Tel: 7676775624 | Mail: info@yellowandred.in

Language: EN KAN

    Follow us :


ಬೆಂಮೈ ಹೆದ್ದಾರಿಯ ರಾಮನಗರ ಬಳಿ ಮತ್ತೊಂದು ಅಪಘಾತ: ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ಸಾವು

Posted date: 28 Jun, 2023

Powered by:     Yellow and Red

ಬೆಂಮೈ ಹೆದ್ದಾರಿಯ ರಾಮನಗರ ಬಳಿ ಮತ್ತೊಂದು ಅಪಘಾತ: ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕ ಸಾವು

ನೂತನವಾಗಿ ನಿರ್ಮಾಣವಾಗಿರುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇಂದು ಸಂಜೆ ಮತ್ತೊಂದು ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕಲ್ ಬಸ್‌ ನಿರ್ವಾಹಕ ಸಾವನಪ್ಪಿರುವ ದುರ್ಘಟನೆ ಜರುಗಿದೆ.


ರಾಮನಗರ ತಾಲ್ಲೂಕಿನ ಜಯಪುರ ಬಳಿ ಅಪಘಾತ ಸಂಭವಿಸಿದ್ದು, ಮೈಸೂರು ಕಡೆಯಿಂದ ಬರುತ್ತಿದ್ದ ಎಲೆಕ್ಟ್ರಿಕ್ ಬಸ್ ಫ್ಲೈವುಡ್ ಶೀಟ್‌ಗಳನ್ನು ತುಂಬಿಕೊಂಡು ಚಲಿಸುತ್ತಿದ್ದ ಬೊಲೊರೋ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಬಸ್‌ನ ಗ್ಲಾಸ್ ಹೊಡೆದು ಫ್ಲೈವುಡ್ ಶೀಟ್‌ಗಳು ಬಸ್‌ನೊಳಕ್ಕೆ ನುಗ್ಗಿವೆ. ನಿಯಂತ್ರಣ ತಪ್ಪಿದ್ದ ಬಸ್ ಪಕ್ಕದ ಆರು ಪಥದ ರಸ್ತೆ ಮತ್ತು ಸರ್ವೀಸ್ ರಸ್ತೆ ದಾಟಿ ಬಂದು ಹೊಲದಲ್ಲಿ ನಿಂತಿದೆ. ದುರ್ಘಟನೆಯಲ್ಲಿ ನಿರ್ವಾಹಕ ನೂರು ಅಡಿ ದೂರಕ್ಕೆ ಚಿಮ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.


ಇಂದು ಸಂಜೆ 4 ಗಂಟೆ ಸಮಯಕ್ಕೆ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡ ಚಾಲಕ ಮತ್ತು ಇತರ ಪ್ರಯಾಣಿಕರನ್ನು ರಾಮನಗರ ಆಸ್ಪತ್ರೆಗೆ ದಾಖಲಿಸಲಾಗಿದೆ.


ಮೂರು ದಿನಗಳ ಹಿಂದಷ್ಟೇ ಇದೇ ರಸ್ತೆಯಲ್ಲಿ ಬೈಕ್ ಸವಾರ ವಾಹನವೊಂದಕ್ಕೆ ಗುದ್ದಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.


*ಆರು ತಿಂಗಳ ಅಪಘಾತಗಳಲ್ಲಿ 111 ಜನ ಸಾವು*

ಬೆಂಗಳೂರು-ಮೈಸೂರು ನಗರಗಳನ್ನು ಬೆಸೆಯುವ ಈ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಜನವರಿಯಿಂದ ಇಲ್ಲಿಯವರೆಗೂ 111 ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿಯೇ 244 ಅಪಘಾತಗಳು ಸಂಭವಿಸಿದ್ದು, 51 ಜನ ಸಾವನ್ನಪ್ಪಿದರೆ, 190 ಜನರಿಗೆ ಗಾಯಗಳಾಗಿವೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 575 ಅಪಘಾತಗಳಾಗಿದ್ದು, 60 ಮಂದಿ ಜನ ಸಾವನ್ನಪ್ಪಿದ್ದಾರೆ. 54 ಮಂದಿಗೆ ತೀವ್ರ ಪೆಟ್ಟು ಬಿದ್ದಿದ್ದರೆ, 189 ಮಂದಿಗೆ ಕೈ ಕಾಲು ಮುರಿತವಾಗಿದ್ದು, 295 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಮೂಲಕ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ ವೇ ಸಾವಿನ ಹೆದ್ದಾರಿಯಾಗಿ ಮಾರ್ಪಾಡಾಗುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.


ಕಳೆದೆರಡು ದಿನಗಳ ಹಿಂದೆ ಎಡಿಜಿಪಿ ಅಲೋಕ್ ಕುಮಾರ್ ಸಹ ಬಂದು ರಾಮನಗರ ಜಿಲ್ಲೆಯ ಬೆಂಗಳೂರು ಮೈಸೂರು ಹೆದ್ದಾರಿ ಹಾಗೂ ವಿಶೇಷವಾಗಿ ಅಪಘಾತ ಸ್ಥಳಗಳನ್ನು ವೀಕ್ಷಣೆ ಮಾಡಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಗಸ್ತು ತಿರುಗುವಂತೆ ಪೋಲಿಸರಿಗೆ ಖಡಕ್ ಮಾಹಿತಿ ನೀಡಿ ಹೋಗಿದ್ದರು. ಎರಡೇ ದಿನಕ್ಕೆ ಈ ಅಪಘಾತ ಸಂಭವಿಸಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑