Tel: 7676775624 | Mail: info@yellowandred.in

Language: EN KAN

    Follow us :


ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

Posted date: 15 Sep, 2023

Powered by:     Yellow and Red

ಹೆಚ್ಚು ಹಾಲು ಹಾಕುವ ಉತ್ಪಾದಕರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿದ ನಿರ್ದೇಶಕ

ಚನ್ನಪಟ್ಟಣ: ಸಂಘಕ್ಕೆ ನಾನೇ ಹೆಚ್ಚು ಹಾಲು ಹಾಕಬೇಕು, ಹೆಚ್ಚು ಲಾಭ ಮಾಡಬೇಕು ಎನ್ನುವ ಸ್ಪರ್ಧಾತ್ಮಕ ಯುಗದಲ್ಲಿ ಹತ್ತಾರು ರೈತರಿಗೆ ಪ್ರೋತ್ಸಾಹ ನೀಡಲು ಸ್ವಂತ ಹಣದಲ್ಲಿ ಬಹುಮಾನಗಳನ್ನು ಕೊಟ್ಟು ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಲು ಸಂಘದ ಹಾಲು ಉತ್ಪಾದಕ ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ಸಂಘದ ನಿರ್ದೇಶಕರು ಹಾಗೂ ಪ್ರಗತಿಪರ ರೈತರಾದ ಕೆ. ಚಿಕ್ಕರಾಜು ಅವರ ಕಾರ್ಯ ಶ್ಲಾಘನೀಯ ಎಂದು ಬಮೂಲ್ ನಿರ್ದೇಶಕರಾದ ಹೆಚ್.ಸಿ.ಜಯಮುತ್ತು ಅವರು ಪ್ರಶಂಸೆ ವ್ಯಕ್ತಪಡಿಸಿದರು.


ತಾಲೂಕಿನ ವಳಗೆರೆದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೨-೨೩ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಸಂಘದ ನಿರ್ದೇಶಕರಾದ ಕೆ. ಚಿಕ್ಕರಾಜು ಅವರು ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲನ್ನು ಸರಬರಾಜು ಮಾಡಿರುವ ೧೦ ಮಂದಿ ಹಾಲು ಉತ್ಪಾದಕ ರೈತರಿಗೆ ಬಹುಮಾತನಾಗಿ ವಿತರಿಸಿದ ಟಿವಿ. ಪ್ರಿಜ್ಡ್, ರಿಮೋಟ್ ಫ್ಯಾನ್,  ಮಿಕ್ಸಿ, ೩ ಬಲ್ಬಿನ ಯುಪಿಎಸ್ಸಿ, ಟೇಪಲ್ ಫ್ಯಾನ್, ಗ್ಯಾಸ್‌ಸ್ಟೌವ್, ೧೫, ೧೦, ೫ ಲೀ. ಹಾಲಿನ ಕ್ಯಾನ್‌ಗಳ ವಿತರಿಸಿ ಅವರು ಮಾತನಾಡಿದರು.


ಯಾವುದೇ ಕ್ಷೇತ್ರದಲ್ಲಿ ಸಹ ಸ್ಪರ್ಧಾತ್ಮಕತೆ ಇರುತ್ತದೆ. ಅದರಲ್ಲೂ ಹೈನುಗಾರಿಕೆ ರೈತರನ್ನು ಕೈ ಹಿಡಿದಿರುವ ನಿಟ್ಟಿನಲ್ಲಿ ಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯತ್ತ ಮುಖ ಮಾಡುತ್ತಿದ್ದು, ಎಲ್ಲರ ಆಲೋಚನೆ ನಾನು ಇಂದು ಎಷ್ಟು ಲೀ. ಹಾಲನ್ನು ಸಂಘಕ್ಕೆ ಹಾಕಬೇಕು, ಎಷ್ಟು ಹಣ ಬರುತ್ತದೆ, ಅದರಲ್ಲಿ ಲಾಭ ಎಷ್ಟು, ಆ ಲಾಭದಲ್ಲಿ ಏನು ವ್ಯವಹಾರ ಮಾಡೋಣ ಎಂಬುದು ಎಲ್ಲರ ತಲೆಯಲ್ಲಿ ಓಡುತ್ತಲೇ ಇರುತ್ತದೆ. ಜೊತೆಗೆ ಸಂಘಕ್ಕೆ ಲಾಭ ಇರಲಿ ಇಲ್ಲದಿರಲಿ ನನಗೆ ಲಾಭ ಬಂದರೆ ಸಾಕು ಎಂಬ ನಿಟ್ಟಿನಲ್ಲು ಯೋಚನೆ ಮಾಡುತ್ತಾರೆ. ಇಂತಹವರ ನಡುವೆ ಸಂಘದ ನಿರ್ದೇಶಕರಲ್ಲಿ ಒಬ್ಬರಾದ ಪ್ರಗತಿಪರ ರೈತ ಕೆ. ಚಿಕ್ಕರಾಜು ಅವರು ರಾಜ್ಯದಲ್ಲೇ ಮಾದರಿಯಾಗುವ ಕೆಲಸಕ್ಕೆ ಮುಂದಾಗಿದ್ದು, ಸಂಘಕ್ಕೆ ತಾವೇ ಅತೀ ಹೆಚ್ಚು ಹಾಲು ಸರಬರಾಜು ಮಾಡಿದ್ದರೂ ಸಹ ಸಂಗದ ಹಾಲು ಉತ್ಪಾದಕ ರೈತರಲ್ಲಿ ಪ್ರೋತ್ಸಾಹ ತುಂಬಿ ಅವರಲ್ಲೇ ಪೈಪೋಟಿಯಲ್ಲಿ ಹೆಚ್ಚಿನ ಹಾಲು ಸರಬರಾಜು ಮಾಡುವ ಮನೋಭಾವನೆ ಮೂಡಿಸಲು ತನ್ನ ಆಧಾಯದಲ್ಲಿ ಸುಮಾರು ೧.೭೫ ಲಕ್ಷ ರೂ. ಮೌಲ್ಯದ ಬಹುಮಾನಗಳನ್ನು ವಿತರಣೆ ಮಾಡುವ ಜೊತೆಗೆ ರೈತರನ್ನು ಸನ್ಮಾನಿಸುತ್ತಿರುವುದು ಸಂಘದಲ್ಲಿ ಉಳಿದ ಹಾಲು ಉತ್ಪಾದಕರ ರೈತರಿಗೆ ಹೆಚ್ಚಿನ ಉತ್ಸಾಹ ತುಂಬುವ ಕಾರ್ಯವಾಗಿದೆ. ಇಂತಹ ಕಾರ್ಯ ರಾಜ್ಯದಲ್ಲೇ ಮೊದಲು ಎಂದರೂ ತಪ್ಪಿಲ್ಲ ಎಂದು ತಿಳಿಸಿದರು.


ಸಂಘದಲ್ಲಿ ಕಳೆದ ವರ್ಷಕ್ಕಿಂದ ಈ ವರ್ಷ ಹಾಲಿನ ಸಂಗ್ರಹ ಕಡಿಮೆ ಆಗಿದೆ. ಸಂಘದ ಕಟ್ಟಡ ಹಳೆಯದಾಗಿದ್ದು ಹೊಸ ಕಟ್ಟಡ ನಿರ್ಮಾಣಕ್ಕೆ ಬೇರೆ ಕಡೆ ಸರ್ಕಾರಿ ಜಾಗ ಇದ್ದರೆ ಕಟ್ಟಡಕ್ಕೆ ಸಂಪೂರ್ಣ ಅನುದಾನವನ್ನು ಕೊಡಿಸುವಲ್ಲಿ ನಾನು ಜವಾಬ್ದಾರಿಯಾಗುತ್ತೇನೆ. ಉಳಿದಂತೆ ಸಂಘದಲ್ಲಿ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಹೆಚ್ಚಿನ ಲಾಭ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಿ ಎಂದು ಜಯಮುತ್ತು ಕರೆ ನೀಡಿದರು.


ಪಿಎಲ್‌ಡಿ. ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜುಅವರು ಮಾತನಾಡಿ, ಎಲ್ಲಾ ರಂಗದಲ್ಲಿ ಪೈಪೋಟಿ ಇದೆ. ಒಬ್ಬರು ಬೆಳೆಯುತ್ತಿದ್ದಾರೆ ಎಂದರೆ ಅವರ ಕಾಲೆಳೆಯುವವರು, ಅವರನ್ನು ತುಳಿಯುವರೇ ಹೆಚ್ಚು ಮಂದಿ ಇರುತ್ತಾರೆ. ಇನ್ನು ಕೆಲವರು ನಾನು ಬೆಳದರೆ ಸಾಕಪ್ಪ ಎನ್ನುತ್ತಾರೆ. ಇಂತಹವರ ನಡುವೆ ಗ್ರಾಮದ ಕೆ.ಚಿಕ್ಕರಾಜು ಅವರು ತಾವೊಬ್ಬ ಹಾಲು ಉತ್ಪಾದಕ ರೈತರಾಗಿ ಮತ್ತೊಬ್ಬ ರೈತರನ್ನು ಪ್ರೋತ್ಸಾಹಿ ತನ್ನ ಜೊತೆ ಅವರನ್ನು ಮುಂದೆ ನಡೆಸುವ ಪಣ ತೊಟ್ಟಿರುವುದು ಶ್ಲಾಘನೀಯ, ಅಲ್ಲದೆ ಅವರ ದುಡಿಮೆಯ ಲಾಭದಲ್ಲಿ ಕೊಂಚ ಹಣವನ್ನು ಸಮಾಜ ಸೇವೆಗೆ ಮುಡಿಪಾಗಿಡುತ್ತಿದ್ದು ಗ್ರಾಮದಲ್ಲಿ ಅಪ್ಪುಪಾರ್ಕ್ ಮತ್ತು ಅಂಬಿ ತಂಗು ತಾಣ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ತನ್ನೂರಿಗೆ ಏನಾದರೂ ಮಾಡಬೇಕೆನ್ನುವ ಅವರ ಸೇವೆ ಮತ್ತೊಬ್ಬರಿಗೆ ಮಾದರಿ ಎಂದು ಬಣ್ಣಿಸಿದರು.


ಹಾಲು ಉತ್ಪಾದಕರಿಗೆ ಬಹುಮಾನ ವಿತರಿಸಿದ ಕೆ. ಚಿಕ್ಕರಾಜು ಮಾತನಾಡಿ, ಸಮಾಜ ನನಗೆ ಏನು ಮಾಡಿದೆ ಎಂಬುದಕ್ಕಿಂತ ನಾನು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇನೆ ಎಂದು ಪ್ರಶ್ನೆ ಮಾಡಿಕೊಂಡಾಗ ನಮ್ಮ ಸುತ್ತಲಿನವರು ಸಹ ನೆಮ್ಮದಿಯಿಂದ ಜೀವನ ಮಾಡಬಹುದು. ಈ ನಿಟ್ಟಿನಲ್ಲಿ ನನ್ನ ದುಡಿಮೆಯ ಲಾಭದಲ್ಲಿ ಶೇ. ೨೦ ರಷ್ಟು ಲಾಭದ ಹಣವನ್ನು ಸಮಾಜ ಸೇವೆಗೆ ಮುಡಿಪಾಗಿಡುತ್ತಿದ್ದೇನೆ. ಸಂಘದ ಹಾಲು ಉತ್ಪಾದಕರ ರೈತರು ಪ್ರತಿನಿತ್ಯ ಕಷ್ಟಪಡುತ್ತಾರೆ ಆದರೆ ಸೂಕ್ತ ಪ್ರತಿಫಲ ಸಿಗದಾಗಿದೆ. ಕಾರಣ ರೈತರು ಹಾಲಿನ ಉತ್ಪಾದನೆಯಲ್ಲಿ ವೈಜ್ಞಾನಿಕ ಮೇವು ಪದ್ದತಿಯನ್ನು ಅಳವಡಿಸಿಕೊಳ್ಳದೆ ಹಳೆ ಪದ್ದತಿಯಲ್ಲೇ ಪಶು ಆಹಾರ, ಚಕ್ಕೆ ಬೂಸ, ಹಿಂಡಿಯನ್ನೇ ನೀಡುತ್ತಿದ್ದು ಹಾಲಿನ ಗುಣಮಟ್ಟ ಕಡಿಮೆ ಬರುತ್ತದೆ ಇದರಿಂದ ಲಾಭವೂ ಇಲ್ಲ. ಹೆಚ್ಚು ಹಣವೂ ಇಲ್ಲದಾಗಿದೆ. ಈ ನಿಟ್ಟಿನಲ್ಲಿ ನಾನು ಬಳಕೆ ಮಾಡಿಕೊಂಡಿರುವ ಹೈಡ್ರೋಫೋನಿಕ್ ಮೇವು ಪದ್ದತಿಯನ್ನು ಪ್ರತಿಯೊಬ್ಬರು ಅನುಸರಿಸಿದರೆ ೫೦ ರೂ ವೆಚ್ಚದಲ್ಲಿ ೪೦೦ ರೂ ಮೇವನ್ನು ಉತ್ಪತ್ತಿ ಮಾಡಿ ಗುಣಮಟ್ಟದ ಹಾಲನ್ನು ಉತ್ಪಾದನೆ ಮಾಡಬಹುದು. ಇದರಿಂದ ಜಾನುವಾರುಗಳಿಗೂ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಜೊತೆಗೆ ಹೆಚ್ಚಿನ ಹಾಲು ಇಳುವರಿ ಆಗುತ್ತದೆ ಇದರಿಂದ ರೈತರಿಗೆ ಶೇ. ೪೦ ರಷ್ಟು ಖರ್ಚು ಉಳಿಯುತ್ತದೆ ಎಂದು ಸಲಹೆ ನೀಡಿದರು.


ಸಂಘದ ಅಧ್ಯಕ್ಷರಾದ ವಿ.ಎನ್. ಮಹದೇವು ಅವರು ಮಾತನಾಡಿ, ಸಂಘದ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈಜೋಡಿಸುವ ಅಗತ್ಯ ಇದ್ದು, ಇದಕ್ಕಾಗಿ ಸಂಘಕ್ಕೆ ಯಾರೂ ಹಣ ನೀಡುವ ಅಗತ್ಯ ಇಲ್ಲ. ಸಂಘಕ್ಕೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಅದರ ಲಾಭಾಂಶದಲ್ಲೇ ಸಂಘದ ಅಭಿವೃದ್ಧಿ ಆಗುತ್ತದೆ. ಈ ನಿಟ್ಟಿನಲ್ಲಿ ರೈತರು ತಾವು ಆರ್ಥಿವಾಗಿ ಸದೃಡರಾಗುವ ಜೊತೆಗೆ ಸಂಘವು ಆರ್ಥಿಕ ಲಾಭ ಮಾಡಲು ಕೈ ಜೋಡಿಸಬೇಕು ಎಂದರು.


ಸಂದರ್ಭದಲ್ಲಿ ಬಮೂಲ್ ಶಿಬಿರದ ಉಪವ್ಯವಸ್ಥಾಪಕ ಹೇಮಂತ್ ಮಾತನಾಡಿ, ಕೆಎಂಎಫ್‌ನಿಂದ ರೈತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ನೀಡಲು ಮುಂದಾಗಿದ್ದು ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಮಾಡಿಸಲು ಮುಂದಾಗಿ. ಕೆಎಂಎಫ್‌ನಿಂದ ಬಮೂಲ್ ಶಿಬಿರ ಕಚೇರಿಗೆ ಆದೇಶ ಬಂದ ಕೂಡಲೆ ಸಂಘದ ಅಧಿಕಾರಿಗಳಿಂದ ಮಾಹಿತಿ ಪಡೆದು ಸಾಲ ಸೌಲಭ್ಯ ಕೊಡಿಸುತ್ತೇವೆ ಎಂದು ತಿಳಿಸಿದರು.


ಸಂಘದ ಕಾರ್ಯದರ್ಶಿ ಗೋವಿಂದ ಅವರು ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿಸಿ ಲಾಭಾಂಶ ವಿಲೇವಾರಿ ಮಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಜಯಲಕ್ಷ್ಮಮ್ಮ,. ನಿರ್ದೇಶಕರುಗಳಾದ ವೆಂಕಟೇಶ್, ಲಕ್ಷಣ, ಶಿವಣ್ಣ, ವೆಂಕಟೇಶ್, ಎಸ್.ಸಿದ್ದರಾಜು, ಆರ್. ಶಂಕರ್, ಬಿ.ಎಸ್. ಸವಿತ ಹಾಗೂ ವಿಸ್ತರಣಾಧಿಕಾರಿ ರಾಜೇಶ್ ಇದ್ದರು.


ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಂಘಕ್ಕೆ ಅತಿ ಕಡಿಮೆ ಹಾಲು ಸರಬರಾಜು ಮಾಡಿರುವ ಉತ್ಪಾದಕ ರೈತರಿಗೆ ಮೂರು ಕುಕ್ಕರ್‌ಗಳ ವಿಶೇಷ ಬಹುಮಾನ ನೀಡುವ ಮೂಲಕ ಅವರು ಮುಂದಿನ ದಿನದಲ್ಲಿ ಸಂಘಕ್ಕೆ ಹೆಚ್ಚಿನ ಹಾಲು ಪೂರೈಕೆ ಮಾಡುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑