ದಶವಾರ ಗ್ರಾಪಂ ಸದಸ್ಯ ಅಬ್ಬೂರುದೊಡ್ಡಿ ವರದರಾಜ ನಿಂದ ಅರಣ್ಯಪ್ರದೇಶದಲ್ಲಿ ಸಹಸ್ರಾರು ಗಿಡ ಮರಗಳ ಮಾರಣಹೋಮ

ರಾಮನಗರ:ಚನ್ನಪಟ್ಟಣ; ತಾಲ್ಲೂಕಿನ ಅಬ್ಬೂರು ಗ್ರಾಮ ವ್ಯಾಪ್ತಿಯ ಅರಣ್ಯ ಇಲಾಖೆಯ ಸರ್ವೇ ನಂಬರ್ ೩೫೩ ರಲ್ಲಿ ಸರಿಸುಮಾರು ಆರು ಎಕರೆಯಷ್ಟು ಅರಣ್ಯ ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ದುರುದ್ದೇಶದಿಂದ ಸಹಸ್ರಾರು ಗಿಡಮರಗಳನ್ನು ಕಡಿದು ಉರುಳಿಸಿ, ಅವುಗಳನ್ನೆ ಬದುಗಳ ರೀತಿಯಲ್ಲಿ ಜೋಡಿಸಿರುವ ಘಟನೆ ಜರುಗಿದ್ದು ವಲಯ ಅರಣ್ಯಾಧಿಕಾರಿ ದೂರು ದಾಖಲಿಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಬ್ಬೂರುದೊಡ್ಡಿ ಗ್ರಾಮದ ನಿವಾಸಿ ದಶವಾರ ಗ್ರಾಮ ಪಂಚಾಯತಿ ಹಾಲಿ ಸದಸ್ಯ, ಜೆಡಿಎಸ್ ಮುಖಂಡ ವರದರಾಜು ಮೊದಲ ಆರೋಪಿಯಾಗಿದ್ದು ಈ ಕೃತ್ಯ ಎಸಗಿದ್ದಾನೆ ಎಂದು ಪ್ರಥಮ ವರ್ತಮಾನ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಅದೇ ಗ್ರಾಮದ ಕೃಷ್ಣ ಎಂಬ ವ್ಯಕ್ತಿ ಎರಡನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಇಬ್ಬರು ಆರೋಪಿಗಳು ನಗರದಲ್ಲಿನ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ.
*ಕರುಣೆ ತೋರಿ ಎಫ್ಐಆರ್!?*
ಅರಣ್ಯ ಇಲಾಖೆಯ ಡಿ ಆರ್ ಎಫ್ ಓ ಶ್ರೀಧರ್ ರವರು ಸಹಸ್ರಾರು ಗಿಡ-ಮರಗಳನ್ನು ಕಡಿದು ಉರುಳಿಸಿರುವ ಮೊದಲ ಆರೋಪಿ ವರದರಾಜು ಮೇಲೆ ಕರುಣೆ ತೋರಿ ಅಥವಾ ಯಾವುದೋ ಆಮಿಷಕ್ಕೆ ಮಣಿದು ಎಫ್ಐಆರ್ ದಾಖಲಿಸಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಹತ್ತಿರತ್ತಿರ ಆರು ಎಕರೆ ಜಾಗದ ಬದಲಿಗೆ ನಾಲ್ಕು ಎಕರೆ ಎಂದು ತೋರಿಸಿದ್ದಲ್ಲದೆ, ಸಹಸ್ರಾರು ಗಿಡಮರಗಳ ಬದಲಿಗೆ ಕೇವಲ ೧೯೮ ಮರಗಳು ಎಂದು ಉಲ್ಲೇಖಿಸಿದ್ದಾರೆ. ಬಹುತೇಕ ಎಲ್ಲಾ ಗಿಡ-ಮರಗಳು ಸ್ಥಳದಲ್ಲಿಯೇ ಇದ್ದರೂ ಸಹ ಒಂದು ಟನ್ ಅಷ್ಟು ಸೌದೆಯನ್ನು ಅಲ್ಲಿಯೇ ಬಿಟ್ಟಿದ್ದಾರೆ ಎಂದು ಉಲ್ಲೇಖಿಸಿರುವುದು ಅಧಿಕಾರಿಗಳ ಮೇಲೆ ಅನುಮಾನ ಮೂಡುವಂತೆ ಮಾಡಿದೆ.
*ನಾನು ಮಾಡಿಲ್ಲಾ, ರಾಜಕೀಯ ದುರುದ್ದೇಶದಿಂದ ದೂರು; ವರದರಾಜ*
ಪತ್ರಿಕೆಯು ಮೊದಲ ಆರೋಪಿ ವರದರಾಜನನ್ನು ಮೊಬೈಲ್ ಮೂಲಕ ಸಂಪರ್ಕಿಸಿದಾಗ, ನಾನು ಮರಗಳನ್ನು ಕಡಿದಿಲ್ಲಾ, ಯಾರೋ ಆಗದವರು ಕಡಿದು ನನ್ನ ಮೇಲೆ ರಾಜಕೀಯ ದುರುದ್ದೇಶದಿಂದ ದೂರು ನೀಡಿದ್ದಾರೆ ಎಂದರು. ಜಾಮೀನು ಏಕೆ ಪಡೆದುಕೊಂಡಿರಿ ಎಂಬ ಮರು ಪ್ರಶ್ನೆಗೆ ತಡಬಡಾಯಿಸದ ಅವರು ನಾನೇ ಎಂದು ದೂರು ದಾಖಲಿಸಿರುವುದರಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದೇನೆ ಎಂದು ಸಮರ್ಥನೆ ನೀಡಿದ್ದಾರೆ.
*ನಮ್ಮ ತಂದೆಯ ಕಾಲದಿಂದಲೂ ವ್ಯವಸಾಯ ಮಾಡುತ್ತಿದ್ದೇವೆ ಕೃಷ್ಣ*
ಎರಡನೇ ಆರೋಪಿ ಕೃಷ್ಣ ರವರು ಪತ್ರಿಕಾ ಕಛೇರಿಗೆ ಬಂದು ಹೇಳಿಕಿ ನೀಡಿ, ನಮ್ಮ ತಂದೆಯವರು ಹಿಂದಿನಿಂದಲೂ ಗೋಮಾಳ ಜಮೀನು ಎಂದು ವ್ಯವಸಾಯ ಮಾಡುತ್ತಿದ್ದರು, ಅವರ ಮರಣಾನಂತರ ನಾನು ಮುಂದುವರೆಸಿಕೊಂಡು ಬರುತ್ತಿದ್ದೆ, ನೆಟ್ಟಿದ್ದ ಮಾವು, ತೆಂಗಿನ ಸಸಿಗಳನ್ನು ಕಡಿದು ಹಾಕಿ ಇದು ಅರಣ್ಯ ಇಲಾಖೆಯ ಜಾಗ ಎಂದು ದೂರು ದಾಖಲಿಸಿದ್ದಾರೆ. ಗೋಮಾಳ ಅಲ್ಲಾ ಇದು ಅರಣ್ಯ ಇಲಾಖೆಯ ಜಾಗ ಎಂದು ಈಗಲೇ ನನಗೆ ಗೊತ್ತಾಗಿದ್ದು, ಜಾಗ ನೀಡಿದರೆ ವ್ಯವಸಾಯ ಮುಂದುವರೆಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
*ಕಡಿಮೆ ಜಾಗ ಮತ್ತು ಮರಗಳನ್ನು ತೋರಿಸಿದ್ಯಾಕೆ !?*
ಇಂದು ಓಝೋನ್ ಪದರ ಸೇರಿದಂತೆ, ವಾತಾವರಣವೇ ಹಾಳಾಗುತ್ತಿದೆ. ಅರಣ್ಯ ಒತ್ತುವರಿ ಎಗ್ಗಿಲ್ಲದೆ ಸಾಗುತ್ತಿದೆ, ಅವೆಷ್ಟೋ ಪ್ರಕರಣಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೇ ಒತ್ತುವರಿ ಮಾಡಿಕೊಂಡ ಪ್ರಕರಣಗಳು ಇವೆ. ಇವರಿಬ್ಬರೂ ಒಬ್ಬರಿಗೊಬ್ಬರು ಸಾಥ್ ನೀಡಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಜಗತ್ತಿಗೆ ಪರಿಸರ ಎಂಬುದು ಎಷ್ಟು ಮುಖ್ಯ ಎಂದು ಎಲ್ಲರಿಗೂ ತಿಳಿದಿದ್ದರೂ ಸಹ ಕಂಡುಕಾಣದಂತೆ ಕುಳಿತಿರುವುದು ಇವರ ಅಂಧಾಭಿಮಾನವನ್ನು ತೋರಿಸುತ್ತದೆ. ಈ ಕಾಡಿನಲ್ಲಿ ವಿವಿಧ ರೀತಿಯ ಸಸ್ಯ ಸಂಕುಲ, ಔಷಧೀಯ ಗಿಡಗಳು, ವಿವಿಧ ರೀತಿಯ ಕಾಡು ಪ್ರಾಣಿಗಳು, ಪಕ್ಷಿಗಳು ವಾಸಿಸುತ್ತಿವೆ. ಇಂತಹ ಜಾಗದಲ್ಲಿ ಸಹಸ್ರಾರು ಗಿಡ-ಮರಗಳ ಮಾರಣ ಹೋಮ ಮಾಡಿದರೂ ಸಹ ಎಫ್ಐಆರ್ ನಲ್ಲಿ ಕಡಿಮೆ ತೋರಿಸಿರುವುದು ಯಾಕೆ ಎಂಬ ಗುಮಾನಿ ಕಾಡುತ್ತಿದ್ದು, ಅಧಿಕಾರಿಗಳು ಉತ್ತರಿಸಬೇಕಾಗಿದೆ.
*ಚಾರ್ಜ್ ಶೀಟಿನಲ್ಲಿ ತೋರಿಸುತ್ತೇವೆ, ಅರಣ್ಯಾಧಿಕಾರಿ ಕಿರಣ್*
ಇದು ಪ್ರಥಮ ವರದಿ ಮಾತ್ರ, ನಾನೇ ತನಿಖಾಧಿಕಾರಿಯಾಗಿರುವುದರಿಂದ ಚಾರ್ಜ್ ಶೀಟಿನಲ್ಲಿ ಎಲ್ಲವನ್ನೂ ಉಲ್ಲೇಖಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಆರೋಪಿಗಳಿಗೆ ನೋಟೀಸ್ ನೀಡಿದ್ದು, ಬಂಧನಕ್ಕಾಗಿ ಪ್ರಯತ್ನಿಸಿದರೂ ಅವರು ತಲೆ ಮರೆಸಿಕೊಂಡು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಜಾಮೀನಿನ ಪ್ರತಿಗಳನ್ನು ಸಹ ಇಲಾಖೆಗೆ ನೀಡಿಲ್ಲಾ, ಜಾಮೀನು ರದ್ದುಪಡಿಸುವಂತೆ ನ್ಯಾಯಾಲಯದ ಮೊರೆ ಹೋಗಿ, ಅವರನ್ನು ಬಂಧಿಸಿ, ವಿಚಾರಣೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
*ಸದಸ್ಯತ್ವ ರದ್ದು ಪಡಿಸಿ ಹತ್ತರಷ್ಟು ದಂಡ ವಿಧಿಸಿ; ಪರಿಸರವಾದಿಗಳ ಆಗ್ರಹ*
ಈತ ಬಲಾಢ್ಯನಾಗಿದ್ದು, ಜನಪ್ರತಿನಿಧಿಯಾಗಿದ್ದಾನೆ, ಆತನ ಗ್ರಾಪಂ ಸದಸ್ಯತ್ವವನ್ನು ರದ್ದುಪಡಿಸಬೇಕು, ಜಾಮೀನು ರದ್ದು ಪಡಿಸಿ ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ಜೊತೆಗೆ ಈಗ ನಾಶ ಪಡಿಸಿರುವ ಗಿಡ-ಮರಗಳ ಹತ್ತರಷ್ಟು ದಂಡ ವಿಧಿಸಿ, ಆತನ ಜಮೀನಿನಲ್ಲಿ ಗಿಡಗಳನ್ನು ನೆಡಿಸಿ, ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಹಿರಿಯ ರೈತ ಮುಖಂಡ ಸಿ ಪುಟ್ಟಸ್ವಾಮಿ, ಮೈಸೂರಿನ ಪರಿಸರ ಬಳಗದ ಮುಖ್ಯಸ್ಥ ಪರಶುರಾಮೇಗೌಡ ಮತ್ತು ತಂಡ, ಪರಿಸರವಾಗಿ ಮುಕುಂದರಾಜ್, ರಾಮನಗರ ಜಿಲ್ಲೆಯ ರೈತ ಸಂಘದ ಪದಾಧಿಕಾರಿಗಳು, ಪರಿಸರವಾದಿಗಳು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು