ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವೆಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದ ಬಿ.ಎಸ್.ಗಂಗಾಧರ್.

ರಾಮನಗರ: ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಕರೇನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಸ್ಪತ್ರೆಯ ಸಭಾಂಗಣದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು / ಯೋಜನೆಗಳು / ಸೇವಾ ಸೌಲಭ್ಯಗಳ ಕುರಿತು ಇಂದು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬಿ.ಎಸ್.ಗಂಗಾಧರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಾತನಾಡುತ್ತಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆ, ಗರ್ಭಿಣಿ ತಪಾಸಣೆ, ಮಕ್ಕಳ ಲಸಿಕಾ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನೆ, ಸಾಂಕ್ರಾಮಿಕ ರೋಗಗಳಾದ ಕ್ಷಯ, ಕುಷ್ಠ, ಮಲೇರಿಯಾ, ಡೆಂಗಿ, ಚಿಕುನ್ ಗುನ್ಯಾ ರೋಗಗಳು ಮತ್ತು ಅಸಾಂಕ್ರಾಮಿಕ ರೋಗಗಳಾದ ಮಧುಮೇಹ, ರಕ್ತದೊತ್ತಡ ಇನ್ನಿತರೇ ರೋಗಗಳನ್ನು ಪತ್ತೆಮಾಡಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಹಾಗೂ ಹಾವು ಕಡಿತ, ನಾಯಿ ಕಡಿತ ಸಂದರ್ಭಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು. ಈ ಎಲ್ಲಾ ಸೇವಾ ಸೌಲಭ್ಯಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನೀಡಲಾಗುತ್ತಿದ್ದು ಸಾರ್ವಜನಿಕರು ಆರೋಗ್ಯ ಕೇಂದ್ರದಲ್ಲಿ ದೊರೆಯುವ ಸೇವಾ-ಸೌಲಭ್ಯ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವೈದ್ಯಾಧಿಕಾರಿ ಡಾ. ಅನಘಾ ಮಾತನಾಡುತ್ತಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ನಿಯಂತ್ರಿಸಲು ಎಲ್ಲಾ ಜ್ವರದ ಪ್ರಕರಣಗಳಿಗೆ ರಕ್ತ ಲೇಪನ ಸಂಗ್ರಹ ಮಾಡಲಾಗುತ್ತಿದೆ. ಎರಡು ವಾರಕ್ಕೂ ಹೆಚ್ಚು ಕೆಮ್ಮು, ಸಂಜೆಯ ವೇಳೆ ಜ್ವರ, ಬೆವರುವಿಕೆ, ಹಸಿವಾಗದೆ ಇರುವುದು, ಇಂತಹ ಲಕ್ಷಣಗಳಿರುವವರಿಗೆ ಕ್ಷಯ ರೋಗ ನಿಯಂತ್ರಿಸುವ ಸಲುವಾಗಿ, ಕಫ ಪರೀಕ್ಷೆ, ಪ್ರತಿ ಬುಧವಾರ ಗರ್ಭಿಣಿ ಪರೀಕ್ಷೆ, ಗುರುವಾರ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ, ಪ್ರತಿ ತಂಗಳು 9ನೇ ತಾರೀಖಿನಂದು ಗರ್ಭಿಣಿಯರ ಆರೋಗ್ಯ ತಪಾಸಣೆ ಇತ್ಯಾದಿ ಸೇವೆಗಳನ್ನು ನೀಡಲಾಗುತ್ತಿದ್ದು ಸಾರ್ವಜನಿಕರು ಪ್ರಾರಂಭಿಕ ಹಂತದಲ್ಲಿಯೇ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ವಾಣಿ, ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಭುಲಿಂಗಯ್ಯ, ರಮೇಶ್, ಆಶಾ ಕಾರ್ಯಕರ್ತೆಯರಾದ ಉಮಾ, ಅನ್ನಪೂರ್ಣ, ಆಶಾ, ಆರೋಗ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು