ನಗರದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ಚನ್ನಪಟ್ಟಣ.ಜ.೨೩: ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರನ್ನು ಪುರ ಪೋಲಿಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಗಲು ವೇಳೆಯಲ್ಲಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡುವ ಸಾರ್ವಜನಿಕರಿಂದ ಮೊಬೈಲ್, ಜೇಬು ಕಳ್ಳತನ ಮಾಡುತ್ತಿದ್ದ ಹಾಗೂ ರಾತ್ರಿ ವೇಳೆ ಲಾರಿಗಳನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ರಾಬರಿ ಮಾಡುತ್ತಿದ್ದ ಖತರ್ನಾಕ್ ಕಳ್ಳರ ಗುಂಪೊಂದನ್ನು ಚನ್ನಪಟ್ಟಣ ಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಮೈಸೂರಿನ ಉದಯಗಿರಿ ನಿವಾಸಿಗಳಾದ ಇಮ್ರಾನ್ ಪಾಷ, ತೌಶಿಫ್, ನಿಶಾದ್ ಪಾಷ, ನದೀಮ್ ಹಾಗೂ ಚಾಂದ್ ಪಾಷ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಚನ್ನಪಟ್ಟಣ ಬಸ್ ನಿಲ್ದಾಣಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಮೊಬೈಲ್ ಕದಿಯುತ್ತಿದ್ದ ಖದೀಮರ ಸೆರೆ ಹಿಡಿದಿದ್ದಾರೆ. ಪೊಲೀಸರನ್ನು ನೋಡಿದ ಕೂಡಲೇ ನಾಲ್ವರು ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಇಮ್ರಾನ್ ಪಾಷ ಸ್ಥಳದಲ್ಲೇ ಸಿಕ್ಕಿಬಿದ್ದಿದ್ದು, ತೌಶಿಫ್, ನಿಶಾದ್ ಪಾಷ, ನದೀಮ್ ಹಾಗೂ ಚಾಂದ್ ಪಾಷ ಪರಾರಿಯಾಗಿದ್ದರು.
ಅವರನ್ನೂ ಸಹ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ನಾಲ್ಕು ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ.
ಈ ಖತರ್ನಾಕ್ ಕಳ್ಳರು ಅಧಿಕ ಜನಸ್ತೋಮವಿದ್ದ ಬಸ್ಸುಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಬಸ್ನಲ್ಲಿ ಮೊಬೈಲ್ ಕಳ್ಳತನ ಮಾಡಿದ ಕೂಡಲೇ ಮಾರುತಿ ಜೆನ್ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ಜೊತೆಗೆ ರಾತ್ರಿ ವೇಳೆ ಲಾರಿ, ಟ್ರಕ್ಗಳನ್ನ ಅಡ್ಡಗಟ್ಟಿ, ಮಚ್ಚು, ಹಾಗೂ ಚಾಕು ತೋರಿಸಿ ಹಣ, ಮೊಬೈಲ್ ಕಿತ್ತುಕೊಳ್ಳುತ್ತಿದ್ದರು. ಬೆಂಗಳೂರು, ರಾಮನಗರ, ಮಂಡ್ಯ, ಚನ್ನಪಟ್ಟಣ ಹೀಗೆ ಹಲವಾರು ಕಡೆ ಕೃತ್ಯ ಎಸಗಿದ್ದರು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು