Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ

Posted date: 19 Nov, 2022

Powered by:     Yellow and Red

ತಾಲ್ಲೂಕಿನಲ್ಲಿ ನಿಂತ ನೀರಾದ ಕಾಂಗ್ರೆಸ್ ಪಕ್ಷ ಬಲಪಡಿಸಲು ಡಿ ಕೆ ಬ್ರದರ್ಸ್ ಹರಸಾಹಸ ಸೋಮವಾರ ಇನ್ನಿಬ್ಬರಿಂದ ಅರ್ಜಿ

ಚನ್ನಪಟ್ಟಣ: ೨೦೨೩ ರ ಚುನಾವಣೆಗೆ ಇನ್ನೂ ಆರು ತಿಂಗಳ ಸಮಯವಿದೆ. ರಾಜ್ಯಾದ್ಯಂತ ಇನ್ನು ಮುಂದೆ ಆರಂಭವಾಗುವ ಚುನಾವಣಾ ಕಾವು ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ವರ್ಷದ ಹಿಂದೆಯೇ ಆರಂಭವಾಗಿದ್ದು ವಿಶೇಷವಾಗಿತ್ತು. ರಾಜ್ಯದಲ್ಲಿ ಚುನಾವಣೆ ಆರಂಭವಾಗಿದೆ ಎಂದು ಗೊತ್ತಾಗಿದ್ದೇ ಚನ್ನಪಟ್ಟಣ ಕ್ಷೇತ್ರದಲ್ಲಿ ಎಂದರೂ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಚುನಾವಣಾ ಜಿದ್ದಾಜಿದ್ದಿ ಏರ್ಪಟ್ಟು ಮೊದಲಿಗೆ ಬಿಜೆಪಿ ಯ ಸಿ ಪಿ ಯೋಗೇಶ್ವರ್ ಮತ್ತು ಶಾಸಕ ಹೆಚ್ ಡಿ ಕುಮಾರಸ್ವಾಮಿ ಯವರ ಬೆಂಬಲಿಗರ ನಡುವೆ ಆರಂಭವಾಗಿ ನೇರವಾಗಿ ವಿಧಾನ ಸಭಾ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರ ನಡುವೆ ಮಾಧ್ಯಮದವರ ಮೂಲಕ ಪರವಿರೋಧ ಹೇಳಿಕೆ ನೀಡುವ ಮೂಲಕ ಚುನಾವಣೆ ಆರಂಭಗೊಂಡಿತು.


ಇವರಿಬ್ಬರ ನಡುವಿನ ಮಾತಿನ ಚಕಮಕಿಯಲ್ಲಿ ಕಾಂಗ್ರೆಸ್ ಪಕ್ಷ ತಾಲ್ಲೂಕಿನಲ್ಲಿ ಇದೆಯೋ ಇಲ್ಲವೋ ಎಂಬ ಗುಸುಗುಸು ಆರಂಭವಾಗಿತ್ತು. ೨೦೧೮ ರ ಚುನಾವಣೆ ಮುಗಿದ ಮೇಲೆ ನೆಪಮಾತ್ರದ ಸಭೆಗಳನ್ನು ಹೊರತುಪಡಿಸಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಕ್ರಿಯೆಗಳು ನಡೆಯಲೇ ಇಲ್ಲಾ. ಕಾಂಗ್ರೆಸ್ ಪಕ್ಷದ ಶಾಸಕರಿರಲಿಲ್ಲಾ ನಿಜ. ಆದರೆ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅದೇ ಪಕ್ಷದಿಂದ ಚುನಾಯಿತರಾದ ಸಂಸದರೊಬ್ಬರಿದ್ದಾರೆ ಎಂಬುದಕ್ಕಾದರೂ, ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಕೊಳ್ಳಬೇಕಾಗಿತ್ತು. ಶರತ್ ಚಂದ್ರ ರವರು ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಣ್ಮರೆಯಾಗುವುದು ಬಿಟ್ಟರೆ ಕಾಂಗ್ರೆಸ್ ಪಕ್ಷದ ಹಲವರು ಮುಖಂಡ ಮತ್ತು ಪದಾಧಿಕಾರಿ ಅನ್ನಿಸಿಕೊಂಡರೆ ಹೊರತು ಚುನಾವಣೆ ಹೆದರಿಸುವ ನಿಟ್ಟಿನಲ್ಲಿ ಬಲಗೊಳ್ಳಲಿಲ್ಲ.


ಇದರ ನಡುವೆ ಶಾಸಕ ಸ್ಥಾನದ ಆಕಾಂಕ್ಷೆ ಹೊಂದಿದ್ದ ಉದ್ಯಮಿ ಪ್ರಸನ್ನ ಪಿ ಗೌಡ ರವರನ್ನು ಕರೆತಂದು ಚುನಾವಣಾ ಅಖಾಡಕ್ಕೆ ಇಳಿಸಿದರು. ಈ ಅಖಾಡದಲ್ಲಿ ಪ್ರಸನ್ನ ಸದ್ದಿಲ್ಲದೆ ಕಾರ್ಯಾರಂಭ ಮಾಡಿದರು. ಲಕ್ಷಕ್ಕೆ ಲಕ್ಷ್ಯ ನೀಡದೆ ಚುನಾವಣೆ ಮುನ್ನವೇ ಮತದಾರರ ಮೇಲೆ ಪ್ರಭಾವ ಬೀರಿದರು. ಆರಂಭದಲ್ಲಿ ತಾಲ್ಲೂಕಿನ ಕಾಂಗ್ರೆಸ್ಸಿಗರು ಸಾಥ್ ನೀಡಿದ್ದಲ್ಲದೆ, ಹಳೆಯ ಕಾಂಗ್ರೆಸ್ ಮುಖಂಡರಾದಿಯಾಗಿ ಗ್ರಾಮಗಳನ್ನು ಪರಿಚಯಿಸಿಕೊಟ್ಟರು. ಕೆಲ ಹಂತದಲ್ಲಿ ಸ್ವತಃ ತನ್ನದೇ ಟೀಂ ಮಾಡೊಕೊಂಡು ಅಖಾಡಕ್ಕಿಳಿದು ನೊಂದವರಿಗೆ ಸ್ಪಂದಿಸುವ ಮೂಲಕ ನೆರವಾಗಿ ಗೆಲುವಿನ ಭರವಸೆ ಮೂಡಿಸಿಕೊಂಡರು. ಆರಂಭದಲ್ಲಿ ಸಾಥ್ ನೀಡಿದ ಮುಖಂಡರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡಿದ ತಪ್ಪನ್ನೆಲ್ಲಾ ಧುರೀಣರ ಮುಂದೆ ಹೇಳಿದರು, ಅವರೂ ಕೇಳಿದರೂ ಎಂಬ ಊಹಾಪೋಹಗಳ ನಡುವೆ ಪ್ರಸನ್ನ ತೆರೆಮರೆಗೆ ಸರಿದರು.



*ಅಸಲಿ ಆಟ ಆರಂಭವಾಗಿದ್ದೇ ಆಗ*

ಪ್ರಸನ್ನ ಕ್ಷೇತ್ರದಿಂದ ಹಿಮ್ಮುಖವಾಗುತ್ತಿದ್ದಂತೆ ಸಾಮಾನ್ಯ ಕಾರ್ಯಕರ್ತರು ದಿಗ್ಭ್ರಮೆಗೊಂಡರೆ ಬಂಡಾಯ ನಾಯಕರು ಹೆಚ್ಚಾದರು. ಶರತ್ ಚಂದ್ರ ರವರದ್ದೇ ಒಂದು ಗುಂಪು, ಪದಾಧಿಕಾರಿಗಳದ್ದೇ ಮತ್ತೊಂದು ಗುಂಪಾಯಿತು. ಬೆರಳೆಣಿಕೆ ಮಂದಿಯ ಮಾತು ಕೇಳಿ ಪ್ರಪ್ರಥಮವಾಗಿ ಪ್ರಸನ್ನ ರವರ ವಿರುದ್ಧ ಶರತ್ ಚಂದ್ರ ರವರು ಪತ್ರಿಕಾಗೋಷ್ಠಿಯನ್ನು ನಡೆಸಿ ನಾನೂ ಒಬ್ಬ ಆಕಾಂಕ್ಷಿತ ಅಭ್ಯರ್ಥಿ ಎಂದು ಸ್ವಯಂ ಘೋಷಿಸಿಕೊಂಡರು. ಅದೇ ರೀತಿ ಪಕ್ಷದ ಕಛೇರಿಗೆ ಅಭ್ಯರ್ಥಿ ಎಂದು ಠೆವಣಿ ನೀಡಿ ಹೆಸರನ್ನು ನೋಂದಾಯಿಸಿದರು. ಬೇರೆ ಪಕ಼್ಷದವರಿರಲಿ ಅವರದ್ದೇ ಪಕ್ಷದವರು ಶರತ್ ಚಂದ್ರ ರವರು ಕೇವಲ ಒಂದು ಸಾವಿರ ಮತಗಳಿಗಾಗಿ ಹೋರಾಡಬೇಕಷ್ಟೆ !? ಎಂದು ಕುಹಕವಾಡುವುತ್ತಿರುವುದು ಸುಳ್ಳಲ್ಲಾ.


ಕುಕ್ಕುಟ ಮಹಾಮಂಡಳಿಯ ಡಿ ಕೆ ಕಾಂತರಾಜು, ಬೋರ್ ವೆಲ್ ರಂಗನಾಥ, ಹೊಂಗನೂರು ಜಿಪಂ ಮಾಜಿ ಸದಸ್ಯೆ ವೀಣಾಚಂದ್ರು ರವರ ಪುತ್ರ ಚಂದ್ರಸಾಗರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ, ನೀಲಕಂಠನಹಳ್ಳಿ ರುದ್ರಯ್ಯ, ಸೇರಿದಂತೆ ಕೊಟ್ಟರೆ ನಾನೂ ಒಂದು 'ಕೈ' ನೋಡುತ್ತೇನೆ ಎನ್ನುವ ಹಲವಾರು ನಾಯಕರು ಹೊರಹೊಮ್ಮಿದರಾದರೂ ಪ್ರಸನ್ನ ರವರನ್ನು ಬೀಟ್ ಮಾಡುವ ಯಾವುದೇ ಕೈ ಅಭ್ಯರ್ಥಿ ಹೈಕಮಾಂಡ್ ಗೆ ಒಪ್ಪಿಗೆಯಾಗಲಿಲ್ಲ. ಸಣ್ಣಪುಟ್ಟ ಮಾತುಗಳನ್ನು ಕೇಳಿಕೊಂಡು ನಾಯಕರು ನನ್ನನ್ನು ಕಡೆಗಣಿಸುತ್ತಿದ್ದಾರೆ. ಅವರೇ ಬಂದು ನನ್ನ ಬಳಿ ಮಾತನಾಡಲಿ ಎಂಬ ಅಹಂನೊಂದಿಗೆ ಪ್ರಸನ್ನ ವಿಮುಖಗೊಂಡರೆ, ಅಹಂ ಇರುವವನ ಬಳಿ ನಾವೇಕೆ ಹೋಗಬೇಕು ಎಂದು ನಾಯಕರು ಹಿಂದೆಗೆದ್ದರಿಂದ ಹಲವಾರು ನಾಯಕರು ಹುಟ್ಟಿಕೊಳ್ಳಲು ಸಾಧ್ಯವಾಯಿತು. ಇದನ್ನರಿತ ನಾಯಕರು ಶುಕ್ರವಾರ ಸಭೆಯನ್ನು ಏರ್ಪಡಿಸಿ ತೀರ್ಮಾನಕ್ಕೆ ಬಂದಿದ್ದಾರೆ.


ಈ ಸಭೆಯಲ್ಲಿ ಕಟ್ಟಕಡೆಯದಾಗಿ ಕಾಂಗ್ರೆಸ್ ಧುರೀಣರು, ಶಾಸಕರು ಆಗಿದ್ದ ದಿವಂಗತ ಡಿ ಟಿ ರಾಮು ರವರ ಪುತ್ರ ಡಾ ಭಗತ್ ರಾಮ್ ರವರನ್ನು ಕಣಕ್ಕಿಳಿಸಲು ಸಭೆಯಲ್ಲಿ ತೀರ್ಮಾನಿಸಿಲಾಗಿದೆ. ಅಲ್ಲಿಯೂ ಸಹ ಎಲ್ಲಾ ನಾಯಕರನ್ನು ಹಿಂದಿಕ್ಕಿ ಪ್ರಸನ್ನ ರವರೇ ಸೂಕ್ತ ಎಂಬ ಆಶಯ ವ್ಯಕ್ತವಾಗಿದೆ. ಅಷ್ಟರಲ್ಲಿ ಭಗತ್ ರಾಮ್ ರವರನ್ನು ಸೋಮವಾರ ಅರ್ಜಿ ಹಾಕಲು ಸೂಚಿಸಿದ ನಂತರವೂ ಸಂಸದ ಡಿ ಕೆ ಸುರೇಶ್ ರವರೇ ಪ್ರಸನ್ನ ಪಿ ಗೌಡ ರಿಗೆ ಕರೆಮಾಡಿ ಯಾವುದೇ ರೀತಿಯ ಗೊಂದಲಗಳಿಗೆ ಎಡೆಮಾಡಿಕೊಡದೆ, ಸೋಮವಾರ ಅರ್ಜಿ ಹಾಕಲು ಸೂಚಿಸಿದ್ದಾರೆ ಎಂದು ಸ್ವತಃ ಪ್ರಸನ್ನ ಪಿ ಗೌಡರೇ ನಮ್ಮ ಪತ್ರಿಕೆಗೆ ಹೇಳಿಕೆ ನೀಡಿದರು. ಅಂತೂ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲಾ ಎನ್ನುವ ಹಂತಕ್ಕೆ ಹೋಗಿದ್ದು, ಸೋಮವಾರದ ವೇಳೆಗೆ ಮೂರು ಮಂದಿ ಅರ್ಜಿ ಗುಜರಾಯಿಸುತ್ತಿರುವುದು ಸಹ ವಿಶೇಷ.


*ಚನ್ನಪಟ್ಟಣದಲ್ಲಿ ಬೀಡುಬಿಟ್ಟು ಡಾ ಭಗತ್ ರಾಮ್*

ಡಿ ಕೆ ಸಹೋದರರ ಅಣತಿಯಂತೆ ಡಾ ಭಗತ್ ರಾಮ್ ರವರು ಶನಿವಾರ ಬೆಳಿಗ್ಗೆಯಿಂದಲೇ ಚನ್ನಪಟ್ಟಣಕ್ಕೆ ಬಂದು ತಮ್ಮ ಹಿತೈಷಿಗಳ ಬಳಿ ಮಾತುಕತೆ ನಡೆಸುತ್ತಿದ್ದಾರೆ. ಡಿ ಕೆ ಶಿವಕುಮಾರ್ ರವರು ನೀನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ನಾನಿದ್ದೇನೆ ಸೋಮವಾರ ಅರ್ಜಿ ಹಾಕು ಎಂದು ಹೇಳಿರುವುದನ್ನೆ ಆನೆ ಬಲ ಎಂದುಕೊಂಡ ಅವರು ಮುಂಜಾನೆಯಿಂದಲೇ ನಗರ ಸೇರಿದಂತೆ ತಾಲ್ಲೂಕಿನ ಹಲವರು ಧುರೀಣರನ್ನು ಕಂಡು ತಮ್ಮನ್ನು ಕೈ ಹಿಡಿಯುವುಂತೆ ಕೇಳಿಕೊಳ್ಳುತ್ತಿದ್ದಾರೆ. ನಮ್ಮ ಪತ್ರಿಕೆಗೆ ಹೇಳಿಕೆ ನೀಡಿದ ಅವರು ಸಹೋದರರಿಬ್ಬರು ಅರ್ಜಿ ಹಾಕಲು ತಿಳಿಸಿದ್ದಾರೆ. ಆದ್ದರಿಂದ ನಾನು ಕ್ಷೇತ್ರಕ್ಕೆ ಬಂದಿದ್ದೇನೆ. ಹೈಕಮಾಂಡ್ ಸೂಚನೆಯಂತೆ ಸೋಮವಾರ ಅರ್ಜಿ ಹಾಕುವುದಾಗಿ ಅವರು ತಿಳಿಸಿದ್ದಾರೆ.


*ಪ್ರಸನ್ನ ಬಂದರೆ ಮಾತ್ರ ಕ್ಷೇತ್ರ ಟಫ್*

ಗೆಲುವು ಯಾರದ್ದಾದರೂ ಆಗಬಹುದು. ಕಾಂಗ್ರೆಸ್ ಪಕ್ಷದಲ್ಲಿ ಪ್ರಸನ್ನ ಪಿ ಗೌಡ ಬಿಟ್ಟು ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ಹೆಚ್ಡಿಕೆ ಮತ್ತು ಸಿಪಿವೈ ನಡುವೇ ಮಾತ್ರ ಜಿದ್ದಾಜಿದ್ದಿ ಏರ್ಪಡುತ್ತಿತ್ತು. ಪ್ರಸನ್ನ ಅಖಾಡಕ್ಕೆ ಇಳಿದರೆ ಎಲ್ಲರಿಗೂ ಈ ಚುನಾವಣೆ ಜಿದ್ದಾಜಿದ್ದಿಯಾಗಿ ಮಾರ್ಪಡುವುದರ ಜೊತೆಗೆ ಯಾವುದೇ ಅಭ್ಯರ್ಥಿ ಗೆದ್ದರೂ ಅದು ಪ್ರಯಾಸದ ಗೆಲುವಾಗಲಿದೆ ಎಂಬುದು ಸಾಮಾನ್ಯ ಮತದಾರರ ಬಹಿರಂಗ ಹೇಳಿಕೆಯಾಗಿದೆ. ರಾಜಕೀಯ ಕ್ಷೇತ್ರಕ್ಕೆ ಹೊಸಬರಾದ ಪ್ರಸನ್ನರವರನ್ನು ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಮುಖಂಡರು ಸಣ್ಣಪುಟ್ಟ ತಪ್ಪುಗಳನ್ನು ಕಡೆಗಣಿಸಿ ಅವರಿಗೆ ಒಗ್ಗಟ್ಟಿನ ಬೆಂಬಲ ನೀಡಿದರೆ ಗೆಲುವು ಅಸಾಧ್ಯವಲ್ಲ ಎಂಬುದು ಕಾಂಗ್ರೆಸ್ ನ ಕಟ್ಟಾ ಮತದಾರರ ಅನಿಸಿಕೆಯಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑