ಅಕ್ಕೂರು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳಿಂದ ಬೆಳೆ ನಾಶ

ಚನ್ನಪಟ್ಟಣ : ತಾಲೂಕಿನ ಅಕ್ಕೂರು, ಸಾದರಹಳ್ಳಿ, ಸೋಮನಾಥಪುರ, ಹೊಸಹಳ್ಳಿ, ಎಸ್.ಎಂ.ಹಳ್ಳಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಮತ್ತು ಬುಧವಾರ ಬೆಳಿಗ್ಗೆ ಐದರಿಂದ ಏಳು ಕಾಡಾನೆಗಳ ಹಿಂಡು ದಾಂಧಲೆ ಎಬ್ಬಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸುತ್ತಾ ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಪ್ರತಿದಿನ ಒಂದಲ್ಲಾ ಒಂದು ಕಡೆ ಕಾಣಿಸಿಕೊಳ್ಳುತ್ತಾ ರೈತರ ನೆಮ್ಮದಿಯನ್ನು ಕಸಿದುಕೊಂಡಿದ್ದು, ಬೇಸಾಯ ಚಟುವಟಿಕೆಗಳಿಗೆಂದು ತೋಟಗಳಿಗೆ ತೆರಳಲು ರೈತರು ಹಿಂದೇಟು ಹಾಕುವಷ್ಟರ ಮಟ್ಟಿಗೆ ಆನೆಗಳು ಭಯವನ್ನು ಮೂಡಿಸಿವೆ.
ಕೆಲ ದಿನಗಳ ಹಿಂದಷ್ಟೆ ಇದೇ ಸ್ಥಳದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡು ಇದೀಗ ಒಂದು ವಾರದ ಬಳಿಕ ಮತ್ತೆ ಬಂದಿರುವುದು ಮನೆಗೆ ಅತಿಥಿ ಬರುವ ರೀತಿಯಲ್ಲಿ ಬಂದು ಹೋಗುತ್ತಿವೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
ತಮ್ಮ ಗ್ರಾಮದ ಪಕ್ಕದಲ್ಲೇ ಬಂದು ಕಣ್ವ ನದಿಗೆ ಅಡ್ಡಲಾಗಿ ಕಟ್ಟಿರುವ ಪಿಕಪ್ ಬಳಿಯ ನೀರಲ್ಲಿ ನಿಂತ ಆನೆಗಳ ಹಿಂಡನ್ನು ನೋಡಲು ಯುವಕರಾದಿಯಾಗಿ ಗ್ರಾಮಸ್ಥರುಗಳು ಮುಗಿಬಿದ್ದ ಪರಿಣಾಮ ಅರಣ್ಯ ಇಲಾಖೆಗೆ ಕೆಲಕಾಲ ಆನೆಗಳು ಚದುರಿದರೆ ಏನು ಮಾಡುಬಹುದೆಂಬ ಭಯ ಕಾಡಿ, ನಂತರ ಪೊಲೀಸರ ಸಹಕಾರ ಪಡೆದು ಸಾರ್ವಜನಿಕರನ್ನು ನಿಯಂತ್ರಿಸಿದ ಸಿಬ್ಬಂದಿಗಳು ಸಾಯಂಕಾಲ ಆನೆಗಳನ್ನು ಓಡಿಸುವ ಕೆಲಸ ಮಾಡಿದರು.
ಈ ಮಧ್ಯದಲ್ಲಿ ಆನೆಗಳು ಹಲವು ರೈತರುಗಳ ಬಾಳೆ, ಟಮೋಟೊ, ತೆಂಗು, ರೇಷ್ಮೆ, ಜೋಳ ಸೇರಿದಂತೆ ಹಲವು ಬೆಳೆಗಳನ್ನು ನಾಶ ಮಾಡಿದ್ದು, ಪದೇ ಪದೇ ಇಂತಹ ಘಟನೆಗಳಿಂದ ನೊಂದಿರುವ ರೈತ ಸಮುದಾಯ ಆನೆ ಹಾವಳಿ ತಪ್ಪಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿ ಇಲ್ಲವೇ ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಲಿ ಎಂದು ಆಗ್ರಹಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು