Tel: 7676775624 | Mail: info@yellowandred.in

Language: EN KAN

    Follow us :


ಪೋಲಿಸರು ಕೆಲಸದ ಒತ್ತಡದ ನಡುವೆ ಆರೋಗ್ಯ ಮತ್ತು ಕುಟುಂಬಕ್ಕೂ ಒತ್ತು ನೀಡಿ, ಜಿಲ್ಲಾಧಿಕಾರಿ

Posted date: 21 Oct, 2023

Powered by:     Yellow and Red

ಪೋಲಿಸರು ಕೆಲಸದ ಒತ್ತಡದ ನಡುವೆ ಆರೋಗ್ಯ ಮತ್ತು ಕುಟುಂಬಕ್ಕೂ ಒತ್ತು ನೀಡಿ, ಜಿಲ್ಲಾಧಿಕಾರಿ

ಚನ್ನಪಟ್ಟಣ: ಪೋಲಿಸರು ಜನರ ರಕ್ಷಣೆಗಾಗಿ ಸದಾ ಒತ್ತಡದ ಮಧ್ಯೆ ಕರ್ತವ್ಯ ನಿರ್ವಹಿಸುತ್ತಾರೆ. ಇದರ ನಡುವೆಯೂ ಪೊಲೀಸರು ತಮ್ಮ ಆರೋಗ್ಯ ಹಾಗೂ ಕುಟುಂಬದ ಕುರಿತು ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರನ್ ಸಲಹೆ ನೀಡಿದರು.


ಅವರು ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಾದ ಪೋಲಿಸರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಮಾತನಾಡಿದರು.


ಪೊಲೀಸರು ಹಗಲು ರಾತ್ರಿ ಎಂದು ನೋಡದೇ ಕೆಲಸ ಮಾಡಬೇಕಾಗುತ್ತದೆ. ಸಮಾಜದಲ್ಲಿ ಎಲ್ಲೇ ಸಮಸ್ಯೆ ಸೃಷ್ಟಿಯಾದರೂ ಅಲ್ಲಿ ಪೊಲೀಸರು ಹೋಗಿ ನಿಂತು ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ಸಮಾಜವನ್ನು ರಕ್ಷಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಪೊಲೀಸರು ತಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸಬಾರದು. ಪೊಲೀಸ್ ಇಲಾಖೆಯಲ್ಲಿನ ಕರ್ತವ್ಯ ಹೊರತಾಗಿಯೂ, ಕರ್ತವ್ಯದ ನಂತರವೂ ಹೊರಗೆ ತಮ್ಮದೊಂದು ಬದುಕಿದೆ ಎಂಬುದನ್ನು ಮರೆಯಬಾರದು ಎಂದರು.


ಪೊಲೀಸರು ಅನೇಕ ಒತ್ತಡಗಳ ಮಧ್ಯೆಯೇ ಕೆಲಸ ಮಾಡಬೇಕಾಗುತ್ತದೆ. ಪೊಲೀಸರು ಎಂಥ ಸನ್ನಿವೇಶ ಎದುರಾದರೂ ಒತ್ತಡಕ್ಕೆ ಒಳಗಾಗದೇ ಕರ್ತವ್ಯ ನಿರ್ವಹಿಸುವುದನ್ನು ರೂಢಿಸಿಕೊಳ್ಳಬೇಕು. ಕರ್ತವ್ಯದ ಜತೆಗೆ ತಮ್ಮ ಆರೋಗ್ಯದ ಕುರಿತು ಪೊಲೀಸರು ಕಾಳಜಿ ವಹಿಸಬೇಕು. ಪೊಲೀಸರು ಸದಾ ಗುಂಡೇಟಿಗೆ ಹುತಾತ್ಮರಾಗಬೇಕು  ಎಂದೇನಿಲ್ಲ. ರಾಮನಗರದಂಥ ಜಿಲ್ಲೆಯಲ್ಲಿ ಅಂಥ ಸಾಧ್ಯತೆ ಸಹ ಕಡಿಮೆ. ಆದರೆ, ಅನಾರೋಗ್ಯ ಸಹ ಪೊಲೀಸರನ್ನು ಕಾಡಬಹುದಾಗಿದೆ. ಆ ನಿಟ್ಟಿನಲ್ಲಿ ಪೊಲೀಸರು ತಮ್ಮ ಕರ್ತವ್ಯದ ಕಡೆಗೆ ವಹಿಸುವಷ್ಟೇ ಕಾಳಜಿಯನ್ನು ತಮ್ಮ ಆರೋಗ್ಯದ ಕಡೆಗೂ ವಹಿಸಬೇಕು ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾತನಾಡಿ, 1959ರ ಅ.21ರಂದು ಭಾರತ-ಚೀನಾ ಗಡಿಯಲ್ಲಿ ಧೈರ್ಯದಿಂದ ಹೋರಾಡಿ ಹುತಾತ್ಮರಾದ ಪೊಲೀಸರ ಸ್ಮರಣಾರ್ಥ ದೇಶಾದ್ಯಂತ ಪ್ರತಿ ವರ್ಷ ಅಕ್ಟೋಬರ್ 21ರಂದು ಪೋಲಿಸ್ ಹುತ್ಮಾತರ ದಿನಾಚರಣೆ ಆಚರಿಸಲಾಗುತ್ತದೆ. ಎಷ್ಟೋ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ನಾಗರಿಕರ ಆಸ್ತಿ ರಕ್ಷಣೆ, ಅಪರಾಧ ತಡೆ ಸೇರಿದಂತೆ ಸಮಾಜದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಸುಮಾರು 189 ಮಂದಿ ಪೊಲೀಸರು ಹುತಾತ್ಮರಾಗಿದ್ದು, ಈ ಸಂದರ್ಭದಲ್ಲಿ ಅವರೆಲ್ಲರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಎರಡು ನಿಮಿಷ ಮೌನಾಚರಣೆ ನಡೆಸಿ, ಹುತಾತ್ಮರಾದ ಪೊಲೀಸರ ಸ್ಮಾರಕಕ್ಕೆ ಹೂ ಗುಚ್ಛವನ್ನು  ಪೋಲಿಸ್ ಪಡೆಯಿಂದ ಮೂರು ಸುತ್ತು ಕುಶಾಲು ತೋಪು ಹಾರಿಸಿ ಗೌರವ ಸೂಚಿಸಲಾಯಿತು.


ಕಾರ್ಯಕ್ರಮದಲ್ಲಿ ಜಿಪಂ ಸಿಇಓ ದಿಗ್ವಿಜಯ್ ಬೊಡ್ಕೆ, ಎಎಸ್‍ಪಿ ಸುರೇಶ್, ಚನ್ನಪಟ್ಟಣ ಡಿವೈಎಸ್‍ಪಿ ಓಂಪ್ರಕಾಶ್, ರಾಮನಗರ ಡಿವೈಎಸ್‍ಪಿ ದಿನಕರ್ ಶೆಟ್ಟಿ, ಮಾಗಡಿ ಡಿವೈಎಸ್‍ಪಿ ಪ್ರವೀಣ್, ಚನ್ನಪಟ್ಟಣ ವೃತ್ತ ನಿರೀಕ್ಷಕರಾದ ಟಿ.ಟಿ.ಕೃಷ್ಣ, ಶೋಭಾ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ಪಿಎಸ್‍ಐ, ಎಎಸ್‍ಐಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑