Tel: 7676775624 | Mail: info@yellowandred.in

Language: EN KAN

    Follow us :


ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು

Posted date: 03 Dec, 2022

Powered by:     Yellow and Red

ರಸ್ತೆ ಅಭಿವೃದ್ಧಿಗೆ ಅಡ್ಡಲಾಗಿದ್ದ ಖಬರಸ್ಥಾನ ಮತ್ತು ದೇವಸ್ಥಾನವನ್ನು ಮುಂಜಾನೆ ತೆರವುಗೊಳಿಸಿದ ಅಧಿಕಾರಿಗಳು

ಚನ್ನಪಟ್ಟಣ: ಸಾತನೂರು ರಸ್ತೆ ಎಂದೆ ಪ್ರಸಿದ್ದಿಯಾದ ಚನ್ನಪಟ್ಟಣ-ಹಲಗೂರು ರಾಜ್ಯ ಹೆದ್ದಾರಿಯಲ್ಲಿದ್ದ ನಗರಕ್ಕೆ ಹೊಂದಿಕೊಂಡಿರುವ ರಸ್ತೆಯ ಪಕ್ಕದಲ್ಲಿದ್ದ ಮುಸ್ಲಿಂ ಸಮುದಾಯದ ಸ್ಮಶಾನ (ಖಬರ್ ಸ್ಥಾನ) ವನ್ನು ಇಂದು ಮುಂಜಾನೆ ಐದು ಗಂಟೆ ಸಮಯದಲ್ಲಿ ನೆಲಸಮಗೊಳಿಸಲಾಯಿತು.


ಸರಿಸುಮಾರು ಈ ರಸ್ತೆ ಹುಟ್ಟಿದಂದಿನಿಂದಲೂ ಮುಸ್ಲಿಂ ಸಮುದಾಯದ ಸ್ಮಶಾನ ಮತ್ತು ಅರಳಿ ಮರ ಸೇರಿದಂತೆ ಒಂದು ಹಿಂದೂ ದೇವಾಲಯವೊಂದು ಅಭಿವೃದ್ಧಿಗೆ ಅಡ್ಡಗಾಲಾಗಿ ಪರಿಣಮಿಸಿತ್ತು. ಒತ್ತುವರಿ ತೆರವುಗೊಳಿಸುವ ಎಲ್ಲಾ ಸಂದರ್ಭಗಳಲ್ಲಿಯೂ ಧರ್ಮ ಅಡ್ಡ ಬಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮೈಲಿದೂರ ನಿಲ್ಲುತ್ತಿದ್ದರು. ಎರಡೂ ಸಮುದಾಯದವರನ್ನು ಒಪ್ಪಿಸಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಇದುವರೆಗೂ ಮಾಡಲಾಗಿರಲಿಲ್ಲ.


ಸಾತನೂರು ಸರ್ಕಲ್ ನಿಂದ ಹರಿಸಂದ್ರ ಗೇಟ್ ವರೆಗೂ ದ್ವಿಪಥ ರಸ್ತೆ ಮಾಡುವಾಗಲೂ ದೇವಾಲಯ ಮತ್ತು ಖಬರಸ್ಥಾನದ ಜಾಗವನ್ನು ಹಾಗೆಯೇ ಬಿಟ್ಟು ದ್ವಿಪಥ ರಸ್ತೆ ಮಾಡಿದ್ದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಇಲಾಖಾಧಿಕಾರಿಗಳ ಮೇಲೆ ಸಹಜವಾಗಿ ಅಸಮಾಧಾನಗೊಂಡಿದ್ದರು. ಇದರ ಜೊತೆಗೆ ಕೋಟ್ಯಂತರ ರೂಪಾಯಿ ಹಣದಲ್ಲಿ ಅಭಿವೃದ್ಧಿ ಮಾಡಿದ ಈ ರಸ್ತೆಯಲ್ಲಿ ತೆರವುಗೊಳಿಸದ ಈ ಎರಡು ಜಾಗದ ಹಣ ಎಲ್ಲಿದೆ ಎಂಬುದನ್ನು ಸಹ ಇಲಾಖೆಯ ಅಧಿಕಾರಿಗಳು ತಿಳಿಸಬೇಕೆಂಬುದು ಸಹ ಪ್ರಯಾಣಿಕರ ಒತ್ತಾಯವಾಗಿದೆ.


ಖಡಕ್ ಡಿಸಿ ಮತ್ತು ಎಸ್ಪಿ

ಸಾತನೂರು ರಸ್ತೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ ಸಂತೋಷ್ ಬಾಬು ರವರ ಮೂಲಕ ಸಾಮಾಜಿಕ ಕಾರ್ಯಕರ್ತರೊಬ್ಬರು ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರ ರವರಿಗೆ ಹಲವಾರು ಬಾರಿ ಮನವಿ ಮಾಡಿದ್ದರು. ಕೂಲಂಕುಷವಾಗಿ ಪರಿಶೀಲಿಸಿ, ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸಿ, ಯೋಜನಾ ಪ್ರಾಧಿಕಾರದ ನಿರ್ದೇಶಕ ರಮೇಶ್, ತಹಶಿಲ್ದಾರ್ ಬಿ ಕೆ ಸುದರ್ಶನ್, ಡಿವೈಎಸ್ಪಿ ಓಂಪ್ರಕಾಶ್, ಪೌರಾಯುಕ್ತ ಸಿ ಪುಟ್ಟಸ್ವಾಮಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಒಂದು ದಿನಾಂಕವನ್ನು ನಿಗದಿಪಡಿಸಿದರಾದರೂ ಧರ್ಮ ಅಡ್ಡ ಬಂದಿದ್ದರಿಂದ ಸಮುದಾಯದ ಗುರುಗಳ ಸಭೆಯನ್ನು ಏರ್ಪಡಿಸಲಾಗಿತ್ತು.


ಸ್ಪಂದಿಸಿದ ಸಮುದಾಯಗಳು

ಎರಡು ಕೋಮಿನ ಸಮುದಾಯಗಳೂ ರಸ್ತೆ ಅಭಿವೃದ್ಧಿಗೆ ಅಡ್ಡಲಾಗುವುದಿಲ್ಲ. ಇದು ಎಲ್ಲರಿಗೂ ಅನುಕೂಲವಾಗುವುದರಿಂದ ನಮ್ಮ ಪೂರ್ವಜರ ಸಮಾಧಿಗಳನ್ನು, ದೇವಾಲಯದಲ್ಲಿರುವ ವಿಗ್ರಹಗಳನ್ನು ಬೇರೆಡೆಗೆ ಸ್ಥಳಾಂತರಿಸಿಕೊಳ್ಳಲು ಸಮಯ ನೀಡಬೇಕೆಂದು, ಧರ್ಮಗುರುಗಳು, ಜನಪ್ರತಿನಿಧಿಗಳು ಹಾಗೂ ಸಮುದಾಯದ ಮುಖಂಡರು ಮನವಿ ಮಾಡಿದ್ದು, ಹಂತಹಂತವಾಗಿ ಮೂರ್ನಾಲ್ಕು ಸಮಯ ಮುಂದೆ ಹೋಗಿ, ಎಲ್ಲರೂ ಸ್ಥಳಾಂತರಗೊಳಿಸಿಕೊಂಡ ನಂತರ ಕೊನೆಗೆ ಡಿಸೆಂಬರ್ ಮೂರನೇ ತಾರೀಖು ಮುಂಜಾನೆ ಐದು ಗಂಟೆಗೆ ಯಾವುದೇ ಅಡೆತಡೆಯಿಲ್ಲದೆ ನೆಲಸಮಗೊಳಿಸಲಾಯಿತು.


ಕಾರ್ಯಾಚರಣೆ ನೇತೃತ್ವವನ್ನು ಸ್ವತಃ ಎಸ್ಪಿ ಮತ್ತು ಡಿಸಿ ಯವರೇ ವಹಿಸಿಕೊಂಡಿದ್ದು, ಪೋಲೀಸ್ ಬಂದೋಬಸ್ತನ್ನು ಡಿವೈಎಸ್ಪಿ ಓಂಪ್ರಕಾಶ್ ಒದಗಿಸಿದ್ದರು. ನಗರಸಭಾ ಪೌರಾಯುಕ್ಕ ಸಿ ಪುಟ್ಟಸ್ವಾಮಿ ಯವರು ಅವರದೇ ರೀತಿಯಲ್ಲಿ ಎಲ್ಲಾ ಸಹಕಾರವನ್ನು ನೀಡಿ ಅಭಿವೃದ್ಧಿ ಪಥದತ್ತ ನಮ್ಮ ಹೆಜ್ಜೆ ಎಂಬುದನ್ನು ಸಾಬೀತುಪಡಿಸಿದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಖಬರಸ್ಥಾನ ಮತ್ತು ದೇವಾಲಯವನ್ನು ನೆಲಸಮಗೊಳಿಸಿ ಸಮತಟ್ಟು ಮಾಡಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಲ್ಲಿ ಯಶಸ್ವಿಯಾದರು. ಈ ಎಲ್ಲಾ ಉಸ್ತುವಾರಿಯನ್ನು ತಹಶಿಲ್ದಾರ್ ಬಿ ಕೆ ಸುದರ್ಶನ್ ರವರು ವಹಿಸಿಕೊಂಡಿದ್ದರು.

ರಸ್ತೆ ಅಭಿವೃದ್ಧಿಗೆ ಕಾರಣಕರ್ತರಾದ ಎಲ್ಲಾ ಅಧಿಕಾರಿಗಳನ್ನು ಸಾರ್ವಜನಿಕರು 

ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.


ಹಲವಾರು ವರ್ಷಗಳಿಂದ ಈ ಕೆಲಸ ನೆನೆಗುದಿಗೆ ಬಿದ್ದಿತ್ತು. ಅಭಿವೃದ್ಧಿ ವಿಷಯದಲ್ಲಿ ಜಿಲ್ಲಾಡಳಿತ ಯಾವಾಗಲೂ ಮುಂದಿರುತ್ತದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೆ ಸಂತೋಷ್ ಬಾಬು, ಯೋಜನಾ ಪ್ರಾಧಿಕಾರದ ರಮೇಶ್, ತಾಲ್ಲೂಕು ಆಡಳಿತ, ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಜೊತೆಗೆ ಸಮುದಾಯದ ಧರ್ಮಗುರುಗಳು ಮತ್ತು ಮುಖಂಡರು ಸಾಥ್ ನೀಡಿದ್ದಾರೆ. ಇಂದಿನಿಂದಲೇ ಇದರ ಮುಂದಿನ ಅಭಿವೃದ್ಧಿ ಕೆಲಸವೂ ಆಗಲಿದೆ.
ಡಾ ಅವಿನಾಶ್ ಮೆನನ್ ರಾಜೇಂದ್ರ. ಜಿಲ್ಲಾಧಿಕಾರಿ ಗಳು


ಸರ್ವರಿಗೂ ಅನುಕೂಲವಾಗುವ ರಸ್ತೆ ಅಭಿವೃದ್ಧಿಗೆ ಯಾರೂ ಅಡ್ಡಗಾಲಾಗಬಾರದು. ಇದರಲ್ಲಿ ಯಾವುದೇ ಧರ್ಮ, ಜಾತಿ, ರಾಜಕೀಯ ಅಡ್ಡಬರಬಾರದು. ಸರ್ವಜನಾಂಗದ ಶಾಂತಿಯ ತೋಟ ಎಂಬಂತೆ ನಾವೆಲ್ಲರೂ ಒಂದೇ ಎನ್ನುವಾಗ ಅಧಿಕಾರಿಗಳು ಅಭಿವೃದ್ಧಿಗೆ ಒತ್ತುನೀಡಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ತಡವಾದರೂ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಉದಾರವಾಗಿ ಒಪ್ಪಿಕೊಂಡ ಹಿಂದು-ಮುಸ್ಲಿಂ ಬಾಂಧವರಿಗೂ,  ಜಿಲ್ಲಾಧಿಕಾರಿ, ಪೋಲೀಸ್ ವರಿಷ್ಠಾಧಿಕಾರಿ ಹಾಗೂ ಭಾಗವಹಿಸಿದ ಎಲ್ಲಾ ತಾಲ್ಲೂಕು ಅಧಿಕಾರಿಗಳಿಗೂ, ಸಿಬ್ಬಂದಿಗಳಿಗೂ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.

ಸಿ ಪುಟ್ಟಸ್ವಾಮಿ, ಹಿರಿಯ ರೈತಮುಖಂಡ


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑