Tel: 7676775624 | Mail: info@yellowandred.in

Language: EN KAN

    Follow us :


ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಆನ್‌ಲೈನ್‌ನಲ್ಲೇ ಅಂಕಪಟ್ಟಿ

Posted date: 19 Jul, 2018

Powered by:     Yellow and Red

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೂ ಆನ್‌ಲೈನ್‌ನಲ್ಲೇ ಅಂಕಪಟ್ಟಿ

ಬೆಂಗಳೂರು: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲೇ ಅಂಕಪಟ್ಟಿ ಸಿಗಲಿದೆ. ಮಾರ್ಚ್‌ ತಿಂಗಳಲ್ಲಿ (2017-18ನೇ ಸಾಲಿನ) ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಾಗೂ ಜೂನ್‌ನಲ್ಲಿ ನಡೆದ ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೂ ಅಂಕಪಟ್ಟಿಯ ಮೂಲಪ್ರತಿಯನ್ನು ಆನ್‌ಲೈನ್‌ನಲ್ಲೇ ವಿತರಿಸಲಾಗುವುದು.

ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳೇ ಅಂಕಪಟ್ಟಿ ಪಡೆಯಬಹುದಾದ ವ್ಯವಸ್ಥೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳ ಮಾಹಿತಿಯನ್ನು "ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್‌ ವ್ಯವಸ್ಥೆ'ಗೆ (ಎಸ್‌ಎಟಿಎಸ್‌) ಅಳವಡಿಸಲಾಗಿದೆ. ಜತೆಗೆ, ವಿದ್ಯಾರ್ಥಿಗಳ ಆಧಾರ್‌ ಸಂಖ್ಯೆಯನ್ನು ಪಡೆಯಲಾಗಿದೆ. ಕೇಂದ್ರ ಸರ್ಕಾರದ ಡಿಜಿಲಾಕರ್‌ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಂಕಪಟ್ಟಿಯನ್ನು ಆನ್‌ಲೈನ್‌ನಲ್ಲಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ 14,387, ಪ್ರೌಢಶಾಲೆಯ 7,44,461 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಅದರಲ್ಲಿ 5,81,518 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 1,62,943 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿ ಮುದ್ರಣಾ ಹಂತದಲ್ಲಿದೆ. ಆಗಸ್ಟ್‌ ಮೊದಲು ಅಥವಾ ಎರಡನೇ ವಾರದೊಳಗೆ ಅಂಕಪಟ್ಟಿ ವಿದ್ಯಾರ್ಥಿಗಳ ಕೈಸೇರಲಿದೆ. ಜತೆಗೆ ಆನ್‌ಲೈನ್‌ ಮೂಲಕವೂ ಪಡೆಯಬಹುದು. ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಡಿಜಿಲಾಕರ್‌ ವ್ಯವಸ್ಥೆಗೆ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಆಧಾರ್‌ ಸಂಖ್ಯೆ ಬಳಸಿ ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಡಿಜಿಲಾಕರ್‌ ವ್ಯವಸ್ಥೆ:
ವಿದ್ಯಾರ್ಥಿಗಳು ಡಿಜಿಲಾಕರ್‌ ಸೌಲಭ್ಯವನ್ನು ಬಳಸಲು digilocker.gov.in ಕೇಂದ್ರ ಸರ್ಕಾರದ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಲಾಗಿನ್‌ ಮಾಡಲು ನೋಂದಾಯಿತ ಮೊಬೈಲ್‌ ಸಂಖ್ಯೆ ಅಳವಡಿಸಬೇಕು. ಮೊಬೈಲ್‌ಗೆ ಒನ್‌ಟೈಮ್‌ ಪಾಸ್‌ವರ್ಡ್‌(ಒಟಿಪಿ) ಬರುತ್ತದೆ. ಇದಾದ ನಂತರ ವಿದ್ಯಾರ್ಥಿ ತನ್ನ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಬಳಸಿ ಡಿಜಿಲಾಕರ್‌ನಿಂದ ಅಂಕಪಟ್ಟಿ ಪಡೆಯಬಹುದು. ಆಧಾರ್‌ ಸಂಖ್ಯೆ ಡಿಜಿಲಾಕರ್‌ನೊಂದಿಗೆ ಜೋಡಿಸಿದ ನಂತರವಷ್ಟೇ ಅಂಕಪಟ್ಟಿ ಸಿಗಲಿದೆ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಬ್ಬರ ಅಂಕಪಟ್ಟಿಯನ್ನು ಇನ್ನೊಬ್ಬರು ಡೌನ್‌ಲೋಡ್‌ ಮಾಡಿಕೊಳ್ಳಬಾರದು ಮತ್ತು ಅದನ್ನು ನಕಲು ಮಾಡಲು ಸಾಧ್ಯವಾಗದ ರೀತಿಯಲ್ಲಿ ಭದ್ರತೆ ಕಲ್ಪಿಸಲಾಗಿದೆ. ವಿದ್ಯಾರ್ಥಿ ತನ್ನ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ಹಾಕಿದರೆ ಮಾತ್ರ ಡಿಜಿಲಾಕರ್‌ನಲ್ಲಿರುವ ಅಂಕಪಟ್ಟಿ ಸಿಗುತ್ತದೆ. ಸರ್ವರ್‌ಗಳನ್ನು ಮಂಡಳಿಯೇ ನಿಯಂತ್ರಿಸಲಿದೆ ಎಂಬ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಅನುಕೂಲ:
ಡಿಜಿಲಾಕರ್‌ ನೂತನ ಗಣಕೀತೃತ ವ್ಯವಸ್ಥೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಆಧಾರ್‌ ಸಂಖ್ಯೆಯ ಮೂಲಕ ಅಂಕಪಟ್ಟಿಯನ್ನು ಯಾವಾಗ, ಎಲ್ಲಿ ಬೇಕಾದರೂ ಪ್ರಿಂಟ್‌ಔಟ್‌ ತೆಗೆಯಬಹುದು. ಮೂಲ ಅಂಕಪಟ್ಟಿ ಹಾಗೂ ಆನ್‌ಲೈನ್‌ ಅಂಕಪಟ್ಟಿ ಪರಿಶೀಲನೆಗೂ ಅವಕಾಶ ಇದೆ. ಅಂಕಪಟ್ಟಿ ಪರಿಶೀಲನೆ ಮತ್ತು ದ್ವಿಪತ್ರಿ ಪಡೆಯಲು ವಿದ್ಯಾರ್ಥಿಗಳು ಇಲಾಖೆಗೆ ಅಲೆದಾಡಬೇಕಾಗಿಲ್ಲ. ಸಮಯ ಮತ್ತು ಹಣದ ವ್ಯಯವಿಲ್ಲದೇ ಅತಿ ಶೀಘ್ರದಲ್ಲಿ ಅಂಕಪಟ್ಟಿ ಸಿಗಲಿದೆ.

ಪಿಯು ಅಂಕಪಟ್ಟಿಯೂ ಡಿಜಿಲಾಕರ್‌ನಲ್ಲಿ ಲಭ್ಯ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಂಕಪಟ್ಟಿ ಜತೆಗೆ ಪಿಯು ವಿದ್ಯಾರ್ಥಿಗಳ ಅಂಕಪಟ್ಟಿ ಕೂಡ ಡಿಜಿಲಾಕರ್‌ನಲ್ಲಿ ಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ಆಧಾರ್‌  ಸಂಖ್ಯೆಯ ಮೂಲಕ ಡಿಜಿಲಾಕರ್‌ ಬಳಸಿ ಆನ್‌ಲೈನ್‌ನಲ್ಲಿ ಅಂಕಪಟ್ಟಿ ಪಡೆಯಬಹುದಾಗಿದೆ ಎಂದು ಪಿಯು ಇಲಾಖೆ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑