ಯಶಸ್ವಿಯಾಗಿ ಜರುಗಿದ ಶ್ರೀ ಕೆಂಗಲ್ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವ ಜಿಲ್ಲಾಡಳಿತ ಭಾಗಿ

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಮತ್ತು ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಹಯೋಗದೊಂದಿಗೆ ಅಯ್ಯನಗುಡಿ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ಯಶಸ್ವಿಯಾಗಿ ಜರುಗಿತು.
ಇತಿಹಾಸ ಪ್ರಸಿದ್ಧ ಅಯ್ಯನಗುಡಿ ಶ್ರೀ ಕೆಂಗಲ್ ಆಂಜನೇಯಸ್ವಾಮಿಯವರು ಕೆಂಪಾದ (ಕೆಂಗಲ್ಲು) ಕಲ್ಲಿನಲ್ಲಿ ಕೆಂಗಲ್ನಲ್ಲಿ ಉದ್ಬವವಾಗಿ, ಶ್ರೀ ಕಣ್ವ ಹಾಗೂ ವ್ಯಾಸ ಮಹರ್ಷಿಗಳಿಂದ ಪೂಜಿಸಲ್ಪಟ್ಟು ವಿರಾಜಮಾನರಾಗಿರುವ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಯವರ ಸನ್ನಿಧಿಯಲ್ಲಿ ಭಕ್ತಾಭೀಷ್ಪ ಫಲ ಪ್ರದಾಯವಾಗಿ ಬಿಜಯ ಮಾಡಿಸಿರುವ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ಯವರ ಬ್ರಹ್ಮ ರಥೋತ್ಸವಕ್ಕೆ ಗುರುವಾರ ಬೆಳಿಗ್ಗೆ 11.55 ರಿಂದ 12.50 ಗಂಟೆಯೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಜಿಲ್ಲಾಧಿಕಾಧಿಕಾರಿಗಳಾದ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ಚಾಲನೆ ನೀಡಿದರು. ಇದೇ ಪ್ರಪ್ರಥಮ ಬಾರಿಗೆ ಜಿಲ್ಲಾಧಿಕಾರಿಗಳು ಬ್ರಹ್ಮ ರಥೋತ್ಸವವದಲ್ಲಿ ಭಾಗವಹಿಸಿ, ಚಾಲನೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ದೇವರ ದಂಡ ಮತ್ತು ಅಲಂಕೃತ ಶ್ರೀನಿವಾಸ, ಶ್ರೀದೇವಿ ಭೂದೇವಿ ದೇವರ ಮೂರ್ತಿ ಉತ್ಸವವನ್ನು ಹೊತ್ತು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದರು. ಅದಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಂದಾರಗುಪ್ಪೆ ವಿ.ಬಿ.ಚಂದ್ರು, ಇ ಓ. ಹೆಚ್.ರಘು ಮತ್ತು ಪ್ರಧಾನ ಅರ್ಚಕರು ಸದಸ್ಯರು ಆದ ಜಿ.ರವೀಂದ್ರಕುಮಾರ್, ಅಬ್ಬೂರು ಬಿ.ಅಂದಾನಯ್ಯ, ಎಸ್.ಲಕ್ಷ್ಮೀನರಸಿಂಹನ್, ವಂದಾಗುಪ್ಪೆ ರಾಮಮೂರ್ತಿ, ವಡ್ಡರಹಳ್ಳಿ ಹೆಚ್. ಹನುಮಂತರಾಜು, ಪೌಳಿದೊಡ್ಡಿ ದಿಲೀಪ್ ಹಾಗೂ ಭಕ್ತಾಧಿಗಳು ಹೆಜ್ಜೆ ಹಾಕಿ ಜಯಘೋಷ ಕೂಗುತ್ತಾ ಸಾಥ್ ನೀಡಿದರು. ಪ್ರಬಾರ ತಹಶೀಲ್ದಾರ್ ವಿಜಯಲಕ್ಷ್ಮಿ,ಉಪ ತಹಶೀಲ್ದಾರ್ ಆದ ಸೋಮಶೇಖರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಸುಧಾಚಂದ್ರು, ಶ್ರೀ ಕೆಂಗಲ್ ಹನುಮಂತಯ್ಯ ನವರ ಪುತ್ರಿ ವಿಜಯಲಕ್ಷ್ಮಿ ಮತ್ತು ದಿ.ತಿಮ್ಮಯ್ಯನವರ ಕುಟುಂಬ, ಮುಂತಾದವರು ಹಾಜರಿದ್ದರು.
ದೇವಸ್ಥಾನದ ಅವರಣದಿಂದ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವವು ಚಾಲನೆಗೊಂಡಾಗ ನೆರೆದಿದ್ದ ಭಕ್ತಾಧಿಗಳು ಗೋವಿಂದಾ...ಗೋವಿಂದಾ ಜಯ ಘೋಷಗಳನ್ನು ಕೂಗುತ್ತಾ ಹೂವು, ಬಾಳೆ ಹಣ್ಣು ಜವನವನ್ನು ರಥದ ಮೇಲೆ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿಯವರ ಬ್ರಹ್ಮ ರಥೋತ್ಸವವು ದೇವಸ್ಥಾನದ ಆವರಣದಿಂದ ಹೊರಟು, ದೇವಸ್ಥಾನದ ಮುಂಭಾಗದ ಬೆಂಗಳೂರು ಮೈಸೂರು ಹೆದ್ದಾರಿ ಮಾರ್ಗವಾಗಿ ಸಾಗಿ ದೇವಸ್ಥಾನದ ಸ್ವಸ್ಥಾನವನ್ನು ತಲುಪಿ ಸಮಾಪ್ತಿಗೊಂಡಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಪಟದ ಕುಣಿತ, ತಮಟೆ ಸೇವೆ, ಡೊಳ್ಳುಕುಣಿತ, ಪೂಜಾ ಕುಣಿತ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಕೆಂಗಲ್ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿಯವರ ಬ್ರಹ್ಮ ರಥೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಭಕ್ತಾಧಿಗಳು ದೇವರ ದರ್ಶನ ಪಡೆದು, ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ, ತೀರ್ಥ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಆಗಮಿಸಿದ ಎಲ್ಲಾ ಭಕ್ತಾಧಿಗಳಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಸೇವಾ ಕರ್ತರು ಪ್ರಸಾದ, ಪಾನಕ, ಮಜ್ಜಿಗೆ, ಕುಡಿಯುವ ನೀರು ವಿತರಣೆ ಮಾಡಿದರು. ಭಕ್ತಾಧಿಗಳಿಗೆ ಯಾವುದೇ ಕೊರತೆ ಆಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಸೂಕ್ತ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು