Tel: 7676775624 | Mail: info@yellowandred.in

Language: EN KAN

    Follow us :


ಚುನಾವಣೆ ಹತ್ತಿರವಿದೆ ಪೋಲಿಸರು ಕಟ್ಟೆಚ್ಚರದಿಂದಿರಬೇಕು ಎಡಿಜಿಪಿ ಅಲೋಕ್ ಕುಮಾರ್

Posted date: 19 Nov, 2022

Powered by:     Yellow and Red

ಚುನಾವಣೆ ಹತ್ತಿರವಿದೆ ಪೋಲಿಸರು ಕಟ್ಟೆಚ್ಚರದಿಂದಿರಬೇಕು ಎಡಿಜಿಪಿ ಅಲೋಕ್ ಕುಮಾರ್

ರಾಮನಗರ: ಚನ್ನಪಟ್ಟಣ: ನ/೧೮. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಿರುವುದರಿಂದ ಪೋಲೀಸರು ಕಟ್ಟೆಚ್ಚರದಿಂದಿರಬೇಕು. ಚನ್ನಪಟ್ಟಣ ಸೇರಿದಂತೆ ರಾಮನಗರ ಜಿಲ್ಲೆ ಅತಿ ಸೂಕ್ಷ್ಮ ಪ್ರದೇಶಗಳಾಗಿರುವುದರಿಂದ ಪೋಲೀಸರು ಸದೃಢರಾಗಿ,, ಮೈಯ್ಯೆಲ್ಲಾ ಕಣ್ಣಾಗಿ ತಮ್ಮ ಪಾಳಿಯ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಇದು ಚುನಾವಣೆ ಅಷ್ಟೇ ಅಲ್ಲದೇ ಅಪರಾಧ ಎಸಗುವ ಪ್ರತಿಯೊಬ್ಬರಿಗೂ ನಿಮ್ಮ ಕೆಲಸ ನೋಡಿಯೇ ಆತ ಧೈರ್ಯಗುಂದುವಂತಿರಬೇಕು ಎಂದು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್ ಪೋಲೀಸರಿಗೆ ಕರೆ ನೀಡಿದರು.

ಅವರು ಶುಕ್ರವಾರ ಸಂಜೆ ನಗರದ ಡಿಎಆರ್ ಮೈದಾನದಲ್ಲಿ ಪೋಲೀಸರಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.


ಪೋಲೀಸರ ದೇಹ ಸೌಂದರ್ಯ ಮತ್ತು ಚುರುಕುತನವನ್ನು ನೋಡಿಯೇ ಅಪರಾಧಿಗಳು ಬೆಚ್ಚಿ ಬೀಳಬೇಕು. ಇದಕ್ಕೆ ಬೇಕಾಗಿರುವುದು ನಿಮ್ಮ ಆರೋಗ್ಯ. ನೀವುಗಳು ಪ್ರತಿನಿತ್ಯವೂ ನಿಮ್ಮ ಕುಟುಂಬ ಹಾಗೂ ಮತ್ತಿತರ ಸಮಸ್ಯೆಗಳನ್ನು ಕೆಲಸಕ್ಕೆ ಹಾಜರಾಗುವ ಮುನ್ಮವೇ ಬದಿಗಿಟ್ಟು ಕೆಲಸಕ್ಕೆ ಬರಬೇಕು. ನಿಗದಿತ ಸಮಯ ಮೀಸಲಿಟ್ಟು ನಿಮಗೆ ಇಷ್ಟವಾದ ಯೋಗ, ವ್ಯಾಯಾಮ, ಬ್ಯಾಡ್ಮಿಂಟನ್, ಕಬಡ್ಡಿ, ವಾಲಿಬಾಲ್, ಪುಟ್ಬಾಲ್ ಸೇರಿದಂತೆ ಇನ್ನಿತರ ಆಟಗಳನ್ನು ಆಡುವ ಮೂಲಕ ದೇಹ ದಂಡಿಸುವ ಕೆಲಸ ಮಾಡಬೇಕು. ಪೋಲೀಸರು ಯಾವ ಕಾರಣಕ್ಕೂ ದೇಹ ಬೆಳೆಸಬಾರದು. ದೇಹದ ಆಕಾರ ನೋಡಿದಾಕ್ಷಣ ಅಪರಾಧ ಮಾಡಲು ಯೋಚಿಸುವ ವ್ಯಕ್ತಿ ತಕ್ಷಣ ಆತನ ಯೋಚನೆಯಿಂದ ಹಿಂದೆಗೆಯುವಂತಿರಬೇಕು ಎಂದು ಪೋಲೀಸರಿಗೆ ಕಿವಿಮಾತು ಹೇಳಿದರು.


ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಂತೋಷ್ ಬಾಬು ತುಂಬಾ ಒಳ್ಳೆಯ ಅಧಿಕಾರಿಯಾಗಿದ್ದಾರೆ. ಹಲವಾರು ತನಿಖೆಗಳನ್ನು ಮಾಡಿ ಉತ್ತಮ ವರದಿ ನೀಡಿದ್ದಾರೆ. ಕ್ಲಿಷ್ಟಕರ ಸಮಸ್ಯೆಗಳನ್ನು ಅಲ್ಪ ಸಮಯದಲ್ಲಿ ಬಗೆಹರಿಸಿದ್ದಾರೆ. ಇತ್ತೀಚೆಗೆ ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಗಾಂಜಾ ಕೇಸುಗಳು ಹೆಚ್ಚಾಗುತ್ತಿವೆ. ಪೋಲೀಸರು ಸರ್ಪಗಾವಲು ಹಾಕಿ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಬೇಕು. ಕೆಲ ಠಾಣೆಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂಬುದನ್ನು ನಾನು ಬಲ್ಲೆ.ಅದನ್ನೇ ನೆಪವಾಗಿಟ್ಟು ಹಿಂಜರಿಯಬಾರದು. ಯಾವುದೇ ರೀತಿಯ ಸಾರ್ವಜನಿಕರು ಠಾಣೆಗೆ ಬಂದಾಗ ಅವರನ್ನು ಸೌಜನ್ಯದಿಂದ ಮಾತನಾಡಿಸಬೇಕು. ನೀವು ಮಾತನಾಡುವ ರೀತಿಯಲ್ಲೇ ಅರ್ಧ ಸಮಸ್ಯೆ ಬಗೆಹರಿಯುತ್ತದೆ. ದುರ್ವರ್ತನೆ ತೋರಬಾರದು. ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿ ವರ್ಗಕ್ಕೆ ತಿಳಿಸಿದರು.


ಪೋಲೀಸರಿಗೆ ಕುಟುಂಬದ ಸಮಸ್ಯೆ ಒಂದೆಡೆಯಾದರೆ ಕೆಲಸದ ಒತ್ತಡದ ಸಮಸ್ಯೆ ಮತ್ತೊಂದಡೆ. ಸಮಸ್ಯೆಗಳಿಗೆ ಪರಿಹಾರ ಎಂದು ನೀವು ಕುಡಿತಕ್ಕೆ ದಾಸರಾದರೆ ನಿಮ್ಮ ಆರೋಗ್ಯ ಹದಗೆಡುತ್ತದೆ. ನಿಮ್ಮ ದೇಹ ಮತ್ತು ಮನಸ್ಸು ಸ್ಪಂದಿಸುವುದಿಲ್ಳ. ಕುಡಿತ ಎಲ್ಲಾ ಸಮಸ್ಯೆಗಳಿಗೂ ಮದ್ದಲ್ಲಾ. ನಿಮ್ಮ ಆರೋಗ್ಯ ಬಹಳ ಮುಖ್ಯ. ಹಾಗಾಗಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಇಲಾಖೆಗೆ ಸಂಬಂಧಿಸಿದ ಯಾವುದೇ ಮೇಲಾಧಿಕಾರಿಗಳ ಮೇಲೆ ದೂರುಗಳಿದ್ಸರೆ ಮುಕ್ತವಾಗಿ ಚರ್ಚಿಸಿ. ನಾನು ಪರಿಹಾರ ನೀಡುತ್ತೇನೆ ಎಂದರು. ಅದೇ ರೀತಿ ಡಿವೈಎಸ್ಪಿ, ವೃತ್ತ ನಿರೀಕ್ಷಕರು, ನಿರೀಕ್ಷಕಕರು, ಉಪ ನಿರೀಕ್ಷಕರು, ಕಾನ್ಸಟೇಬಲ್ ಗಳು ಹಾಗೂ ವಾಹನ ಚಾಲಕರನ್ನು ಖುದ್ದಾಗಿ ಅವರಿದ್ದಲ್ಲಿಯೇ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.


ಇತ್ತೀಚೆಗೆ ಸೇರ್ಪಡೆಯಾದ ಸಾಮಾನ್ಯ ಪೋಲೀಸರಿಗೂ ಎಲ್ಲಾ ಸೇರಿ ಐವತ್ತು ಸಾವಿರ ಸಂಬಳ ಸಿಗುತ್ತದೆ. ಇಂದು ಎಂ ಎನ್ ಸಿ ಕಂಪನಿಗಳಲ್ಲಿ ಕೆಲಸ ಮಾಡುವ ಇಂಜಿನಿಯರಿಂಗ್ ಪದವೀಧರರಿಗೂ ಅಷ್ಟು ಸಂಬಳ ಸಿಗುತ್ತಿಲ್ಲ. ನೀವು ಮೇಲಿನವರನ್ನು ನೋಡಿ ಅಸೂಯೆ ಪಡದೆ, ನಿಮಗಿಂತ ಬಡತನ ರೇಖೆಯಲ್ಲಿರುವವನ್ನು ನೋಡಿ ತೃಪ್ತಿ ಪಡಬೇಕು ಎಂದರು. ಪೆರೇಡ್ ವೀಕ್ಷಿಸಿದ ಅವರು ಅತ್ಯುತ್ತಮ ಪೆರೇಡ್ ಎಂದೆನಿಸಿದ ಡಿಎಆರ್ ತಂಡದ ಮುಂದಾಳತ್ವ ವಹಿಸಿದ ಶಿವಕುಮಾರ್ ರವರಿಗೆ ವೇದಿಕೆಗೆ ಕರೆದು ಒಂದು ಸಾವಿರ ನಗದು ಬಹುಮಾನ ನೀಡಿದರು. ಮಹಿಳಾ ಪೋಲೀಸರು ಸಹ ಪುರುಷ ಪೋಲೀಸರಿಗೆ ಸರಿಸಮಾನವಾಗಿದ್ದಾರೆ. ಅವರಿಗೆ ಸಲ್ಲಬೇಕಾದ ಇಲಾಖೆಯ ಎಲ್ಲಾ ಸವಲತ್ತುಗಳನ್ನು ಅಧಿಕಾರಿಗಳು ಸಕಾಲದಲ್ಲಿ ನೀಡಬೇಕು. ರಾತ್ರಿ ವೇಳೆಯಲ್ಲಿ ಅವರನ್ನು ಪೆಟ್ರೋಲಿಂಗ್ ಗೆ ಬಳಸಿಕೊಳ್ಳಿ. ರಾತ್ರಿ ಸಮಯದಲ್ಲಿ ಬೀಟ್ ಪೋಲೀಸರು ಹೆಚ್ಚಿನ ನಿಗಾ ವಹಿಸುವಂತೆ ಅವರು ಕರೆ ನೀಡಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ ಸಂತೋಷ್ ಬಾಬು, ಡಿವೈಎಸ್ಪಿ ಗಳು, ವೃತ್ತ ನಿರೀಕ್ಷಕರುಗಳು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಪೆರೇಡ್ ನಂತರ ಇತ್ತಿಚೆಗೆ ಉದ್ಘಾಟನೆಗೊಂಡ ಪೋಲೀಸ್ ಭವನ (ಕಲ್ಯಾಣ ಮಂಟಪ) ವನ್ನು ವೀಕ್ಷಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑