ಅಮೇರಿಕಾದ ಖ್ಯಾತ ವೈದ್ಯ ಡಾ ಹೆಚ್ ಕೆ ಮರಿಯಪ್ಪ ರವರಿಗೆ ಗುರುವಾರ ಅಭಿನಂದನೆ

ಚನ್ನಪಟ್ಟಣ: ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಕೆ ವೀರಣ್ಣಗೌಡ ರ ಸಹೋದರ ಡಾ.ಎಚ್.ಕೆ. ಮರಿಯಪ್ಪ ಅಭಿನಂದನಾ ಸಮಿತಿಯಿಂದ ಗುರುವಾರ ತಾಲೂಕಿನ ಶಿಶಿರ ಹೋಂಸ್ಟೇನಲ್ಲಿ 'ಹೊನ್ನಕಳಸ' ಅಭಿನಂದನಾ ಗ್ರಂಥ ಹಾಗೂ 'ರೆಮಿನಿಸೆನ್ಸಸ್ ಆಫ್ ಲೈಫ್, ಮೆಮೋರಿಸ್ ಆಫ್ ಎಚ್.ಕೆ.ವೀರಣ್ಣಗೌಡ' ಪುಸ್ತಕಗಳ ಲೋಕಾರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಎಲ್. ಮಾದಯ್ಯ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಶಿಶಿರ ಹೋಂಸ್ಟೇನಲ್ಲಿ ಗುರುವಾರ ಸಂಜೆ ೪ಗಂಟೆಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಚ್.ಕೆ.ವೀರಣ್ಣಗೌಡ ಹಾಗೂ ಎಚ್.ಕೆ.ಮರಿಯಪ್ಪ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ವಿದೇಶದಲ್ಲಿ ಸುಮಾರು ೬೦ ವರ್ಷ ವೈದ್ಯ ವೃತ್ತಿಯಲ್ಲಿ ತೊಡಗಿದ್ದ ಎಚ್.ಕೆ.ಮರಿಯಪ್ಪ ತನ್ನ ತವರೂರಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ನಿಟ್ಟಿನಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದಾರೆ. ಅವರ ಸೇವೆ ಹಾಗೂ ಕೊಡುಗೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮರಿಯಪ್ಪ ಅವರ ಹಿತೈಷಿಗಳು ಸೇರಿ ಅಭಿನಂದನಾ ಸಮಿತಿ ರಚಿಸಿ ಅಭಿನಂದನಾ ಗ್ರಂಥವನ್ನು ಹೊರತಂದಿದ್ದೇವೆ ಎಂದು ತಿಳಿಸಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಹೊನ್ನಕಳಶ ಅಭಿನಂದನಾ ಗ್ರಂಥವನ್ನು ವಿಶ್ರಾಂತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಲೋಕಾರ್ಪಣೆ ಮಾಡಲಿದ್ದಾರೆ. ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ.ಕೃಷ್ಣ ರೆಮಿನಿಸೆನ್ಸಸ್ ಆಫ್ ಲೈಫ್ ಕೃತಿ ಲೋಕಾರ್ಪಣೆಗೊಳಿಸಲಿದ್ದಾರೆ. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ಅಭಿನಂದಾನ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ.ಎಚ್.ಕೆ.ಮರಿಯಪ್ಪ ಅವರನ್ನು ಅಭಿನಂದಿಸಲಾಗುವುದು ಎಂದು ಮಾಹಿತಿ ನೀಡಿದರು.
ತಾಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಜನಿಸಿದ ಎಚ್.ಕೆ.ಮರಿಯಪ್ಪ ಹಿರಿಯ ರಾಜಕೀಯ ಮುತ್ಸದ್ಧಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಕೆ.ವೀರಣ್ಣಗೌಡ ಅವರ ಕಿರಿಯ ಸಹೋದರ. ಕಳೆದ ಅರವತ್ತು ವರ್ಷಗಳಿಂದ ಅಮೇರಿಕದಲ್ಲಿ ನೆಲೆಸಿ ಪ್ರಸಿದ್ಧ ವೈದ್ಯರೆಂದು ಖ್ಯಾತಿ ಪಡೆದಿದ್ದಾರೆ. ಆದರೆ, ತಮ್ಮ ಹುಟ್ಟೂರಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಚನ್ನಪಟ್ಟಣ ಹಾಗೂ ಮಂಡ್ಯದಲ್ಲಿ ತಮ್ಮ ಪತ್ನಿ ಡಾ. ಶಾಂತಾ ಮರಿಯಪ್ಪ ಹೆಸರಿನಲ್ಲಿ ವಿದ್ಯಾಸಂಸ್ಥೆಗಳನ್ನು ತೆರೆದು ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯೆ ಹಾಗೂ ಸಾಕಷ್ಟು ಮಂದಿಗೆ ಉದ್ಯೋಗ ದೊರಕಿಸುವ ಪ್ರಯತ್ನ ಮಾಡಿದ್ದಾರೆ. ಇದಲ್ಲದೇ ಹಲವಾರು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಅಭಿನಂದಾನ ಗ್ರಂಥದ ಸಂಪಾದಕ ಡಾ.ಕೂಡ್ಲೂರು ವೆಂಕಟಪ್ಪ ಮಾತನಾಡಿ, ಮರಿಯಪ್ಪ ಅವರ ಸೇವೆ ಹಾಗೂ ಕೊಡುಗೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಅಭಿನಂದನಾ ಗ್ರಂಥವನ್ನು ರಚಿಸಲಾಗಿದೆ. ಮರಿಯಪ್ಪ ಅವರೊಂದಿಗೆ ಸೇವೆ ಸಲ್ಲಿಸಿದವರು, ಅವರ ಒಡನಾಡಿಗಳು ಗ್ರಂಥಕ್ಕೆ ಲೇಖಗಳನ್ನು ಬರೆದುಕೊಟ್ಟಿದ್ದಾರೆ. ಸುಮಾರು ೨೨ ಆಂಗ್ಲ ಲೇಖನಗಳು, ೭೮ಕ್ಕೂ ಹೆಚ್ಚು ಕನ್ನಡ ಲೇಖನಗಳು ಹಾಗೂ ಕವಿತೆಗಳನ್ನು ಗ್ರಂಥ ಒಳಗೊಂಡಿದ್ದು, ಸುಮಾರು ೩೮೦ ಪುಟಗಳ ಬೃಹತ್ ಗ್ರಂಥವನ್ನು ಹೊರತರಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಂಪೇಗೌಡ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮರಿಮಲ್ಲಯ್ಯ, ತಿಮ್ಮಸಂದ್ರ ಸುರೇಶ್, ಪಣ್ಣೆದೊಡ್ಡಿ ಆನಂದ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು