Recent news »
-
ಮನೆ ಇಲ್ಲದ ಅಲೆಮಾರಿ ಜನಾಂಗದವರನ್ನು ಗುರುತಿಸಿ: ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್
ಜಿಲ್ಲೆಯಲ್ಲಿ ಮನೆಯಿಲ್ಲದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರಿಗೆ ಸೂರು ಒದಗಿಸಲು ಅರ್ಹ ಫಲಾನುಭವಿಗಳನ್ನು ಗ್ರಾಮ ಮಟ್ಟದಲ್ಲಿ ಗುರುತಿಸಿ ಪಟ್ಟಿ ಮಾಡುವಂತೆ ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಕಲ್ಪಿಸುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅರೆ ಅಲೆಮಾರಿ ಹಾಗೂ ಅಲೆಮಾರಿ ಜನಾಂಗದವರಿಗೆ ಮನೆ ಒದಗಿಸಲು ಗುರಿ ನಿಗಧಿಯಾಗಿರುವುದಿಲ್ಲ. ನಿವೇಶನ ಹೊಂದಿರುವ ಅಹ೯ ಫಲಾನುಭವಿಗಳ ಪಟ್ಟಿಯನ್ನು ಸಿದ್ದ ಪಡಿಸಿ ಕೇಂದ್ರ ಕಛೇರಿಗೆ ಗುರಿ ನಿಗದಿ ಪಡಿಸಿಕೊಡುವಂತೆ ಪ್ರಸ್ತಾವನೆ ಸಲ್ಲಿಸಿ. ನಿವೇಶನ ಹಾಗೂ ಮನೆ ಇಲ್ಲದ ಫಲಾನುಭವಿಗಳ ಪಟ್ಟಿಯನ್ನು ಸಹ ಸಿದ್ಧಪಡಿಸಿಕೊಳ್ಳಿ ಎಂದರು.
ಅಲೆಮಾರಿ ಅಥವಾ ಅರೆ ಅಲೆಮಾರಿ ಜನಾಂಗಕ್ಕೆ ಸೇರಿದ ಒಬ್ಬರು ಜಿಲ್ಲಾಪಂಚಾಯತ್ ಸದಸ್ಯರು ಹಾಗೂ ಒಬ್ಬರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಆಯ್ಕೆ ಮಾಡಬೇಕಿರುತ್ತದೆ.ಈ ಜನಾಂಗಗಕ್ಕೆ ಸೇರಿದ ಜಿಲ್ಲಾ ಪಂಚಾಯತ್ ಸದಸ್ಯರು ಇರುವುದಿಲ್ಲ. ಒಬ್ಬರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಆಯ್ಕೆ ಮಾಡಬೇಕಿರುತ್ತದೆ. ಸರ್ಕಾರ ವಿಧಿಸಿರುವ ಷರತ್ತುಗಳೊಂದಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಅರ್ಹ ಸದಸ್ಯರನ್ನು ಆಯ್ಕೆಮಾಡುವಂತೆ ತಿಳಿಸಿದರು.
ಅರೆ ಅಲೆಮಾರಿ ಹಾಗೂ ಅಲೆಮಾರಿ ಜನಾಂಗದವರಿಗೆ ಸರ್ಕಾರದ ಯೋಜನೆಗಳು ತಲುಪಿರುವ ಬಗ್ಗೆ ಪರಿಶೀಲಿಸುವುದು ಸಮಿತಿಯ ಮುಖ್ಯ ಉದ್ದೇಶವಾಗಿರುತ್ತದೆ. ಸರ್ಕಾರ ನಿಗದಿಪಡಿಸುವ ಅವಧಿಗೆ ಕಾಲ ಕಾಲಕ್ಕೆ ಸರಿಯಾಗಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಭೆ ಆಯೋಜಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಅಲೆಮಾರಿ ಜನಾಂಗಗಕ್ಕೆ ಸೇರಿದ ಗೊಲ್ಲರು ಹಾಗೂ ದೊಂಬಿದಾಸ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರನ್ನು ಋತು ಚಕ್ರ ಅವಧಿಯಲ್ಲಿ ಊರಿನಿಂದ ಹೊರಗಿಡುವುದು ಹಾಗೂ ಇನ್ನೂ ಮುಂತಾದ ಮೂಢ ನಂಬಿಕೆಗಳ ಆಚರಣೆಗಳಿದ್ದಲ್ಲಿ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಿ ಅವುಗಳನ್ನು ದೂರ ಮಾಡಬೇಕು. ಈ ಜನಾಂಗದಲ್ಲಿ ಇರುವ ವಿದ್ಯಾವಂತ ವ್ಯಕ್ತಿಗಳನ್ನು ಗುರುತಿಸಿ ಜಾಗೃತಿ ಕಾರ್ಯಕ್ರಮ ದಲ್ಲಿ ಅವರು ಪಾಲ್ಗೊಳ್ಳುವಂತೆ ಮಾಡಿ ಎಂದರು.
ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ, ಸ್ನಾತಕೋತ್ತರ ವಿಭಾಗದಲ್ಲಿ ನೀಡುವ ವಿಧ್ಯಾರ್ಥಿ ವೇತನದ ಬಗ್ಗೆ ಪರಿಶೀಲಿಸಿದರು. ಸದರಿ ಸಾಲಿನಲ್ಲಿ 740 ವಿಧ್ಯಾರ್ಥಿಗಳಿಗೆ 14 ಲಕ್ಷದ 80 ಸಾವಿರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪಾವತಿ ಮಾಡಲಾಗಿದೆ. ಮೆಟ್ರಿಕ್ ನಂತರ, ಸ್ನಾತಕೋತ್ತರ ವಿಭಾಗದ ವಿಧ್ಯಾರ್ಥಿ ವೇತನ ಪಾವತಿಸುವ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಹಿಂದುಳಿದ ವಗ೯ಗಳ ಕಲ್ಯಾಣಾಧಿಕಾರಿ ಪಿ.ಬಿ.ಬಸವರಾಜು ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಉಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ: ನಿರಂಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಮನ್ ಸಿ.ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
-
ಗ್ರಾಮೀಣ ಭಾಗದ ಆರೋಗ್ಯ ದೃಷ್ಟಿಯಿಂದ ಹೈಟೆಕ್ ಆಸ್ಪತ್ರೆ ನಿರ್ಮಾಣ: ಹೆಚ್ಡಿಕೆ.
ಗ್ರಾಮೀಣ ಭಾಗದ ಜನರ ಆರೋಗ್ಯದ ಹಿತದೃಷ್ಟಿಯಿಂದ, ತಾಲ್ಲೂಕಿನಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪನೆ ಮಾಡುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಅವರು ತಾಲ್ಲೂಕಿನ ಎಸ್.ಎಂ.ಹಳ್ಳಿ ಹಾಗೂ ಬಿ.ವಿ.ಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ, ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಎಷ್ಟೇ ಸಂಪತ್ತು ಇದ್ದರೂ ಆರೋಗ್ಯ ಸಂಪತ್ತು ಇಲ್ಲದಿದ್ದರೇ ಆತನ ಯಾವುದೇ ರೀತಿಯ ಸಂಪತ್ತು ವ್ಯರ್ಥವಾಗುತ್ತದೆ ಎಂದರು.
ಗ್ರಾಮಗಳಲ್ಲಿ ನಿರ್ಮಾಣವಾಗಿರುವ ಆರೋಗ್ಯ ಕೇಂದ್ರಗಳಲ್ಲಿ ನುರಿತ ವೈದ್ಯರು ಹಾಗೂ ಸಾಕಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗುವುದು, ಗ್ರಾಮೀಣ ಭಾಗದ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಂಡು ಅಭಿವೃದ್ದಿಯತ್ತಾ ಸಾಗಬೇಕೆಂದು ತಿಳಿಸಿದರು.
ಬಿ.ವಿ.ಹಳ್ಳಿ ಹಾಗೂ ಇತರೆ ಭಾಗಗಳಲ್ಲಿ ಕಾಡಾನೆಗಳ ಕಾಟದಿಂದ, ಕಷ್ಟಪಟ್ಟು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತಿವೆ, ಪ್ರತಿನಿತ್ಯ ಕಾಡಾನೆಗಳು ಹಿಂಡುಹಿಂಡಾಗಿ ತೋಟ-ತುಡಿಕೆಗಳ ಮೇಲೆ ದಾಳಿ ಮಾಡುತ್ತಿವೆ, ಕೊರೋನಾದಂತಹ ಸಂಕಷ್ಟದಲ್ಲಿ ಈ ರೀತಿಯಾಗಿ ಬೆಳೆದ ಬೆಳೆಗಳು ಕಾಡಾನೆಗಳಿಂದ ನಾಶವಾಗುತ್ತಿರುವುದರಿಂದ ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದೆ, ಕಾಡಾನೆಗಳ ಹಾವಳಿಯನ್ನು ನಿಯಂತ್ರಣ ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರು ನಮಗೂ ಕಾಡಾನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗೆ ಮುಂದುವರೆದರೆ ರೈತರ ಗತಿ ಏನು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕಳೆದ ಹಲವಾರು ವರ್ಷಗಳಿಂದ ಕಾಡಾನೆಗಳ ದಾಳಿಯಿಂದ ಕೋಟ್ಯಾಂತರರೂ ಬೆಳೆ ರೈತಾಪಿವರ್ಗಕ್ಕೆ ಭಾರಿ ನಷ್ಟವಾಗಿದೆ, ಅಲ್ಲದೇ ತಮ್ಮ ಬೆಳೆನಷ್ಟದ ಪರಿಹಾರಕ್ಕೆ ಮನವಿ ಮಾಡಿದರೂ, ಕಡಿಮೆ ಮೊತ್ತದ ಹಣದ ಪರಿಹಾರ ದೊರೆತು ರೈತರಿಗೆ ಇದರಲ್ಲಿಯೂ ಬಹಳ ಅನ್ಯಾಯವಾಗಿದ್ದು, ಮುಂದಿನ ದಿನಗಳಲ್ಲಿ ಕಾಡಾನೆ ಹಾಗೂ ಇತರೆ ಪ್ರಾಣಿಗಳ ದಾಳಿಯಿಂದ ನಷ್ಟಕ್ಕೊಳಗಾದರೆ ಸೂಕ್ತ ಪರಿಹಾರ ಕೊಡಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.
ಈ ಭಾಗದಲ್ಲಿ ಕಾಡಾನೆಗಳು ರೈತರ ಬೆಳೆ ನಷ್ಟ ಮಾಡುತ್ತಿರುವುದರ ಬಗ್ಗೆ ನನಗೆ ಸಂಪೂರ್ಣ ಅರಿವಿದ್ದು, ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಕಾಡಿನಿಂದ ನಾಡಿಗೆ ಆನೆಗಳು ದಾಳಿ ಮಾಡದಂತೆ ಯೋಜನೆಯನ್ನು ರೂಪಿಸಿದ್ದವು, ಅದಕ್ಕಾಗಿಯೇ ಕೋಟ್ಯಾಂತರ ರೂ ಹಣವನ್ನು ಇಡಲಾಗಿದೆ, ಮುತ್ತತ್ತಿ ಆರಣ್ಯ ಪ್ರದೇಶದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲ್ಲಾಗಿದ್ದು, ಸಂಬಂಧಿಸಿದ ಅರಣ್ಯಾಧಿಕಾರಿಗಳ ಜೊತೆ ಚರ್ಚೆ ಮಾಡಿ, ಕಾಡಾನೆಗಳ ಉಪಟಳಕ್ಕೆ ಸದ್ಯದಲ್ಲಿಯೇ ಮುಕ್ತಿ ನೀಡಲಾಗುವುದು ಎಂದು ರೈತರನ್ನು ಸಮಾದಾನ ಪಡಿಸಿದರು.
ಹಲವಾರು ಅಭಿವೃದ್ದಿಯ ವಿಚಾರಗಳ ಬಗ್ಗೆ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸಮರೋಪಾದಿಯಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ನೀರಾವರಿಗೆ ಹೆಚ್ಚು ಆಧ್ಯತೆ ನೀಡಲಾಗುವುದು, ಗ್ರಾಮೀಣ ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೇ ನನ್ನ ಮೊದಲ ಕರ್ತವ್ಯ ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್, ತಾಲ್ಲೂಕು ಆರೋಗ್ಯಾಧಿಕಾರಿ ರಾಜು, ತಾಲ್ಲೂಕು ದಂಡಾಧಿಕಾರಿ ನಾಗೇಶ್ , ಕೂಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಂಡಣ್ಣ ಸಿ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡ ಆನಂದಸ್ವಾಮಿ, ಬಿ ವಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷೆ ಸವಿತ ಗ್ರಾಮ ಪಂಚಾಯಿತಿ ಸದಸ್ಯರುಗಳು, ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಹಿರಿಯ ಮುಖಂಡ ಹಾಪ್ ಕಾಮ್ಸ್ ದೇವರಾಜು, ಪಿಎಲ್ ಡಿ ಅಧ್ಯಕ್ಷ ಗೊವಿಂದಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ. ಕುಕ್ಕೂರು ದೊಡ್ಡಿ ಜಯರಾಮು, ಹಾಪ್ ಕಾಮ್ಸ್ ನಿರ್ದೇಶಕ ರಾಜಶೇಖರ್, ಮುಖಂಡರಾದ. ಸಿಂಲಿಂ ನಾಗರಾಜು, ನಿಜಲಿಂಗೆಗೌಡ, ಕೂಡ್ಲೂರು ವೆಂಕಟೇಶ್, ಬಾನುಪ್ರಸಾದ್, ಗಿರೀಶ್ ಬಾಬು, ಹಾಗೂ ಹಲವಾರು ಮಂದಿ ಜೆ.ಡಿ.ಎಸ್ ಮುಖಂಡರು , ಸೇರಿದಂತೆ ಮುಂತಾದವರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
-
ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ ಅಧಿಕಾರ ಸ್ವೀಕಾರ
ರಾಮನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ: ರಾಕೇಶ್ ಕುಮಾರ್ ಕೆ. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದರು.
ಡಾ: ರಾಕೇಶ್ ಕುಮಾರ್ ಅವರು ಬೆಂಗಳೂರಿನ ಜಿ.ಕೆ.ವಿ.ಕೆ ಯಲ್ಲಿ ಕೃಷಿ ಪದವಿ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರ್ ಸೈನ್ಸ್ ನಲ್ಲಿ ಎಂ.ಎಸ್ಸಿ ಪದವಿ ಹಾಗೂ ಪಿ.ಹೆಚ್.ಡಿಯೊಂದಿಗೆ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. 2012ನೇ ಬ್ಯಾಚ್ನ ಐ.ಎ.ಎಸ್. ಅಧಿಕಾರಿಯಾಗಿದ್ದಾರೆ. ಈ ಹಿಂದೆ ಇವರು ಜಮಖಂಡಿಯಲ್ಲಿ ಉಪವಿಭಾಗಾಧಿಕಾರಿಯಾಗಿ, ಶಿವಮೊಗ್ಗ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮತ್ತು ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿಗಳು ಜಿಲ್ಲಾ ಸಂಕೀರ್ಣದಲ್ಲಿರುವ ಪ್ರವಾಸೋದ್ಯಮ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆ, ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಇನ್ನಿತರ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಗೋ ರಾ ಶ್ರೀನಿವಾಸ...
ಮೊ:9845856139.