Tel: 7676775624 | Mail: info@yellowandred.in

Language: EN KAN

    Follow us :


ಸಂಕ್ರಾಂತಿ ವೇಳೆಗೆ ಸರ್ಕಾರ ಪತನ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್.

Posted date: 02 Oct, 2023

Powered by:     Yellow and Red

ಸಂಕ್ರಾಂತಿ ವೇಳೆಗೆ ಸರ್ಕಾರ ಪತನ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್.


ಚನ್ನಪಟ್ಟಣ:

ಈಗಿನ ಕಾಂಗ್ರೆಸ್ ಸರ್ಕಾರದಲ್ಲಿರುವ ಶಾಸಕರೇ ತಿರುಗಿ ಬೀಳಲಿದ್ದು, ಸಂಕ್ರಾಂತಿ ವೇಳೆಗೆ ಸೂರ್ಯ ತನ್ನ ಪಥ ಬದಲಿಸುವ ರೀತಿ, ರಾಜ್ಯ ರಾಜಕೀಯದ ಪಥವೂ ಬದಲಾವಣೆಯಾಗಲಿದೆ. ಶಾಸಕರೇ ಸರ್ಕಾರ ಹಾಗೂ ನಾಯಕರ ವಿರುದ್ಧ ತಿರುಗಿ ಬೀಳಲಿದ್ದು, ಎರಡು-ಮೂರು ತಿಂಗಳಲ್ಲಿ ಈ ಸರ್ಕಾರ ಪತನಗೊಳ್ಳಲಿದೆ’ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.


ನಗರದಲ್ಲಿ ಸೋಮವಾರ ಸಾರಿಗೆ ಬಸ್ ನಿಲ್ದಾಣದಲ್ಲಿ ಗಾಂಧೀಜಿ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನಂತರ ಬಿಜೆಪಿ ಪಕ್ಷದ ಹಲವಾರು ಮುಖಂಡರು ಹಾಗೂ ಅವರ ಬೆಂಬಲಿಗರೊಂದಿಗೆ ಆವರಣದಲ್ಲಿ ಸ್ವತಃ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಸ್ವಚ್ಚತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯದ ರಾಜಕೀಯ ಬೆಳವಣಿಗೆ ಮತ್ತು ಕಾಂಗ್ರೆಸ್ ನಾಯಕರ ನಡತೆ ಬಗ್ಗೆ ಆ ಪಕ್ಷದ ಶಾಸಕರೇ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಕೆಲವರು ನನ್ನೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಹಾಗಾಗಿ, ಈ ಸರ್ಕಾರದ ಅವಧಿ 2023ರೊಳಗೆ ಅಥವಾ ಜನವರಿ ಮೊದಲ ತಿಂಗಳ ಸಂಕ್ರಮಣ ಹಬ್ಬದೊಳಗೆ ಮುಗಿಯಲಿದೆ ಎನಿಸುತ್ತಿದೆ’ ಎಂದರು.

 

‘ಸರ್ಕಾರದಲ್ಲಿ ಶಾಸಕರು ಅನುದಾನವಿಲ್ಲದೆ ಡಮ್ಮಿಗಳಾಗಿದ್ದಾರೆ‌. ಅನುದಾನವಿಲ್ಲದೆ ತಂತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗದೆ ಅವರಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಖರ್ಚಾಗಿದ್ದು, ನಿಮಗೆ ಕೊಡಲು ಅನುದಾನವಿಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೂ ಹೊಸ ವಿಲ್ಲ ವಾಗಿದೆ ಇಂತಹ ಸಮಯದಲ್ಲಿ ನಾವು ಶಾಸಕರಾಗಿದ್ದು ಏನು ಪ್ರಯೋಜನ ಎಂದು ಶಾಸಕರು ತಿಳಿಸಿದ್ದಾರೆ ಎಂದರು.


ಬೇರೆ ಪಕ್ಷದಿಂದ ಗೆದ್ದಿರುವ ಶಾಸಕರಿರಲಿ, ಅವರ ಪಕ್ಷದ ಶಾಸಕರು ‘ನಿರುದ್ಯೋಗಿಗಳಾಗಿದ್ದಾರೆ' ಕಾಂಗ್ರೆಸ್ ಶಾಸಕರು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ. ಅದರ ಪರಿಣಾಮವನ್ನು ಸಂಕ್ರಾಂತಿ ಹಬ್ಬದ ಹೊತ್ತಿಗೆ ನೋಡುತ್ತೀರಿ. ಡಿ.ಕೆ. ಶಿವಕುಮಾರ್ ಅವರಂತೆ, ನಾವು ಯಾವುದೇ ರೀತಿಯ ಆಪರೇಷನ್ ಮಾಡುವುದಿಲ್ಲ. ನಮ್ಮ ಸಂಪರ್ಕದಲ್ಲಿ ಯಾರೂ ಇಲ್ಲ. ಸದ್ಯ ನನಗಿರುವ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ ಅಷ್ಟೆ’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.


‘ಹಸ್ತದ ಆಪರೇಷನ್‌ಗೆ ಪ್ರತಿಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿ’


ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಮತ್ತೊಮ್ಮೆ ಮೋದಿ ಎಂಬ ನಿಟ್ಟಿನಲ್ಲಿ ಆರಂಭಿಸಲಾಗಿದೆ. ‘ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಬಿಜೆಪಿ–ಜೆಡಿಎಸ್ ಮೈತ್ರಿ ಅನಿವಾರ್ಯವಾಗಿದೆ. ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಆಪರೇಷನ್ ಹಸ್ತ ಆರಂಭಿಸಿದ್ದಾರೆ. ಅವರನ್ನು ಎದುರಿಸಲು ಈ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಇದರಿಂದ ಎರಡೂ ಪಕ್ಷಗಳಿಗೂ ಅನುಕೂಲವಾಗಲಿದೆ. ಜೆಡಿಎಸ್ ಸಭೆಯಲ್ಲಿ ಎಲ್ಲರೂ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ’ ಮೈತ್ರಿ ದೊಡ್ಡ ದೊಡ್ಡ ನಾಯಕರ ನೇತೃತ್ವದಲ್ಲಿ ಆಗಿದೆ ಎಂದು ಯೋಗೇಶ್ವರ್ ಹೇಳಿದರು.


‘ಮುಂದಿನ ವಾರ ಚನ್ನಪಟ್ಟಣ ಬಿಜೆಪಿ ಸ್ಥಳೀಯ ನಾಯಕರ ಸಭೆ ನಡೆಸುತ್ತೇವೆ. ಕಾರ್ಯಕರ್ತರ ಅಭಿಪ್ರಾಯ ಕೇಳುತ್ತೇವೆ. ಮೈತ್ರಿ ಬಗ್ಗೆ ಬೂತ್ ಮಟ್ಟದ ನಾಯಕರು ಮತ್ತು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡುತ್ತೇವೆ. ಬಳಿಕ, ಜೆಡಿಎಸ್ ನಾಯಕರ ಜೊತೆ ಮತ್ತೊಂದು ಸಭೆ ಮಾಡುತ್ತೇವೆ’ ಆ ನಂತರ ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಭೆ ನಡೆಸಿ, ಸ್ಥಳೀಯವಾಗಿ ಯಾವ್ಯಾವ ಸಂದರ್ಭದಲ್ಲಿ ಮೈತ್ರಿ ಮಾಡಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.


‘ಟಿಕೆಟ್ ವಿಷಯ ಹೈಕಮಾಂಡ್‌ಗೆ ಬಿಟ್ಟಿದ್ದು’

‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ಕ್ಷೇತ್ರದಲ್ಲಿ ಬಿಜೆಪಿಗೆ ಅವಕಾಶ ಸಿಕ್ಕಿದರೆ, ನನ್ನನ್ನ ಚುನಾವಣೆಗೆ ನಿಲ್ಲಲು ಸೂಚಿಸಿದರೆ ಸ್ಪರ್ಧೆ ಮಾಡುವೆ. ಒಂದು ವೇಳೆ ಜೆಡಿಎಸ್‌ಗೆ ಕೊಟ್ಟರೆ, ಬೆಂಬಲ ನೀಡುವೆ. ಮುಂದಿನ ರಾಜಕೀಯ ದೃಷ್ಟಿಯಿಂದ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ’ ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.


‘ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ ದರ್ಪ ಮತ್ತು ದುರಹಂಕಾರಕ್ಕೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಕ್ಷೇತ್ರದ ಜೆಡಿಎಸ್‌ನ ಮಾಜಿ ಶಾಸಕ ಎಂಬ ಬ್ರಾಂಡ್ ಇದ್ದ ಮುಖಂಡರನ್ನು ಆಪರೇಷನ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡ ಮಾತ್ರಕ್ಕೆ, ಬಿಜೆಪಿ ಮತ್ತು ಜೆಡಿಎಸ್ ಮತಬ್ಯಾಂಕ್‌ ಅಲುಗಾಡಿಸಲು ಸಾಧ್ಯವಿಲ್ಲ’ ಮಾಜಿ ಶಾಸಕರಿಗೂ ಒಂದು ಲೆಟರ್ ಹೆಡ್ ಬೇಕು, ಅವರೂ ವಿಧಾನಸೌಧ ಕ್ಕೆ ಹೋಗಿ ಬರಬೇಕು ಅದಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ವ್ಯಂಗವಾಗಿ ಹೇಳಿದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಲವೇಗೌಡ, ಮುಖಂಡರಾದ ವಿ ಬಿ ಚಂದ್ರು, ಡಾ ಲೋಕಾನಂದ, ಕೆ ಟಿ ಜಯರಾಮು, ಶಿವಕುಮಾರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑