Tel: 7676775624 | Mail: info@yellowandred.in

Language: EN KAN

    Follow us :


ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಅವರು ತಮ್ಮ ಅಜ್ಜ-ಅಜ್ಜಿಯರ ಸ್ಮರಣಾರ್ಥ ರಾಮನಗರದ ಪ್ರಗತಿ ಶಾಲೆಗೆ ಬ್ಯಾಂಡ್ ಸೆಟ್ ವಿತರಿಸಿದರು.

Posted date: 26 Feb, 2020

Powered by:     Yellow and Red

ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಅವರು ತಮ್ಮ ಅಜ್ಜ-ಅಜ್ಜಿಯರ ಸ್ಮರಣಾರ್ಥ ರಾಮನಗರದ  ಪ್ರಗತಿ ಶಾಲೆಗೆ ಬ್ಯಾಂಡ್ ಸೆಟ್ ವಿತರಿಸಿದರು.

ಹೆದ್ದಾರಿಯು ತನ್ನ ಸುತ್ತಮುತ್ತಲಿನ ಸ್ಥಳೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ನುಂಗಿ ಹಾಕುತ್ತಿದ್ದು, ಈ ದಿಕ್ಕಿನಲ್ಲಿ ಯುವ ಸಮೂಹ ತಮ್ಮ ನೆಲಮೂಲದ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾಯಕಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ  ಬೇಳೂರು ಸುದರ್ಶನ ಸಲಹೆ ನೀಡಿದರು.   


ನಗರದ ಪ್ರಗತಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಅವರು ತಮ್ಮ ಅಜ್ಜ-ಅಜ್ಜಿಯರಾದ ಪಾರ್ವತಮ್ಮ-ಸಿದ್ದವೀರಯ್ಯ ಹಾಗೂ ಜಯಮ್ಮ-ಶಾಂತಯ್ಯ ಸ್ಮರಣಾರ್ಥ ಏರ್ಪಡಿಸಿದ್ದ ಬ್ಯಾಂಡ್ ಸೆಟ್ ವಿತರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಗಾಗ ಪ್ರಯಾಣಿಸುವ ತಾವು, ರಾಮನಗರ ಎಂದರೆ, ಕಣ್ಣಿಗೆ ಕಾಣುವ ಬರೀ ಬೋರ್ಡ್ ಎಂದುಕೊಂಡಿದ್ದೆ, ಆದರೆ, ಸಂಶೋಧನಾ ವಿದ್ಯಾರ್ಥಿ ಎಸ್.ರುದ್ರೇಶ್ವರ ಅವರು, ಫೇಸ್ ಬುಕ್ ನಲ್ಲಿ ಪರಿಚಯವಾದಂದಿನಿಂದ ಇಲ್ಲಿನ ಒಂದೊಂದು ಪರಿಸರವೂ ಪರಿಚಯವಾಯಿತು. ದೂರವಾಣಿಯಲ್ಲಷ್ಟೇ ಮಾತನಾಡುತ್ತಿದ್ದ ನಾವಿಬ್ಬರು ಇಂದು ಮುಖಾಮುಖಿಯಾಗಿ ಭೇಟಿಯಾಗಿದ್ದೇವೆ ಎಂದು ತಮ್ಮ ಮನದಾಳದ ಮಾತುಗಳನ್ನು ತೆರೆದಿಟ್ಟರು.


  ರುದ್ರೇಶ್ವರ ಪತ್ರಿಕೆಯಲ್ಲಿ ಪ್ರಕಟವಾಗುವ ತಮ್ಮ ಬರಹದ ಮೂಲಕ ಜಿಲ್ಲೆಯ ಸಾಧಕರು, ಶ್ರಮಿಕರು, ವಿದ್ವಾಂಸರು, ಇತಿಹಾಸ ಪುರುಷರು ಸೇರಿದಂತೆ ಒಟ್ಟಾರೆ ಈ ನೆಲದ ಪರಂಪರೆಯ ಬಗ್ಗೆ ತಿಳಿಸಿಕೊಡುತ್ತಿದ್ದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ರಾಮನಗರವನ್ನು ಇವತ್ತು ಹೊಳಹೊಕ್ಕು ನೋಡಿದಾಗ, ಇಲ್ಲಿನ ಸಂಸ್ಕೃತಿಯ ಪರಿಚಯವಾಯಿತು. ವೃತ್ತಿಯೊಂದು ಪ್ರವೃತ್ತಿಯಾಗಿ ಬೆಳೆಯುವುದು ಈ ಆಧುನಿಕ ಯುಗದಲ್ಲಿ ಮರೆಯಾಗುತ್ತಿದೆ. ಆದರೆ, ಇವೆರಡರಲ್ಲೂ ಸಮತೋಲನ ಕಾಯ್ದುಕೊಂಡಿರುವ ರುದ್ರೇಶ್ವರ ತಮ್ಮ ಬರವಣಿಗೆಯ ಮೂಲಕ ಈ ನೆಲದ ನಿಜ ಸಮಸ್ಯೆಗಳನ್ನು ಅನಾವರಣಗೊಳಿಸುವುದರ ಜೊತೆಗೆ, ತಮ್ಮ ಪೂರ್ವಜರ ನೆನಪಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದು ಅರ್ಥಪೂರ್ಣವಾಗಿದ್ದು, ಇವತ್ತಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಬೇಳೂರು ಸುದರ್ಶನ ಮೆಚ್ಚುಗೆ ವ್ಯಕ್ತಪಡಿಸಿದರು. 


ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ಕವಿ ಜಿ.ಪಿ.ರಾಜರತ್ನಂ ಅವರು ಓದಿದ ಮೆಯಿನ್ ಪ್ರೈಮರಿ ಶಾಲೆಯನ್ನು ಸ್ಮಾರಕ ಭವನವನ್ನಾಗಿ ರೂಪಿಸಲು ನಿರ್ಧರಿಸಲಾಗಿದೆ.   


ನಗರದ ಛತ್ರದ ಬೀದಿಯಲ್ಲಿನ ಶತಮಾನ ಪೂರೈಸಿರುವ ಮೇಯಿನ್ ಪ್ರೈಮರಿ ಶಾಲೆಯಲ್ಲಿ ಕವಿ ಜಿ.ಪಿ.ರಾಜರತ್ನಂ ವ್ಯಾಸಂಗ ಮಾಡಿದ್ದರು. ಹೀಗಾಗಿ ಸದಾ ಅವರ ಸ್ಮರಣೆ ಚಿರಾಯುವಾಗಿರುವಂತೆ ಮಾಡಲು ಆ ಶಾಲೆಯಲ್ಲಿ ಯೋಜನೆಯೊಂದನ್ನು ರೂಪಿಸಿ ಅಭಿವೃದ್ಧಿಪಡಿಸುವ ಚಿಂತನೆ ಇದೆ ಎಂದರು.


ಡೊಳ್ಳು ಕುಣಿತ  ಪುರುಷರಿಗೆ ಮಾತ್ರ ಸೀಮಿತವಾಗಿದೆ. ಅದು ಮಹಿಳೆಯರೂ ಕಲಿಯಬೇಕು. ಜಾನಪದ ಕಲೆಗಳನ್ನು ಬಾಲಕರು, ಬಾಲಕಿಯರು ಕಲಿಯಬೇಕಾಗಿದೆ. ಪ್ರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಾನಪದ ಕಲೆಗಳನ್ನು ಕಲಿಸಿಕೊಡುವ ವ್ಯವಸ್ಥೆಯಾಗಬೇಕು ಎಂದು ಸಲಹೆ ನೀಡಿದರು. ಪ್ರಗತಿ ಶಾಲೆಗೆ ಬ್ಯಾಂಡ್ ಸೆಟ್ ವಿತರಣೆ ಹಾಗೂ ಸಾಧಕರನ್ನು ಸನ್ಮಾನಿಸಿದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ದಾರಿದೀಪ ವೃದ್ದಾಶ್ರಮದ ಸಂಸ್ಥಾಪಕಿ ಕವಿತಾರಾವ್ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ವೃದ್ದಾಶ್ರಮಗಳು ವ್ಯಾಪಾರವಾಗಿ ಬಿಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ ಹೆತ್ತವರನ್ನು ನೋಡಿಕೊಳ್ಳದೆ ಮಕ್ಕಳು ಅವರನ್ನು ವೃದ್ದಾಶ್ರಮಗಳಲ್ಲಿ ಇರಿಸುತ್ತಾರೆ. ಅಂತಹ ಪದ್ದತಿ ನಮ್ಮ ದೇಶದಲ್ಲೂ ಆರಂಭವಾಗಿದೆ. ತಿಂಗಳಿಗೆ ೨೦-೩೦ ಸಾವಿರ ಶುಲ್ಕ ವಸೂಲು ಮಾಡಿ ವೃದ್ದರನ್ನು ಸಲಹುವ ವೃದ್ದಾಶ್ರಮಗಳು ಎಂಬ ವ್ಯಾಪಾರ ಕೇಂದ್ರಗಳು ಹುಟ್ಟಿಕೊಂಡಿವೆ. ಹೀಗಾಗಿ ಹಿರಿಯರನ್ನು ಗೌರವಿಸಿ, ಸಲಹುವ ಸಂಸ್ಕೃತಿ, ಸಂಪ್ರದಾಯ ಕ್ಷೀಣ ಸುತ್ತಿದೆ ಎಂದು ವಿಷಾದಿಸಿದರು.


ವೇದಿಕೆಯಲ್ಲಿ ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಕೆ.ಬೈರಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಮರೀಗೌಡ, ಕಸಾಪ ಜಿಲ್ಲಾಧ್ಯಕ್ಷ ಸಿಂ.ಲಿಂ.ನಾಗರಾಜ್, ಸ್ನೇಹ ಕೂಟ ಸಂಸ್ಥೆ ಅಧ್ಯಕ್ಷ ಎಚ್.ಪಿ.ನಂಜೇಗೌಡ, ಸಾಮಾಜಿಕ ಚಿಂತಕ ಎಲ್.ಸಿದ್ದಪ್ಪಾಜಿ, ಹೋಲಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಅಲ್ತಾಫ್ ಅಹಮದ್, ಪ್ರಗತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ಪಿ.ಹೆಗ್ಡೆ, ಅಮೃತ ವಿಕಲಚೇತನ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಟಿ.ರಮೇಶ್  ಮುಂತಾದವರು ಭಾಗವಹಿಸಿದ್ದರು.


ಇದೇ ಸಂದರ್ಭದಲ್ಲಿ ಶಾಂತಮ್ಮ (ರಂಗಭೂಮಿ), ತ್ಯಾಗರಾಜ್ (ಪತ್ರಿಕೋದ್ಯಮ),  ಆರ್.ಕೆ.ಸತೀಶ್ (ಸಮಾಜ ಸೇವಕರು) ಚಿತ್ರರಾವ್ ( ಉದಯೋನ್ಮುಖ ಕಲಾವಿದೆ), ಎಚ್.ಕಮಲಮ್ಮ (ಮುಖ್ಯ ಶಿಕ್ಷಕರು), ಡಾ.ಕೆ.ಕೃಷ್ಣಮೂರ್ತಿ, (ಇರುಳಿಗ ಸಮುದಾಯದ ಪ್ರಥಮ ಪಿ.ಎಚ್.ಡಿ ಪದವಿಧರ), ಚೇತನ್(ಇರುಳಿಗ ಸಮುದಾಯದ ಪ್ರಥಮ ಕಾನೂನು ಪದವಿಧರ), ಕೆ.ಎಲ್.ಶೇಷಗಿರಿರಾವ್ ಮತ್ತು ಎ.ಎಸ್.ಕೃಷ್ಣಮೂರ್ತಿ (ಧಾರ್ಮಿಕ ಸೇವೆ), ಅಮಿತ್ ರಾಜ್ ಶಿವ (ಉದಯೋನ್ಮುಖ ಸಂಘಟಕ), ವೀರೇಶ್‌ಮೂರ್ತಿ (ಶಿಕ್ಷಣ ಕ್ಷೇತ್ರ), ಮಂಜುನಾಥ್ ದುಡ್ನಹಳ್ಳಿ (ಉದಯೋನ್ಮುಖ ಕವಿ) ಅವರನ್ನು ಸನ್ಮಾನಿಸಲಾಯಿತು.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑