ಆನೆ ದಾಳಿಗೆ ರೈತರು ಹೈರಾಣು: ಹೆಚ್ಚಾದ ಕಾಟ, ವಿಫಲವಾದ ಅರಣ್ಯ ಇಲಾಖೆ

ಚನ್ನಪಟ್ಟಣ: ತಾಲೂಕಿನಾದ್ಯಂತ ಆನೆಗಳ ಹಾವಳಿ ಮಿತಿಮೀರುತ್ತಿದೆ. ದಿನದಿಂದ ದಿನಕ್ಕೆ ರೈತರ ಜಮೀನುಗಳ ಮೇಲೆ ಆನೆಗಳು ಲಗ್ಗೆ ಇಟ್ಟು ದಾಳಿಯನ್ನು ಮಾಡುತ್ತಿವೆ. ಕಳೆದ ಮೂರು ನಾಲ್ಕು ದಿನಗಳಿಂದ ಚನ್ನಪಟ್ಟಣ ತಾಲೂಕಿನ ಹಲವು ಗ್ರಾಮಗಳಲ್ಲಿ ಆನೆಗಳು ದಾಳಿಯನ್ನು ನಡೆಸುತ್ತಿವೆ. ಚನ್ನಪಟ್ಟಣ ತಾಲೂಕಿನ ವಿಠಲೇನಹಳ್ಳಿ, ಪೀಹಳ್ಳಿ ದೊಡ್ಡಿ ಹಾಗೂ ಉಜ್ಜನಹಳ್ಳಿ, ದೊಡ್ಡನಹಳ್ಳಿ ಗ್ರಾಮದಲ್ಲಿ ಆನೆಗಳು ದಾಳಿಯನ್ನು ನಡೆಸಿವೆ.
*ಬೈಕ್ ಜಖಂಗೊಳಿಸಿದ ಆನೆಗಳು:*
ತಾಲ್ಲೂಕಿನ ವಿಠಲೇನಹಳ್ಳಿ ಗ್ರಾಮದ ಕೂಗಳತೆ ದೂರದಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿವೆ. 4 ಕಾಡನೆಗಳು ಪ್ರತ್ಯಕ್ಷವಾಗಿದ್ದು, ಪಶುಗಳಿಗೆ ಮೇವನ್ನು ತರಲು ಜಮೀನಿಗೆ ಹೋಗಿದ್ದ ಸತೀಶ್ ಕುಮಾರ್ ಅವರ ಬೈಕ್ ಜಖಂಗೊಳಿಸಿವೆ. ಆನೆಗಳು ಕಾಣುತ್ತಿದಂತೆ ಸತೀಶ್ ಕುಮಾರ್ ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನಪಟ್ಟಣ ತಾಲೂಕಿನಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು ರೈತರು ಭಯ ಭೀತರಾಗಿದ್ದಾರೆ.
*ವಯೋವೃದ್ಧನ ಮೇಲೆ ದಾಳಿ:*
ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ವಯೋವೃದ್ಧನ ಮೇಲೆ ಆನೆ ದಾಳಿ ನಡೆಸಿದೆ. ಹಾಲಯ್ಯ ಎಂಬ ವೃದ್ಧ ಕುರಿ ಮಂದೆಯನ್ನ ಕಾಯುತ್ತಿದ್ದರು. ಕುರಿ ಮಂದೆಯಲ್ಲಿ ಇದ್ದಂತಹ ಜನ ಹಾಗೂ ಗ್ರಾಮದ ಜನರು ಜೋರಾಗಿ ಕೂಗಿಕೊಂಡಿದ್ದರಿಂದ ಭಯದಿಂದ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಹಾಲಯ್ಯ ಎಂಬುವವರಿಗೆ ಕಾಲು, ಬಾಯಿ ಮತ್ತಿತರ ಕಡೆ ರಕ್ತಗಾಯಗಳಾಗಿದ್ದು ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
*ಉಜ್ಜನಹಳ್ಳಿ, ಪೀಹಳ್ಳಿದೊಡ್ಡಿ ರೈತರ ಜಮೀನಿಗೆ ದಾಳಿ:*
ಚನ್ನಪಟ್ಟಣ ತಾಲೂಕಿನ ಉಜ್ಜನಹಳ್ಳಿ ಮತ್ತು ಪೀಹಳ್ಳಿ ದೊಡ್ಡಿ, ರೈತರ ಜಮೀನಿನ ಮೇಲೆ ಆನೆಗಳು ದಾಳಿ ನಡೆಸಿವೆ. ಉಜ್ಜನಹಳ್ಳಿ ಗ್ರಾಮದ ಭಾನುಪ್ರಸಾದ್ ಹಾಗೂ ಪುಟ್ಟಸ್ವಾಮಿಗೌಡರ ಮಗ ರವಿ ಮತ್ತು ಪೀಹಳ್ಳಿದೊಡ್ಡಿ ಗ್ರಾಮದ ರೈತರ ಜಮೀನಿನ ಮೇಲೆ ಆನೆಗಳು ದಾಂಗುಡಿಯನ್ನು ಇಟ್ಟಿವೆ. ದಾಳಿ ಮಾಡಿದ ಕಾಡಾನೆಗಳು 8 ರಿಂದ 10 ಮಾವಿನ ಮರಗಳು, ಸೀಮೆ ಹುಲ್ಲು ಮತ್ತು ಹಲಸಿನ ಮರವನ್ನು ನಾಶಪಡಿಸುವೆ. ಇದೇ ಸಂದರ್ಭದಲ್ಲಿ ಕೃಷಿ ಪರಿಕರಗಳನ್ನು ನಾಶಪಡಿಸಿವೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಾವು ಎಷ್ಟೇ ಮನವಿ ಮಾಡಿದರು ಸಹ ಅವರು ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಈಗಾಗಲೇ ಪ್ರತಿಭಟನೆ ಮಾಡಿದ್ದು ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಮದ ರೈತರು ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆನೆಗಳನ್ನು ಸೆರೆಹಿಡಿಯಲಾಗಿತ್ತು ಕಳೆದ ವರ್ಷ ಎರಡು ಮತ್ತು ಈ ತಿಂಗಳು ಎರಡು ಸೇರಿದಂತೆ ನಾಲ್ಕು ಪುಂಡಾನೆಗಳನ್ನು ಸೆರೆಹಿಡಿದ ನಂತರ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಎಷ್ಟೇ ಪುಂಡಾನೆಗಳನ್ನು ಸೆರೆ ಹಿಡಿದರು ಸಹ ಮತ್ತಷ್ಟು ಆನೆಗಳ ಕಾಟ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ. ಇದರಿಂದಾಗಿ ರೈತರು ಬೇಸತ್ತು ಹೋಗಿದ್ದಾರೆ ಆನೆಗಳು ಗ್ರಾಮಗಳಿಗೆ ಬಾರದಂತೆ ಸೂಕ್ತ ಕ್ರಮವನ್ನ ತೆಗೆದುಕೊಳ್ಳದೇ ಇದ್ದರೆ ರೈತರು ಪ್ರತಿಭಟನೆಯ ಹಾದಿಯನ್ನ ತುಳಿಯುವುದಾಗಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು