Tel: 7676775624 | Mail: info@yellowandred.in

Language: EN KAN

    Follow us :


ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

Posted date: 08 Mar, 2024

Powered by:     Yellow and Red

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥಮ ಬಾರಿಗೆ ಬೊಂಬೆನಾಡಿನ ಮಹಿಳೆಯರೇ ಅಭಿನಯಿಸಿರುವ ಪೌರಾಣಿಕ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾರತ ವಿಕಾಸ ಪರಿಷದ್ (ಕಣ್ವ ಶಾಖೆ) ಹಾಗೂ ಹಲವಾರು ದಾನಿಗಳ ನೇತೃತ್ವದಲ್ಲಿ ಪ್ರಪ್ರಥಮ ಬಾರಿಗೆ ಬೊಂಬೆನಾಡಿನ ಮಹಿಳೆಯರೇ ಅಭಿನಯಿಸಿರುವ ದ್ರೌಪದಿ ವಿಜಯ ಅಥವಾ ಶ್ರೀ ಕೃಷ್ಣ ಸಂಧಾನ ನಾಟಕದ ಪ್ರದರ್ಶನವಿದ್ದು, ಕಲಾವಿದರು, ಕಲಾಪೋಷಕರು ಆಗಮಿಸಿ ನಾಟಕವನ್ನು ಯಶಸ್ವಿಗೊಳಿಸಲು ಭಾರತ ವಿಕಾಸ ಪರಿಷದ್‍ನ ಪದಾಧಿಕಾರಿಗಳು ಮತ್ತು ಹಿರಿಯ ಕಲಾವಿದರು ಮನವಿ ಮಾಡಿದರು.  ಅವರು ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 


ಭಾರತೀಯ ವಿಕಾಸ್ ಪರಿಷದ್‍ನಲ್ಲಿ ಕುಟುಂಬ ಸಮೇತ ಸದಸ್ಯರಾಗಿದ್ದು, ಆಯಾಯ ಕುಟುಂಬದಲ್ಲಿ ಕಲೆಯಲ್ಲಿ ಆಸಕ್ತಿಯಿರುವ ಮಹಿಳಾ ಸದಸ್ಯರೇ ಪೌರಾಣಿಕ ನಾಟಕವನ್ನು ಕಲಿತು ಪ್ರದರ್ಶಿಸಲು ಸಜ್ಜಾಗಿದ್ದಾರೆ. ಕೃಷ್ಣ, ಶಕುನಿ, ಭೀಷ್ಮ, ದುರ್ಯೋಧನ, ಧರ್ಮರಾಯ, ಭೀಮ, ಅರ್ಜುನ, ಸೇರಿದಂತೆ ಎಲ್ಲಾ ಪಾತ್ರಗಳನ್ನು ಮಹಿಳೆಯರೇ ನಿರ್ವಹಿಸಿರುವುದು ವಿಶೇಷವಾಗಿದ್ದು, ನಾಟಕವು ಪ್ರದರ್ಶನಕ್ಕೆ ಸಜ್ಜಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣ ಸಣ್ಣ ವಿಡಿಯೋಗಳು ಕಾಣಿಸಿಕೊಂಡಿದ್ದು, ಲಕ್ಷಾಂತರ ಮಂದಿ ಕಣ್ತುಂಬಿಕೊಂಡು ಶಹಬ್ಬಾಸ್‍ಗಿರಿ ನೀಡಿದ್ದಾರೆ.


ಪ್ರತಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಭಾರತೀಯ ವಿಕಾಸ್ ಪರಿಷದ್ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ವಸಂತ್ ಕುಮಾರ್, ನಮ್ಮ ಸಂಸ್ಥೆಯು ವರ್ಷದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅದರಲ್ಲಿ ಮಹಿಳಾ ದಿನಾಚರಣೆ ಬಹು ಮುಖ್ಯವಾಗಿದೆ. ಈ ಬಾರಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕೆಂಬ ನಿಟ್ಟಿನಲ್ಲಿ ಮಹಿಳೆಯರೇ ಪಾತ್ರಧಾರಿಗಳಾಗಿರುವ ನಾಟಕವನ್ನು ಪ್ರದರ್ಶಿಸಲು ನಿರ್ಧರಿಸಲಾಗಿತ್ತು. ಅದಕ್ಕೆ ಸೂಕ್ತ ಮಹಿಳಾ ಪಾತ್ರಧಾರಿಗಳನ್ನು ಗುರುತಿಸುವ ಕೆಲಸವನ್ನು ಹಲವಾರು ತಿಂಗಳು ನಡೆಸಿ, ಕೊನೆಯಲ್ಲಿ ಹಲವಾರು ಮಹಿಳೆಯರನ್ನು ಆಯ್ಕೆ ಮಾಡಲಾಯಿತು. 


ಮಹಿಳೆಯರನ್ನು ಆಯ್ಕೆ ಮಾಡಿ ಅವರಲ್ಲಿನ ಅಭಿನಯ ಸಾಮರ್ಥ್ಯವನ್ನು ಗುರುತಿಸಿ ನಾಟಕಕ್ಕೆ ಕೊನೆಯದಾಗಿ ಇಪ್ಪತ್ನಾಲ್ಕು ಮಹಿಳಾ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಮಹಿಳೆಯರು ನಾಟಕವನ್ನು ಸಂಪೂರ್ಣವಾಗಿ ಕಲಿತಿದ್ದು, ನಗರದ ಶತಮಾನೋತ್ಸವ ಭವನದಲ್ಲಿ ಗೆಜ್ಜೆ ಪೂಜೆ ಎಂಬ ಹೆಸರಿನಲ್ಲಿ ಪೂರ್ವ ಪ್ರದರ್ಶನವನ್ನು ನಡೆಸಲಾಗಿದೆ. ಮಾ.10ರ ಭಾನುವಾರ ಮಧ್ಯಾಹ್ನ 02:00 ಗಂಟೆಗೆ ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ದ್ರೌಪದಿ ವಿಜಯ ಅಥವಾ ಶ್ರೀ ಕೃಷ್ಣ ಸಂಧಾನ ನಾಟಕದ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 2ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ವೇದಿಕೆ ಕಾರ್ಯಕ್ರಮ ಮುಗಿದ ನಂತರ ನಾಟಕ ಪ್ರದರ್ಶನ ಶುರುವಾಗಲಿದೆ ಎಂದು ತಿಳಿಸಿದರು.


ನಾಟಕವು ತಡರಾತ್ರಿವರೆಗೂ ನಡೆಯುವುದರಿಂದ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ, ನೀರಿನ ವ್ಯವಸ್ಥೆ ಹಾಗೂ ರಾತ್ರಿ ಭೋಜನದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಇದೇ ಪ್ರಪ್ರಥಮ ಬಾರಿಗೆ ಮಹಿಳೆಯರೇ ಅಭಿನಯಿಸುತ್ತಿರುವ ನಾಟಕವಾದ್ದರಿಂದ ಪೋಲಿಸರಿಗೂ ಸಹ ಸೂಕ್ತ ಬಂದೋಬಸ್ತ್ ನೀಡುವಂತೆ ಮನವಿ ಮಾಡಲಾಗಿದೆ. ಹಲವಾರು ಗಣ್ಯರು ನಾಟಕವನ್ನು ವೀಕ್ಷಿಸಲು ಬರುತ್ತಿದ್ದು, ಸಾರ್ವಜನಿಕರು ಸಹ ನಾಟಕವನ್ನು ವೀಕ್ಷಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. 


*ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ, 97 4242 4949*


ಸಂಸ್ಥೆಯ ಕಣ್ವ ಶಾಖೆ ಅಧ್ಯಕ್ಷ ಗುರುಮಾದಯ್ಯ ಮಾತನಾಡಿ, ಇದಕ್ಕೂ ಮೊದಲು ಭಾವಿಪ ಪುರುಷರ ಅಭಿನಯದ ನಾಟಕ, ಗುರುವಂದನೆ, ಮಕ್ಕಳ ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಈ ಬಾರಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕೆಂದು ತೀರ್ಮಾನಿಸಿ ಮಹಿಳೆಯರಿಂದಲೇ ನಾಟಕವನ್ನು ಪ್ರದರ್ಶಿಸಲು ತೀರ್ಮಾನಿಸಲಾಯಿತು. ಈ ನಾಟಕದ ಎಲ್ಲಾ 24 ಪಾತ್ರಗಳನ್ನು ಮಹಿಳಾ ಪಾತ್ರದಾರಿಗಳೇ ನಿರ್ವಹಿಸಿದ್ದಾರೆ. ಈ ನಾಟಕದ ಮೂಲಕ ಮಹಿಳೆಯರು ಬೊಂಬೆನಾಡಿಗೆ ಇನ್ನಷ್ಟು ಕೀರ್ತಿ ತರಲು ಇದೊಂದು ಮೈಲಿಗಾಲ್ಲಾಗಲು ಹಾಗೂ ಇತಿಹಾಸ ಪುಟ ಸೇರಲು ಪ್ರೇಕ್ಷಕ ಮತ್ತು ವೀಕ್ಷಕರೇ ಕಾರಣ ಕರ್ತರಾಗಿರುವುದರಿಂದ ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಬಂದು ಸಹಕರಿಸಿ ಎಂದು ಮನವಿ ಮಾಡಿದರು.


ಭಾವಿಪ ಮಹಿಳಾ ದಿನಾಚರಣೆಯ ಸಂಚಾಲಕಿ ಶೈಲಜಾ ಶಿವಾನಂದ್ ಮಾತನಾಡಿ, ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಸಾಮಾನ್ಯ ಕಾರ್ಮಿಕರಿಂದ ಹಿಡಿದು ರಾಷ್ಟ್ರಪತಿವರೆಗೂ ಮಹಿಳೆಯರು ಅಸಾಮಾನ್ಯ ಎಂಬುದು ನಿರೂಪಿತವಾಗಿದೆ. ಮಹಿಳೆಯರಿಗೆ ನಮ್ಮ ಸಂಸ್ಕೃತಿ ವಿಶೇಷ ಸ್ಥಾನ ನೀಡಿದ್ದು, ಗೌರವದಿಂದ ಕಾಣುತ್ತಾರೆ. ಇದೇ ನಿಟ್ಟಿನಲ್ಲಿ ಭಾವಿಪದಿಂದ ಪ್ರತಿವರ್ಷ ಮಹಿಳಾ ದಿನಾಚರಣೆ ಆಚರಿಸಿ ಗೌರವಿಸುವ ಕೆಲಸ ಮಾಡಲಾಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿಯೇ ಹೊಸ ಕಾರ್ಯಕ್ರಮ ಎನ್ನುವ ರೀತಿಯಲ್ಲಿ ಮಹಿಳೆಯರೇ ಅಭಿಯಿಸಿರುವ ನಾಟಕ ಪ್ರದರ್ಶನಕ್ಕೆ ನಮ್ಮ ಮಹಿಳೆಯರು ಸಜ್ಜಾಗಿದ್ದಾರೆ. ಮಹಿಳೆಯರು ಎಲ್ಲ ರಂಗಕ್ಕೂ ಸೈ ಎನ್ನುವಂತೆ ತಯಾರಿ ನಡೆಸಿದ್ದಾರೆ ಎಂದು ತಿಳಿಸಿದರು. ಇದಕ್ಕೆಲ್ಲ ಕಳಸವಿಟ್ಟಂತೆ ಆರ್. ಲೋಕೇಶ್ವರ್ ರವರು ನಾಟಕದ ನಿರ್ದೇಶನವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 


ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ವಿ.ಟಿ.ರಮೇಶ್, ಖಜಾಂಚಿ ಶಿವಲಿಂಗಯ್ಯ, ಪೌರಾಣಿಕ ನಾಟಕದ ಸಂಚಾಲಕರಾದ ಡಿ.ಪುಟ್ಟಸ್ವಾಮಿಗೌಡ(ಡಿಪಿಎಸ್) ಮಂಜುನಾಥ್  ಸಹ ನಿರ್ದೇಶಕ ವಿಜೇಂದ್ರ, ಚಂದ್ರು ಲ್ಯಾಬ್ ಮಾಲೀಕ ವಿ.ಸಿ.ಚಂದ್ರೇಗೌಡ ಇತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ... 

ಮೊ: 9845856139 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑