Tel: 7676775624 | Mail: info@yellowandred.in

Language: EN KAN

    Follow us :


ಅಪ್ಪ ಮಕ್ಕಳಿಗೆ ಗೇದು ಮೊಮ್ಮಕ್ಕಳಿಗೂ ಗೆಯ್ಯಲೇ! ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಜೆಡಿಎಸ್ ಮುಖಂಡ ಸಿಂಗರಾಜಿಪುರ ರಾಜಣ್ಣ

Posted date: 21 Sep, 2022

Powered by:     Yellow and Red

ಅಪ್ಪ ಮಕ್ಕಳಿಗೆ ಗೇದು ಮೊಮ್ಮಕ್ಕಳಿಗೂ ಗೆಯ್ಯಲೇ! ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ ಜೆಡಿಎಸ್ ಮುಖಂಡ ಸಿಂಗರಾಜಿಪುರ ರಾಜಣ್ಣ

ಚನ್ನಪಟ್ಟಣ: ಕುಮಾರಸ್ವಾಮಿಯವರೇ ದೇವೇಗೌಡ ಅಪ್ಪಾಜಿ ಯಂತಹ ಮಹಾನ್ ವ್ಯಕ್ತಿಯ ಹೊಟ್ಟೆಯಲ್ಲಿ ಯಾಕೆ ಹುಟ್ಟಿದಿರಿ ! ದೇವೇಗೌಡರಿಗೂ ಗೇದಿದ್ದೀವಿ, ನಿಮಗೂ ಗೇದಿದ್ದೀವಿ. ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೂ ಗೆಯ್ಯಲೇ ! ತಾಲ್ಲೂಕು ಮತ್ತು ಜಿಲ್ಲೆಯನ್ನು ನೀವೇ ಆಳಬೇಕೆ ? ನಮ್ಮಲ್ಲೊಬ್ಬ ನಾಯಕನನ್ನು ಹುಟ್ಟುಹಾಕಲು ನಿಮಗೆ ಸಾಧ್ಯವಾಗಲಿಲ್ಲವೇ. ನಿಮ್ಮ ಕಣ್ಣೀರಿನ ರಾಜಕಾರಣ ನಿಲ್ಲುವುದಿಲ್ಲವೇ ಎಂದು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಸಿಂಗರಾಜಿಪುರದ ಲಿಂಗರಾಜೇಗೌಡ (ರಾಜಣ್ಣ) ಕಿಡಿಕಾರಿದರು.*


ಕುಮಾರಸ್ವಾಮಿಯವರ ಕುಟುಂಬ ರಾಜಕಾರಣ, ಸ್ಥಳೀಯ ಜೆಡಿಎಸ್ ನಾಯಕರ ನಿರ್ಲಕ್ಷ್ಯ ಹಾಗೂ ತಾಲ್ಲೂಕಿನ ಜೆಡಿಎಸ್‍ನಲ್ಲಿನ ಗುಂಪುಗಾರಿಕೆ ಬಣ ರಾಜಕೀಯದಿಂದ ಬೇಸತ್ತು ಜೆಡಿಎಸ್ ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ತಾಲ್ಲೂಕಿನ ಜೆಡಿಎಸ್ ಹಿರಿಯ ಮುಖಂಡ ಸಿಂಗರಾಜಿಪುರ ಲಿಂಗರಾಜೇಗೌಡ ಅಲಿಯಾಸ್ ರಾಜಣ್ಣ ಅವರು ತಿಳಿಸಿದರು. ನಗರದ ಹೊರವಲಯದ ಕಾಮತ್ ಹೋಟೆನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕರಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಜಯಮುತ್ತು ಹಾಗೂ ಇತರೆ ಮುಖಂಡರ ವಿರುದ್ಧ ಟೀಕಾಪ್ರಹಾರ ನಡೆಸಿದ ಸಿಂಗರಾಜಿಪುರದ ಲಿಂಗರಾಜೇಗೌಡ ಉ.ರಾಜಣ್ಣ ಅವರು, ಸುಮಾರು 40 ವರ್ಷಗಳಿಂದ ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡಿಕೊಂಡು ಪೂಜ್ಯ ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಅವಿರತ ಶ್ರಮಿಸುತ್ತಾ ಬರುತ್ತಿದ್ದರೂ ಎಲ್ಲವೂ ತಮ್ಮ ಕುಟುಂಬಕ್ಕೆ ಬೇಕು ಎನ್ನುವ ಭಾವನೆಯಲ್ಲಿ ಕುಟುಂಬ ರಾಜಕಾರಣವನ್ನು ಮಾಡಿಕೊಂಡು ಕುಮಾರಸ್ವಾಮಿ ಅವರು ತಾಲ್ಲೂಕಿನ ಬಣ ರಾಜಕಾರಣ, ಗುಂಪುಗಾರಿಕೆ ಬಗ್ಗೆ ಯಾವುದೇ ಚಕಾರವೆತ್ತದೇ ಮೌನ ವಹಿಸಿರುವ ಧೋರಣೆ ನಮಗೆ ಬೇಸರ ತರಿಸಿದ್ದು ಜೆಡಿಎಸ್ ಪಕ್ಷವನ್ನು ತೊರೆಯುವಂತೆ ಆಗಿದೆ ಎಂದು ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.


ಕುಮಾರಣ್ಣನವರು ಕಳೆದ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ನಾನು ಮುಖ್ಯಮಂತ್ರಿ ಆಗುತ್ತೇನೆ. ತಾಲ್ಲೂಕಿನ ಮುಖಂಡರಿಗೆ, ಕಾರ್ಯಕರ್ತರಿಗೆ 4-5 ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ 50-60 ಮಂದಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ಸದಸ್ಯರನ್ನಾಗಿ ಮಾಡುತ್ತೇನೆ. ತಾಲ್ಲೂಕಿನ ಅಭಿವೃದ್ಧಿ ಮಾಡುತ್ತೇನೆ. ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುತ್ತೇನೆ ಎಂದು ಮಾತುಕೊಟ್ಟಿದ್ದರು. ನಾವು ನಂಬಿ ಹಗಲು ರಾತ್ರಿ ಹಳ್ಳಿ ಹಳ್ಳಿಗಳನ್ನು ಸುತ್ತಿ ಕಾರ್ಯಕರ್ತರು ಮತ್ತು ಮತದಾರರ ಮನವೊಲಿಸಿ ಅವರನ್ನು ಗೆಲ್ಲಿಸಿದೆವು. ಆದರೆ ಅದು ಸುಳ್ಳಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರ, ಅವಕಾಶವಿದ್ದರೂ ನಿಷ್ಠಾವಂತರಿಗೆ ಯಾವುದೇ ಸ್ಥಾನಮಾನ, ಹುದ್ದೆಗಳನ್ನು ಕೊಡಿಸಲಿಲ್ಲ. ತಾಲ್ಲೂಕು, ಜಿಲ್ಲಾ ಸಮಿತಿಗಳಿಗೆ ನೇಮಕ ಮಾಡಲಿಲ್ಲ. ಒಬ್ಬರಿಗೆ ಒಂದು ಸಾಗುವಳಿ ಚೀಟಿ ನೀಡಲಿಲ್ಲ. ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಅವರಿಂದ ಕೇವಲ ಮೂರ್ನಾಲ್ಕು ಮಂದಿಗೆ ಅನುಕೂಲವೂ ಆಗಿದೆ. ನಾವು ಮಾತ್ರ ಕೂಲಿ ಆಳುಗಳಂತೆ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಇದು ಬೇಕಾ ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಂಡು ನಾನು ಸೇರಿದಂತೆ ಹಲವು ಜೆಡಿಎಸ್‍ನ ನಿಷ್ಠಾವಂತರು ಹೊರ ಬರುವ ಕೆಲಸ ಮಾಡುತ್ತಿದ್ದೇವೆ ಎಂದರು.

 

ತಾಲ್ಲೂಕಿನ ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಜಯಮುತ್ತು ಸೇರಿದಂತೆ ಕೆಲ ಜೆಡಿಎಸ್ ಮುಖಂಡರ ವಿರುದ್ಧ ಹರಿಹಾಯ್ದ ಅವರು ತಾಲ್ಲೂಕಿನ ಪ್ರತಿಯೊಂದು ಸಹಕಾರ ಸಂಘಗಳ ಚುನಾವಣೆಯಲ್ಲಿ ಮೂಗು ತೂರಿಸಿ, ಹಸ್ತಕ್ಷೇಪ ಮಾಡುತ್ತಾ ಜೆಡಿಎಸ್ ಕಾರ್ಯಕರ್ತರಲ್ಲೇ ಗುಂಪುಗಾರಿಕೆ ಮಾಡಿ ಕಿತ್ತಾಡುವಂತೆ ಮಾಡುತ್ತಿದ್ದಾರೆ. ಪಕ್ಷದ ನಿಷ್ಟಾವಂತ ಹಿರಿಯ ಮುಖಂಡರು ಜೆಡಿಎಸ್ ಪಕ್ಷವನ್ನು ತೊರೆಯುವಂತಾಗಿದೆ. ಉದಾಹರಣೆಗೆ ಇತ್ತೀಚೆಗೆ ನಡೆದ ಕಸಬಾ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಹಿರಿಯ ಮುಖಂಡ ಟಿ.ಪಿ.ಪುಟ್ಟಸಿದ್ದೇಗೌಡ ಅವರ ಮಾತಿಗೆ ಇವರು ಮನ್ನಣೆ ನೀಡದೇ, ತಮಗೇ ಬೇಕಾದವರಿಗೆ ಅಧಿಕಾರ ನೀಡಿ ಅಗೌರವ ಸೂಚಿಸಿದರಿಂದ ಟಿ.ಪಿ.ಪುಟ್ಟಸಿದ್ದೇಗೌಡ ಅವರು ಬೇಸತ್ತು ಪಕ್ಷದಿಂದ ದೂರ ಸರಿದಿದ್ದಾರೆ. ಇದಲ್ಲದೇ ಸುಮಾರು 35-40 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಸಿಂಗರಾಜಿಪುರ ವಿಎಸ್‍ಎಸ್‍ಎನ್ ಚುನಾವಣೆಯಲ್ಲಿ ಹೆಚ್.ಸಿ.ಜಯಮುತ್ತು ಮತ್ತು ಅವರ ಬೆಂಬಲಿಗರು ಅನಗತ್ಯವಾಗಿ ಮಧ್ಯ ಪ್ರವೇಶ ಮಾಡಿ ಚುನಾವಣೆ ನಡೆಯುವಂತೆ ಮಾಡಿ ಸಂಘಕ್ಕೆ ಲಕ್ಷಾಂತರ ರೂ. ನಷ್ಟವನ್ನುಂಟು ಮಾಡುವುದರ ಜೊತೆಗೆ ಸ್ವಪಕ್ಷದ ಮುಖಂಡರೇ ಸುಮಾರು 50-60 ಲಕ್ಷ ರೂ ಗಳಿಗೂ ಹೆಚ್ಚು ಹಣವನ್ನು ಖರ್ಚುಮಾಡುವಂತೆ ಮಾಡಿ ಗ್ರಾಮಗಳಲ್ಲಿ ಗುಂಪುಗಾರಿಕೆ ಅಶಾಂತಿಗೆ ಎಡೆಮಾಡಿಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.


ಸ್ಪನ್ ಸಿಲ್ಕ್ ಕಾರ್ಖಾನೆ ಆರು ತಿಂಗಳಲ್ಲಿ ತೆರೆಯುತ್ತೇನೆ, ಯುವಕರಿಗೆ ಉದ್ಯೋಗ ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಗರ್ಭಿಣಿಯರಿಗೆ ಬಾಣಂತಿಯರಿಗೆ ಪೌಷ್ಠಿಕಾಂಶ ಹಾಗೂ ಆರ್ಥಿಕವಾಗಿ ಬಲ ತುಂಬಲು ಹೆಚ್ಚಿನ ಹಣ ನೀಡುತ್ತೇನೆ. ಸ್ತ್ರೀ ಸಂಘದ ಸಾಲ ಮನ್ನಾ ಮಾಡುತ್ತೇನೆ ಎಂದರು ಎಲ್ಲವೂ ಹುಸಿಯಾಯಿತು. ಗೋವಿಂದಹಳ್ಳಿ ನಾಗರಾಜು ಹೊರತುಪಡಿಸಿ ಹೊರ ಜಿಲ್ಲೆಯವರಿಗೆ ಮಣೆ ಹಾಕಿದರು. ಒಬ್ಬ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ, ಎಲ್ಲರೂ ಬಿಟ್ಟು ಹೋದರು. ಐಷಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇವರನ್ನು ಭೇಟಿ ಮಾಡಲೂ ಇವರ ಪಿಎ ಗಳಿಗೆ ದುಡ್ಡು ನೀಡಬೇಕು ಎಂದು ಆಪಾದಿಸಿದರು.


ಸದ್ಯಕ್ಕೆ ಜೆಡಿಎಸ್ ಪಕ್ಷವನ್ನು ತೊರೆದಿದ್ದು, ನನ್ನ ಭಾಗದ ಹಿರಿಯರು ಮತ್ತು ಮುಖಂಡರು ಕಾರ್ಯಕರ್ತರ ಸಭೆ ಕರೆದು ಚರ್ಚಿಸಿ, ಅವರ ತೀರ್ಮಾನದಂತೆ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸುತ್ತೇನೆ ಎಂದು ಸಿಂಗರಾಜಿಪುರ ರಾಜಣ್ಣ ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯ ಆಜು ಬಾಜಿನಲ್ಲಿ ಹಾಜರಿದ್ದ ಬಿಜೆಪಿ ಮುಖಂಡರು, ಬೆಂಬಲಿಗರನ್ನು ನೋಡಿದರೆ ಸಿಂಗರಾಜಿಪುರದ ರಾಜಣ್ಣ ಜೆಡಿಎಸ್ ತೊರೆದು ಬಿಜೆಪಿ ಸೇರುವುದು ಖಚಿತ ಎನ್ನುವ ವಾತಾವರಣ ಕಂಡು ಬಂದಿತು. ಆದರೂ ಅವರು ಅಧಿಕೃತವಾಗಿ ನಮ್ಮ ರಾಜಕೀಯ ನಡೆ ಎತ್ತ ಎನ್ನುವುದನ್ನು ಸ್ಪಷ್ಟಪಡಿಸುವರು ಎಂಬುದನ್ನು ಕಾದು ನೋಡಬೇಕಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಅವರ ಬೆಂಬಲಿಗರಾದ ಗೋವಿಂದಹಳ್ಳಿ ಕೃಷ್ಣೇಗೌಡ, ಜಯರಾಮು, ಪುಟ್ಟಸ್ವಾಮಿ,ಗಂಗಾಧರ್,ಶಂಕರ್, ರೇವಣ್ಣ ಸೇರಿದಂತೆ ಹಲವರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳುಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑