ಕೆಂಗಲ್ ಜಾತ್ರೆ ರದ್ದುಗೊಳಿಸಿದರೂ ಕಳೆಗಟ್ಟುತ್ತಿರುವ ಜಾನುವಾರುಗಳು

ಚನ್ನಪಟ್ಟಣ: ಜಾನುವಾರುಗಳಿಗೆ ಇತ್ತೀಚೆಗೆ ರಾಜ್ಯದಾದ್ಯಂತ ಚರ್ಮಗಂಟು ರೋಗ ಹರಡಿದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾಡಳಿತ ಇತಿಹಾಸ ಪ್ರಸಿದ್ಧ ಕೆಂಗಲ್ ದನಗಳ ಜಾತ್ರೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ನಡುವೆ ಈ ಆದೇಶಕ್ಕೆ ಸೆಡ್ಡು ಹೊಡೆದಿರುವ ರೈತರು ದನಗಳ ಜಾತ್ರೆ ನಡೆಸುವ ಮೂಲಕ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಯಥಾವತ್ತಾಗಿ ಮುಂದುವರೆಸಿದ್ದಾರೆ.
ಮಕರ ಸಂಕ್ರಾಂತಿಯ ಮರುದಿನ ಪ್ರತಿವರ್ಷ ಕೆಂಗಲ್ ದನಗಳ ಜಾತ್ರೆ ನಡೆಯುತ್ತದೆ. ಈ ಭಾಗದಲ್ಲಿ ಅಯ್ಯನಗುಡಿ ದನಗಳ ಜಾತ್ರೆ ಎಂದು ಸಾಕಷ್ಟು ಹೆಸರು ಗಳಿಸಿರುವ ಈ ಜಾತ್ರೆಯನ್ನು ಚರ್ಮಗಂಟು ರೋಗದಿಂದ ಜಿಲ್ಲಾಡಳಿತ ರದ್ದುಪಡಿಸಿತ್ತು. ಹೀಗಾಗಿ, ವರ್ಷದ ಮೊದಲ ದನಗಳ ಜಾತ್ರೆ ಎಂದೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಜಾತ್ರೆ ಈ ಬಾರಿ ಇಲ್ಲ ಎನ್ನಲಾಗಿತ್ತು. ಆದರೆ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸೆಡ್ಡು ಹೊಡೆದಿರುವ ರೈತರು, ನೂರಾರು ರಾಸುಗಳೊಂದಿಗೆ ರಾತ್ರೋರಾತ್ರಿ ಬಂದು ಜಾತ್ರೆ ಕಟ್ಟಿದ್ದಾರೆ. ಕೆಲವರು ನಿಷೇಧದ ಮಾಹಿತಿ ಅರಿಯದೇ ಜಾತ್ರೆಗೆ ಬಂದಿದ್ದರೆ, ಮತ್ತೆ ಕೆಲವರು ದೂರವಾಣಿ ಮೂಲಕ ಪರಸ್ಪರ ಮಾಹಿತಿ ರವಾನಿಸಿಕೊಂಡು ರಾಸುಗಳೊಂದಿಗೆ ಜಾತ್ರಾ ಸ್ಥಳಕ್ಕೆ ಬಂದಿದ್ದಾರೆ.
ದೇವಾಲಯದ ಆವರಣ ಹಾಗೂ ಹೆದ್ದಾರಿಬಿಟ್ಟು, ದೇವಾಲಯದ ಅನತಿ ದೂರದಲ್ಲಿರುವ ಖಾಸಗಿ ಜಮೀನುಗಳಲ್ಲಿ ರಾಸುಗಳನ್ನು ಕಟ್ಟಿ ಮಾರಾಟ ಮತ್ತು ಖರೀದಿ ನಡೆಸುತ್ತಿದ್ದಾರೆ. ಖರೀದಿದಾರರು ಕೂಡ ತಮ್ಮಿಷ್ಟದ ರಾಸುಗಳ ಖರೀದಿಯಲ್ಲಿ ತೊಡಗಿದ್ದಾರೆ.
*ನಿಷೇಧ ಮಾಡಲಾಗಿತ್ತು:*
ತಾಲೂಕಿನ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಕೆಂಗಲ್ ಆಂಜನೇಯ ಸ್ವಾಮಿ ಸನ್ನಿದ್ಧಿಯಲ್ಲಿ ಪ್ರತಿವರ್ಷವೂ ವಿಜೃಂಭಣೆಯ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಪ್ರಮುಖ ವಿಶೇಷವೆಂದರೆ ಇಲ್ಲಿ ನಡೆಯುವ ಬೃಹತ್ ದನಗಳ ಜಾತ್ರೆ. ಈ ದನಗಳ ಜಾತ್ರೆಯಲ್ಲಿ ರಾಸುಗಳನ್ನು ಮಾರಲು ಹಾಗೂ ಖರೀದಿ ಮಾಡಲು ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಜನರು ಆಗಮಿಸುತ್ತಿದ್ದಾರೆ. ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ರೈತರಲ್ಲದೇ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದಿಂದಲೂ ಈ ಜಾತ್ರೆಗೆ ರೈತರು ಬಂದು ರಾಸುಗಳನ್ನು ಖರೀದಿ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ದೊಡ್ಡ ಪ್ರಮಾಣದ ದನಗಳ ಜಾತ್ರೆ ಪ್ರತಿವರ್ಷ ನಡೆಯುತ್ತದೆ. ಆದರೆ, ಈ ಬಾರಿ ಹಸುಗಳಿಗೆ ಮಾರಣಾಂತಿಕ ಎನ್ನಲಾದ ಚರ್ಮಗಂಟು ರೋಗ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ದನಗಳ ವ್ಯಾಪಾರ ನಿಷೇದಿಸಲಾಗಿತ್ತು. ಜಿಲ್ಲಾ ಪಶುಪಾಲನೆ ಇಲಾಖೆ ವತಿಯಿಂದ ಕೆಂಗಲ್ ದನಗಳ ಜಾತ್ರೆ ನಿಷೇದಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಜಾತ್ರೆಯಲ್ಲಿ ಅತಿಹೆಚ್ಚು ದನಗಳು ಸೇರುವ ಕಾರಣ ರೋಗ ಭೀತಿಯನ್ನು ವ್ಯಕ್ತಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ದನಗಳ ಜಾತ್ರೆಯನ್ನು ನಿಷೇಧಿಸಿದ್ದರು.
ಆದರೆ, ಈ ನಿಷೇಧಕ್ಕೆ ತಲೆಕೆಡಿಸಿಕೊಳ್ಳದ ರೈತರು ನಿಧಾನವಾಗಿ ಜಾತ್ರೆಯನ್ನು ಕಟ್ಟುತ್ತಿದ್ದಾರೆ. ಹೆದ್ದಾರಿ ಬದಿ ಹಾಗೂ ದೇವಾಲಯದ ಆವರಣ ಬಿಟ್ಟು, ದೇವಾಲಯದ ಹಿಂಭಾಗವಿರುವ ಜಮೀನುಗಳಲ್ಲಿ ತಮ್ಮ ರಾಸುಗಳನ್ನು ಕಟ್ಟಿ ಮಾರಾಟ ನಡೆಸುತ್ತಿದ್ದಾರೆ. ಖದೀದಿದಾರರು ಸಹ ತಮ್ಮಿಷ್ಟದ ರಾಸುಗಳನ್ನು ಕೊಳ್ಳಲು ಹುಡುಕಾಟ ನಡೆಸುತ್ತಿದ್ದಾರೆ. ಈ ಹಿಂದೆ ಜಾತ್ರೆಗೆ ತಾಲೂಕು ಆಡಳಿತದ ವತಿಯಿಂದ ನೀರು, ವಿದ್ಯುತ್ ಹಾಗೂ ಮೂಲಭೂತ ಸವಲತ್ತುಗಳನ್ನು ಒದಗಿಸಲಾಗುತಿತ್ತು. ಆದರೆ, ನಿಷೇಧವಿರುವ ಕಾರಣ, ಈ ಬಾರಿ ಯಾವುದೇ ಸವಲತ್ತು ಕಲ್ಪಿಸಿಲ್ಲ. ಆದರೂ ತಲೆಕೆಡಿಸಿಕೊಳ್ಳದ ರೈತರು ತಾವೇ ಖಾಸಗಿಯಾಗಿ ನೀರು ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ.
*ಸಂಪ್ರದಾಯ ಸರಿ.., ಜಾಗ್ರತೆ ಬೇಡವೇ?*
ಮಕರ ಸಂಕ್ರಾಂತಿಯ ದಿನ ತಮ್ಮ ರಾಸುಗಳಿಗೆ ಕಿಚ್ಚು ಹಾಯಿಸಿದ ನಂತರ, ತಮ್ಮ ರಾಸುಗಳನ್ನು ಮಾರಾಟ ಮಾಡಲಿಚ್ಚಿಸುವ ರೈತರು ಕೆಂಗಲ್ ದನಗಳ ಜಾತ್ರೆಗೆ ತಮ್ಮ ರಾಸುಗಳನ್ನು ಕರೆದುಕೊಂಡು ಬರುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಅಯ್ಯನಗುಡಿ ಜಾತ್ರೆ ಎಂಬುದು ನಮ್ಮ ಸಂಪ್ರದಾಯ. ಕಳೆದ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಪಡಿಸಲಾಗಿತ್ತು. ಈ ಬಾರಿ ಚರ್ಮಗಂಟು ರೋಗ ಎಂದರೆ ಏನಾರ್ಥ. ರಾಸುಗಳನ್ನು ಮಾರಲು ಅಥವಾ ಕೊಳ್ಳಲು ಈ ಜಾತ್ರೆಯನ್ನೇ ನಂಬಿರುತ್ತೇವೆ ಎಂಬುದು ರೈತರ ವಾದವಾಗಿದೆ. ಆದರೆ, ಮಾಹಿತಿಗಳ ಪ್ರಕಾರ, ಈಗಾಗಲೇ ಜಿಲ್ಲೆಯ 571 ಗ್ರಾಮಗಳ 3,524 ಹಸುಗಳಿಗೆ ಚರ್ಮಗಂಟು ರೋಗ ತಗುಲಿದೆ. ಈಗಾಗಲೇ ಈ ಮಾರಣಾಂತಿಕ ಖಾಯಿಲೆಗೆ 319 ರಾಸುಗಳು ಮರಣಹೊಂದಿವೆ. ಈ ಕಾರಣದಿಂದ ತಮ್ಮ ಜಾನುವಾರುಗಳ ಬಗ್ಗೆ ಜಾಗ್ರತೆ ಇರಬೇಕಲ್ಲವೇ ಎಂಬ ಮಾತುಗಳು ಸಹ ಕೇಳಿಬಂದಿವೆ.
ಒಟ್ಟಾರೆ, ಕೆಂಗಲ್ ದನಗಳ ಜಾತ್ರೆ ನಿಧಾನಕ್ಕೆ ಕಳೆಗಟ್ಟುತ್ತಿದ್ದು, ರೈತರ ವಿರೋಧಕ್ಕೆ ಬೆದರಿರುವ ಆಡಳಿತ ಕಂಡರೂ ಕಾಣದಂತೆ ಜಾಣಕುರುಡುತನ ಪ್ರದರ್ಶನ ನಡೆಸುತ್ತಿದೆ.
*ಕೆಂಗಲ್ ದನಗಳ ಜಾತ್ರೆಯನ್ನು ಚರ್ಮಗಂಟು ರೋಗದಿಂದ ನಿಷೇಧಿಸಲಾಗಿದೆ. ಈ ನಡುವೆ ಕೆಲ ರೈತರು ಮಾಹಿತಿ ಕೊರತೆಯಿಂದ ತಮ್ಮ ರಾಸುಗಳನ್ನು ಜಾತ್ರೆಗೆ ಕರೆತಂದಿದ್ದಾರೆ. ನಾವು ಸಹ ನಿಷೇಧದ ಬಗ್ಗೆ ರೈತರಿಗೆ ಮತ್ತೊಮ್ಮೆ ತಿಳಿಸಿದ್ದೇವೆ. ದೇವಾಲಯದ ಹೊರಭಾಗದಲ್ಲಿ ಜಾತ್ರೆ ಕಟ್ಟಿದ್ದಾರೆ. ಇನ್ನೊಮ್ಮೆ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು.*
*-ಲಕ್ಷ್ಮಿದೇವಿ, ಪ್ರಭಾರ ತಹಸೀಲ್ದಾರ್, ಚನ್ನಪಟ್ಟಣ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು