವಣೆ. ರಾಜ್ಯದ ರಾಜಕಾರಣದಲ್ಲಿ ಹಲವಾರು ಮಾಹಿತಿಗಳು ಹೊರ ಬರುತ್ತವೆ. ನನಗೆ ಬೇಕಾಗಿರೋದು ನನ್ನ ಜನರ ಬದುಕು, ಇವತ್ತು ಸಾವಿರಾರು ಮನೆಗಳು ಬಿದ್ದಿವೆ, ಸಾವಿರಾರು ಹೆಕ್ಟೇರ್ ಜಮೀನು ಹಾಳಾಗಿವೆ. ಅರಕಲಗೂಡುನಲ್ಲಿ 50ಕ್ಕೂ ಹೆಚ್ಚು ಮಹಿಳೆಯರು ಕಣ್ಣೀರು ಹಾಕಿದ್ದರು ಬೀದಿಪಾಲಾಗಿದ್ದೇವೆ ನಮಗೆ ಮನೆ ಕಟ್ಟಿಸಿಕೊಡಿ ಎಂದು ಅಳಲು ತೋಡಿಕೊಂಡರು. ನನಗೆ ಬೇಕಾಗಿರೋದು ಇಂತಹ ಜನಪರ ಕೆಲಸ, ಯಾವ ಸಿಎಂ ಕಟ್ಟಿಕೊಂಡೇನು, ಮಂತ್ರಿ ಕಟ್ಟಿಕೊಂಡು ನನಗೇನು ಎಂದರು.


 ಸಾರ್, ನಮಗೆ ಮೊಟ್ಟೆ ಇಲ್ವಾ? ಎಂದು ಶಾಲಾ ಮಕ್ಕಳು ಕೇಳುತ್ತಿದ್ದಾರೆ ಎಂಬುದರ ಬಗ್ಗೆ ಪ್ರತಿಯಿಸಿದ ಕುಮಾರಸ್ವಾಮಿ, ಈ ಸರ್ಕಾರದಲ್ಲಿ ಬರೀ ಮೊಟ್ಟೆದಲ್ಲ, ಎಲ್ಲಾ ವಿಷಯದಲ್ಲೂ ತಾರತಮ್ಯವೇ. ಈ ರೀತಿಯ ತಾರತಮ್ಯ ಮಾಡಬಾರದು. ಸರ್ಕಾರ ಎಲ್ಲರಿಗೂ ಮೊಟ್ಟೆ ವಿತರಿಸಲಿ ಎಂದು ಸಲಹೆ ನೀಡಿದರು.

ನನ್ನ ಅಧಿಕಾರವಧಿಯಲ್ಲಿ ಲಾಟರಿ ನಿಷೇಧ ಮಾಡಿ ಹತ್ತನೆಯ ತರಗತಿಯವರೆಗೆ ಬಿಸಿಯೂಟ ವಿಸ್ತರಣೆ ಮಾಡಿದ್ದೆ. ನಾನು ಸಿಎಂ ಆಗಿದ್ದಾಗ ಒಬ್ಬ ಯುವಕ ನನ್ನ ಮನೆ ಬಾಗಿಲ ಬಳಿ ಬಂದು ಆನ್‍ಲೈನ್ ಲಾಟರಿ ವ್ಯಾಮೋಹದಿಂದ ಹಾಳಾಗಿದ್ದೇನೆ. ನನ್ನ ಜೀವನ ಹಾಳು ಮಾಡಿಕೊಂಡು ಸಾಲಗಾರ ಆಗಿದ್ದೇನೆ. ನೀವು ಹಣ ನೀಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳವೆ ಎಂದು ಹೆದರಿಸಿದ. ಅವತ್ತೇ ನಾನು ಲಾಟರಿ ನಿಷೇಧ ಮಾಡಿದೆ. ಲಾಟರಿಯಿಂದ ಬರುವ ತೆರಿಗೆ ಹಣದಿಂದ ಮಕ್ಕಳಿಗೆ ಬಿಸಿಯೂಟಕ್ಕೆ ನೀಡಲು ಮನಸ್ಸು ಬಾರದೆ ಲಾಟರಿ ನಿಷೇಧ ಮಾಡಿದ್ದೆ ಎಂದರು.


ಯಾರೋ ಹೇಳ್ತಾರಲ್ಲ ಎಲ್ಲಿದ್ದಿಯಪ್ಪ ಕುಮಾರಸ್ವಾಮಿ ಎಂಬುವವರಿಗೆ ಜನರ ಬದುಕಿನ ಬಗ್ಗೆ ಏನು ಗೊತ್ತು. ಬಿಬಿಎಂಪಿಯಲ್ಲಿ ಲೂಟಿ ಹೊಡೆದು, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವರನ್ನ ಕಟ್ಟಿಕೊಂಡು ನನ್ನ ಸರ್ಕಾರ ತೆಗೆಯಲು ಏನೇನ್ ಆಟ ಆಡಿದರೂ ಎಂಬುದು ನನಗೆ ಗೊತ್ತಿದೆ. ಇವರಿಂದ ನಾನು ಬದುಕು ಕಲಿಯಬೇಕಿಲ್ಲ ಎಂದು ಅಶ್ವಥ್ ನಾರಾಯಣ್ ವಿರುದ್ಧ ಮತ್ತೊಮ್ಮೆ ಮಾಜಿ ಸಿಎಂ ಎಚ್‍ಡಿಕೆ ಕಿಡಿಕಾರಿದರು.

ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಜೆಡಿಎಸ್ ಮುಖಂಡರಾದ ಸಿಂ.ಲಿಂ.ನಾಗರಾಜು, ಭಾನುಪ್ರಸಾದ್, ಬಿಳಿಯಪ್ಪ, ಎಸ್.ಟಿ.ನಾರಾಯಣಗೌಡ, ರೇಖಾಉಮಾಶಂಕರ್, ಮಲ್ಲೇಶ್ ದ್ಯಾವಪಟ್ಟಣ, ಕೂಡ್ಲೂರು ಗೊಂವಿಂದೇಗೌಡ, ಗಂಗೇದೊಡ್ಡಿ ಬೋರೇಗೌಡ, ಯುವ ಘಟಕದ ಅಧ್ಯಕ್ಷ ವಿನೋದ್‍ಕುಮಾರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಆಶಿಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑