ರೈತರ ಮೇಲೆ ನಂಬಿಕೆ ಇಟ್ಟು ಬ್ಯಾಂಕುಗಳು ಸಾಲ ನೀಡಬೇಕು ಹೆಚ್ ಸಿ ಜಯಮುತ್ತು

ಚನ್ನಪಟ್ಟಣ: ರೈತರು ಯಾರಿಗೂ ಮೋಸ ಮಾಡುವುದಿಲ್ಲ, ಅವರ ಬದುಕನ್ನು ಅನ್ನದಾನಕ್ಕಾಗಿಯೇ ಮೀಸಲಿಟ್ಟಿದ್ದಾರೆ, ಇಂತಹ ಪ್ರಾಮಾಣಿಕತೆ ಇರುವ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡಬೇಕು, ಅವರು ಸಾಲ ಮರುಪಾವತಿ ಮಾಡುವಲ್ಲಿ ಒಂದೆರಡು ದಿನ ತಡವಾಗಬಹುದೇ ವಿನಹ ಮೋಸ ಮಾಡುವ ಯಾವುದೇ ದುರುದ್ದೇಶಗಳಿರುವುದಿಲ್ಲ ಎಂದು ಬಮೂಲ್ ನಿರ್ದೇಶಕ ಹೆಚ್ ಸಿ ಜಯಮುತ್ತು ತಿಳಿಸಿದರು. ಅವರು ತಾಲ್ಲೂಕಿನ ನಾಗಾಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ಹಾಗೂ ೨೦೨೨-೨೩ ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕಿನಲ್ಲಿ ಕೆಲವೇ ಸಂಘಗಳು ನಿಷ್ಕ್ರಿಯವಾಗಿವೆ. ಬಹುತೇಕ ಸಂಘಗಳು ಉನ್ನತ ಹಾಗೂ ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿವೆ. ಪ್ರತಿಯೊಬ್ಬ ಹಾಲು ಉತ್ಪಾದಕರು ಪ್ರಶ್ನೆ ಮಾಡಿದಾಗ ಮಾತ್ರ ಸಂಘಗಳಲ್ಲಿ ಅಕ್ರಮಗಳು ನಿಲ್ಲುತ್ತವೆ. ಬಹುತೇಕ ಸಂಘಗಳು ಈಗಾಗಲೇ ಸ್ವಂತ ಕಟ್ಟಡಗಳನ್ನು ಹೊಂದಿವೆ, ರಾಜ್ಯದಲ್ಲೇ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ತಾಲ್ಲೂಕು ಎಂದು ಪರಿಗಣಿತವಾಗಿದ್ದು, ರೈತರಿಗೆ ಹೆಚ್ಚಿನ ಅನುಕೂಲ ಮಾಡುವ ನಿಟ್ಟಿನಲ್ಲಿ ಬಮೂಲ್ ಹೆಚ್ಚಿನ ಶ್ರಮ ವಹಿಸುತ್ತದೆ ಎಂದರು.
ಇಡೀ ಒಕ್ಕೂಟದ ವ್ಯವಸ್ಥೆಯಲ್ಲಿ ಇದೇ ಪ್ರಥಮ ಬಾರಿಗೆ ಸಂಘದ ನಿವೇಶನ ಕೊಳ್ಳಲು ಐದು ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ, ಕಟ್ಟಡ ನಿರ್ಮಾಣಕ್ಕೆ ಎಲ್ಲಾ ಸಂಘಟನೆಗಳಿಂದ ಹನ್ನೊಂದು ಲಕ್ಷ ರೂಪಾಯಿ ನೀಡಲಾಗುತ್ತದೆ.ನಾಗಾಪುರ ಹಾಲು ಉತ್ಪಾದಕರ ಸಹಕಾರ ಸಂಘವು ಮಾದರಿ ಸಹಕಾರ ಸಂಘವಾಗಬೇಕಾಗಿದೆ, ಇದಕ್ಕೆ ಗ್ರಾಮದ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿ ಹೇಳಿದರು. ಹೆಚ್ಚು ಹಾಲು ಉತ್ಪಾದನೆ ಮಾಡುವ ರೈತರಿಗೆ ಇತ್ತೀಚೆಗೆ ಸಂಘಗಳು ಗುರುತಿಸಿ, ಪ್ರೋತ್ಸಾಹಿಸುವ ಸಲುವಾಗಿ ಅವರಿಗೆ ಬಹುಮಾನಗಳನ್ನು ನೀಡಿ, ಸನ್ಮಾನಿಸುವ ಕೆಲಸಗಳನ್ನು ಮಾಡುತ್ತಿದ್ದು ಇದು ಒಳ್ಳೆಯ ಬೆಳವಣಿಗೆಯಾಗಿದೆ, ಇದು ಮಿಕ್ಕುಳಿದ ರೈತರಿಗೆ ಉತ್ತೇಜನ ನೀಡುವಂತದ್ದಾಗಿದೆ, ಇನ್ನೂ ಹೆಚ್ಚಿನ ರೈತರು ಹೆಚ್ಚು ಹಾಲು ಉತ್ಪಾದನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಕೋಡಂಬಹಳ್ಳಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಶ್ವಾಂಭರ ಮಾತನಾಡಿ, ನೀವು ಹಾಲು ಉತ್ಪಾದನೆ ಎಷ್ಟು ಮಾಡುತ್ತೀರಿ ಎಂಬ ಆದಾಯದ ಮೇಲೆ ನಾವು ನಿಮಗೆ ಸಾಲಸೌಲಭ್ಯ ನೀಡುತ್ತೇವೆ. ಜಮೀನು ಅಡಮಾನ ಮಾಡಿದರೆ ಹೆಚ್ಚಿನ ಸಾಲ ನೀಡಲಾಗುತ್ತದೆ, ಕೇವಲ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಜೊತೆಗೆ ರಾಸುಗಳಿಗೆ ವಿವಿಧ ರೀತಿಯ ವಿಮೆ ಗಳನ್ನು ಮಾಡಿಸಲಾಗುತ್ತದೆ, ರಾಸುಗಳು ಮತ್ತು ಮಾಲೀಕರು ವಿಮೆ ಮಾಡಿಕೊಂಡರೆ ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಳ್ಳಬೇಕು. ಬ್ಯಾಂಕುಗಳಿಗೆ ಸರ್ಕಾರಿ ಹಣ ಬರುವುದಿಲ್ಲ, ಉಳ್ಳವರು ಹಣ ಡಿಪಾಸಿಟ್ ಮಾಡಿದರೆ ಆ ಹಣವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ, ನೀವು ಸದೃಢರಾಗಿ ಹಣ ಡಿಪಾಸಿಟ್ ಮಾಡುವ ಮೂಲಕ ಇನ್ನಷ್ಟು ರೈತರಿಗೆ ಸಹಾಯ ಮಾಡಬಹುದು ಎಂದು ಸಲಹೆ ನೀಡಿದರು.
ಬಮೂಲ್ ನ ವಿಸ್ತರಣಾಧಿಕಾರಿ ರಾಜು ರವರು ಸರ್ವಸದಸ್ಯರ ಸಭೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರಿಕೆ ಓದಿ ಅಂಗೀಕರಿಸುವುದರ ಜೊತೆಗೆ ಲೆಕ್ಕ ಪರಿಶೋಧನಾ ವರದಿ, ನಿವ್ವಳ ಲಾಭ ವಿಲೇವಾರಿ, ಅಂದಾಜು ಬಡ್ಜೆಟ್, ಬೈಲಾ ತಿದ್ದುಪಡಿ ಯಂತಹ ಮಹತ್ವದ ವರದಿಗಳನ್ನು ಓದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ನಿರ್ದೇಶಕರುಗಳಾದ ಸೋಮಲಾ, ಸಿದ್ದೇಗೌಡ, ನರಸೇಗೌಡ, ಸಿದ್ದರಾಜು, ಜಯರಾಮು, ಅನಂತ, ಕೃಷ್ಣ, ದೇವರಾಜು, ಮುಖಂಡರುಗಳಾದ ನಂದೀಶ್, ಮಹೇಶ್ ಮೆಂಗಹಳ್ಳಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು