Tel: 7676775624 | Mail: info@yellowandred.in

Language: EN KAN

    Follow us :


ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಸೂರಜ್

Posted date: 14 May, 2019

Powered by:     Yellow and Red

ನಗರದ ಸೌಂದರ್ಯಕ್ಕೆ ಧಕ್ಕೆ ತರುವ ಬೀದಿಬದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಸೂರಜ್

ಚನ್ನಪಟ್ಟಣ: ನಗರದ ಸೌಂದರ್ಯಕ್ಕೆ  ದಕ್ಕೆ  ತರುವ ಹಾಗೂ ವಾಹನ ಸಂಚಾರ, ಸಾರ್ವಜನಿಕರ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುವ ಪುಟ್‌ಪಾತ್ ವ್ಯಾಪಾರಿಗಳನ್ನು  ತೆರವುಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದೆಂದು ಯೋಜನಾ ನಿರ್ದೇಶಕ ಸೂರಜ್ ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದರು. ಅವರು ನಗರಕ್ಕೆ ಆಗಮಿಸಿ ಪ್ರಮುಖ ರಸ್ತೆಗಳನ್ನು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಪುಟ್‌ಪಾತ್ ವ್ಯಾಪಾರಿಗಳ ಜೊತೆ ಮಾತನಾಡಿ, ಹಸಿರು ನ್ಯಾಯಾಧಿಕರಣದ ಆದೇಶ ಹಾಗೂ ಸರ್ಕಾರ ಆದೇಶವು ಕೂಡ ಸಾರ್ವಜನಿಕರಿಗೆ ತೊಂದರೆಯಾಗುವ ಪುಟ್‌ಪಾತ್ ವ್ಯಾಪಾರವನ್ನು ತೆರವು ಗೊಳಿಸಿ, ಪುಟ್‌ಪಾತ್ ವ್ಯಾಪಾರಿಗಳ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆದೇಶ ನೀಡಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.



 ನಗರದ ಮಹಾತ್ಮಗಾಂಧಿ ರಸ್ತೆ, ಜೆ.ಸಿ.ರಸ್ತೆ, ಅಂಚೆ ಕಛೇರಿ ರಸ್ತೆ, ರೈಲ್ವೆ ನಿಲ್ದಾಣ ರಸ್ತೆ, ಹಳೆಯ ಕೋರ್ಟ್ ರಸ್ತೆ, ಸಾತನೂರು ರಸ್ತೆ, ಮದೀನಾ ಚೌಕ್ ಹಾಗೂ ವಿವಿಧ ರಸ್ತೆಗಳಲ್ಲಿನ ಪುಟ್‌ಪಾತ್ ತೆರವು ಮಾಡಿರುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾಧಿಕಾರಿಗಳ ಆದೇಶಕ್ಕನುಗುಣವಾಗಿ ಭೇಟಿ ನೀಡಿರುವುದಾಗಿ ತಿಳಿಸಿದ ಅವರು ಯಾವುದೇ ಕಾರಣಕ್ಕೂ ಯಥಾ ಸ್ಥಿತಿಯಂತೆ ಪುಟ್‌ಪಾತ್ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಪ್ರಶ್ನೆಯೇ ಇಲ್ಲಾ ಎಂದರು.


 ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಕರಬಲ ಮೈದಾನದ ಅಂಗಡಿ ಮಳಿಗೆಗಳನ್ನು ತೆರವುಗೊಳ್ಳುವ ಪುಟ್‌ಪಾತ್ ವ್ಯಾಪಾರಿಗಳಿಗೆ ಸಂಬಂಧಿಸಿದ ಸ್ಥಳದಲ್ಲಿ ವ್ಯಾಪಾರ ಮಾಡಿಕೊಳ್ಳಲು ಉಚಿತವಾಗಿ ನೀಡಲಾಗುತ್ತಿದೆ ಇದರ ಸದ್ಬಳಕೆ ಮಾಡಿಕೊಂಡು ನಗರಸಭೆ ಆಡಳಿತದ ಸ್ವಚ್ಚತಾ ಆಂದೋಲನ ಹಾಗೂ ಪ್ರಗತಿಗೆ ಕೈ ಜೋಡಿಸುವಂತೆ ಅವರು ಮನವಿ ಮಾಡಿದರು.


ಕರಬಲ ಮೈದಾನದಲ್ಲಿ ವ್ಯಾಪಾರ ಮಾಡುವ ಹಾಗೂ ಗ್ರಾಹಕರಿಗೂ ಅವಶ್ಯಕತೆಯಾಗಿರುವ ಶೌಚಾಲಯ, ಕುಡಿಯುವ ನೀರು ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದ್ದು, ಒಂದೇ ಸೂರಿನಡಿ ಎಲ್ಲಾ ವಿಧವಾದ ವ್ಯಾಪಾರ ಮಾಡಿಕೊಳ್ಳಲು ಸೂಕ್ತವಾದ ಸ್ಥಳವಾಗಿರುವ ಕರಬಲ ಮೈದಾನದ ಮಳಿಗೆಗೆಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.


ಇದೇ ಸಂದರ್ಭದಲ್ಲಿ ಪುಟ್‌ಪಾತ್ ವ್ಯಾಪಾರಿಗಳು ಮಾತನಾಡಿ ಕೆಲವು ರಸ್ತೆಗಳಲ್ಲಿ ವ್ಯಾಪಾರ ಮಾಡುವ ಪುಟ್‌ಪಾತ್ ವ್ಯಾಪಾರಿಗಳನ್ನು ತೆರವು ಗೊಳಿಸಿ ಕೆಲವು ರಸ್ತೆಗಳಲ್ಲಿ ಬಿಟ್ಟಿರುವುದರ ಬಗ್ಗೆ ಯೋಜನಾ ನಿರ್ದೇಶಕರ ಗಮನ ಸೆಳೆದಾಗ ಪ್ರತಿಯೊಂದು ರಸ್ತೆಯಲ್ಲಿಯೂ ಇರುವ ಪುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಲಾಗುತ್ತಿದೆ, ಇದರ ಬಗ್ಗೆ ಅನುಮಾನ ಬೇಡ ಎಂದು ಸ್ಥಳದಲ್ಲೇ ಇದ್ದ ಪೌರಾಯುಕ್ತ ಸಿ ಪುಟ್ಟಸ್ವಾಮಿ ಯವರಿಗೆ ನಗರದ ಯಾವುದೇ ರಸ್ತೆಯಲ್ಲಿ ವ್ಯಾಪಾರ ಮಾಡುವ ಪುಟ್‌ಪಾತ್ ವ್ಯಾಪಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದರು.


ಕಾಲ್ನಡಿಗೆಯಲ್ಲೇ ನಗರದ ರಸ್ತೆಗಳನ್ನು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಸಾರ್ವಜನಿಕರು ಪುಟ್‌ಪಾತ್ ವ್ಯಾಪಾರವನ್ನು ತೆರವು ಗೊಳಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿತ್ತಿರುವುದು ಆರೋಗ್ಯಕರವಾಗಿದೆ, ಅಲ್ಲದೆ ನಗರಸಭೆಯ ನಿಲುವಿನಿಂದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಕ್ತ ರಸ್ತೆಯಾಗಿರುವುದು ಪ್ರಶಂಸನೆಯ ವಿಚಾರ  ಎಂದು ಸಾರ್ವಜನಿಕರು ಅಧಿಕಾರಿಗಳನ್ನು ಶ್ಲಾಘಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑