ದಲಿತರಿಗೆ ಶವಸಂಸ್ಕಾರ ಮಾಡಲು ಬೇರೆ ಜಾಗ ನೀಡುವಂತೆ ರಾತ್ರಿವರೆಗೂ ತಹಶಿಲ್ದಾರ್ ಕಛೇರಿ ಮುಂದೆ ಶವವಿಟ್ಟು ಪ್ರತಿಭಟನೆ

ಚನ್ನಪಟ್ಟಣ: ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವಿದ್ದು, ದಲಿತರು ಕೆರೆ ಜಾಗದಲ್ಲಿ ಶವವನ್ನು ಹೂಳುತ್ತಿದ್ದು, ಆ ಜಾಗ ನಮಗೆ ಸೇರಿದ್ದು ಎಂದು ಸವರ್ಣೀಯರೊಬ್ಬರು ತಡೆಯೊಡ್ಡಿದರು ಎಂಬ ಕಾರಣಕ್ಕೆ ಮೃತ ವ್ಯಕ್ತಿಯ ಶವವನ್ನು ತಾಲೂಕು ಕಚೇರಿ ಆವರಣಕ್ಕೆ ತಂದ ಗ್ರಾಮಸ್ಥರು ರಾತ್ರಿವರೆಗೂ ಪ್ರತಿಭಟನೆ ನಡೆಸಿದರು.
ಕೋಡಂಬಳ್ಳಿ ಗ್ರಾಮದಲ್ಲಿ ದಲಿತರ ಅಂತ್ಯಸಂಸ್ಕಾರಕ್ಕೆಂದು ಬೇರೆ ಜಾಗ ಮೀಸಲಿಟ್ಟಿಲ್ಲ. ಸರ್ಕಾರಿ ಕೆರೆಯ ಜಾಗದಲ್ಲಿ ಸಂಸ್ಕಾರ ಮಾಡುತ್ತಿದ್ದರು. ಇತ್ತೀಚೆಗೆ ಓರ್ವ ವ್ಯಕ್ತಿ ಒತ್ತುವರಿ ಮಾಡಿಕೊಂಡು ಕೆಲ ಮೇಲ್ವರ್ಗದವರು ಅಂತ್ಯ ಸಂಸ್ಕಾರ ಮಾಡಲು ತೊಂದರೆ ನೀಡುತ್ತಿದ್ದಾರೆ. ಈ ಕೂಡಲೇ ಈ ಸಮಸ್ಯೆ ಬಗೆಹರಿಸಿ ಶಾಶ್ವತ ಪರಿಹಾರ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಕೋಡಂಬಳ್ಳಿ ಗ್ರಾಮದ ಬೀರಯ್ಯ ಎಂಬ ವ್ಯಕ್ತಿ ಮೃತಪಟ್ಟಿದ್ದು, ಅವರ ಶವ ಸಂಸ್ಕಾರ ನಡೆಸಲು ಮುಂದಾದ ವೇಳೆ ಈ ಜಾಗ ನಮಗೆ ಸೇರಿದ್ದು ಎಂದು ಕೆಲವರು ತಗಾದೆ ತೆಗೆದಿದ್ದಾರೆ. ಸುಮಾರು ವರ್ಷಗಳಿಂದ ನಾವು ಇದೇ ಜಾಗದಲ್ಲಿ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದರೂ ಸಹ ಈ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಅಕ್ಕಪಕ್ಕದ ಜಮೀನುಗಳ ಮಾಲೀಕರು ತೊಂದರೆ ನೀಡುತ್ತಿದ್ದಾರೆ. ಆದ್ದರಿಂದ ಈ ಕೂಡಲೇ ಸಮಸ್ಯೆಗೆ ಶಾಶ್ವತಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ನಮ್ಮ ತಾತ ಮುತ್ತಾತನ ಕಾಲದಿಂದಲೂ ಇದೇ ಜಾಗದಲ್ಲಿ ಶವ ಸಂಸ್ಕಾರ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಇದೀಗ ಕೆಲವರು ನಮಗೆ ಸೇರಿದ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾರೆ. ಈ ಕೂಡಲೇ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಇಲ್ಲದಿದ್ದಲಿ ಇಲ್ಲಿಂದ ಕದಲುವುದಿಲ್ಲ ಎಂದು ಹಠ ಹಿಡಿದು ಕುಳಿತರು.
ಸರ್ಕಾರಿ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡು ದೌರ್ಜನ್ಯ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಸ್ಮಶಾನಕ್ಕೆ ಮೀಸಲಿಟ್ಟಿರುವ ಜಾಗವನ್ನು ದಲಿತರ ಅಂತ್ಯಸಂಸ್ಕಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಡಂಬಳ್ಳಿ ಗ್ರಾಮದ ದಲಿತರಿಗೆ ಪ್ರತಿಬಾರಿಯ ಇದೇ ಸಮಸ್ಯೆ ಕಾಡುತ್ತಿದೆ. ಮಾಜಿ ಸಿಎಂ ಹಾಗೂ ಹಾಲಿ ಶಾಸಕ ಎಚ್ ಡಿ ಕುಮಾರಸ್ವಾಮಿ ಸ್ವ ಕ್ಷೇತ್ರದಲ್ಲಿ ಇಂತಹ ಘಟನೆಗಳು ಆಗಾಗ ನಡೆಯುತ್ತಿರುವುದು ದುರ್ವದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಈ ವಿಷಯವಾಗಿ ಗ್ರಾಮದಲ್ಲಿ ಗಲಾಟೆ ನಡೆಯುತ್ತಿದ್ದಂತೆಯೇ ಶವವನ್ನು ನಗರಕ್ಕೆ ತರದಂತೆ ಅಲ್ಲಿಯೇ ಇತ್ಯರ್ಥಪಡಿಸುವಂತೆ ತಹಶಿಲ್ದಾರ್ ಸುದರ್ಶನ್ ಮತ್ತು ಡಿವೈಎಸ್ಪಿ ಓಂಪ್ರಕಾಶ್ ರವರು ಅಕ್ಕೂರು ಪೋಲೀಸರಿಗೆ ತಿಳಿಸಿ, ಹೊಂಗನೂರು ಗ್ರಾಮದ ಬಳಿ ತಡೆದರಾದರೂ ಇದಕ್ಕೆ ಒಪ್ಪದೆ ಕಛೇರಿ ಮುಂಭಾಗ ಬಂದು ಪ್ರತಿಭಟನೆಗೆ ಮುಂದಾದರು. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ತೆರಳಿದ ತಹಸೀಲ್ದಾರ್ ಸ್ಮಶಾನ ಜಾಗದ ಸರ್ವೇ ನಡೆಸಿ, ಟ್ರಂಚ್ ತೆಗೆಸಿ ಶವತಂದು ಹೂಳುವಂತೆ ತಿಳಿಸಿದರಾದರೂ ಪಹಣಿಯಲ್ಲಿ ಸ್ಮಶಾನ ಜಾಗ ಎಂದು ನಮೂದಾಗಿ ಬರುವವರೆಗೆ ಜಾಗದಿಂದ ಕದಲುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಸುತ್ತಾ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾಧಿಕಾರಿಗಳು ಬರುವವರೆಗೂ ಪಹಣಿಯಲ್ಲಿ ಸ್ಮಶಾನ ಎಂದು ನಮೂದಾಗುವವರೆಗೂ ಶವವನ್ನು ತೆಗೆಯುವುದಿಲ್ಲಾ ಎಂದು ಪಟ್ಟು ಹಿಡಿದ ದಲಿತ ಮುಖಂಡರು ತಹಶಿಲ್ದಾರ್ ಕಛೇರಿ ಮುಂಭಾಗ ಬೆಂಕಿ ಹಾಕಿ, ಶವಸಂಸ್ಕಾರ ಮಾಡಲು ಗುಂಡಿ ತೆಗೆಯಲು ಮುಂದಾದಾಗ ಪೋಲೀಸರು ತಡೆದರು ಈ ಸಂದರ್ಭದಲ್ಲಿ ನಗರ ವೃತ್ತ ನಿರೀಕ್ಷಕಿ ಶೋಭಾ, ಪಿಎಸ್ಐ ಮಮತಾ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ರಾತ್ರಿ ಎಂಟು ಗಂಟೆಯ ನಂತರ ತಹಶಿಲ್ದಾರ್, ಡಿವೈಎಸ್ಪಿ ಯವರು, ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರ ಹಾಗೂ ಪೋಲೀಸ್ ವರಿಷ್ಠಾಧಿಕಾರಿ ಕೆ ಸಂತೋಷ್ ಬಾಬು ರವರ ಸೂಚನೆ ಮೇರೆಗೆ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಸದ್ಯ ಅಲ್ಲಿ ಯಾರೂ ನಿಮ್ಮನ್ನು ತಡೆಯುವುದಿಲ್ಲ. ಸ್ಮಶಾನಕ್ಕೆ ನಿಮ್ಮ ಗ್ರಾಮದಲ್ಲಿ ಯಾರಾದರೂ ಜಾಗ ನೀಡಲು ಮುಂದಾದರೆ ಸರ್ಕಾರದಿಂದ ಖರೀದಿಸಿ ನೀಡುತ್ತೇವೆ. ವ್ಯಕ್ತಿ ಮೃತನಾಗಿ ಈಗಾಗಲೇ ಇಪ್ಪತ್ತನಾಲ್ಕು ಗಂಟೆಗಳು ಕಳೆದಿರುವುದರಿಂದ ಶವಸಂಸ್ಕಾರ ಮಾಡುವುದು ಉತ್ತಮ ಎಂದು ಸಲಹೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಹಿಂತೆಗೆದು ಶವವನ್ನು ಕೊಂಡೊಯ್ದು ತಡರಾತ್ರಿ ಸಂಸ್ಕಾರ ಮುಗಿಸಿದರು.
ಪ್ರತಿಭಟನೆಯಲ್ಲಿ ಮೃತರ ಕುಟುಂಬ ವರ್ಗ, ತಾಲ್ಲೂಕಿನ ದಲಿತಪರ ಸಂಘಟನೆಗಳ ಪದಾಧಿಕಾರಿಗಳು, ರೈತಸಂಘದ ಕೆಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೆರೆ ಜಾಗವನ್ನು ಸ್ಮಶಾನದ ಜಾಗ ಎಂದು ಪಹಣಿಯಲ್ಲಿ ನಮೂದಿಸಲು ಬರುವುದಿಲ್ಲ. ಯಾರಾದರೂ ಕೊಡಲು ಮುಂದಾದರೆ ಸರ್ಕಾರದಿಂದ ಖರೀದಿ ಮಾಡಲು ಮುಂದಾಗುತ್ತೇವೆ. ೨೦೧೯-೨೦ನೇ ಸಾಲಿನಲ್ಲಿ ಆದೇಸ ಒಂದು ಹೊರಬಂದಿದ್ದು ಜಾತಿಗೊಂದು ಸ್ಮಶಾನ ನೀಡದೆ ಸರ್ವರಿಗೂ ಒಂದೇ ಸ್ಮಶಾನ ಎಂದು ಸಾರ್ವಜನಿಕ ಸ್ಮಶಾನ ಮೀಸಲಿಡಲು ಆದೇಶ ಹೊರಡಿಸಲಾಗಿದೆ. ಮೇಲಾಧಿಕಾರಿಗಳ ಆದೇಶದ ಮೇರೆಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳುತ್ತೇವೆ.
*ಬಿ ಕೆ ಸುದರ್ಶನ್ ತಹಶಿಲ್ದಾರ್ ಚನ್ನಪಟ್ಟಣ*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು