Tel: 7676775624 | Mail: info@yellowandred.in

Language: EN KAN

    Follow us :


ತಮಿಳುನಾಡಿಗೆ ಕಾವೇರಿ ನೀರು, ವಿವಿಧ ಸಂಘಟನೆಗಳಿಂದ ಯಶಸ್ವಿಯಾದ ಬಂದ್

Posted date: 29 Sep, 2023

Powered by:     Yellow and Red

ತಮಿಳುನಾಡಿಗೆ ಕಾವೇರಿ ನೀರು, ವಿವಿಧ ಸಂಘಟನೆಗಳಿಂದ ಯಶಸ್ವಿಯಾದ ಬಂದ್

ಚನ್ನಪಟ್ಟಣ: ನಾಡಿನ ಜನತೆಗೆ ಕುಡಿಯುವ ನೀರಿಗೂ ತತ್ವಾರವಾಗಿರುವಾಗ, ವ್ಯವಸಾಯಕ್ಕೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ತಾಲ್ಲೂಕಿನ ರೈತ ಸಂಘಟನೆಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ ೧೩೦ಕ್ಕೂ ಹೆಚ್ಚು ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಚನ್ನಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು.


ನಗರದಲ್ಲಿ ವ್ಯಾಪಾರಿಗಳು ಹಾಗೂ ನಾಗರೀಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಬಂದ್ ಹಿನ್ನೆಲೆಯಲ್ಲಿ ಬೊಂಬೆನಾಡಿನ ಪೇಟೆ ಬೀದಿ, ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ಬಹುತೇಕ ಎಲ್ಲಾ ಬಡಾವಣೆಗಳಲ್ಲಿರುವ ಅಂಗಡಿಗಳು, ಹೋಟೆಲ್ ಗಳು ಬಾಗಿಲು ಹಾಕುವ ಮೂಲಕ ಶುಕ್ರವಾರ ಸಂಪೂರ್ಣ ಸ್ತಬ್ಧಗೊಂಡಿತ್ತು.


ವಿವಿಧ ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ತಮ್ಮ ವಹಿವಾಟನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದರು. ಮುಂಜಾನೆ ಕೆಲ ಹೊತ್ತು ದಿನಸಿ ಅಂಗಡಿಗಳು ವ್ಯಾಪಾರ ನಡೆಸಿದ್ದು ಬಿಟ್ಟಿರೆ ಮಿಕ್ಕಂತೆ ಎಲ್ಲ ಅಂಗಡಿಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು. 


ತುರ್ತು ಸೇವೆಯ ಅಗತ್ಯತೆಯ ಹಿನ್ನೆಲೆಯಲ್ಲಿ ಮೆಡಿಕಲ್ ಸ್ಟೋರ್‌ಗಳು ಹಾಗೂ ಆಸ್ಪತ್ರೆಗಳನ್ನು ಹೊರತುಪಡಿಸಿ,  ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಹೋಟೆಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್ಗಳು, ಮೊಬೈಲ್ ಅಂಗಡಿಗಳು ಸೇರಿದಂತೆ ಎಲ್ಲ ಅಂಗಡಿಗಳು ಬಂದ್ ಆಗಿದ್ದವು. ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು.


ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು,  ಸರ್ಕಾರಿ ಕಚೇರಿಗಳು ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದವು. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇನ್ನು ಬಸ್‌ಗಳು ಹಾಗೂ ಆಟೋ ಸೇರಿದಂತೆ ಇನ್ನಿತರೆ ವಾಹನಗಳು ರಸ್ತೆಗಳಿಯದ ಹಿನ್ನೆಲೆಯಲ್ಲಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸದಾ ಸಂಚಾರ ದಟ್ಟನೆಯಿಂದ ಕೂಡಿರುವ ಬೆಂ-ಮೈ ರಸ್ತೆ ಬಿಕೋ ಎನ್ನುತ್ತಿತ್ತು.


ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ರೈತಪರ ಹಾಗೂ ಕನ್ನಡಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು. ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಇದಕ್ಕೆ ಬೆಂಬಲ ನೀಡಿದರು. ನಗರದ ಗಾಂಧಿ ಸ್ಮಾರಕ ಭವನದ ಬಳಿ ಸಮಾವೇಶಗೊಂಡ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.


ನಗರದ ಗಾಂಧಿ ಸ್ಮಾರಕ ಭವನದ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು ಬೆಂ-ಮೈ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. ಗಾಂಧಿ ಭವನದ ಬಳಿಯಿಂದ ಬೆಂ-ಮೈ ಹೆದ್ದಾರಿಯಲ್ಲಿ ಸಾಗಿ ನಗರದ ನ್ಯಾಯಾಲಯದ ಬಳಿ ತೆರಳಿ ಅಲ್ಲಿಂದ ಮತ್ತೆ ಪುರ ಪೊಲೀಸ್ ಠಾಣೆ ಮುಂಭಾಗದಿಂದ ಹಾಯ್ದು, ಎಂ.ಜಿ.ರಸ್ತೆ, ಅಂಚೆ ಕಚೇರಿ ರಸ್ತೆ ಮುಖಾಂತರ ಸಾಗಿ ಮತ್ತೆ ಗಾಂಧಿ ಭವನದ ಮುಂದೆ ಸಮಾವೇಶಗೊಂಡರು.


ಈ ವೇಳೆ ಪುರ ಪೊಲೀಸ್ ಠಾಣೆ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಕೆಲ ಕಾಲ ಬೆಂ-ಮೈ ಹೆದ್ದಾರಿ ತಡೆ ನಡೆಸಿದರು. ಈ ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.


ಇನ್ನು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ಚಂದ್ರು ಲ್ಯಾಬ್ ಸಹಯೋಗದಲ್ಲಿ ಕೆಲ ಪ್ರತಿಭಟನಾಕಾರರು ರಕ್ತದಾನ ಮಾಡುವ ಮೂಲಕ ರಕ್ತ ಕೊಟ್ಟೇವು ನೀರು ಬಿಡೆವು ಎಂದು ರಕ್ತದಾನ ಚಳವಳಿ ಮಾಡಿ ಗಮನ ಸೆಳೆದರು.


ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ .ಪಿ.ಯೋಗೇಶ್ವರ್ ಭಾಗಿಯಾಗುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಿದರು.

ನಮೋ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಗಡಿಗರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


ಪ್ರತಿಭಟನೆಯಲ್ಲಿ ಕಕಜವೇ ರಾಜ್ಯಾಧ್ಯಕ್ಷ ರಮೇಶ್ ಗೌಡ, ರೈತ ಮುಖಂಡರಾದ ಕೆ.ಮಲ್ಲಯ್ಯ. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್ ಮುಖಂಡರಾದ ಪ್ರಸನ್ನ ಪಿ.ಗೌಡ, ಬೋರ್‌ವೆಲ್ ರಾಮಚಂದ್ರು, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಆನಂದಸ್ವಾಮಿ, ಕೆ.ಟಿ.ಜಯರಾಮು, ಕಕಜವೇ ಜಿಲ್ಲಾಧ್ಯಕ್ಷ ಯೋಗೇಶ್ ಗೌಡ, ರಾಜ್ ಕಲಾ ಬಳಗದ ಮಂಜುನಾಥ, ರೈತ ಮುಂಡರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑