ಸಂಸ್ಕೃತಿ ಎನ್ನುವುದೇ ನಡವಳಿಕೆ ಡಾ ಬಿ ಟಿ ನೇತ್ರಾವತಿಗೌಡ

ಚನ್ನಪಟ್ಟಣ: ಸಂಸ್ಕೃತಿ ಎಂಬುದೇ ನಡವಳಿಕೆ, ಆ ನಡವಳಿಕೆ ಎಂಬುದು ನಮ್ಮ ಮನೆಯಲ್ಲೇ ಆರಂಭವಾಗಬೇಕು, ನಾವು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೇಗೆ ವರ್ತಿಸಬೇಕು, ಯಾರ ಬಳಿ ಹೇಗೆ ಮಾತನಾಡಬೇಕು, ಅಣಕಿಸುವುದು, ಕಟು ನುಡಿಗಳನ್ನಾಡುವುದು, ಕದಿಯುವುದು ಎಂಬುದನ್ನು ತಮಾಷೆಗಾಗಿಯೂ ಹೇಳಿಕೊಡಬಾರದು ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ ಬಿ ಟಿ ನೇತ್ರಾವತಿಗೌಡ ಅಭಿಪ್ರಾಯಪಟ್ಟರು. ಅವರು ನಗರದ ಶತಮಾನೋತ್ಸವ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಅಥವಾ ವಿದ್ಯಾರ್ಥಿಗಳಿಗೆ ಬುದ್ದಿ ಹೇಳುವ ಮೊದಲು ನಾವು ಬುದ್ದಿವಂತರಾಗಿ ವರ್ತಿಸಬೇಕು, ನಾನು ತಪ್ಪು ಮಾಡಿ, ನೀನು ತಪ್ಪು ಮಾಡಬೇಡ ಎನ್ನುವುದು ಸರಿಯಲ್ಲಾ, ಅವಿಭಕ್ತ ಕುಟುಂಬ ಎನ್ನುವುದು ಮರೆಯಾಗುತ್ತಿದ್ದು, ಸಂಬಂಧಗಳು ಹಾಳಾಗುತ್ತಿವೆ, ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆಂದು ಮಕ್ಕಳಿಗೆ ತಿಳಿಸಬೇಕು, ಹಾಗೆ ತಿಳಿಸಬೇಕಾದರೆ ನಾವು ಮೊದಲು ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂದರು. ಹದ್ದು ಮತ್ತು ಕೋಳಿ ಮರಿಗಳು ಸೇರಿದಂತೆ ಹಲವಾರು ಜಾನಪದ ಮತ್ತು ವಾಸ್ತವಿಕ ಕಥೆಗಳ ಉದಾಹರಣೆ ಹೇಳುವ ಮೂಲಕ ಮಹಿಳೆಯರಿಗೆ ತಿಳುವಳಿಕೆ ಮೂಡಿಸಿದರು.
ನಗರ ಆರಕ್ಷಕ ವೃತ್ತ ನಿರೀಕ್ಷಕಿ ಶೋಭಾ ವಿ ಮಾತನಾಡಿ ಪ್ರತಿಯೊಬ್ಬರಿಗೂ ಜ್ಞಾನ ಎಂಬುವುದು ಬಹಳ ಮುಖ್ಯ. ಪ್ರತಿ ದಿನವೂ ಕುಟುಂಬದ ಒತ್ತಡದಲ್ಲಿ ಸಿಲುಕಿಸುವ ಗೃಹಿಣಿಯರಿಗೆ ಹೆಚ್ಚು ಒತ್ತಡವಾಗುತ್ತಿದೆ. ಇಂತಹ ಮಹಿಳೆರಿಗೆ ಧರ್ಮಸ್ಥಳ ಸಂಘದವರು ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡು, ಮಹಿಳೆಯರಿಗಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಉತ್ತಮ ಗುಣಗಳಿರುತ್ತವೆ. ಆ ಗುಣಗಳನ್ನು ಅಳವಡಿಸಿಕೊಂಡು ಬೆಳವಣಿಗೆ ಹೊಂದಬೇಕು ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಆರ್ಟ್ ಆಫ್ ಲಿವಿಂಗ್ ನ ಸಂಯೋಜಕಿಯಾದ ರಾಧಿಕಾ ರವಿಕುಮಾರ್ ಮಾತನಾಡಿ ಸಮಾಜದಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರು, ಯಾರೂ ಮೇಲಲ್ಲಾ, ಕೀಳಲ್ಲಾ. ಆದರೂ ಸಹ ಹೆಣ್ಣಿಗೆ ನಿರ್ಬಂಧಗಳು ಹೆಚ್ಚಿವೆ. ಅದು ಗಂಡಸರಿಗೂ ಅನ್ವಯವಾಗಬೇಕು. ಅದಾಗದಿರುವುದರಿಂದಲೇ ಕೆಲ ಸ್ಥಾನಗಳಲ್ಲಿ ಮೇಲಕ್ಕೇರುವ ಸ್ತ್ರೀಯರಿಗೆ ಕೀಳುಮಟ್ಟದಲ್ಲಿ ಮಾತನಾಡುವಾಗ ಪ್ರತಿಯೊಬ್ಬ ಮಹಿಳೆಗೂ ಸಹಜವಾಗಿ ಸಿಟ್ಟು ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ಬೇರೆಯವರಿಂದ ಹಣ ಆಸ್ತಿ ಪಡೆಯಬಾರದು, ಒಳ್ಳೆಯ ಸಂಸ್ಕೃತಿಯನ್ನು ಪಡೆಯಬೇಕು. ಅದನ್ನೇ ನಾವು ಸಹ ಹಂಚಬೇಕು ಎಂದು ಸಭೆಯಲ್ಲಿ ನೆರೆದಿದ್ದ ಸಂಘದ ಮಹಿಳೆಯರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ, ಡಾ ಅನಿತಾ, ಸಂಘದ ಜಿಲ್ಲಾ ನಿರ್ದೇಶಕ ಜಯಕರಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಂದ್ರು ಲ್ಯಾಬ್ ನ ಚಂದ್ರೇಗೌಡ, ಸಂಘದ ತಾಲ್ಲೂಕು ನಿರ್ದೇಶಕಿ ರೇಷ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಚ ಸ್ಪರ್ಧೆ, ಕರಕುಶಲ ಉತ್ಪನ್ನಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು