Tel: 7676775624 | Mail: info@yellowandred.in

Language: EN KAN

    Follow us :


ಎಲ್ಲವನ್ನೂ ಕಲಿತ ಮನುಜ ಒಡೆದ ಹೃದಯ ಮತ್ತು ಮನಸ್ಸನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ನಿರ್ಮಲಾನಂದನಾಥ ಸ್ವಾಮೀಜಿ

Posted date: 03 Jan, 2020

Powered by:     Yellow and Red

ಎಲ್ಲವನ್ನೂ ಕಲಿತ ಮನುಜ ಒಡೆದ ಹೃದಯ ಮತ್ತು ಮನಸ್ಸನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ನಿರ್ಮಲಾನಂದನಾಥ ಸ್ವಾಮೀಜಿ

ರಾಮನಗರ: ಆಧುನಿಕ ಮನುಷ್ಯ ತನ್ನ ಸಾಮರ್ಥ್ಯ ದಿಂದ ಜಡ ವಸ್ತುಗಳನ್ನು ಚಲಿಸುವಂತೆ ಮಾಡಿದ, ವಿರುದ್ದವಾಗಿದ್ದ ವಸ್ತುಗಳನ್ನು ಒಗ್ಗೂಡಿಸಿ ಚಾಣಾಕ್ಷತೆ ಮೆರೆದ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡ ಆತ ಬಹು ವೇಗವಾಗಿ ಬೆಳೆದು ನಿಂತ ಆದರೆ ಮನುಷ್ಯ ಮನುಷ್ಯರ ನಡುವೆ ಒಡೆದ ಮನಸ್ಸು ಮತ್ತು ಹೃದಯವನ್ನು ಒಗ್ಗೂಡಿಸುವುದನ್ನು ಕಲಿಯಲಿಲ್ಲ ಎಂದು ಜಗದ್ಗುರು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಅವರು ನಗರದ ಹೊರವಲಯದಲ್ಲಿರುವ ಬಿಜಿಎಸ್ ವಲ್ಡ್೯ ಸ್ಕೂಲ್, ಅಂಧರ ಶಾಲೆ ಮತ್ತು ಪಿಯು ಕಾಲೇಜು ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಗೂಗಲ್ ನಲ್ಲಿ ಯಾವುದೇ ಪ್ರಶ್ನೆ ಕೇಳಿ ಟೈಪ್ ಮಾಡಿದರೆ ಉತ್ತರ ದೊರೆಯುತ್ತದೆ. ಮನುಷ್ಯನ ಮನಸ್ಸಿನಲ್ಲಿ ಉತ್ತರ ದೊರೆಯುವುದಿಲ್ಲ, ಮನಸ್ಸು, ದೇಹ ಮತ್ತು ಮೆದುಳು ಒಂದಕ್ಕೊಂದು ಸಹಮತ ನೀಡುವುದಿಲ್ಲ, ಮನಸ್ಸು ಒಂದು ಯೋಚಿಸಿದರೆ ಮೆದುಳು ಮತ್ತೊಂದು ಯೋಚಿಸುತ್ತದೆ. ಮಕ್ಕಳ ಬದುಕಿನಲ್ಲಿ ಕಷ್ಟದ ಜೀವನವನ್ನು ತಿಳಿಸಬೇಕು, ಅವರಿಗೆ ಅವಶ್ಯಕತೆಗಿಂತಲೂ ಕಡಿಮೆ ಕೊಡಿಸಿದರೆ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯ.

ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದೇ ವಿಷಯಕ್ಕೆ ಒತ್ತು ನೀಡಿದರೆ ಮಕ್ಕಳು ಯಶಸ್ವಿಯಾಗಲು ಸಾಧ್ಯ ಎಂದು ತಿಳಿಸಿದರು.

ಇಂದಿನ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಖರ್ಚಿಗಿಂತ ಹುಟ್ಟಿದ ಹಬ್ಬಕ್ಕೆ ಮಾಡುವ ಖರ್ಚು ಹೆಚ್ಚಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.


ರಾಮನಗರದ ಜಿಲ್ಲಾಧಿಕಾರಿ ಅರ್ಚನಾ ರವರು ಮಾತನಾಡಿ ಎಲ್ಲಾ ಶಾಲೆಗಳು ಉತ್ತಮ ಗುಣಮಟ್ಟದ ವಿದ್ಯೆಯನ್ನು ನೀಡಿದರೆ ಶ್ರೀ ಮಠದ ಶಾಲೆಗಳು ವಿದ್ಯೆಯ ಜೊತೆಗೆ ಸಂಸ್ಕಾರವನ್ನು ನೀಡುತ್ತವೆ, ಇಂತಹ ಶಾಲೆಗಳಲ್ಲಿ ಮಕ್ಕಳು ಓದಿದರೆ ತಮ್ಮ ಭವಿಷ್ಯದ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.


ಬೆಸ್ಕಾಂ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶಗೌಡ ಮಾತನಾಡಿ ಮಕ್ಕಳ ಯಶಸ್ಸಿಗೆ ಶಿಕ್ಷಕರು, ಶಾಲಾ ವಾತಾವರಣ ಹಾಗೂ ಪೋಷಕರ ಸಹಕಾರದೊಟ್ಟಿಗೆ ವಿದ್ಯಾರ್ಥಿಗಳ ಪರಿಶ್ರಮ ಬಹಳ ಮುಖ್ಯವಾಗುತ್ತದೆ. ಎಲ್ಲವೂ ಇದ್ದು ವಿದ್ಯಾರ್ಥಿಗಳಲ್ಲಿ ಆಸಕ್ತಿ ಇಲ್ಲದಿದ್ದರೆ ಎಲ್ಲರ ಶ್ರಮವೂ ವ್ಯರ್ಥವಾದಂತೆಯೇ ಸರಿ, ಹಾಗಾಗಿ ಮಕ್ಕಳು ಇನ್ನಿತರ ಚಟುವಟಿಕೆಗಳ ಜೊತೆಗೆ ಪಾಠಗಳ ಗಟ್ಟಿ ತನವನ್ನು ಅಳವಡಿಸಿಕೊಳ್ಳಬೇಕೆಂದರು.


ಚಿಣ್ಣರ ಮೋಹಕ ನೃತ್ಯ, ಯಕ್ಷಗಾನದ ನೃತ್ಯ, ವಿಶೇಷವಾಗಿ ಅಂಧ ಮಕ್ಕಳ ನೃತ್ಯ ಹಾಗೂ ಸ್ವಚ್ಛ ಭಾರತ ಕಿರು ನಾಟಕ ನೆರೆದಿದ್ದವರ ಮನ ಸೂರೆಗೊಂಡವು. ತಂದೆ ಮಗಳ ಬಾಂಧವ್ಯದ ಚಿತ್ರ ಗೀತೆಗೆ ಪೋಷಕರು ದನಿಗೂಡಿಸಿ ಕಣ್ಣಾಲಿ ತುಂಬಿಕೊಂಡಿದ್ದು ವಿಶೇಷವೆನಿಸಿತು.


ಕಾರ್ಯಕ್ರಮದಲ್ಲಿ ಆರ್ ಟಿ ಓ ಅಧಿಕಾರಿ ಕೃಷ್ಣೇಗೌಡ, ಅರ್ಚಕರಹಳ್ಳಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ, ವಿಜಯನಗರದ ಸೌಮ್ಯನಾಥ ಸ್ವಾಮೀಜಿ, ಹಾಸನ ಮತ್ತು ಕೊಡಗು ಮಠದ ಶಂಭೂನಾಥ ಸ್ವಾಮೀಜಿ, ಶೈಲೇಶನಾಥ ಸ್ವಾಮೀಜಿ, ವಲ್ಡ್೯ ಶಾಲೆಯ ಪ್ರಾಂಶುಪಾಲ ಜೇಸುದಾಸ್, ಪಿಯು ಕಾಲೇಜಿನ ಸುರೇಶ್ ಮತ್ತು ಅಂಧರ ಶಾಲೆಯ ಶಿವರಾಮಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑