ಸಿಂ.ಲಿಂ.ನಾಗರಾಜು ಪ್ರತಿಷ್ಠಾನ ವತಿಯಿಂದ ಇರುಳಿಗರದೊಡ್ಡಿ ಶಾಲಾ ಮಕ್ಕಳಿಗೆ ಬ್ಯಾಗ್, ಪಠ್ಯ ಸಾಮಗ್ರಿ ವಿತರಣೆ

ಚನ್ನಪಟ್ಟಣ: ದಾನಿಗಳು ನೀಡುವ ಪಠ್ಯ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ಶಾಲಾ ಮಕ್ಕಳು ವಿಶೇಷವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಸಿಂ.ಲಿಂ.ನಾಗರಾಜು ಪ್ರತಿಷ್ಠಾನದ ಎಸ್.ಎನ್.ಆದರ್ಶ ಕುಮಾರ್ ಕಿವಿಮಾತು ಹೇಳಿದರು. ಅವರು
ತಾಲ್ಲೂಕಿನ ಗಡಿಗ್ರಾಮ ಇರುಳಿಗರದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನಲವತ್ತೈದಕ್ಕೂ ಹೆಚ್ಚು ಮಕ್ಕಳಿಗೆ ಶನಿವಾರ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕ, ಅಭ್ಯಾಸ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ಪ್ರತಿಷ್ಠಾನದ ವತಿಯಿಂದ ಕೊಡುಗೆ ನೀಡಿ ಅವರು ಮಾತನಾಡಿದರು.
ತಮ್ಮ ತಂದೆ, ಸಹಕಾರಿ ಧುರೀಣ ಸಿಂ.ಲಿಂ.ನಾಗರಾಜು ಅವರ ಸವಿನೆನಪಿನಲ್ಲಿ ಹಲವಾರು ಜನಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಸಿಂ.ಲಿಂ.ನಾಗರಾಜು ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದ್ದು, ಪ್ರತಿಷ್ಠಾನದ ಮೂಲಕ ತಾಲ್ಲೂಕಿನಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಸಿಂ.ಲಿಂ.ನಾಗರಾಜು ಅವರ ಒಡನಾಡಿಗಳೆಲ್ಲಾ ಸೇರಿ ಕೈಗೊಳ್ಳಲು ತೀರ್ಮಾನಿಸಲಾಗಿದ್ದು, ಮುಂಬರುವ ದಿನಗಳಲ್ಲಿ ತಮ್ಮ ತಂದೆಯವರ ಆಶಯದಂತೆ ಜನಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಆದರ್ಶ ಕುಮಾರ್ ವಾಗ್ದಾನ ಮಾಡಿದರು.
ಎಸ್ ಡಿಎಂಸಿ ರಾಜ್ಯ ಉಪಾಧ್ಯಕ್ಷ, ಪ್ರತಿಷ್ಠಾನದ ಹಿತೈಷಿ ನಾಗವಾರ ಶಂಭುಗೌಡ ಮಾತನಾಡಿ, ಕನ್ನಡ ಪರ ಹೋರಾಟ, ಶಿಕ್ಷಣ, ಸಹಕಾರ, ಸಾಹಿತ್ಯ, ರೈತಪರ ಕಾಳಜಿ, ನ್ಯಾಯ ಪಂಚಾಯಿತಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿ ಚನ್ನಪಟ್ಟಣ ತಾಲ್ಲೂಕಿನ ಮನೆಮಗನಾಗಿದ್ದ ಕನ್ನಡದ ಕಟ್ಟಾಳು ದಿ.ಸಿಂ.ಲಿಂ.ನಾಗರಾಜು ಅವರ ಪುತ್ರ ಆದರ್ಶ ಕುಮಾರ್ ಅವರು ಹೆಸರಿಗೆ ತಕ್ಕಂತೆ ಆದರ್ಶ ವ್ಯಕ್ತಿ ಹಾಗೂ ತಂದೆಯಂತೆಯೇ ಸರಳ ಜೀವನ, ಉದಾತ್ತ ಚಿಂತನೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಲು ಮುಂದಾಗಿರುವುದು ಶ್ಲಾಘನೀಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಎಂ.ಟಿ.ನಾಣಯ್ಯ ಲಾ ಚೇಂಬರ್ ಅಸೋಸಿಯೇಷನ್ ನ ಖ್ಯಾತ ವಕೀಲ ಅಶೋಕ್ ಮಾತನಾಡಿ,
ಸಿಂ.ಲಿಂ.ನಾಗರಾಜು ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ರಚನೆಯಾಗಿರುವ ಪ್ರತಿಷ್ಠಾನ ಹಾಗೂ ಆದರ್ಶ ಕುಮಾರ್ ಅವರ ಬೆನ್ನಿಗೆ ನಿಂತು ಕೆಲಸ ಮಾಡಲು ಅನೇಕ ಮನಸ್ಸುಗಳು ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಕೈಜೋಡಿಸಲು ಬದ್ದರಾಗಿದ್ದೇವೆ ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯೆ ಶಿವಲಿಂಗಮ್ಮ, ಸಮಾಜ ಸೇವಕ ಅಕ್ಕೂರು ಹೊಸಹಳ್ಳಿ ಸುರೇಶ್,
ಮಾಕಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಎಸ್.ರಾಮಣ್ಣ, ಮಾಕಳಿ ಪ್ರಾಥಮಿಕ ಪಾಠಶಾಲೆ ಮುಖ್ಯ ಶಿಕ್ಷಕ ರಾಮಲಿಂಗೇಗೌಡ, ಇರುಳಿಗರದೊಡ್ಡಿ ಸರ್ಕಾರಿ ಶಾಲೆ ಶಿಕ್ಷಕ ಡಿ.ಮಹದೇವಯ್ಯ,
ಅಂಗನವಾಡಿ ಶಿಕ್ಷಕಿ ಧನಲಕ್ಷ್ಮಿ, ಶಾಲಾ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು