Tel: 7676775624 | Mail: info@yellowandred.in

Language: EN KAN

    Follow us :


ಪಿಜಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ

Posted date: 12 Jul, 2018

Powered by:     Yellow and Red

ಪಿಜಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆರಂಭ

ಬೆಂಗಳೂರು: ಜ್ಞಾನಭಾರತಿ ಆವರಣ, ರಾಮನಗರ ಸ್ನಾತಕೋತ್ತರ ಕೇಂದ್ರ ಹಾಗೂ ಸಂಯೋಜಿತ ಕಾಲೇಜುಗಳ ಮೂಲಕ 2018-19ನೇ ಸಾಲಿನಲ್ಲಿ ಕೊಡಮಾಡುವ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ ಬೆಂಗಳೂರು ವಿಶ್ವವಿದ್ಯಾಲಯವು ಅರ್ಜಿ ಆಹ್ವಾನಿಸಿದೆ. ಜುಲೈ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

ಜ್ಞಾನಭಾರತಿ ಆವರಣದ ಕಲಾ ವಿಭಾಗದಲ್ಲಿ ಎಂ.ಎ ಕನ್ನಡ, ಅರ್ಥಶಾಸ್ತ್ರ, ಇಂಗ್ಲಿಷ್‌, ಹಿಂದಿ, ಇತಿಹಾಸ, ಪತ್ರಿಕೋದ್ಯಮ ಮತ್ತು ಸಂವಹನ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಗ್ರಾಮೀಣಾಭಿವೃದ್ಧಿ ಅಧ್ಯಯನ, ಸಂಸ್ಕೃತ, ಸಮಾಜಶಾಸ್ತ್ರ, ತೆಲುಗು, ಉರ್ದು, ಮಹಿಳಾ ಅಧ್ಯಯನ, ಪ್ರದರ್ಶನ ಕಲೆ (ಭರತನಾಟ್ಯ, ನಾಟಕ, ಸಂಗೀತ, ಮೃದಂಗ), ಸಮಾಜಕಾರ್ಯ ಮತ್ತು ದೃಶ್ಯಕಲೆ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು.

ವಿಜ್ಞಾನ ವಿಭಾಗದಲ್ಲಿ ಎಂ.ಎಸ್‌ಸಿ ಅನ್ವಯಿಕ ತಳಿಶಾಸ್ತ್ರ, ಅನ್ವಯಿಕ ಭೂಗರ್ಭಶಾಸ್ತ್ರ, ಜೀವ ರಸಾಯನಶಾಸ್ತ್ರ, ಜೀವ ತಂತ್ರಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಮಾಧ್ಯಮ, ವಿದ್ಯುನ್ಮಾನ ವಿಜ್ಞಾನ, ಪರಿಸರ ವಿಜ್ಞಾನ, ಫ್ಯಾಷನ್‌ ಆಂಡ್‌ ಅಪೆರಲ್‌ ಡಿಸೈನ್‌, ಭೂಗೋಳಶಾಸ್ತ್ರ, ಭೌಗೋಳಿಕ ಮಾಹಿತಿ ವಿಜ್ಞಾನ, ಯೋಗ ವಿಜ್ಞಾನ, ಜೀವ ವಿಜ್ಞಾನ, ಗಣಿತ ಶಾಸ್ತ್ರ, ಅಣುಜೀವ ವಿಜ್ಞಾನ, ಸೂಕ್ಷ್ಮಜೀವಶಾಸ್ತ್ರ, ಭೌತಶಾಸ್ತ್ರ, ಮನಃಶಾಸ್ತ್ರ, ಸೈಕಾಲಾಜಿಕಲ್‌ ಕೌನ್ಸಲಿಂಗ್‌, ಸಂಖ್ಯಾಶಾಸ್ತ್ರ, ಪ್ರಾಣಿಶಾಸ್ತ್ರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶವಿದೆ.

ವಾಣಿಜ್ಯ ವಿಭಾಗದಲ್ಲಿ ಎಂ.ಕಾಂ., ಶಿಕ್ಷಣ ವಿಭಾಗದಲ್ಲಿ ಎಂ.ಇಡಿ, ಬಿ.ಪಿ.ಇಡಿ, ಎಂ.ಪಿ.ಇಡಿ, ಕಾನೂನು ವಿಭಾಗದಲ್ಲಿ ಎಲ್‌ಎಲ್‌ಎಂ ಕೋರ್ಸ್‌, ರಾಮನಗರ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ ಅರ್ಥಶಾಸ್ತ್ರ ಮತ್ತು ಎಂ.ಕಾಂ ಮತ್ತು ವಿವಿಯಿಂದ ಸಂಯೋಜನೆ ಪಡೆದ 46 ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳು ಲಭ್ಯವಿದೆ.

ಪ್ರತಿ ಕೋರ್ಸ್‌ಗೂ ಪ್ರತ್ಯೇಕ ಅರ್ಜಿ: ಆನ್‌ಲೈನ್‌ ಮೂಲಕ ಜುಲೈ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಪ್ರತಿ ಸ್ನಾತಕೋತ್ತರ ಕೋರ್ಸ್‌ಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರು ವಿವಿ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ ಇ-ಮೇಲ್‌ ಐಡಿ ಬಳಸಿಕೊಂಡು ಅರ್ಜಿ ಭರ್ತಿ ಮಾಡಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂ. ಹಾಗೂ ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. ಮಾಹಿತಿಗಾಗಿ ದೂ: 080-2296112, 22961171 ಅಥವಾ ವೆಬ್‌ಸೈಟ್‌ www.bangaloreuniversity.ac.in ಸಂಪರ್ಕಿಸಬಹುದು ಎಂದು ವಿವಿಯ ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.20ರ ನಂತರ ದಂಡ ಅನ್ವಯ: ಜುಲೈ 9ರಿಂದ ಜುಲೈ 20ರವರೆಗೆ ಯಾವುದೇ ದಂಡ ಶುಲ್ಕ ಇಲ್ಲದೇ ಅರ್ಜಿ ಸಲ್ಲಿಸಬಹುದು. 200 ರೂ. ದಂಡ ಶುಲ್ಕದೊಂದಿಗೆ ಜುಲೈ 25ರವರೆಗೂ ಅರ್ಜಿ ಸಲ್ಲಿಸಬಹುದು. ಜುಲೈ 26ರೊಳಗೆ ಅರ್ಜಿಯ ಮೂಲ ಪ್ರತಿಯನ್ನು ಸಂಬಂಧಪಟ್ಟ ವಿಭಾಗಕ್ಕೆ ಕಡ್ಡಾಯವಾಗಿ ತಲುಪಿಸಬೇಕು. ಜು.28ರಂದು ಜ್ಯೇಷ್ಠತಾ ಪಟ್ಟಿ ಪ್ರಕಟವಾಗಲಿದ್ದು, ಜು.30ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿರಲಿದೆ. ಆಗಸ್ಟ್‌ 1ರಂದು ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟವಾಗಲಿದೆ. ಆ.3ರಿಂದ 9ರವರೆಗೆ ವಿವಿಧ ವಿಭಾಗಗಳ ಪ್ರವೇಶ ಪ್ರಕ್ರಿಯೆ ನಡೆಯಲಿದ್ದು, ಆ.10ರಿಂದ ಮೊದಲ ಸೆಮಿಸ್ಟರ್‌ ತರಗತಿಗಳು ಆರಂಭವಾಗಲಿವೆ.


 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑