೨೯ರಂದು ಕರ್ನಾಟಕ ಬಂದ್, ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಗ್ಗೂಡಿ ಚನ್ನಪಟ್ಟಣ ಬಂದ್ ಗೆ ಕರೆ

ಚನ್ನಪಟ್ಟಣ: ಮಂಗಳವಾರ ಅಥವಾ ಗುರುವಾರದಂದು ಚನ್ನಪಟ್ಟಣ ಬಂದ್ ಗೆ ಕರೆ ನೀಡಲು ಉದ್ದೇಶಿಸಲಾಗಿದ್ದು, ೨೯ನೇ ತಾರೀಖಿನ ಶುಕ್ರವಾರ ಕರ್ನಾಟಕ ಬಂದ್ ಆಚರಿಸಲು ಒಕ್ಕೊರಲಿನಿಂದ ತೀರ್ಮಾನಿಸಿರುವುದರಿಂದ ನಾವೂ ಸಹ ಅಂದೇ ಚನ್ನಪಟ್ಟಣ ಬಂದ್ ಮಾಡುವ ಮೂಲಕ ಕಾವೇರಿ ಹೋರಾಟಕ್ಕೆ ಬೆಂಬಲ ನೀಡೋಣಾ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.
ಮಾಜಿ ಶಾಸಕ ಅಶ್ವಥ್ ಮಾತನಾಡಿ ಕಾವೇರಿ ನಮ್ಮ ಹಕ್ಕು, ಯಾವ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ, ಕಾವೇರಿ ಮಂಡ್ಯಕ್ಕಷ್ಟೇ ಸೀಮಿತವಲ್ಲಾ, ಬೆಂಗಳೂರಿನ ನಿವಾಸಿಗಳು ಹೆಚ್ಚು ಆಸ್ಥೆ ವಹಿಸಿ ಬೀದಿಗಿಳಿಯಬೇಕು. ಚನ್ನಪಟ್ಟಣ ಸಹ ಚಳವಳಿಗೆ ಉತ್ತಮ ನಗರವಾಗಿದೆ, ಈ ಪ್ರತಿಭಟನೆಯಲ್ಲಿ ಪಕ್ಷಾತೀತವಾಗಿ, ಧರ್ಮಾತೀತವಾಗಿ, ಒಗ್ಗೂಡಿ ಪ್ರತಿಭಟನೆ ಮಾಡಬೇಕು. ಪ್ರತಿ ಹಂತದಲ್ಲೂ ಶಾಂತಿಯನ್ನು ಕಾಪಾಡಿಕೊಳ್ಳಬೇಕು, ಎಲ್ಲಾ ರೀತಿಯ ವ್ಯಾಪಾರಸ್ಥರು ಮುಕ್ತ ಮನಸ್ಸಿನಿಂದ ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ನೀಡಬೇಕೆಂದರು.
ಚನ್ನಪಟ್ಟಣ ನಗರ ಅಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲೂ ಗ್ರಾಮದ ಮುಖಂಡರ ಜೊತೆಗೂಡಿ ಪ್ರತಿಭಟನೆ ನಡೆಸಬೇಕು. ಚನ್ನಪಟ್ಟಣದಲ್ಲಿ ನಾಳೆಯೇ ಪ್ರತಿಭಟನೆ ಮಾಡಿದರೆ ಉತ್ತಮವಾಗಿತ್ತು. ಆದರೆ ಶುಕ್ರವಾರ ಕರ್ನಾಟಕ ಬಂದ್ ಗೆ ಕರೆ ನೀಡಿರುವುದರಿಂದ ಅದೇ ದಿನ ನಾವೂ ಸಹ ಬಂದ್ ಮಾಡೋಣಾ, ಇದಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ಹಿರಿಯ ಪತ್ರಕರ್ತ ಸು ತ ರಾಮೇಗೌಡರು ಮಾತನಾಡಿ ಸಂಕಷ್ಟ ಸೂತ್ರ ಸಮೇತ ಹಲವಾರು ನಿರ್ಣಯಗಳನ್ನು ತೀರ್ಮಾನಿಸಿ, ಅದರಂತೆ ಒಗ್ಗೂಡಿ, ಎಲ್ಲರ ಬೆಂಬಲ ಪಡೆದು ಎರಡು ದಿನಗಳ ಕಾಲ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುವ ಮೂಲಕ ಪ್ರತಿಭಟನೆ ಮತ್ತು ಬಂದ್ ನ್ನು ಯಶಸ್ವಿಯಾಗಿ ಮಾಡೋಣಾ ಎಂದು ಕರೆ ನೀಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಧರಣೀಶ್ ರಾಂಪುರ ಮಾತನಾಡಿ, ನಾವು ಈಗಾಗಲೇ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಶುಕ್ರವಾರವೂ ಸಹ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸುತ್ತೇವೆ ಎಂದರು, ಸಭೆ ಸೇರಿದ್ದ ಹಲವಾರು ಸಂಘಸಂಸ್ಥೆಗಳ, ರಾಜಕೀಯ ಪಕ್ಷಗಳ ಮುಖಂಡರು ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು.
ಈ ಸಭೆಯಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲವೇಗೌಡ, ಕಕಜವೇ ಜಿಲ್ಲಾಧ್ಯಕ್ಷ ಯೋಗೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲ್ಲೂಕು ಅಧ್ಯಕ್ಷ ಜಯರಾಮು, ರಾಜ್ ಕಲಾ ಬಳಗದ ಪದಾಧಿಕಾರಿಗಳು, ಕೆಲ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಜೈನ್ ಸಂಘದ ಪದಾಧಿಕಾರಿಗಳು, ಕರವೇ ಸತ್ಯನಾರಾಯಣ ಮತ್ತು ಪದಾಧಿಕಾರಿಗಳು, ಮುಸ್ಲಿಂ ಮುಖಂಡರುಗಳು, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು