Tel: 7676775624 | Mail: info@yellowandred.in

Language: EN KAN

    Follow us :


ಪರಂಜ್ಯೋತಿ ಶ್ರೀ ಅಭಯ ಶನೈಶ್ಚರ ದೇವಾಲಯದಲ್ಲಿ ಸಂಕಷ್ಟನಾಶನ ಅಖಂಡ ತಿಲ ದೀಪ ಯಜ್ಞ

Posted date: 17 Nov, 2022

Powered by:     Yellow and Red

ಪರಂಜ್ಯೋತಿ ಶ್ರೀ ಅಭಯ ಶನೈಶ್ಚರ ದೇವಾಲಯದಲ್ಲಿ ಸಂಕಷ್ಟನಾಶನ ಅಖಂಡ ತಿಲ ದೀಪ ಯಜ್ಞ

ಚನ್ನಪಟ್ಟಣ: ಕೇವಲ ಮೂರು ವರ್ಷಗಳ ಅವಧಿಯಲ್ಲೇ ಜಿಲ್ಲಾದ್ಯಂತ ಹೆಸರುವಾಸಿಯಾಗಿರುವ ಹನಿಯೂರು ಮತ್ತು ರಾಮೇಗೌಡನದೊಡ್ಡಿ ಗ್ರಾಮದ ನಡುವೆ ನೂತನವಾಗಿ ನಿರ್ಮಾಣಗೊಂಡಿರುವ "ಶನಿಯೂರು" ಎಂಬ ಕ್ಷೇತ್ರದಲ್ಲಿ ೧೯ ನೇ ತಾರೀಖಿನ ಶನಿವಾರದಂದು ಕರಗ ಮಹೋತ್ಸವ, ತಿಲ ದೀಪ ಯಜ್ಞ, ಅನ್ನಸಂತರ್ಪಣೆ ಮತ್ತು ದೀಪೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಭಕ್ತಾದಿಗಳು ಆಗಮಿಸಿ ಶ್ರೀ ಶನೈಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಪೀಠಾಧಿಪತಿ ಶ್ರೀ ಶಿವಕುಮಾರ ಸ್ವಾಮೀಜಿ ಕರೆ ನೀಡಿದ್ದಾರೆ.


*ಒಂದೇ ಕ್ಷೇತ್ರದಲ್ಲಿ ಹಲವಾರು ದೇವರ ದರ್ಶನ*

ಶನಿಯೂರು ಪರಂಜ್ಯೋತಿ ಶ್ರೀ ಅಭಯ ಶನೈಶ್ಚರ ಸ್ವಾಮಿ ಕ್ಷೇತ್ರದಲ್ಲಿ ಭೂಮಿಯಿಂದ ಮೂವತ್ತು ಅಡಿ ಎತ್ತರಕ್ಕೆ ನಿರ್ಮಿಸಿರುವ ಬೃಹತ್ ಲಿಂಗವು ಜಿಲ್ಲೆಯಲ್ಲೇ ಪ್ರಥಮವಾಗಿದ್ದು ಭಕ್ತಾದಿಗಳ ಆಕರ್ಷಣೆಯಾಗಿದೆ. ಲಿಂಗದ ಪಕ್ಕದಲ್ಲೆ ಎಂಟು ಅಡಿಯ ಆದಿಶೇಷ, ರಾಹುಕೇತು ಸಮೇತ ಕಾಳಹಸ್ತಿ ಲಿಂಗೇಶ್ವರ, ಶನಿಸಿಂಗಣಾಪುರದ ಶನೇಶ್ವರ, ಶ್ರೀವಾರಿ ಶ್ರೀನಿವಾಸ, ಬಂಧಮುಕ್ತ ಹನುಮಂತ, ನಾಲ್ಕೂ ನೂರು ವರ್ಷಗಳ ಇತಿಹಾಸವಿರುವ ತಾರಾ ವೃಕ್ಷ, ನವಗ್ರಹ ದೇವಾಲಯ, ಅಷ್ಟಸಿದ್ಧಿ ತ್ರಯಂಬಕೇಶ್ವರ, ಛಾಯಾದೇವಿ, ಸಂಕಷ್ಟಹರ ಗಣಪತಿ ಕ್ಷೇತ್ರಾಧಿಪತಿ ಶ್ರೀ ಅಭಯ ಶನೈಶ್ಚರ ಸ್ವಾಮಿ ವಿಗ್ರಹಗಳು ಭಕ್ತಾಧಿಗಳ ಕೋರಿಕೆಯನ್ನು ಈಡೇರಿಸಲು ಒಂದೆಡೆ ಸೇರಿದ್ದಾರೆ. ಬಹಳ ಮುಖ್ಯವಾಗಿ ಬಹುತೇಕ ಎಲ್ಲಾ ವಿಗ್ರಹಗಳು ಕೃಷ್ಣ ಶಿಲೆಯಿಂದಲೇ ಕೆತ್ತನೆಗೊಂಡಿರುವುದು ವಿಶೇಷ ಎನ್ನುತ್ತಾರೆ ಶಿವಕುಮಾರ ಸ್ವಾಮೀಜಿ.


ಈ ಎಲ್ಲಾ ದೇವರ ಪ್ರತಿರೂಪವನ್ನು ಒಂದೆಡೆ ಸೇರಿಸಲು ಕಾರಣವಿದೆ. ಸರ್ಪ ದೋಷಕ್ಕೆ ಕಾಳಹಸ್ತಿಗೆ, ಆಶ್ಲೇಷ ಬಲಿ ಪೂಜೆಗೆ ಕುಕ್ಕೆ ಸುಬ್ರಹ್ಮಣ್ಯ, ಶನೇಶ್ವರ ಸ್ವಾಮಿ ನೋಡಲು ಶನಿಸಿಂಗಣಾಪುರಕ್ಕೆ ಭಕ್ತಾದಿಗಳು ಹೋಗುತ್ತಾರೆ. ಅಂತಹ ಪೂಜೆಗಳನ್ನು ಸ್ಥಳೀಯ ಭಕ್ತಾದಿಗಳು ಇಲ್ಲೇ ಮಾಡಲೆಂದು ಸ್ಥಾಪಿಸಲಾಗಿದೆ. ವಿಗ್ರಹಗಳ ಕೆತ್ತನೆಗೆ ಎಲ್ಲಾ ಶಿಲೆಗಳಿಂತ ಕೃಷ್ಣ ಶಿಲೆ ಉತ್ತಮವಾಗಿದೆ. ಇದರಿಂದ ಭಕ್ತಾದಿಗಳಿಗೆ ಸನಿಹ ದಿಂದ ಭಗವಂತನಲ್ಲಿ ಮೊರೆ ಇಡಲು ಸಾಧ್ಯವಾಗುತ್ತದೆ. ಪ್ರತಿ ವಿಗ್ರಹ ಸ್ಥಾಪಿಸುವ ಮುನ್ನಾ ಪೀಠವನ್ನು ಬಂಧಮುಕ್ತ ಚಕ್ರವನ್ನಿಟ್ಟು ಸ್ಥಾಪಿಸುವುದರಿಂದ ಭಕ್ತಾದಿಗಳ ಸಂಕಷ್ಟಗಳು ಶೀಘ್ರವಾಗಿ ಬಗೆಹರಿಯಲು ಸಾಧ್ಯವಾಗುತ್ತಿದೆ. ಭಕ್ತಾದಿಗಳು ಕಷ್ಟವನ್ನು ಕಳೆದುಕೊಳ್ಳಲು ಬರುವುದರಿಂದ ಇದಕ್ಕೆ "ಕರ್ಮಸ್ಥಳ" ಎಂದು ಮತ್ತೊಂದು ಹೆಸರಿಡಲಾಗಿದೆ ಎಂದು ವಿವರಿಸಿದರು.


೧೯ರ ಶನಿವಾರವು ಕಾರ್ತಿಕ ಮಾಸದ ಕೊನೆಯ ಶನಿವಾರವಾಗಿದ್ದು ಅಂದು ಬಹಳ ವಿಶೇಷ ದಿನವಾಗಿದೆ. ಅಂದು ಮುಂಜಾನೆ ಹತ್ತುಗಂಟೆಗೆ ಮೂವತ್ತಾರು ಮಂದಿಯಿಂದ ನವಗ್ರಹಗಳ ಕರಗ ಮಹೋತ್ಸವ ನಡೆಯುತ್ತದೆ. ನಂತರ ಸಹಸ್ರಾರು ಭಕ್ತಾದಿಗಳಿಂದ "ಹತ್ತು ಲಕ್ಷ ಎಳ್ಳು ಬತ್ತಿ" ಗಳಿಂದ ನೆರವೇರಿಸುವ  ಅಖಂಡ ತಿಲದೀಪ ಯಜ್ಞ ಜರುಗಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಇದ್ದು, ಇಳಿಹೊತ್ತಿನ ಐದು ಗಂಟೆಯಿಂದ ರಾತ್ರಿ ಏಳು ಗಂಟೆಯವರೆಗೆ ಹತ್ತು ಸಾವಿರ ದೀಪಗಳಿಂದ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಭಕ್ತಾದಿಗಳು ತಮ್ಮ ಇಷ್ಟಾನುಸಾರವಾಗಿ ಅಂದರೆ ಕನಿಷ್ಠ ೧೦೮ ಎಳ್ಳು ಬತ್ತಿಗಳನ್ನು ತಂದು ಯಜ್ಞದಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಬೇಕೆಂದು ಭಕ್ತಮಂಡಲಿ ಕೋರಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑