Tel: 7676775624 | Mail: info@yellowandred.in

Language: EN KAN

    Follow us :


ಕಣ್ಮರೆಯಾದ ಜನಪ್ರತಿನಿಧಿಗಳು ಮತ್ತು ಹೋರಾಟಗಾರರು, ಸವಲತ್ತುಗಳು ಸಕಾಲಿಕ್ಕಿಲ್ಲ

Posted date: 02 Apr, 2020

Powered by:     Yellow and Red

ಕಣ್ಮರೆಯಾದ ಜನಪ್ರತಿನಿಧಿಗಳು ಮತ್ತು ಹೋರಾಟಗಾರರು, ಸವಲತ್ತುಗಳು ಸಕಾಲಿಕ್ಕಿಲ್ಲ

ಚುನಾವಣೆ ಘೋಷಣೆ ಮತ್ತು ಟಿಕೆಟ್ ನೀಡುವ ಮುನ್ನವೇ ಟೊಂಕ ಕಟ್ಟಿ, ಮಂದಿಗೆ ಮಂಕುಬೂದಿ ಎರಚಿ ಮತಗಳನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳಲು ಹವಣಿಸುವ ರಾಜಕಾರಣಿಗಳು ಮತ್ತು ವೈಯುಕ್ತಿಕ ಲಾಭಕ್ಕಾಗಿಯೇ (ಎಲ್ಲರೂ ಅಲ್ಲಾ ಬಹುತೇಕರು) ಸಂಘಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಹೋರಾಟಕ್ಕಿಳಿಯುವ ನಕಲಿ‌ ಹೋರಾಟಗಾರರೇ ಎಲ್ಲಿ ಅಡಗಿ ಕುಳಿತಿದ್ದೀರಿ ?.


ಕೊರೊನಾ ಸೋಂಕು ತಮಗೇನಾದರೂ ತಗುಲಿದೆಯೇ ? ತಗುಲಿದ್ದರೇ ಬರಬೇಡಿ, ಹೋಂ ಕ್ವಾರಂಟೈನ್ ನಲ್ಲಿಯೇ ಇರಿ. ನನಗೆ ತಗುಲಿದೆ ಎಂಬ ದೃಢೀಕರಿಸಿದ ಮಾಹಿತಿಯನ್ನಾದರೂ ಸಾರ್ವಜನಿಕರಿಗೆ ನೀಡಿ ಬಚಾವಾಗಿ. ಕೊರೊನಾ ವೈರಸ್ ನಿಂದ ಬಳಲಿ ಬೆಂಡಾಗುತ್ತಿರುವ ದಿನಗೂಲಿ ಕಾರ್ಮಿಕರಾದರೂ ನಿಮ್ಮನ್ನು ಕ್ಷಮಿಸಲಿ.


ಈಗ ನೀವೆಲ್ಲರೂ ಬಂದು ನಮ್ಮ ನಡುವೆ ನಿಲ್ಲಿ‌ ಎಂದಾಗಲಿ, ಕೊರೊನಾ ವೈರಸ್ ವಿರುದ್ದ ಬೀದಿಗಿಳಿದು ಹೋರಾಟ ನಡೆಸಿ ಎಂದಾಗಲಿ‌ ನಾವು ನಿಮ್ಮನ್ನು ಕೇಳುತ್ತಿಲ್ಲ ಸ್ವಾಮಿ !

ಬದಲಾಗಿ ಒಪ್ಪೊತ್ತಿನ ಊಟಕ್ಕಾಗಿ ಹಂಬಲಿಸುತ್ತಿರುವ, ಕಂದಮ್ಮಗಳ ಚೀರಾಟ ಸಹಿಸಲಾಗದೆ ಅಲೆಮಾರಿಗಳಂತೆ ಅಂಡಲೆಯುತ್ತಿರುವ ಭಿಕ್ಷುಕರ ಹಾಗೂ ಗುಳೆ ಬಂದು ಇತ್ತ ಇರಲಾಗದೇ, ಅತ್ತ ತಮ್ಮೂರಿಗೆ ಹೋಗಲಾರದೆ ಸಂಕಷ್ಟದಲ್ಲಿರುವವರನ್ನು ಗಮನಿಸಿ ಸಾಂತ್ವನ ನೀಡಿ‌ ಊಟೋಪಚಾರದ ವ್ಯವಸ್ಥೆ ಮಾಡಬಾರದೇ ?


ಆರ್ ಎಸ್ ಎಸ್ ಮತ್ತಿತರರ ಸಂಘ ಸಂಸ್ಥೆಗಳು, ಯುವಕ ಮಿತ್ರರು, ಸಾಮಾನ್ಯರಲ್ಲಿ ಸಾಮಾನ್ಯರು ಪೋಲಿಸರ ಅನುಮತಿ ಪಡೆದು ಸ್ವತಃ ತಾವೇ ತಯಾರಿಸಿ ಊಟ ನೀಡುವವರು ಒಂದೆಡೆಯಾದರೇ, ಅಕ್ಕಿ, ಬೇಳೆ ಮತ್ತು ಸಾಂಬಾರ ಪದಾರ್ಥಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದರೆ, ಲಕ್ಷ ಲೆಕ್ಕಕಿಲ್ಲದ, ಕೋಟಿ ಎಂದರೆ ಕ್ಯಾರೆ ಎನ್ನದ ನೀವುಗಳು ಎಸಿ ರೂಮಿನಿಂದ ಬೀದಿಗೆ ಬಂದು ನೋಡಿ, ಜನರ ಸಮಸ್ಯೆಗೆ ಪರಿಹಾರವನ್ನು ಈಗಿರುವ ಪರಿಸ್ಥಿತಿಯ ಚೌಕಟ್ಟಿನಲ್ಲಿ ಒದಗಿಸಲು ಪ್ರಯತ್ನಿಸಿ.


ಎಲ್ಲೋ‌ ಬೆರಳಣಿಕೆಯ ಗ್ರಾಮ ಪಂಚಾಯತಿ ಮತ್ತಿತರರ ಸರ್ಕಾರದ ಕೆಲ ಅಧೀನ ಸಂಸ್ಥೆಗಳು ಹೊರತುಪಡಿಸಿ ರಾಜಕಾರಣಿಗಳು ಮತ್ತು ಹೋರಾಟಗಾರರು ಸರ್ಕಾರ ಘೋಷಿಸಿರುವ ಸವಲತ್ತುಗಳನ್ನು ಜನರಿಗೆ ತಲುಪಿಸಲು ಸೇತುವೆಯಾಗಬೇಕಿದೆ. (ಇಲ್ಲೂ ಲಾಭದ ಲೆಕ್ಕಾಚಾರ ಹಾಕಬೇಡಿ) ಮಾಸ್ಕ್ ಧರಿಸಿಲ್ಲವೆಂಬ ಕಾರಣಕ್ಕೆ, ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ನಗರಕ್ಕೆ ಎಡತಾಕುವ ಮಂದಿಗೆ ಲಾಠಿ ಬೀಸುವ ಪೋಲಿಸರಿಂದ ತಪ್ಪಿಸಿಕೊಳ್ಳುವುದು ಮತ್ತು ಮನೆಗೆ ಸವಲತ್ತುಗಳು ತಲುಪಿದರೆ ಜನರು ಮನೆಯಿಂದ ಹೊರ ಹೋಗದೇ ಇರುವುದರಿಂದ ಸೋಂಕಿತರು ಕಡಿಮೆಯಾಗುವುದಿಲ್ಲವೇ ?


ಪ್ರತಿ ಮನೆಗೆ ಎರಡರಂತೆ ಮುಖಗವಸು, (ಮಾಸ್ಕ್) ಸ್ಯಾನಿಟೈಸರ್ ಅಥವಾ ಸಂಬಂಧಿಸಿದ ಸಾಬೂನು, ಮನೆಮನೆಗೆ ತರಕಾರಿ ಮತ್ತು ದಿನಸಿ ಪದಾರ್ಥಗಳನ್ನು ಸರ್ಕಾರ ಘೋಷಿಸಿರುವುದನ್ನಾದರೂ ಸಕಾಲದಲ್ಲಿ ತಲುಪಿಸಲು ಆಗ್ರಹಿಸಿ, ಸಮಯಕ್ಕೆ ಸರಿಯಾಗಿ ತಲುಪಿಸಲು ವ್ಯವಸ್ಥೆ ಮಾಡಬೇಕಲ್ಲವೇ ?


ನಮ್ಮ ಪಕ್ಷ ಆಡಳಿತದಲ್ಲಿದ್ದರೇ ಜಗತ್ತೇ ನಮ್ಮ ಕೈಯಲ್ಲಿ ಎಂದು ಬಡಾಯಿ ಕೊಚ್ಚಿಕೊಳ್ಳುವ ವಿಪಕ್ಷದವರಿಗೇನಾಗಿದೆ. ಮುಂದಿನ ರಾಜಕೀಯ ಭವಿಷ್ಯಕ್ಕಾದರೂ ಇಂತಹ ವಿಷಮ ಪರಿಸ್ಥಿತಿಯನ್ನು ಸದುಪಯೋಗ ಪಡಿಸಿಕೊಂಡು ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ತಮ್ಮ ತಳ ಮೆಟ್ಟಿಲುಗಳನ್ನು ಗಟ್ಟಿಮಾಡಿಕೊಳ್ಳದೆ ಕೇವಲ ಬಾಯಿ ಚಪಲಕ್ಕೆ, ಟೀಕಿಸುವುದಕ್ಕೆ ನಿಂತಿರುವುದು ನಾಚಿಕೇಗೇಡಿನ ಸಂಗತಿ.


ಟೀಕೆಗೆ ಮತ್ತು ಘೋಷಣೆಗೆ ಸೀಮಿತವಾಗದೆ, ಲಾಭವಿದ್ದರಷ್ಟೇ ನಮ್ಮ ಹೋರಾಟ ಎಂಬ ಮನೋಭಾವನೆಯಿಂದ ಹೊರಬಂದು ನಮ್ಮಿಂದಲೇ ಬದುಕು ಕಟ್ಟಿಕೊಂಡ ನೀವು ಎಂತಹ ಪರಿಸ್ಥಿತಿಯಲ್ಲೂ ನಿಮ್ಮ ಸೇವೆಗೆ ಬದ್ದ ಎನ್ನುವುದನ್ನೂ ಸಾಬೀತು ಪಡಿಸಲು ಇದು ಸಕಾಲ. 

ಯಾಕೆಂದರೆ ಇಪ್ಪತ್ತೊಂದು ದಿನ ಮುಗಿಯಲು ಇನ್ನೂ ಹದಿನಾಲ್ಕು ದಿನಗಳು ಬಾಕಿ ಇವೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑