Tel: 7676775624 | Mail: info@yellowandred.in

Language: EN KAN

    Follow us :


ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್

Posted date: 12 Feb, 2024

Powered by:     Yellow and Red

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದಲ್ಲಿ ಇತಿಹಾಸವನ್ನು ಓದಿಕೊಂಡಾಗ ಭಾರತೀಯತೆ ತಿಳಿಯುತ್ತದೆ. ಜಾನಪದದಲ್ಲೂ ಸಹ ಶಿಶುನಾಳ ಶರೀಫ ರು ಸೇರಿದಂತೆ ಹಲವಾರು ಧರ್ಮದ ಗುರುಗಳು ಭಾರತದ ಜಾನಪದವನ್ನು ಅಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತವು ಒಂದೇ ಧರ್ಮಕ್ಕೆ ಸೀಮಿತವಾದುದಲ್ಲ ಎಂಬುದನ್ನು ಪ್ರತಿಯೊಬ್ಬರು ಮನಗಾಣ ಬೇಕಿದೆ. ಇನ್ನೂ ಜಾನಪದ ಕಲೆಗಳಿಗೆ ಸಂಬಂಧಿಸಿದಂತೆ “ಕಲಿಯದವರಿಂದ ಕಲಿತವರಿಗೆ” ಕಲಿಸುವ ಮೂಲಕ ಮೂಲ ಜಾನಪದ ಕಲೆಯನ್ನು ಉಳಿಸಿ ಎಂದು ಜಾನಪದ ವಿದ್ವಾಂಸರಾದ ಡಾ. ಚಕ್ಕೆರೆ ಶಿವಶಂಕರ್ ತಿಳಿಸಿದರು. ಅವರು ಭಾನುವಾರ ಜಾನಪದ ಲೋಕದಲ್ಲಿ ನಡೆದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ – 2024 ಕಾರ್ಯಕ್ರಮದಲ್ಲಿ “ಕನ್ನಡ” ಜಾನಪದ: ಪುನರಾವಲೋಕನ ವಿಚಾರಣಾ ಸಂಕೀರ್ಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಾನಪದ ಕಲೆಯು ಒಂದು ಚಲನಶೀಲವಾದದ್ದು, ಒಳ್ಳೆಯದನ್ನು ಸ್ವೀಕರಿಸಿ ಕೆಟ್ಟದನ್ನು ತಿರಸ್ಕರಿಸುವ ರೀತಿ ಆರೋಗ್ಯಕರವಾದ ಜಾನಪದವನ್ನು ಸ್ವೀಕರಿಸಬೇಕು. ಕಲಾವಿದರು ವೇದಿಕೆಯನ್ನು ಬಳಸಿಕೊಳ್ಳುವ ರೀತಿ ಬದಲಾಗಬೇಕು, ಇತ್ತೀಚಿನ ಯುವ ಕಲಾವಿದರು ಒಂದು ಕಲೆಯನ್ನು ಸಂಪೂರ್ಣವಾಗಿ ಕಲಿಯದೆ ಹಾಗೂ ಮೂಲ ಜಾನಪದವನ್ನು ಬಿಟ್ಟು ಅವರದೇ ಆಧುನಿಕ ರೀತಿಯಲ್ಲಿ ಕಲಿತು ಪ್ರದರ್ಶನ ನೀಡುತ್ತಿದ್ದು, ಮೂಲ ಜಾನಪದಕ್ಕೆ ಕೊಡಲಿ ಪೆಟ್ಟು ಬೀಳುತ್ತದೆ ಎಂದು ಬೇಸರವ್ಯಕ್ತಪಡಿಸಿದರು. ಜಾನಪದ ಕಲೆಗೆ 150 ವರ್ಷಗಳ ಇತಿಹಾಸವಿರುವುದರಿಂದ ಜಾನಪದ ಕಲೆಗೆ 150 ವರ್ಷಗಳ ಇತಿಹಾಸವಿರುವುದರಿಂದ ಇಂತಹುದನ್ನು ಒಪ್ಪಲಾಗದು ಎಂದರು. 


*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ; ಮೊ. ನಂ: 9742424949*


ಪ್ರಾಸ್ತವಿಕವಾಗಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೋ.ಹಿ.ಸಿ. ರಾಮಚಂದ್ರೇಗೌಡರವರು, ಜಾನಪದ ಕಲೆ ಶತಮಾನದಿಂದ ಶತಮಾನಕ್ಕೆ ಬದಲಾವಣೆ ಆಗುತ್ತಾ ಬಂದಿದೆ. ಬದಲಾವಣೆ ಜಗದ ನಿಯಮ ಆದರೆ ಜಾನಪದ ವಿಚಾರಕ್ಕೆ ಬಂದರೆ ಮೂಲ ಜಾನಪದವನ್ನು ಬಿಟ್ಟುಕೊಡಬಾರದು ಎಂದು ಕಲಾವಿದರಿಗೆ ಹಾಗೂ ಕಲಿಸುವ ಗುರುಗಳಿಗೆ ಕಿವಿ ಮಾತು ಹೇಳಿದರು. ಇಲ್ಲಿ ಸಂಗ್ರಹ ಮತ್ತು ಸೃಷ್ಠಿ ಮುಖ್ಯ, ಜಾನಪದ ಕಲೆಯ ಮೂಲಕ ಅನೇಕರು ಲೇಖಕರಾದರು, ಕಲಾವಿದರಾದರು, ಜಾನಪದ  ವಿದ್ವಾಂಸರಾದರು. ಜಾನಪದವನ್ನು ಮತ್ತಷ್ಟು  ಸೃಷ್ಠಿ ಮಾಡುವುದು ಸಾಧ್ಯ. ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ಜಾನಪದ ಕಲೆಯಲ್ಲಿ ೩೦೦ ದಾಟಿಗಳಿಗೆ ಒಂದು ಕಲೆಯನ್ನು ಐದು ದಾಟಿಯಲ್ಲಿ ಹಾಡಬಹುದು . ಜಾನಪದ ಗೀತೆ ಮತ್ತು ನೃತ್ಯಕ್ಕೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ ಎಂದರು.


ಜಾನಪದ ತಜ್ಞ ಸಿರಿಗಂಧ ಶ್ರೀನಿವಾಸ ಮಾತನಾಡಿ ಇತ್ತಿಚೆಗೆ ವಿದ್ಯಾರ್ಥಿಗಳು ಜಾನಪದ ಕಲೆಯನ್ನು ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಜಾನಪದ ಲೋಕದಲ್ಲಿ ಉತ್ತಮ ರೀತಿಯಲ್ಲಿ ಕಲೆಗಳನ್ನು ಹೇಳಿಕೊಡುವವರು ಕಡಿಮೆ ಇದ್ದಾರೆ. ಕಳೆದ ಎರಡು ದಶಕಗಳ ಹಿಂದೆ ಇದ್ದಂತಹ ಕಲಾಧಾಟಿಗಳು ಈಗ ಕಾಣಿಸುತ್ತಿಲ್ಲ. ವಿದ್ಯಾರ್ಥಿಗಳು ಆಧುನಿಕ ರೀತಿಯಲ್ಲಿ ಕಲಿಯುತ್ತಿದ್ದು, ಮೂಲ ಜಾನಪದಕ್ಕೆ ಪೆಟ್ಟು ಬೀಳುತ್ತಿದೆ. ನಾನು ನಾಗೆಗೌಡರ ಕಾಲದಿಂದಲು ಜಾನಪದ ಲೋಕದ ಒಡನಾಟ ಇರಿಸಿಕೊಂಡಿದ್ದು, ಆರು ಲಕ್ಷಕಕ್ಕೂ ಹೆಚ್ಚು ಛಾಯಾ ಚಿತ್ರಗಳನ್ನು ತೆಗೆದಿದ್ದು, ಅವಲ್ಲವೂ ದಾಖಲೆಯಾಗಿ ಉಳಿದುಕೊಂಡಿವೆ. ಮೂಲ ಜಾನಪದ, ಜಾನಪದ ಲೋಕ, ಡಾ. ಹೆಚ್. ಎಲ್. ನಾಗೇಗೌಡರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕಾದರೆ ಕಲಿಸುವಂತಹ ಗುರುಗಳಿಗೆ ಕಲೆಯ ಬಗ್ಗೆ ಆಸಕ್ತಿ ಇರಬೇಕು ಎಂದರು.


ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ ಭಾರತದ ಇತಿಹಾಸದಲ್ಲಿ ಜಾನಪದ ಹಾಸುಹೊಕ್ಕವಾಗಿದೆ.  ವಿದೇಶಗಳ ಜಾನಪದ ಕೇವಲ ಎರಡು ನೂರು ವರ್ಷಗಳಿಗೆ ಸೀಮಿತವಾಗಿದೆ. ಭಾರತದ ಜಾನಪದ ಸಹಸ್ರಾರು ವರ್ಷಗಳಿಂದಲೂ ಬಾಯಿಂದ ಬಾಯಿಗೆ ಹರಡುವ ಮೂಲಕ ಜೀವಂತವಾಗಿ ಉಳಿದಿದೆ. ಕರ್ನಾಟಕ ಜಾನಪದವು ಜಿಲ್ಲೆಯ ಭಾಷೆಗಳಿಗನುಗುಣವಾಗಿ ಮತ್ತಷ್ಟು ಸಾಂಸ್ಕೃತಿಕ ಹಾಗೂ ಸಮೃದ್ದವಾಗಿ ಬೆಳೆದು ನಿಂತಿದೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಈಗ ಉಳಿಸಿಕೊಂಡರೆ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು. 

ಕಾರ್ಯಕ್ರಮದಲ್ಲಿ ಕ್ಯುರೇಟರ್ ಡಾ. ರವಿ ಯು ಎಂ ನಿರೂಪಿಸಿದರು, ಡಾ. ಬಾನಂದೂರು ಕೆಂಪಯ್ಯ ಕಾರ್ಯಾಧ್ಯಕ್ಷ ಬೋರಲಿಂಗಯ್ಯ ಆಡಳಿತಾಧಿಕಾರಿ ಡಾ. ನಂದಕುಮಾರ್ ಹೆಗಡೆ ಉಪಸ್ಥಿತರಿದ್ದರು.


ಇಳಿ ಹೊತ್ತಿನಲ್ಲಿ ನಡೆದಂತಹ 2024 ರ ಸಾಲಿನ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವ ಪ್ರಶಸ್ತಿಯನ್ನು                 ಶ್ರೀ. ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಸ್ವಾಮಿಜಿ ಪ್ರದಾನ ಮಾಡಿದರು. ನಾಡೋಜ ಹೆಚ್. ಎಲ್. ನಾಗೇಗೌಡ ಜಾನಪದ ಲೋಕಶ್ರೀ. ಪ್ರಶಸ್ತಿಯನ್ನು ಜಾನಪದ ವಿದ್ವಾಂಸರಾದ ಮೈಸೂರಿನ ಡಾ. ಡಿ.ಕೆ. ರಾಜೇಂದ್ರ ರವರಿಗೆ, ಡಾ. ಜೀ. ಶಂ. ಪರಮಶಿವಯ್ಯ ಜಾನಪದ ಪ್ರಶಸ್ತಿಯನ್ನು ಜಾನಪದ ವಿದ್ವಾಂಸರಾದ ಡಾ. ಕಾಳೇಗೌಡ ನಾಗವಾರ, ಮೈಸೂರು ರವರಿಗೆ, ನಾಡೋಜಾ ಡಾ. ಜಿ. ನಾರಾಯಣ ಜಾನಪದ ಲೋಕಪ್ರಶಸ್ತಿಯನ್ನು ಸಹಜ ಸಮೃದ್ಧ, ಸಾವಯುವ ಮತ್ತು ಕೃಷಿ ಬಳಗ ಬೆಂಗಳೂರಿನ ಸಂಸ್ಥೆಗೆ, ಶ್ರೀಮತಿ. ಲಕ್ಷö್ಮಮ್ಮ ನಾಗೇಗೌಡ ಪ್ರಶಸ್ತಿಯನ್ನು ಶ್ರೀಮತಿ. ಭಾಗೀರಥಿ ಸಂಗಣ್ಣ ಮಲಗೊಂಡ ಕೌದಿ ಕಲಾವಿದರು, ಯಾದಗಿರಿ ರವರಿಗೆ ನೀಡಲಾಯಿತು.

  ಇದೇ ಸಂದರ್ಭದಲ್ಲಿ ದೊಡ್ಡ ಆಲಹಳ್ಳಿ ಗೌರಮ್ಮ ಕೆಂಪೇಗೌಡ ಪ್ರಶಸ್ತಿಯನ್ನು ಪೂಜಾ ಕುಣಿತದ ಜಯರಾಮಯ್ಯ ರಾಮನಗರ ಜಿಲ್ಲೆ ಮತ್ತು ಏಕತಾರಿ ಕಲಾವಿದರಾದ ಶಿವಪ್ಪ ರಾಮನಗರ ಜಿಲ್ಲೆ ರವರಿಗೆ ಲೋಕ ಸರಸ್ವತಿ ಗ್ರಂಥ ಪ್ರಶಸ್ತಿಯನ್ನು “ಪುಸ್ತಕ” ಜನಪದ ಕೆರೆಗಳ ಸಂಸ್ಕೃತಿ ಲೇಖಕರಾದ ಪಿ.ಡಿ. ವಾಲಿಕಾರ ರವರಿಗೆ ಜಾನಪದ ಲೋಕ ಪ್ರಶಸ್ತಿಯನ್ನು ದೈವನರ್ತನ ಕಲಾವಿದರಾದ ಶೇಖರ ಪಂಬದ, ದಕ್ಷಿಣ ಕನ್ನಡ ಜಿಲ್ಲೆ, ಸೋಮನ ಕುಣಿತ ಕಲಾವಿದರಾದ ದ್ಯಾವೇಗೌಡ ಎನ್. ಎಂ., ಹಾಸನ ಜಿಲ್ಲೆ. ಡೊಳ್ಳುಕಲಾವಿದರಾದ ಬೆಳ್ಳಿಯಪ್ಪ ಶಿವಮೊಗ್ಗ ಜಿಲ್ಲೆ, ಯಕ್ಷಗಾನ ಮದ್ದಲೆ ಕಲಾವಿದರಾದ ಬನ್ನಂಜೆ ನಾರಾಯಣ, ದಕ್ಷಿಣ ಕನ್ನಡ ಜಿಲ್ಲೆ, ಜನಪದ ಗಾಯಕರಾದ ಮೈಸೂರು ಮಹಾದೇವಪ್ಪ, ಮಂಡ್ಯ ಜಿಲ್ಲೆ, ಸಾಹಸ ಕಲಾವಿದರಾದ ಜ್ಯೋತಿರಾಜು (ಕೋತಿ ರಾಜ್), ಚಿತ್ರದುರ್ಗ ಜಿಲ್ಲೆ. ಸೋಬಾನೆಪದ ಕಲಾವಿದರಾದ ಮಹೇಶಪ್ಪ ಚನ್ನಪ್ಪ ಕಂಬಳಿ, ಕೊಪ್ಪಳ ಜಿಲ್ಲೆ, ಗೊರವ ಕುಣಿತ ಕಲಾವಿದರಾದ ಎನ್. ಎಂ. ಮಹಾದೇವೇಗೌಡ, ಚಾಮರಾಜನಗರ ಜಿಲ್ಲೆ, ಗೀಗಿಪದ ಕಲಾವಿದರಾದ  ಲಕ್ಷ್ಮಿ ಬಾಯಿ ಹರಿಜನ, ಧಾರವಾಡ ಜಿಲ್ಲೆ. ಬುಲಾಯಿ ಹಾಡು ಕಲಾವಿದರಾದ ನಾಗಮ್ಮ ಮರಬಲ, ಬೀದರ ಜಿಲ್ಲೆ, ಮೂಡಲ ಪಾಯಾ ಯಕ್ಷಗಾನ ಭಾಗವತರಾದ ಎ. ಎಂ. ಶಿವಶಂಕರಯ್ಯ, ತುಮಕೂರು ಜಿಲ್ಲೆ ಹಾಗೂ ಡೊಳ್ಳಿನ ಪದ ಕಲಾವಿದರಾದ ಇಮಾಮ ಸಾಬ್ ಮಾಮು ಸಾಬ್ ವಲ್ಲಪ್ಪನವರ, ಧಾರವಾಡ ಜಿಲ್ಲೆ, ಇವರುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. 


ಈ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಡಾ. ಹಂಸಲೇಖ,  ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಡಾ. ಹಿ.ಶಿ. ರಾಮಚಂದ್ರೇ ಗೌಡ, ಕಾರ್ಯಾಧ್ಯಕ್ಷರಾದ ಹಿ. ಚಿ. ಬೋರ ಲಿಂಗಯ್ಯ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಮುಂಜಾನೆಯಿಂದ ತಡರಾತ್ರಿವರೆಗೂ ದೇಶದ ಹಲವಾರು ರಾಜ್ಯಗಳಿಂದ ಆಗಮಿಸಿದ ವಿವಿಧ ಬಗೆಯ ಕಲಾ ತಂಡಗಳು ಪ್ರೇಕ್ಷಕರಿಗೆ ಹಾಗೂ ಪ್ರವಾಸಿಗರಿಗೆ ಜಾನಪದ ಕಲಾನೃತ್ಯ ಮಾಡುವ ಮೂಲಕ ರಸದೌತಣ ನೀಡಿದರು.  

 

ಗೋ. ರಾ. ಶ್ರೀನಿವಾಸ

ಮೊ. ನಂ.- 9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑