Tel: 7676775624 | Mail: info@yellowandred.in

Language: EN KAN

    Follow us :


25ರಂದು ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ಸ್ವೆಟರ್ ವಿತರಣೆ

Posted date: 23 Dec, 2018

Powered by:     Yellow and Red

25ರಂದು ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ಸ್ವೆಟರ್ ವಿತರಣೆ

ಸಂಶೋಧನಾ ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ತಾಲ್ಲೂಕಿನ ಕೂಟಗಲ್ ಬಳಿ ವಾಸವಾಗಿರುವ ಇರುಳಿಗ ಸಮದಾಯದ ಕುಟುಂಬಗಳಿಗೆ ಸ್ವೆಟರ್‌ ವಿತರಣಾ ಕಾರ್ಯಕ್ರಮ ದಿನಾಂಕ 25ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ದೇಶಕಿ ಡಾ.ಬಿ.ಆರ್. ಮಮತಾ, ಹಿರಿಯ ಪತ್ರಕರ್ತರಾದ ತ್ಯಾಗರಾಜ, ಕವಿ ವಾಸುದೇವ ನಾಡಿಗ್‌, ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ, ಸಾಂಸ್ಕೃತಿಕ ಸಂಘಟಕಿ ಕವಿತಾರಾವ್, ಇರುಳಿಗ ಸಮುದಾಯದ ಮುಖಂಡ ಕೃಷ್ಣಮೂರ್ತಿ, ಯೆಲ್ಲೊ ಅಂಡ್‌್ ರೆಡ್‌ ಸಂಸ್ಥೆಯ  ವ್ಯವಸ್ಥಾಪಕ ನಿರ್ದೇಶಕ ಆನಂದಶಿವ, ಶಿಕ್ಷಕ ಎಂ.ಎಸ್. ಚನ್ನವೀರಪ್ಪ ಪಾಲ್ಗೊಳ್ಳಲಿದ್ದಾರೆ. 

ಎಸ್. ರುದ್ರೇಶ್ವರ ಅವರ ಪರಿಚಯ : ಸಮಾಜ ಇಂದು ಮಾನವೀಯ ನೆಲೆಯ ವಿರುದ್ಧ ದಿಕ್ಕಿನಲ್ಲಿ ಬೆಳವಣಿಗೆ ಹೊಂದುತ್ತಿದೆ. ಅದು ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಸಾಗುತ್ತಿದೆಯೇನೋ ಎಂಬ ಆತಂಕ ಸಾಮಾಜಿಕ ಚಿಂತಕರನ್ನು ಆವರಿಸಿಕೊಳ್ಳುತ್ತಿದೆ. ಮನುಷ್ಯತ್ವ ಮರೆಯಾಗುತ್ತಿರುವ, ಮೃಗತ್ವ ವಿಜೃಂಭಿಸುತ್ತಿರುವ, ಅಪಾಯಕಾರಿ ಬೆಳವಣಿಗೆಯತ್ತ ಸಮಾಜ ಸಾಗುತ್ತಿದೆಯೆಂಬ ದಿಗಿಲು ಸಜ್ಜನರನ್ನು ಕಾಡಲಾರಂಭಿಸಿದೆ. ಇಂಥ ವಿಷಮ ಪರಿಸ್ಥಿತಿಯಲ್ಲಿ ಸಾಮಾಜಿಕ ಸಾಮರಸ್ಯವನ್ನು ಮರುಸ್ಥಾಪಿಸುವ ವಿಚಾರವಂತರ ಅವಶ್ಯಕತೆಯಿದೆ. ಜನರನ್ನು ಸಂಸ್ಕಾರವಂತರನ್ನಾಗಿಸುವ, ಜನರಿಗೆ ಮಾನವೀಯತೆಯ ಬೆಲೆಯನ್ನು ಮನಗಾಣಿಸುವ, ಸಮಾಜದಲ್ಲಿ ಮನುಷ್ಯತ್ವವನ್ನು ಮರುಸ್ಥಾಪಿಸುವ ಮಾನವ ಸಂಪನ್ಮೂಲದ ಅಗತ್ಯತೆ ಇಂದು ಬಹಳಷ್ಟಿದೆ. ಅಂತಹ ಮಾನವ ಸಂಪನ್ಮೂಲವು ಸಾಂಸ್ಕøತಿಕ, ಸಾಹಿತ್ಯಕ, ಸಾಮಾಜಿಕ ಚಿಂತನೆಯ ವಿವಿಧ ನೆಲೆಗಳದ್ದಾಗಿರಬಹುದು. ಈ ನೆಲೆಗಳಲ್ಲಿ ಆರೋಗ್ಯಕರವಾಗಿ ಚಿಂತನೆ ನಡೆಸಿ ತಮ್ಮ ಸಂವೇದನೆಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿರುವ ವಿಚಾರವಂತರು ಕೆಲವರಾದರೂ ಈ ಸಮಾಜದಲ್ಲಿದ್ದಾರೆ. ಅಂಥ ಚಿಂತನಶೀಲ ವ್ಯಕ್ತಿತ್ವಗಳಲ್ಲಿ ಎಸ್.ರುದ್ರೇಶ್ವರ ಅವರದು ಒಂದು ಪ್ರಮುಖ ಹೆಸರು.

ಎಸ್.ರುದ್ರೇಶ್ವರ ರಾಮನಗರದ ಕ್ರಿಯಾಶೀಲ ಪತ್ರಕರ್ತರಲ್ಲಿ ಒಬ್ಬರು. ತಮ್ಮ ಅನನ್ಯವಾದ ಸಮಾಜಮುಖಿ ಕಾಳಜಿಯನ್ನು ‘ಸನ್ಮಿತ್ರ’ ಪತ್ರಿಕೆಯ ಸಂಪಾದಕರಾಗಿ ಈ ಹಿಂದೆಯೇ ಪ್ರಕಟಿಸಿದ್ದವರು. ತದನಂತರದಲ್ಲಿ ಸಂಜೆ ಸಮಾಚಾರ, ಬೆಂಗಳೂರು ಖಡ್ಗ, ವಾರ್ತಾಭಾರತಿ ದಿನಪತ್ರಿಕೆಗಳ ವರದಿಗಾರರಾಗಿ ಜನಪರ ನಿಲುವುಗಳನ್ನು ತಮ್ಮ ಬರಹಗಳಲ್ಲಿ ತಂದಿದ್ದವರು. ಪ್ರಸ್ತುತ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ರಾಮನಗರ ಜಿಲ್ಲಾ ಸಹಾಯಕ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಾ ತಮ್ಮ ಬರವಣಿಗೆಯಲ್ಲಿ ಜನಮುಖಿ ಕೈಂಕರ್ಯವನ್ನು ಮುಂದುವರಿಸಿದ್ದಾರೆ.
ಶ್ರೀಮತಿ ಸುಮಿತ್ರ ಮತ್ತು ಶ್ರೀ ಕೆ.ಎಸ್.ಶಿವಮೂರ್ತಿ ದಂಪತಿಗಳ ಸುಪುತ್ರರಾದ ಎಸ್.ರುದ್ರೇಶ್ವರ ಅವರ ಜನ್ಮಸ್ಥಳ ರಾಮನಗರ. ಪತ್ನಿ ಡಿ.ಆರ್.ನೀಲಾಂಬಿಕಾ, ಮಗಳು ಆರ್.ಯಶಿಕಾ. ನೀಲಾಂಬಿಕಾ ಮತ್ತು ರುದ್ರೇಶ್ವರ ಎಂಬ ತಮ್ಮ ಹೆಸರುಗಳ ಮೊದಲ ಅಕ್ಷರಗಳನ್ನು ಜೋಡಿಸಿ ‘ನೀರು’ ಎಂಬ ಹೆಸರಿನಿಂದ ತಮ್ಮ ಮಗಳನ್ನು ಕರೆಯುತ್ತಿರುವ ಇವರ ಚಿಂತನೆ ವಿಶಿಷ್ಟವಾದುದು. ಸಕಲ ಜೀವರಾಶಿಗೆ ಅತ್ಯಂತ ಅವಶ್ಯಕವಾಗಿರುವ ‘ನೀರು’ ಇಲ್ಲಿ ರುದ್ರೇಶ್ವರ ಅವರ ಮಗಳ ಹೆಸರಾಗಿರುವುದು ಅವರ ಪ್ರಕೃತಿ ಪ್ರೇಮಕ್ಕೆ ನಿದರ್ಶನವಾಗಿದೆ. 

ರುದ್ರೇಶ್ವರ ಅವರು ಕನ್ನಡ ಸಾಹಿತ್ಯದಲ್ಲಿ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ರಾಮನಗರ ಜಿಲ್ಲೆಯ ಸ್ಥಳನಾಮಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್. ಪದವಿಯನ್ನೂ ಪಡೆದುಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ರಾಮನಗರ ಜಿಲ್ಲೆಯ ಬುಡಕಟ್ಟುಗಳ ಸಾಂಸ್ಕøತಿಕ ಸ್ಥಿತ್ಯಂತರಗಳು’ ಎಂಬ ವಿಷಯವನ್ನು ಕುರಿತು ಪಿಎಚ್.ಡಿ. ಪದವಿಗಾಗಿ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದಾರೆ.

ಶೈಕ್ಷಣಿಕ ಸಂಪನ್ನತೆಯ ಜೊತೆಗೆ ಸಾಂಸ್ಕøತಿಕ, ಸಾಮಾಜಿಕ ಮತ್ತು ಸಾಹಿತ್ಯಕ ಅಭಿರುಚಿಗಳನ್ನೂ ಹೊಂದಿರುವ ಸಹೃದಯಿ ವ್ಯಕ್ತಿತ್ವ ಎಸ್.ರುದ್ರೇಶ್ವರ ಅವರದ್ದು. ಸಾಂಸ್ಕøತಿಕ ಅಭಿರುಚಿ, ಸಾಮಾಜಿಕ ಕಳಕಳಿ ಮತ್ತು ಜಾತ್ಯತೀತ ಮನೋಧರ್ಮಗಳನ್ನು ತಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಂಡಿರುವ ಇವರು ತಮ್ಮ ಸಂವೇದನೆಗಳನ್ನು ಕಥೆ, ಕವಿತೆ ಮತ್ತು ಲೇಖನಗಳ ರೂಪದಲ್ಲಿ ಸಾಹಿತ್ಯಕವಾಗಿ ಸಮರ್ಥವಾಗಿ ಪ್ರತಿಬಿಂಬಿಸುತ್ತಾ ಬಂದಿದ್ದಾರೆ. 

ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಕ ಮತ್ತು ಸಾಂಸ್ಕøತಿಕ ಅಭಿರುಚಿ ಬೆಳೆಸಿಕೊಂಡು ಬಂದ ಇವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಾ, ಜೊತೆಜೊತೆಗೆ ಕಥೆ, ಕವಿತೆಗಳನ್ನೂ ಕಟ್ಟುತ್ತಾ ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ವಿವಿಧ ಸಂಘ-ಸಂಸ್ಥೆಯವರು ಆಯೋಜಿಸುತ್ತಿದ್ದ ಕವಿಗೋಷ್ಠಿಗಳಲ್ಲಿ, ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ತಮ್ಮೊಳಗಿನ ಸಾಹಿತ್ಯಕ ಸಂವೇದನೆಗಳ ಅಭಿವ್ಯಕ್ತಿಯನ್ನು ಮುಂದುವರಿಸಿದರು. ತದನಂತರದಲ್ಲಿ ತಮ್ಮೊಳಗಿನ ಪ್ರತಿಭೆಯನ್ನು ಬಹುಮುಖಿ ನೆಲೆಗಳಿಗೆ ವಿಸ್ತರಿಸಿಕೊಳ್ಳುತ್ತಾ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವೊಂದನ್ನು ರೂಪಿಸಿಕೊಂಡರು. ಆ ಮೂಲಕ ರಾಮನಗರ ಜಿಲ್ಲೆಯ ಜನಮಾನಸದಲ್ಲಿ ವಿಶೇಷ ಸ್ಥಾನ ಗಳಿಸಿಕೊಂಡರು.
ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ರುದ್ರೇಶ್ವರ ಅವರು ತಮ್ಮ ಬರವಣಿಗೆಯ ಮೂಲಕ ಸಮಾಜದ ಅಸಮಾನತೆಗೆ ಕಿಡಿಯಾಗಿ, ದೀನದುರ್ಬಲರ ನೋವು-ಸಂಕಟಗಳಿಗೆ ದನಿಯಾಗಿದ್ದಾರೆ. ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಇವರು ದಲಿತರು ಮತ್ತು ಶೋಷಿತರ ಪರವಾಗಿ ಪತ್ರಿಕೆಗಳಲ್ಲಿ ಲೇಖನ ಬರೆದು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಜಾತೀಯತೆ, ಅಸ್ಪøಶ್ಯತೆ ಮತ್ತು ಅಸಮಾನತೆಗಳ ವಿರುದ್ಧ ಕಿಡಿಕಾರುವ ಇವರು ಸಾಮಾಜಿಕ ಸಮಾನತೆ, ಧರ್ಮ ಸಾಮರಸ್ಯಗಳನ್ನು ಕುರಿತಂತೆ ತಮ್ಮ ಬರಹಗಳಲ್ಲಿ ಪ್ರಬುದ್ಧವಾಗಿ ಚಿಂತನೆಗೆ ಹಚ್ಚಿದ್ದಾರೆ. ಆ ಮುಖೇನ ‘ಜಾತೀಯತೆ ಅಳಿಯಬೇಕು, ಶೋಷಣೆ ಕೊನೆಗೊಳ್ಳಬೇಕು, ಸಮಾನತೆಯ ಸಮಾಜ ರೂಪುಗೊಳ್ಳಬೇಕು’ ಎಂಬ ತಮ್ಮ ನಿಲುವುಗಳನ್ನು ನಿರ್ಭಿಡೆಯಾಗಿ ಪ್ರಕಟಿಸುತ್ತಾ ಬಂದಿದ್ದಾರೆ.  

ಸಮಾಜದಲ್ಲಿ ತಾವೊಬ್ಬರೇ ಬೆಳೆದರೆ ಸಾಲದು ಎಂಬ ಧೋರಣೆ ಬೆಳೆಸಿಕೊಂಡಿರುವ ಇವರು ಉದಯೋನ್ಮುಖ ಬರಹಗಾರರಿಗೆ, ಚಳುವಳಿಗಾರರಿಗೆ, ಹೋರಾಟಗಾರರಿಗೆ, ಸಾಮಾಜಿಕ ಕಳಕಳಿ ಇರುವವರಿಗೆ ಸ್ಫೂರ್ತಿ ತುಂಬುತ್ತಾ, ಅವರಲ್ಲಿ ಸಾಹಿತ್ಯ ಪ್ರಜ್ಞೆಯನ್ನು ಅರಳಿಸುತ್ತಾ, ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.

ತಮ್ಮ ಪತ್ರಿಕಾ ಬರವಣಿಗೆಯ ಮೂಲಕ ರಾಮನಗರ ತಾಲ್ಲೂಕಿನ ಸಾಧಕರನ್ನು ಪರಿಚಯಿಸುವ ಸಮಾಜಮುಖಿ ಕಾರ್ಯದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದಾರೆ. ರಂಗಭೂಮಿ ಕಲಾವಿದೆ ಗೌರಮ್ಮ, ಜನಪದ ಕಲಾವಿದೆ ಮಾಯಮ್ಮ, ಸೋಬಾನೆ ಬೋರಮ್ಮ, ನಗಾರಿ ಸಿದ್ದಯ್ಯ, ಪಟ ಕುಣಿತದ ಕಲಾವಿದ ಚಿಕ್ಕಕೆಂಪಯ್ಯ, ಕುಂಬಾರಿಕೆ ಕಸುಬಿನ ಅನಸೂಯಬಾಯಿ, ಪೂಜಾ ಕುಣಿತದ ಶಿವಣ್ಣ ಮೊದಲಾದವರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸಿದ್ದಾರೆ. ಇರುಳಿಗರು, ಬುಡಕಟ್ಟು ಜನರು ಮತ್ತು ದೀನ ದಲಿತರ ನೋವುಗಳನ್ನು ಸಮಾಜದೆದುರು ತೆರೆದಿಡುವ ಮತ್ತು ಅವುಗಳಿಗೆ ಪರಿಹಾರಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪತ್ರಿಕೋದ್ಯಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಅನ್ಯಾಯ ಮತ್ತು ಅಸಮಾನತೆಗಳ ಪರಿಣಾಮಗಳನ್ನು ತಮ್ಮ ಲೇಖನಗಳಲ್ಲಿ ಹರಿತವಾಗಿ ವಿಶ್ಲೇಷಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದಾರೆ.

ಪತ್ರಿಕೆಗಳಲ್ಲಿ ಇವರು ಬರೆಯುವ ವಿಶೇಷ ಲೇಖನಗಳು ಉಪಯುಕ್ತವೂ ಮೌಲಿಕವೂ ಆದುದಾಗಿವೆ. ನಗರದ ಅಭಿವೃದ್ಧಿಯ ಬಗ್ಗೆ, ನಾಗರಿಕರ ಸಮಸ್ಯೆಗಳ ಬಗ್ಗೆ, ಸಾಧಕರ ಪ್ರತಿಭಾವಂತಿಕೆಯ ಬಗ್ಗೆ, ಸಂಘ-ಸಂಸ್ಥೆಗಳ ಕ್ರಿಯಾಶೀಲತೆಯ ಬಗ್ಗೆ ಬರೆದಿರುವ ಇವರ ವಿಶೇಷ ಲೇಖನಗಳು ನಿಜಕ್ಕೂ ಸಮಾಜಕ್ಕೆ ಇವರು ನೀಡಿರುವ ವಿಶಿಷ್ಟ ಕೊಡುಗೆಗಳು. ಇಂಥ ಇವರ ಲೇಖನಗಳು ಹಲವು ಸಾಮಾಜಿಕ ಬದಲಾವಣೆಗಳಿಗೂ ಕಾರಣವಾಗಿವೆ. ಬರವಣಿಗೆಯನ್ನೇ ಬದುಕನ್ನಾಗಿ ಸ್ವೀಕರಿಸಿರುವ ಇವರು ರಾಮನಗರ ಜಿಲ್ಲೆಯ ಹಲವಾರು ವಿಷಯಗಳನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳ ಬಗ್ಗೆ ತಿಳಿವಳಿಕೆ ಹೊಂದಿರುವ ಇವರು ಯಾವುದೇ ವಿಷಯದ ಬಗ್ಗೆ ಥಟ್ಟನೆ ಮಾತನಾಡಬಲ್ಲವರಾಗಿದ್ದಾರೆ. ಪತ್ರಿಕೋದ್ಯಮವನ್ನು ಬರಿಯ ಸುದ್ದಿಲೋಕವನ್ನಷ್ಟೇ ಮಾಡಿಕೊಳ್ಳದೆ, ಅದನ್ನು ಸಾಂಸ್ಕøತಿಕ ನೆಲೆಯಲ್ಲೂ ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ತಮ್ಮ ಬರವಣಿಗೆಯನ್ನು ದುಡಿಸಿಕೊಳ್ಳುತ್ತಿದ್ದಾರೆ. 

ಇವರ ಜನಪರ ಕಾಳಜಿ ಮತ್ತು ಸಮಾಜಮುಖಿ ಚಿಂತನೆ ಅನನ್ಯವಾದದ್ದು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ತಮ್ಮ ಅಜ್ಜಿ-ತಾತರಾದಂತಹ ಪಾರ್ವತಮ್ಮ-ಸಿದ್ಧವೀರಯ್ಯ, ಜಯಮ್ಮ-ಶಾಂತಯ್ಯ ಅವರ ನೆನಪಿನಲ್ಲಿ ಶಕ್ತ್ಯಾನುಸಾರ ನೆರವು ನೀಡುವ ಮೂಲಕ ಸಮಾಜಮುಖಿ ಚಿಂತನೆಯನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಕಳೆದ ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಸಿಬ್ಬಂದಿಗೆ ಸ್ವೆಟರ್‍ಗಳನ್ನು ವಿತರಣೆ ಮಾಡಿ ತಮ್ಮ ಜನಪರ ಕಾಳಜಿ ಮೆರೆದಿದ್ದಾರೆ. ಕೈಲಾಂಚ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮತದಾನದ ಮಹತ್ವ ಸಾರುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ತಮ್ಮ ಮಗಳ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಗೌರಿ ಹಬ್ಬದಂದು ಮನೆಗೆ ಕರೆದು ಬಾಗಿನ ನೀಡುತ್ತಾ ಬಂದಿದ್ದಾರೆ. 
ಇವರು ಮಾಡುತ್ತಿರುವ ಇಂಥ ಸಮಾಜಮುಖಿ ಚಿಂತನೆಗಳಿಂದ ಪ್ರೇರಣೆಗೊಂಡ ಹಲವರು ತಮ್ಮ ಜನ್ಮದಿನದಂದು, ತಮ್ಮ ಮನೆಯ ಶುಭ ಸಮಾರಂಭಗಳಂದು ಇದೇ ಬಗೆಯ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹೀಗೆ ರುದ್ರೇಶ್ವರ ಅವರು ಹಲವರನ್ನು ಸಮಾಜಮುಖಿ ಕೆಲಸಗಳ ಕಡೆಗೆ ಆಕರ್ಷಿಸುವ ಸ್ಫೂರ್ತಿ ಚೇತನವೂ ಆಗಿದ್ದಾರೆ.

ಇದುವರೆಗೆ ಹಲವಾರು ಕಥೆ, ಕವಿತೆ, ನಾಟಕಗಳನ್ನು ಬರೆದಿರುವÀ ಇವರು ಕಾದಂಬರಿ ಕ್ಷೇತ್ರಕ್ಕೂ ಅಡಿಯಿರಿಸಿದ್ದಾರೆ. ಹಲವು ಸಂಶೋಧನಾ ಲೇಖನಗಳೂ ಇವರಿಂದ ರಚಿತವಾಗಿವೆ. ಸದ್ಯದಲ್ಲೇ ತಮ್ಮ ಕೃತಿಗಳನ್ನು ಪುಸ್ತಕ ರೂಪಕ್ಕೆ ತರಲಿದ್ದಾರೆ.  
ಇವೆಲ್ಲದರ ಜೊತೆಗೆ, ಕರ್ನಾಟಕ ಜಾನಪದ ಪರಿಷತ್ತಿನ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಮತ್ತು ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮೊಳಗಿನ ವಿಶಿಷ್ಟ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಈ ಸಂಸ್ಥೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಲ್ಲರೆಂಬ ಭರವಸೆಯನ್ನು ಸಾರ್ವಜನಿಕರಲ್ಲಿ ಮೂಡಿಸುವಂತೆ ಸಕ್ರಿಯವಾಗಿ ದುಡಿಯುತ್ತಿದ್ದಾರೆ.
ಎಸ್.ರುದ್ರೇಶ್ವರ ಅವರ ಬಹುಮುಖ ಪ್ರತಿಭೆಯು ಬಹುಮುಖಿ ನೆಲೆಗಳಲ್ಲಿ ವಿಸ್ತರಿಸುವಂತಾಗಲಿ. ಇವರ ಸಮಾಜಮುಖಿ ಚಿಂತನೆಗಳು ಆರೋಗ್ಯಕರ ಸಮಾಜ ನಿರ್ಮಿತಿಗೆ ಅಡಿಗಲ್ಲಾಗಲಿ. ಇವರ ಜನಪರ ನಿಲುವು ದೀನರ, ದುರ್ಬಲರ, ಶೋಷಿತರ ಬದುಕುಗಳಿಗೆ ಬೆಳಕು ನೀಡುವಂತಾಗಲಿ ಎಂಬುದು ನಮ್ಮೆಲ್ಲರ ಮನದಾಳದ ಹಾರೈಕೆ.

ಲೇಖನ–ಡಾ.ಎಲ್.ಸಿ.ರಾಜು
ಕನ್ನಡ ಸಹಾಯಕ ಪ್ರಾಧ್ಯಾಪಕರು,
ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ವಿಜಯನಗರ, ಬೆಂಗಳೂರು.

ಪ್ರತಿಕ್ರಿಯೆಗಳು1 comments

  • Chandraiah R wrote:
    29 Dec, 2018 02:57 pm

    Inthaha hathu udhayonmukha sahitigalu patrakartaru Ramanagara jilleya abhivruddigagi huttibarali harisuve ivarige devaru ayassu arogya needi kapadali jai kannadambe

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑