Recent news »
-
ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಪೋಲಿಸರ ದಾಳಿ, ೨೯ಮಂದಿಯ ಮೇಲೆ ಎಫ್ಐಆರ್, ೧,೧೦,೧೦೦₹ ಡಿವಿಆರ್, ರಿಜಿಸ್ಟರ್ ವಶಕ್ಕೆ
ಚನ್ನಪಟ್ಟಣ: ನಗರದ ಹೊರವಲಯದಲ್ಲಿನ ಸಾತನೂರು ಮುಖ್ಯ ರಸ್ತೆಯ ಕಲ್ಪವೃಕ್ಷ ಹೋಟೆಲ್ ಹಿಂಭಾಗವಿರುವ ಮಾರುತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ಗ್ರಾಮಾಂತರ ಪೋಲಿಸರು ದಾಳಿ ನಡೆಸಿ ಒಂದು ಲಕ್ಷದ ಹತ್ತು ಸಾವಿರದ ನೂರು ರೂಪಾಯಿ ನಗದು, ಕ್ಲಬ್ ಸದಸ್ಯರ ರಿಜಿಸ್ಟರ್ ಮತ್ತು ಸಿಸಿ ಟಿವಿ ಯ ಡಿವಿಆರ್ ವಶಪಡಿಸಿಕೊಂಡು ಇಪ್ಪತ್ತೊಂಭತ್ತು ಮಂದಿ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಕ್ಲಬ್ ನ ಸದಸ್ಯರಾದ ರಾಮಲಿಂಗಯ್ಯ ಬಿನ್ ಲೇ ಚಿಕ್ಜಣ್ಣಯ್ಯ ಎಂಬುವವರು ಗ್ರಾಮಾಂತರ ಪೋಲಿಸರಿಗೆ ಲಿಖಿತ ದೂರು ನೀಡಿ, ನಮ್ಮ ಕ್ಲಬ್ ನ್ನು ಕಾನೂನು ಬಾಹಿರವಾಗಿ ನಡೆಸುತ್ತಿದ್ದೇವೆ, ಇದುವರೆಗೂ ನೋಂದಣಿ ಸದಸ್ಯರ ಹಣದ ರಶೀದಿ ನೀಡಿಲ್ಲಾ, ದಿನಚರಿ ಚಂದಾ ಹಣದ ರಶೀದಿ ಕೊಡುತ್ತಿಲ್ಲ, ಸರ್ವಸದಸ್ಯರ ಸಭೆ ಕರೆದಿಲ್ಲಾ, ಯಾವ್ಯಾವ ಸದಸ್ಯರಿಂದ ಎಷ್ಟು ಹಣ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲ, ಬ್ಯಾಂಕ್ ನಲ್ಲಿ ಖಾತೆ ಹೊಂದಿಲ್ಲ, ಸದಸ್ಯರ ಹಣ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಕಾಡುತ್ತಿದೆ, ನಾಲ್ಕೈದು ದಿನಗಳ ಕಾಲ ರಜೆ ಇರುವುದರಿಂದ ಸದಸ್ಯರಲ್ಲದಿರುವವರೂ ಸಹ ಬಂದು ಸೇರುತ್ತಾರೆ, ಇದರಿಂದ ನಮ್ಮ ಕ್ಲಬ್ ಗೆ ಕೆಟ್ಟ ಹೆಸರು ಬರುತ್ತದೆ, ಇದರಿಂದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲಿಖಿತ ದೂರು ನೀಡಿದ್ದಾರೆ.
ಆ ದೂರಿನ ಮೇರೆಗೆ ಗ್ರಾಮಾಂತರ ಪೋಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಲಿಯಾಖತ್ ಉಲ್ಲಾ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, ಅಲ್ಲಿದ್ದ ಇಪ್ಪತ್ತೊಂಭತ್ತು ಮಂದಿ ಸದಸ್ಯರ ಮೇಲೆ ನ್ಯಾಯಾಲಯದ ಅನುಮತಿ ಪಡೆದು, ಮೊಕದ್ದಮೆ ದಾಖಲಿಸಿಕೊಂಡು, ಸದಸ್ಯರ ಬಳಿ ಇದ್ದ ಒಂದು ಲಕ್ಷದ ಹತ್ತು ಸಾವಿರದ ನೂರು ರೂಪಾಯಿಗಳ ನಗದು, ನಾಲ್ಕು ಕಟ್ಟು ಇಸ್ಪೀಟೆಲೆಗಳು, ಸಿಸಿ ಟಿವಿ ಯ ಡಿವಿಆರ್ ಜೊತೆಗೆ ಕ್ಲಬ್ ನ ಸದಸ್ಯರ ರಿಜಿಸ್ಟರ್ ಪುಸ್ತಕವನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿದ ಲಿಯಾಖತ್ ಉಲ್ಲಾ ರವರು, ಸಂಘದ ಸದಸ್ಯರೊಬ್ವರು ಲಿಖಿತ ದೂರು ನೀಡಿದ್ದರು, ಈ ಕ್ಲಬ್ ಕಾನೂನು ಬಾಹಿರವಾಗಿ ನಡೆಯುತ್ತಿದೆ ಎಂದು ನಮಗೂ ಸಹ ಮಾಹಿತಿ ಇದ್ದುದರಿಂದ ಮೇಲಾಧಿಕಾರಿಗಳ ಆದೇಶದಂತೆ ದಾಳಿ ನಡೆಸಲಾಗಿದೆ, ಕಾನೂನು ಬಾಹಿರವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಆಡುತ್ತಿದ್ದವರ ಮೇಲೆ ದೂರು ದಾಖಲಿಸಿಕೊಂಡು ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ಕ್ಲಬ್ ನ ಒಳಗೆ ಅಂದರ್ ಬಾಹರ್ ಇಸ್ಪೀಟು ಆಡುತ್ತಿದ್ದ ೨೯ ಮಂದಿ ಮೇಲೆ ಎಫ್ಐಆರ್ ದಾಖಲಿಸಿ ನೋಟೀಸ್ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದೇ ಕ್ಲಬ್ ಮೇಲೆ ಇದೇ ತಿಂಗಳಲ್ಲಿ ನಡೆದ ಎರಡನೇ ದಾಳಿಯಾಗಿದ್ದು ಈ ಮೊದಲ ದಾಳಿಯಲ್ಲಿ ಪೋಲಿಸರು ಎಚ್ಚರಿಕೆ ನೀಡಿ ಬೀಗ ಹಾಕಿಸಿದ್ದರು, ಗೋವಿಂದೇಗೌಡನದೊಡ್ಡಿ ಗ್ರಾಮದಲ್ಲಿರುವ ಮತ್ತೊಂದು ಕ್ಲಬ್ ಮೇಲೂ ಸಹ ಕಳೆದ ತಿಂಗಳು ದಾಳಿ ನಡೆಸಿ ಬಾಗಿಲು ಮುಚ್ಚಿಸಿದ್ದರು. ಸಾಮಾಜಿಕ ಕಳಕಳಿಯುಳ್ಳವರೊಬ್ಬರು ಚನ್ನಪಟ್ಟಣ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಇರುವ ಕೆಲವು ಕ್ಲಬ್ ಗಳಲ್ಲಿ ಕಾನೂನು ಬಾಹಿರವಾದ ಚಟುವಟಿಕೆಗಳು ನಡೆಯುತ್ತಿವೆ ಎಂದು ಐಜಿ ಯವರನ್ನು ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದರಿಂದ ಪೋಲಿಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಹೆಸರೇಳಲಿಚ್ಚಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
-
ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು
ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂಕಷ್ಟದ ಸಮಯದಲ್ಲೂ ಕರ್ನಾಟಕ ಸರ್ಕಾರ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದು, ನ್ಯಾಯವು ಸಹ ನಮ್ಮ ಪರವಾಗಿಲ್ಲಾ ಎಂದು ರಾಜ್ಯಾದ್ಯಂತ ಇರುವ ೧,೯೦೦ಕ್ಕೂ ಹೆಚ್ಚಿನ ವಿವಿಧ ರೀತಿಯ ಸಂಘಟನೆಗಳು ಒಗ್ಗೂಡಿ ೨೯ ನೇ ಶುಕ್ರವಾರ ಮುಂಜಾನೆಯಿಂದ ಮುಸ್ಸಂಜೆವರೆಗೂ ಸ್ವಯಂ ಪ್ರೇರಿತ ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಶಾಲಾ-ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಛೇರಿಗಳಿಗೆ ಬೆಂಗಳೂರು ಸೇರಿದಂತೆ ಆಯ್ದ ಕೆಲ ಜಿಲ್ಲೆಗಳಿಗೆ ಮಾತ್ರ ರಜೆ ಘೋಷಣೆ ಮಾಡಿದ್ದು. ಪ್ರತಿ ಜಿಲ್ಲೆಗಳಲ್ಲೂ ರಜೆ ಘೋಷಣೆಗೆ ಸಂಬಂಧಿಸಿದಂತೆ ಆಯಾಯ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅದೇ ರೀತಿ ರಾಮನಗರ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಯಾವುದೇ ರಜೆ ಘೋಷಣೆ ರಾತ್ರಿ ೦೯:೩೦ ರವರೆಗೂ ಆಗಿರಲಿಲ್ಲಾ. ಯಾವುದೇ ಹಿಂಸೆಗೆ ಪ್ರಚೋದನೆ ನೀಡುವುದಿಲ್ಲಾ, ಸಾರ್ವಜನಿಕ ಆಸ್ತಿಪಾಸ್ತಿ ನಸ್ಟ ಉಂಟು ಮಾಡುವುದಿಲ್ಲಾ, ಹಾಗಾಗಿ ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡಲು ಸಾರ್ವಜನಿಕರಿಗೆ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಹ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.
ರಾಮನಗರ ಜಿಲ್ಲೆಯ ಅನುದಾನ ರಹಿತ ಶಾಲಾ ಶಿಕ್ಷಣ ಸಂಸ್ಥೆಗಳು ಮೊದಲಿಗೆ ರಜೆ ಘೋಷಣೆ ಮಾಡಿದ ನಂತರ ರಾಮನಗರ ಜಿಲ್ಲಾಧಿಕಾರಿಗಳಾದ ಡಾ ಅವಿನಾಶ್ ಮೆನನ್ ರಾಜೇಂದ್ರನ್ ರವರು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಸರ್ಕಾರಿ ಕಛೇರಿಗಳಿಗೆ ಹಾಗೂ ಸಾರಿಗೆ ಸಂಸ್ಥೆಗೆ ರಜೆ ಇನ್ನೂ ಘೋಷಣೆ ಆಗಿಲ್ಲದಿರುವುದರಿಂದ ಸರ್ಕಾರಿ ನೌಕರರು ಮತ್ತು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಕಾಯುತ್ತಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
-
ಸಂಸ್ಕೃತಿ ಎನ್ನುವುದೇ ನಡವಳಿಕೆ ಡಾ ಬಿ ಟಿ ನೇತ್ರಾವತಿಗೌಡ
ಚನ್ನಪಟ್ಟಣ: ಸಂಸ್ಕೃತಿ ಎಂಬುದೇ ನಡವಳಿಕೆ, ಆ ನಡವಳಿಕೆ ಎಂಬುದು ನಮ್ಮ ಮನೆಯಲ್ಲೇ ಆರಂಭವಾಗಬೇಕು, ನಾವು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಹೇಗೆ ವರ್ತಿಸಬೇಕು, ಯಾರ ಬಳಿ ಹೇಗೆ ಮಾತನಾಡಬೇಕು, ಅಣಕಿಸುವುದು, ಕಟು ನುಡಿಗಳನ್ನಾಡುವುದು, ಕದಿಯುವುದು ಎಂಬುದನ್ನು ತಮಾಷೆಗಾಗಿಯೂ ಹೇಳಿಕೊಡಬಾರದು ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ ಬಿ ಟಿ ನೇತ್ರಾವತಿಗೌಡ ಅಭಿಪ್ರಾಯಪಟ್ಟರು. ಅವರು ನಗರದ ಶತಮಾನೋತ್ಸವ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಕ್ಕಳಿಗೆ ಅಥವಾ ವಿದ್ಯಾರ್ಥಿಗಳಿಗೆ ಬುದ್ದಿ ಹೇಳುವ ಮೊದಲು ನಾವು ಬುದ್ದಿವಂತರಾಗಿ ವರ್ತಿಸಬೇಕು, ನಾನು ತಪ್ಪು ಮಾಡಿ, ನೀನು ತಪ್ಪು ಮಾಡಬೇಡ ಎನ್ನುವುದು ಸರಿಯಲ್ಲಾ, ಅವಿಭಕ್ತ ಕುಟುಂಬ ಎನ್ನುವುದು ಮರೆಯಾಗುತ್ತಿದ್ದು, ಸಂಬಂಧಗಳು ಹಾಳಾಗುತ್ತಿವೆ, ಸಂಬಂಧಗಳನ್ನು ಉಳಿಸಿಕೊಳ್ಳುವುದು ಹೇಗೆಂದು ಮಕ್ಕಳಿಗೆ ತಿಳಿಸಬೇಕು, ಹಾಗೆ ತಿಳಿಸಬೇಕಾದರೆ ನಾವು ಮೊದಲು ಸಂಬಂಧಗಳನ್ನು ಉಳಿಸಿಕೊಳ್ಳಬೇಕೆಂದರು. ಹದ್ದು ಮತ್ತು ಕೋಳಿ ಮರಿಗಳು ಸೇರಿದಂತೆ ಹಲವಾರು ಜಾನಪದ ಮತ್ತು ವಾಸ್ತವಿಕ ಕಥೆಗಳ ಉದಾಹರಣೆ ಹೇಳುವ ಮೂಲಕ ಮಹಿಳೆಯರಿಗೆ ತಿಳುವಳಿಕೆ ಮೂಡಿಸಿದರು.
ನಗರ ಆರಕ್ಷಕ ವೃತ್ತ ನಿರೀಕ್ಷಕಿ ಶೋಭಾ ವಿ ಮಾತನಾಡಿ ಪ್ರತಿಯೊಬ್ಬರಿಗೂ ಜ್ಞಾನ ಎಂಬುವುದು ಬಹಳ ಮುಖ್ಯ. ಪ್ರತಿ ದಿನವೂ ಕುಟುಂಬದ ಒತ್ತಡದಲ್ಲಿ ಸಿಲುಕಿಸುವ ಗೃಹಿಣಿಯರಿಗೆ ಹೆಚ್ಚು ಒತ್ತಡವಾಗುತ್ತಿದೆ. ಇಂತಹ ಮಹಿಳೆರಿಗೆ ಧರ್ಮಸ್ಥಳ ಸಂಘದವರು ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡು, ಮಹಿಳೆಯರಿಗಾಗಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ಉತ್ತಮ ಗುಣಗಳಿರುತ್ತವೆ. ಆ ಗುಣಗಳನ್ನು ಅಳವಡಿಸಿಕೊಂಡು ಬೆಳವಣಿಗೆ ಹೊಂದಬೇಕು ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡಿದ್ದ ಆರ್ಟ್ ಆಫ್ ಲಿವಿಂಗ್ ನ ಸಂಯೋಜಕಿಯಾದ ರಾಧಿಕಾ ರವಿಕುಮಾರ್ ಮಾತನಾಡಿ ಸಮಾಜದಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರು, ಯಾರೂ ಮೇಲಲ್ಲಾ, ಕೀಳಲ್ಲಾ. ಆದರೂ ಸಹ ಹೆಣ್ಣಿಗೆ ನಿರ್ಬಂಧಗಳು ಹೆಚ್ಚಿವೆ. ಅದು ಗಂಡಸರಿಗೂ ಅನ್ವಯವಾಗಬೇಕು. ಅದಾಗದಿರುವುದರಿಂದಲೇ ಕೆಲ ಸ್ಥಾನಗಳಲ್ಲಿ ಮೇಲಕ್ಕೇರುವ ಸ್ತ್ರೀಯರಿಗೆ ಕೀಳುಮಟ್ಟದಲ್ಲಿ ಮಾತನಾಡುವಾಗ ಪ್ರತಿಯೊಬ್ಬ ಮಹಿಳೆಗೂ ಸಹಜವಾಗಿ ಸಿಟ್ಟು ಬರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಾವು ಬೇರೆಯವರಿಂದ ಹಣ ಆಸ್ತಿ ಪಡೆಯಬಾರದು, ಒಳ್ಳೆಯ ಸಂಸ್ಕೃತಿಯನ್ನು ಪಡೆಯಬೇಕು. ಅದನ್ನೇ ನಾವು ಸಹ ಹಂಚಬೇಕು ಎಂದು ಸಭೆಯಲ್ಲಿ ನೆರೆದಿದ್ದ ಸಂಘದ ಮಹಿಳೆಯರಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ, ಡಾ ಅನಿತಾ, ಸಂಘದ ಜಿಲ್ಲಾ ನಿರ್ದೇಶಕ ಜಯಕರಶೆಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಂದ್ರು ಲ್ಯಾಬ್ ನ ಚಂದ್ರೇಗೌಡ, ಸಂಘದ ತಾಲ್ಲೂಕು ನಿರ್ದೇಶಕಿ ರೇಷ್ಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಚ ಸ್ಪರ್ಧೆ, ಕರಕುಶಲ ಉತ್ಪನ್ನಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.