Tel: 7676775624 | Mail: info@yellowandred.in

Language: EN KAN

    Follow us :


"ನಾಡೋಜ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ "

Posted date: 24 Jun, 2018

Powered by:     Yellow and Red

ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ವತಿಯಿಂದ ದಿನಾಂಕ 26/06/2018 ನೇ ಮಂಗಳವಾರ ಸಂಜೆ 05:00 ಗಂಟೆಗೆ ಬೆಂಗಳೂರಿನ ಜೆ ಸಿ ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಖ್ಯಾತ ತೊಗಲುಗೊಂಬೆ ಕಲಾವಿದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ರವರಿಗೆ ನಾಡೋಜ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುವುದು.


ಕರ್ನಾಟಕ ಜಾನಪದ ಪರಿಷತ್ತು ಮತ್ತು ಹೆಚ್ ಎಲ್ ನಾಗೇಗೌಡರ ಬಗ್ಗೆ;


ದಿವಂಗತ ಹೆಚ್ ಎಲ್ ನಾಗೇಗೌಡರು ನಿವೃತ್ತ ಐಎಎಸ್‌ ಅಧಿಕಾರಿಯಾಗಿದ್ದವರು, ಅಧಿಕಾರದಲ್ಲಿದ್ದಾಗಲೇ ಮೂಲ ಜಾನಪದದ ಬಗ್ಗೆ ಅಪಾರ ತಿಳುವಳಿಕೆಯ ಜೊತೆಗೆ ಅಭಿಮಾನ ಬೆಳೆಸಿಕೊಂಡಿದ್ದರು.

ಮೂಲ ಜಾನಪದ ಕಲೆ, ಸಾಹಿತ್ಯ ಮತ್ತು ಪರಿಕರಗಳನ್ನು ಉಳಿಸಲು ಕೆಲವು ಸ್ನೇಹಿತರ ತಂಡ ಕಟ್ಟಿಕೊಂಡು ಹಳ್ಳಿ ಹಳ್ಳಿಗಳನ್ನು ಸಂಪರ್ಕಿಸಿ ಹಳ್ಳಿಗರು ನಿತ್ಯ ಉಪಯೋಗಿಸುತಿದ್ದ ಹಲವಾರು ರೀತಿಯ ಅದರಲ್ಲೂ ವ್ಯವಸಾಯ ಪರಿಕರಗಳನ್ನು ಸಂಗ್ರಹಿಸುವ ಜೊತೆಗೆ ಜಾನಪದ ಕಲೆಗಳನ್ನು, ಕಲಾತಂಡಗಳನ್ನು ಹಾಗೂ ಮೂಲ ಜನಪದ ಗೀತೆಗಳನ್ನು ಸಂಗ್ರಹಿಸಿ ಬೆಂಗಳೂರು ಮೈಸೂರು ಹೆದ್ದಾರಿಯ ರಾಮನಗರ ಚನ್ನಪಟ್ಟಣದ ನಡುವೆ ಜಾನಪದ ಲೋಕ ವನ್ನು ಸೃಷ್ಟಿಸಿ ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಹಿಂದಿನ ಪ್ರಶಸ್ತಿ ಪುರಸ್ಕೃತರು;


ಶ್ರೀಯುತ ಹೆಚ್ ಎಲ್ ನಾಗೇಗೌಡ ರಿಗೆ ನೂರು ವಸಂತಗಳು ತುಂಬಿದಕ್ಕಾಗಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ ತಿಮ್ಮೇಗೌಡರು ಮತ್ತು ಆಡಳಿತ ಮಂಡಳಿಯು ಈ ಪ್ರಶಸ್ತಿಯನ್ನು ಕೊಡಲು ತೀರ್ಮಾನಿಸಿದರು. 2015 ನೇ ಸಾಲಿನಲ್ಲಿ ಪದ್ಮಶ್ರೀ, ಪದ್ಮಭೂಷಣ ಪಾಂಡವಾನಿ ಕಲಾವಿದೆ ಶ್ರೀ ತೀಜನ್ ಬಾಯಿ ರವರಿಗೆ, 2016 ನೇ ಸಾಲಿನಲ್ಲಿ ಮಣಿಪಾಲದ ಹಸ್ತಶಿಲ್ಪ ಟ್ರಸ್ಟ್ ನ ರೂವಾರಿ ಶ್ರೀ ವಿಜಯನಾಥ ಶೆಣೈ ರವರಿಗೆ, 2017 ನೇ ಸಾಲಿನಲ್ಲಿ ರಾಜಸ್ಥಾನಿ ಜನಪದ ಸೂಫಿ ಹಾಗೂ ಕಬೀರ್ ತಾತ್ವಿಕ ಹಿನ್ನೆಲೆಯ ಪ್ರಸಿದ್ಧ ಸಂಗೀತ ಕಲಾವಿದ ಪದ್ಮಶ್ರೀ, ಪದ್ಮಭೂಷಣ ಶ್ರೀ ಮುಖ್ತಿಯಾರ್ ಅಲಿ ರವರಿಗೆ ಹಾಗೂ 2018 ನೇ ಸಾಲಿನ ಪ್ರಶಸ್ತಿಯನ್ನು ಬಳ್ಳಾರಿ ಜಿಲ್ಲೆಯ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ರವರಿಗೆ ನೀಡಲಾಗುತ್ತಿದೆ.


ಈ ಸಾಲಿನ ಪ್ರಶಸ್ತಿ ಪುರಸ್ಕೃತರ ಬಗ್ಗೆ ಒಂದಿಷ್ಟು;


84 ವಯಸ್ಸಿನ ಉತ್ಸಾಹಿ ತೊಗಲುಗೊಂಬೆಯ ಕಲಾವಿದರಾದ ಶ್ರೀ ಬೆಳಗಲ್ಲು ವೀರಣ್ಣ ರವರು ಅತ್ಯಂತ ಸುಂದರ, ಕಲಾತ್ಮಕ ಕುಸುರಿಯ ಚರ್ಮದ ತೊಗಲುಗೊಂಬೆಗಳ ಆಟ ಪರಂಪರೆಗೆ ಸೇರಿದ ಕುಟುಂಬದವರು.

ಇವರು ರಂಗಭೂಮಿಯಲ್ಲಿನ ರಂಗಭಾಷೆ, ರಂಗಸಂಗೀತ, ಸ್ವಾತಂತ್ರ್ಯ ಸಂಗ್ರಾಮ, ಬಾಪು ಪ್ರವಾದಿ ಬಸವೇಶ್ವರ, ಸೀತಾಪಹರಣ ಹಾಗೂ ಕನಕದಾಸರು ಹೀಗೆ ಅನೇಕಾನೇಕ ಮಹನೀಯರ ಬಗ್ಗೆ ತೊಗಲುಗೊಂಬೆಯಾಟವನ್ನು ನಡೆಸಿಕೊಟ್ಟಿದ್ದಾರೆ.

ಭಾರತವಲ್ಲದೇ ಸ್ವಿಟ್ಜರ್ಲೆಂಡ್‌‌, ಜರ್ಮನಿ ಹಾಗೂ‌ ಥೈಲ್ಯಾಂಡ್ ದೇಶಗಳಲ್ಲಿಯೂ ಇವರ ತಂಡ ಪ್ರದರ್ಶನ ನೀಡಿದೆ.


ಹಲವು ಪ್ರಶಸ್ತಿಗಳ ಸರಮಾಲೆ;


ಶ್ರೀ ಬೆಳಗಲ್ಲು ವೀರಣ್ಣ ರವರಿಗೆ ನಾಡೋಜ, ರಾಜ್ಯೋತ್ಸವ, ಜಾನಪದಶ್ರೀ, ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಜಾನಪದ ಲೋಕದ ದೊಡ್ಡಮನೆ ಪ್ರಶಸ್ತಿ, ಗುಜರಾತಿನ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ಗೋಮತಿ ಪ್ರಶಸ್ತಿ, ತಮಿಳುನಾಡಿನ ಕಲೈಭೂಷಣ ಪ್ರಶಸ್ತಿ ಸೇರಿದಂತೆ ಅನೇಕಾ ಬಿರುದುಗಳು ಸಂದಿವೆ.


ಕಾರ್ಯಕ್ರಮ;


ದಿವ್ಯಸಾನಿಧ್ಯ ಹಾಗೂ ಉದ್ಘಾಟನೆ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳು ವಹಿಸುವರು.


ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರಾದ ಡಾ ಜಯಮಾಲ ರಾಮಚಂದ್ರ ರವರು ಪ್ರಶಸ್ತಿ ಪ್ರದಾನ ಮಾಡುವರು.

ಮುಖ್ಯ ಅಥಿತಿಗಳಾಗಿ ನಿವೃತ್ತ ನ್ಯಾಯಮೂರ್ತಿ ಶ್ರೀ ಎ ಜೆ ಸದಾಶಿವ ರವರು, ಅಧ್ಯಕ್ಷತೆಯನ್ನು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಟಿ ತಿಮ್ಮೇಗೌಡರು, ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಯನ್ನು ಮ್ಯಾನೇಜಿಂಗ್ ಟ್ರಷ್ಟಿಯಾದ ಆದಿತ್ಯ ನಂಜರಾಜ್ ರವರು, ವಂದಾನಾರ್ಪಣೆಯನ್ನು ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ ರಾಜೇಗೌಡ ಹೊಸಹಳ್ಳಿ ರವರು ನಡೆಸಿಕೊಡಲಿದ್ದಾರೆ.


ಸಂಜೆ 06:30 ಕ್ಕೆ ಪ್ರಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ  ಶ್ರೀ ಶ್ರೀಧರ ಹೆಗ್ಗಡೆ ಚಪ್ಪರಮನೆ ಮತ್ತು ಸಂಗಡಿಗರಿಂದ 'ಮಂಥರೆಯ ಧುರ್ಮಂತ್ರ' ಎಂಬ ಯಕ್ಷಗಾನ ಪ್ರಸಂಗವನ್ನು ನಡೆಸಿಕೊಡಲಿದ್ದಾರೆ.


ಸರ್ವರಿಗೂ ಸ್ವಾಗತ ಕೋರುವವರು ಕರ್ನಾಟಕ ಜಾನಪದ ಪರಿಷತ್ತಿನ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ.

 


ಗೋ ರಾ ಶ್ರೀನಿವಾಸ...

ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷರು ಚನ್ನಪಟ್ಟಣ.

ಮೊ: 9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑