Tel: 7676775624 | Mail: info@yellowandred.in

Language: EN KAN

    Follow us :


ಕಾಡುಗೊಲ್ಲ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ:ಡಾ.ಟಿ. ಯಲ್ಲಪ್ಪ

Posted date: 24 Sep, 2022

Powered by:     Yellow and Red

ಕಾಡುಗೊಲ್ಲ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿ:ಡಾ.ಟಿ. ಯಲ್ಲಪ್ಪ

ರಾಮನಗರ : ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯದಲ್ಲಿ, ಹೆಣ್ಣು ಸಬಲೆ ಎಂಬ ಮಾತು ಕಲ್ಪನೆಗೂ ನಿಲುಕದ ಸಂಗತಿಯಾಗಿದೆ ಎಂದು ಬೆಂಗಳೂರಿನ ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಭಾಗದ ಮುಖ್ಯಸ್ಥ ಡಾ.ಟಿ. ಯಲ್ಲಪ್ಪ ತಿಳಿಸಿದರು.
ಬೆಂಗಳೂರಿನ ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ತಾಲ್ಲೂಕಿನ ಕೈಲಾಂಚ ಹೋಬಳಿಯ ಆಲೆಮರದದೊಡ್ಡಿಯಲ್ಲಿ ವಾಸವಾಗಿರುವ ಕಾಡುಗೊಲ್ಲ ಸಮುದಾಯ ಕುರಿತ ಕ್ಷೇತ್ರಕಾರ್ಯದಲ್ಲಿ ಅವರು ಮಾತನಾಡಿದರು.
ಮಕ್ಕಳ ಹಡೆದ ತಾಯಿಗೆ ಊರ ಹೊರಗಿನ ಗುಡಿಸಲೇ ವಾಸ ಸ್ಥಾನ. ಋತುಮತಿಯಾದ ಮನೆ ಮಗಳು ಹಟ್ಟಿಯಿಂದ ಹೊರಗೆ. ಮುರುಕಲು ಜೋಪಡಿ, ಗಾಳಿ, ಮಳೆ, ಬಿಸಿಲೇ ಇವಳ ಸಂಗಾತಿಗಳು. ಗೊಲ್ಲರ ಸಮುದಾಯದಲ್ಲಿ ಜನನ ಸಂಬಂಧಿ ಆಚರಣೆಗಳು ಕಠಿಣವಾಗಿರುತ್ತವೆ ಎಂದು ತಿಳಿಸಿದರು.
ಗರ್ಭಿಣಿಗೆ ಹೆರಿಗೆ ನೋವು ಪ್ರಾರಂಭವಾದ ಕೂಡಲೇ ಊರ ಹೊರಗೆ ಚಿಕ್ಕಗುಡಿಸಲನ್ನು ನಿರ್ಮಿಸಿ ಅಲ್ಲಿ ಬಿಡುತ್ತಾರೆ. ಹೆರಿಗೆ ಸಂದರ್ಭದಲ್ಲಿ ಆಕೆಗೆ ಸಹಾಯಕ್ಕಾಗಿ ಬೇಡರ ಸೂಲಗಿತ್ತಿಯನ್ನು ನೇಮಿಸುತ್ತಾರೆ. ಹೆರಿಗೆಯಾಗಿ ಎರಡು ತಿಂಗಳು ಕಳೆಯುವ ವರೆಗೆ ಹಸಿ ಬಾಣಂತಿ ಮಳೆ, ಗಾಳಿ, ಬಿಸಿಲೆನ್ನದೆ ಊರ ಹೊರಗೆ ಕಾಲ ಕಳೆಯಬೇಕು. ಆಕೆಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ಒಂದು ಮೊರದಲ್ಲಿಟ್ಟು, ನೂಕಿ ಹೋಗುತ್ತಾರೆ. ಈ ಎಲ್ಲಾ ಘಟನೆಗಳಿಗೂ ಸೂತಕವೇ ಕಾರಣ ಎಂದು ತಿಳಿಸಿದರು.
ಆಧುನಿಕತೆಯ ಗಾಳಿ ಗ್ರಾಮ, ಸಮುದಾಯ, ಹಟ್ಟಿ, ಮೊಹಲ್ಲಾಗಳ ಮೇಲೆಲ್ಲಾ ಬೀಸುತ್ತಿದೆ. ಆದರೆ ಗೊಲ್ಲರ ಹಟ್ಟಿಗಳ ನಡುವೆ ಆಧುನಿಕತೆಯ ಗಾಳಿ ಇನ್ನೂ ಬೀಸಿಲ್ಲ. ಸಂಪ್ರದಾಯ ಹಾಗೂ ಆಚಾರಗಳ ಮೂಟೆಯಿಂದ ಹೊರ ಬರದ ಈ ಸಮಾಜದಲ್ಲಿ ಮೌಢ್ಯತೆಯ ಹಲ್ಲುಗಳಿಗೆ ಈಗಲೂ ಹೆಣ್ಣೇ ಆಹಾರ ಎಂದು ಅವರು ಹೇಳಿದರು.
ಅಧ್ಯಯನ ಕೇಂದ್ರದ ಸಂಚಾಲಕ ಪೆÇ್ರ.ಡಿ. ರಾಜಣ್ಣ ಮಾತನಾಡಿ ಜನರ ನಡವಳಿಕೆ-ನಂಬಿಕೆಗಳು, ಸಂಪ್ರದಾಯ-ಆಚರಣೆಗಳು, ಮೌಖಿಕ-ಗ್ರಾಂಥಿಕ ಸಾಹಿತ್ಯ ಸಂವೇದನೆಗಳು ಸಂಸ್ಕೃತಿಯ ಅಧ್ಯಯನಕ್ಕೆ ಅವಕಾಶ ತೆರೆದಿಡುತ್ತವೆ. ಇಂಥ ಅರ್ಥಪೂರ್ಣ ಅಧ್ಯಯನಕ್ಕೆ ಬುಡಕಟ್ಟು ಸಮುದಾಯಗಳು ಉತ್ತಮ ಗ್ರಾಸ ಒದಗಿಸಿಕೊಡುತ್ತವೆ. ಬುಡಕಟ್ಟು ಸಮುದಾಯಗಳಲ್ಲಿ ಕಂಡು ಬರುವ ಈ ಎಲ್ಲಾ ವೈಶಿಷ್ಟ್ಯ ಹಾಗೂ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಗುರುತಿಸಿ ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಈ ಸಮುದಾಯದಲ್ಲಿ ಹೆಣ್ಣು ಮಕ್ಕಳು ಮೈ ನೆರೆಯುವುದು ಕೂಡ ಒಂದು ಶಾಪವೇ ಸರಿ. ಅವರಿಗೂ ತಿಂಗಳುಗಟ್ಟಲೆ ಊರ ಹೊರಗಿನ ವನವಾಸ ಕಡ್ಡಾಯ. ತಮ್ಮ ಕರುಳು ಕುಡಿಗಳು ಇಷ್ಟೆಲ್ಲಾ ಯಾತನೆ ಪಡುತ್ತಿದ್ದರೂ ಸಮುದಾಯದ ಹಿರಿಯರಾಗಲೀ, ಪ್ರಜ್ಞಾವಂತರಾಗಲೀ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಲೆತಲಾಂತರದಿಂದ ನಡೆದು ಬಂದಿರುವ ಪದ್ಧತಿಯೆಂದು ಈಗಲೂ ಅಪ್ಪನ ಆಲದ ಮರಕ್ಕೇ ನೇತು ಹಾಕಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಈ ಪದ್ಧತಿ ತಪ್ಪು ಎಂದು ಸಮುದಾಯದ ಹಿರಿಯರಿಗೆ ಮನವರಿಕೆಯಾಗಿದೆ. ಆದರೆ ಅವರು ಸಂಪ್ರದಾಯ ಬಿಡಲು ಒಪ್ಪರು. ಆದ್ದರಿಂದ ಬಾಣಂತಿಯರು ಹಾಗೂ ಋತುಮತಿಯಾದ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಕೃಷ್ಣ ಕುಟೀರಗಳನ್ನು ನಿರ್ಮಿಸಿಕೊಡುವಂತೆ ಕೇಳುತ್ತಿದ್ದಾರೆ. ಇದಕ್ಕೆ ನಾಡಿನ ಪ್ರಜ್ಞಾವಂತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೃಷ್ಣ ಕುಟೀರದ ಬದಲು ಅಮಾನುಷ ಪದ್ಧತಿ ನಿರ್ಮೂಲನೆಗೆ ಆಗ್ರಹಿಸುತ್ತಿದ್ದಾರೆ. ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರು ಸರಕಾರದ ಕ್ರಮ ಗೊಲ್ಲರ ಸಮುದಾಯದ ಹೆಣ್ಣು ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಜಾನಪದ ಲೋಕದಲ್ಲೂ ಕ್ಷೇತ್ರಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.
ಕೆ.ಆರ್. ಪುರಂ ಸರ್ಕಾರಿ ಪ್ರಥಮ ದರ್ಜೆ ಸಹಪ್ರಾಧ್ಯಾಪಕರಾದ ಡಾ.ಎಂ. ನಾಗರಾಜು, ಡಾ.ಎಸ್. ತ್ಯಾಗರಾಜ್, ಡಾ. ತಾರಾಮಣಿ, ಅತಿಥಿ ಉಪನ್ಯಾಸಕರಾದ ಯಲ್ಲಪ್ಪ, ಸೌಮ್ಯ, ಚಂದ್ರಶೇಖರ್, ಮಂಜುನಾಥ್ ಇದ್ದರು.
ಸನ್ಮಿತ್ರ ಅವರಿಂದ ಸಂಬಂಧಿತ ವೀಡಿಯೊಗಳು
ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑